spot_img
spot_img

ಪುಸ್ತಕ ವಿಶ್ಲೇಷಣೆ : ಹನಿಗವನಗಳ ರಸಪಾಕ ‘ಹಾಸ್ಯ ಸವಿ’

Must Read

spot_img
- Advertisement -

ತ್ತೀಚಿಗೆ ಹನಿಗವಿಗಳ ಮತ್ತು ಹನಿಗವಿತೆಗಳ ಬೆಳೆ ಹುಲುಸಾಗಿದೆ. ಇದಕ್ಕೆ ಸಮೂಹ ಮಾಧ್ಯಮಗಳ ಕಾಣಿಕೆ ಅಪಾರ. ಒಂದು ಅಂಶ ಗಮನಿಸಬೇಕು. ಸಮೂಹ ಮಾಧ್ಯಮದಲ್ಲಿ ಬರುವುದೆಲ್ಲ ಸಾಹಿತ್ಯವಲ್ಲ ಮತ್ತು ಸಮೂಹ ಮಾಧ್ಯಮ ಕೇವಲ ಸಾಹಿತ್ಯಕ್ಕಾಗಿ ಇರುವುದಿಲ್ಲ. ಅದರ ಮುಖ್ಯ ಗುರಿ ಮಾಹಿತಿ ಒದಗಣಿ, ಶಿಕ್ಷಣ ಪ್ರಸಾರ ಮತ್ತು ಮನರಂಜನೆ. ಸಾಹಿತ್ಯ ಅದರ ಒಂದು ಉಪ ಭಾಗ ಮಾತ್ರ. ಸಮೂಹ ಮಾಧ್ಯಮದಲ್ಲಿ ಬರುವುದೆಲ್ಲ ಸಾಹಿತ್ಯ ಎಂದು ಭಾವಿಸುತ್ತ ಅದರ ಅವಶ್ಯಕತೆಗಳನ್ನು ಪೂರೈಸಲು ಧಾವಂತಪಟ್ಟರೆ ಖಂಡಿತವಾಗಿ ಸಾಹಿತ್ಯದ ಉದ್ಧಾರವಾಗುವುದಿಲ್ಲ. ಹಾಗಾಗಿ ಇವತ್ತು ಬರವಣಿಗೆ ಎಂದರೆ ತೀರ ಸರಳ ಮತ್ತು ಸುಲಭ ಎಂದು ಭಾವಿಸಿಕೊಂಡಂತೆ ಕಾಣುತ್ತದೆ.

ಹುಲುಸು ಬೆಳೆಯೇನೋ ಇದೆ. ಆದರೆ ಕಳೆ ಅಧಿಕ ಪ್ರಮಾಣದಲ್ಲಿದೆ ಎಂಬುದು ಹನಿಗವಿತೆಗಳ ಪ್ರಕಾರಕ್ಕೆ ಒಪ್ಪುವ ಮಾತು. ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳ ಪೂರೈಕೆ ಕಡಿಮೆಯಾಗಿರುವುದರಿಂದ ಯಾವುದೇ ಗದ್ಯ ಸಾಲನ್ನು ಹನಿಗವಿತೆಯಂತೆ ತುಂಡರಿಸಿ ಬರೆದು ಕಳಿಸಿದರೆ ಅಚ್ಚಾಗುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಇವತ್ತಿನ ಬಹುತೇಕ ಹನಿಗವಿತೆಗಳು ನೀರಸವಾದ ಹೇಳಿಕೆ ಅಥವಾ ಶೀರ್ಷಿಕೆಯ ವಿಸ್ತರಣೆಯಂತೆ ಕಾಣುತ್ತದೆ. ಇದು ನಿರಾಶಾದಾಯಕವಾದ ವಿಷಯ.
ಹನಿಗವಿಗಳ ಸಂಖೈ ಐನೂರನ್ನು ಮೀರುತ್ತದೆ ಎಂದು ಮೂರು ದಶಕಗಳ ಹಿಂದೆ ಮುಕ್ತಕ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿದ ವಿದ್ವಾಂಸರೊಬ್ಬರು ಸೂಚಿಸಿದ್ದಾರೆ. ಅಂದರೆ ಈಗ ಹನಿಗವಿಗಳ ಸಂಖ್ಯೆ ಸಾವಿರ ಎರಡು ಸಾವಿರ ಮೂರು ಸಾವಿರವೇ ದಾಟಿರಬೇಕು. ಚುಟುಕು ಸಾಹಿತ್ಯ ಪರಿಷತ್ತು ಜನ್ಮ ತಾಳಿರುವುದೇ ಅಲ್ಲದೆ ಜಿಲ್ಲೆ, ತಾಲ್ಲೂಕು, ಹೋಬಳಿ ಘಟಕಗಳಾಗಿ ಟಿಸಿಲೊಡೆದು ಬೆಳೆಯುತ್ತಿದೆ. ಇದೊಂದು ಶುಭಸೂಚನೆ. ಚುಟುಕ ಬರೆಯುವವರಿಗೆ ಮಾರ್ಗದರ್ಶನವೂ ಮಾದರಿಯೂ ಒದಗಿ ಬರಬಹುದು.
ಹನಿಗವಿತೆ ಬರೆಯುವವರಿಗೆ ಹಾಸ್ಯ ಪ್ರವೃತ್ತಿಯ ಜೊತೆಗೆ ಒಂದು ವಿಚಿಕಿತ್ಸಕ ದೃಷ್ಟಿಕೋನ ಇರಬೇಕು. ವಿಷವಾಗದ ಮೊನೆಯಲ್ಲಿ ಲೇವಡಿಯೂ ಮಿಳಿತವಾಗಿರಬೇಕು. ಗೊರೂರು ಅನಂತರಾಜು ಅವರ ಹಾಸ್ಯ ಸವಿ ಹನಿಗವಿತೆಗಳ ಸಂಕಲನದಲ್ಲಿ ಶೀರ್ಷಿಕೆಯೇ ಹೇಳುವ ಹಾಗೆ ಹಾಸ್ಯಕ್ಕೆ ಹೆಚ್ಚಿನ ಪ್ರಾಧಾನ್ಯ ಸಿಕ್ಕಿದೆ. ಹಾಸ್ಯವು ಒಂದು ಪ್ರಮುಖ ರಸ ಮತ್ತು ಈ ಅವಸರದ ಯಂತ್ರ ಯುಗದಲ್ಲಿ ಜನರಿಂದ ಮಾಯವಾಗುತ್ತಿರುವ ಪ್ರವೃತ್ತಿಗಳಲ್ಲೊಂದು. ಹಾಸ್ಯಕ್ಕೆ ಹೆಚ್ಚಿನ ಒತ್ತುಕೊಟ್ಟು ನಗುವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಗಮವಾದೀತು. ಗೊರೂರರು (ರಾಮಸ್ವಾಮಿ ಅಯ್ಯಂಗಾರ್) ಹುಟ್ಟಿದ ಊರಿನಲ್ಲೇ ಹಾಸ್ಯಕ್ಕೆ ಮಣೆ ಹಾಕಿದ ಇನ್ನೊಬ್ಬ ಗೊರೂರು (ಅನಂತರಾಜು) ಬೆಳಕಿಗೆ ಬಂದು ಪ್ರಕಾಶಿಸುತ್ತಿರುವುದು ಸಂತೋಷದ ಸಂಗತಿ. ಹಾಸ್ಯ, ವಿಡಂಬನೆ, ಕಟಕಿ, ಚಾಟು, ವಿನೋದ, ಕಾಕು, ವ್ಯಂಗ್ಯ, ಮಿಂಚಿಕೆ ಮೊದಲಾದವುಗಳು ಪ್ರಮುಖ ಲಕ್ಷಣವಾಗುಳ್ಳ ಹನಿಗವನಗಳು ಓದುಗನಿಗೆ ಶಾಕ್ ನೀಡುತ್ತವೆ.! ಗುಂಡು ಸೂಜಿಯಂತೆ ಚುಚ್ಚುತ್ತವೆ. ಅಂತಹ ಕೆಲವು ಹನಿಗವನಗಳನ್ನು ಇಲ್ಲಿ ನೋಡಬಹುದು.
ಹೆಣ ಹೊರುವುದಕ್ಕೆ ನಾಲ್ಕು ಜನ ಬೇಕು
ಹಣ ಹೊಡೆಯುವುದಕ್ಕೆ ಎಷ್ಟು ಜನ ಬೇಕು.?

ಎಂದು ಕೇಳುವಾಗಿನ ಕಟುವಾಸ್ತವ ಎದೆ ತಟ್ಟುತ್ತದೆ. ಹಾಗೆಯೇ

- Advertisement -

ಬೇಡ ಸಾರ್ ಡೌರಿ
ಮಗಳಿಗಿದ್ದರೆ ಸಾಕು ನೌಕರಿ ಎಂದಾಗ ಮತ್ತು

ನಮ್ಮೂರ ಗೌರಿಯ ಮದುವೆ
ನಡೆದದ್ದು ಡೌರಿ ಕೊಟ್ಟ ಮೇಲೆ
ಎಂಬಲ್ಲಿನ ಬದಲಾಗಿರುವ ಸಾಮಾಜಿಕ ಸ್ಥಿತಿಗತಿಯ ಚಿತ್ರಣ ಬೆಚ್ಚಿ ಬೀಳುವಂತೆ ಮಾಡುತ್ತದೆ.
ಪ್ರೇಮ ಪತ್ರವನ್ನು
ಸಂಪಾದಕರ ಮಗಳಿಗೆ
ಕಳಿಸಿದರೆ
ಅಲ್ಲಿಂದಲೂ ಬರಬೇಕೆ
ವಿಷಾದ ಪತ್ರ
ಎಂಬಲ್ಲಿನ ತೆಳು ಹಾಸ್ಯದ ಲೇಪ ಮುಗಳ್ನಗು ಬರಿಸುತ್ತದೆ.

ಗೊರೂರು ಅನಂತರಾಜು ಸಮಾಜವನ್ನು ಚೆನ್ನಾಗಿ ನಿರುಕಿಸಿ ನೋಡಬಲ್ಲ ಸಾಮಾರ್ಥವುಳ್ಳ ಮನುಷ್ಯ. ಇಂತಹ ಹನಿಗಳಲ್ಲಿ ಅವರು ವಿರಮಿಸಬಾರದು. ಕಾವ್ಯೋದ್ಯಮದಲ್ಲಿ ಮುಂದೆ ಸಾಗಿ ಸಾರವತ್ತಾದ ಅರ್ಥವಂತಿಕೆಯನ್ನು ಹಿಡಿಯುವಂತಾಗಲಿ ಎಂದು ಕಾವ್ಯ ಪ್ರೇಮಿಗಳೆಲ್ಲ ಬಯಸಬೇಕಾಗಿದೆ. ಅಂತಹ ಯಶಸ್ಸು ಅವರಿಗೆ ಪ್ರಾಪ್ತವಾಗಲಿ.

- Advertisement -

ವಸಂತಕುಮಾರ್ ಪೆರ್ಲ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group