ಬೀದರ – ರಾಜ್ಯಾದ್ಯಂತ ಗುತ್ತಿಗೆದಾರರಿಗೆ ಸರಿಯಾಗಿ ಬಿಲ್ ಬಿಡುಗಡೆಯಾಗಿಲ್ಲ ಎಂಬುದು ನಿಜವಾಗಿದ್ದು ಅದಕ್ಕೆ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಎಡವಟ್ಟು ಕಾರಣ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಾರಿಗೆ ದರ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ ಎಂಬ ಸಾರಿಗೆ ಸಚಿವರ ಹೇಳಿಕೆಯ ಧಾಟಿಯಲ್ಲಿಯೇ ಪ್ರಸ್ತುತ ಸಮಸ್ಯೆಗಳ ಜವಾಬ್ದಾರಿಯನ್ನು ಹಿಂದಿನ ಬಿಜೆಪಿ ಸರ್ಕಾರದ ಹೆಗಲಿಗೆ ದಾಟಿಸಿದ ಅವರು, ಬಿಲ್ ಬಾಕಿ ಯಾಕೆ ಉಳಿದಿದೆ ಎಂಬುದನ್ನು ಯಾರೂ ಈವರೆಗೆ ಪ್ರಶ್ನೆ ಮಾಡಿಲ್ಲ ಬಿಜೆಪಿ ಸರ್ಕಾರ ಇದ್ದಾಗ ಬಜೆಟ್ ಇಲ್ಲದೆ ಕಾಮಗಾರಿ ಕೈಗೊಂಡ ಕಾರಣ ಗುತ್ತಿಗೆದಾರರ ಬಿಲ್ ಬಾಕಿ ಉಳಿದಿವೆ. ನನ್ನ ಇಲಾಖೆಯಲ್ಲಿ ಯೇ ಹದಿನೈದು ಸಾವಿರ ಕೋಟಿ ಅನುದಾನ ಬಾಕಿ ಉಳಿದಿದೆ ಎಂದರು.
ಬೀದರನಲ್ಲಿ ಮಾಧ್ಯಮದವರೊಡನೆ ಮಾತನಾಡುತ್ತಿದ್ದ ಸಚಿವ ಸತೀಶ ಜಾರಕಿಹೊಳಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ೬೦ ಪರ್ಸೆಂಟ್ ಆರೋಪದ ಬಗ್ಗೆ ಪ್ರತಿಕ್ರಯಿಸಿ, ಕುಮಾರಸ್ವಾಮಿ ಯವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ ಅವರ ಆರೋಪಕ್ಕೆ ಸಾಕ್ಷಿ ಕೊಡಬೇಕಲ್ಲ ಎಂದರು.
ಬಿಜೆಪಿ ಸರ್ಕಾರ ಇದ್ದಾಗ ಗುತ್ತಿಗೆದಾರರ ಅಧ್ಯಕ್ಷರು ೪೦ ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದರು ಆದರೆ ನಮ್ಮ ಮೇಲೆ ಅಂಥ ಆರೋಪ ಬಂದಿಲ್ಲ ಎಂದರು.
ಡಿನ್ನರ್ ಪಾರ್ಟಿಗಳ ಬಗ್ಗೆ ಮಾತನಾಡಿದ ಸಚಿವರು, ನಾವೇನು ಒಟ್ಟಾಗಿ ಊಟಕ್ಕೇ ಹೋಗಬಾರದಾ ಎಂದು ಹಾಸ್ಯ ಮಾಡಿದರು. ೨೦೨೮ ರ ನಂತರ ಮುಖ್ಯಮಂತ್ರಿ ವಿಷಯವಾಗಿ ಮಾತನಾಡೋಣ ಈಗ ಆ ವಿಷಯ ಬೇಡ. ನಾಳೆ ದಲಿತ ನಾಯಕರ ಮೀಟಿಂಗ್ ಇದೆ ನಾವೆಲ್ಲ ಎಸ್ ಸಿ ಎಸ್ ಟಿ ನಾಯಕರು ಊಟಕ್ಕೆ ಹೋಗುತ್ತಿದ್ದೇವೆ ಎಂದರು.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಹತ್ಯೆಗೆ ಖರ್ಗೆಯವರ ಆಪ್ತ ಕಾರಣ ಎಂದಿದ್ದಾರೆ ಹೊರತು ಪ್ರಿಯಾಂಕ್ ಖರ್ಗೆ ಕಾರಣ ಅಂತ ಎಲ್ಲೂ ಹೇಳಿಲ್ಲ ಬಿಜೆಪಿಯವರಿಗೆ ಈಗ ಮಾಡಲು ಕೆಲಸವಿಲ್ಲ ಅದಕ್ಕೇ ಸುಮ್ಮಸುಮ್ಮನೆ ಆರೋಪ ಮಾಡುತ್ತಾರೆ. ಬೀದರ, ಬೆಳಗಾವಿ, ಮೈಸೂರು ಅಂತೆಲ್ಲ ಸುತ್ತು ಹಾಕುತ್ತಾರೆ ಎಂದು ಸತೀಶ ಜಾರಕಿಹೊಳಿ ಟಾಂಗ್ ಕೊಟ್ಟರು.
ವರದಿ : ನಂದಕುಮಾರ ಕರಂಜೆ, ಬೀದರ