ಮೂಡಲಗಿ: ಪುಸ್ತಕಂ ಹಸ್ತ ಭೂಷಣಂ ಎಂಬಂತೆ ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡಿ ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ಯಾವಾಗಲೂ ಸಜ್ಜನರ ಸಂಘ ಮಾಡಬೇಕು ಎಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರಗಳ ಡೀನ್ ಪ್ರೊ. ಎಂ. ರಾಮನಾಥಂ ನಾಯುಡು ಹೇಳಿದರು.
ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಶನಿವಾರ ಆಯೋಜಿಸಿದ್ದ ೨೦೨೪-೨೫ ನೇ ಸಾಲಿನ ವಿವಿಧ ವೇದಿಕೆಗಳ
ಕಾರ್ಯ ಚಟುವಟಿಕೆಯ ಉದ್ಘಾಟನೆ ಹಾಗೂ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು ಇವರ ದೂರ ಸಂಪರ್ಕ ಕಲಿಕಾ ಅಧ್ಯಯನ ಕೇಂದ್ರ ಉದ್ಘಾಟನೆ ಮತ್ತು ಡಾ. ಸುರೇಶ ಹನಗಂಡಿ ಅವರ ಹಸ್ತಪ್ರತಿ ಮತ್ತು ಗ್ರಂಥಸಂಪಾದನೆ ಒಂದು ಚಿಂತನೆ ಕೃತಿ ಬಿಡುಗಡೆಯ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಉನ್ನತ ಶಿಕ್ಷಣವನ್ನು ಎಲ್ಲರಿಗೂ ನೀಡುವ ಉದೇಶದಿಂದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ತಮ್ಮ ಮಹಾವಿದ್ಯಾಲಯದಲ್ಲಿ ದೂರ ಸಂಪರ್ಕ ಅಧ್ಯಯನ ಕೇಂದ್ರವನ್ನು ಆರಂಭಿಸಿದೆ ಅದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಮುಖ್ಯ ಅತಿಥಿ ಬೆಳಗಾವಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಪಿ. ಜಿ. ಕೆಂಪಣ್ಣವರ ವಿದ್ಯಾರ್ಥಿಗಳು ಓದುವ ಹಂಬಲವನ್ನು ಬಿಡಬಾರದು. ಜಗತ್ತು ಜ್ಞಾನಕ್ಕೆ ಗೌರವ ಕೊಡುತ್ತದೆ. ಒಂದು ಶಿಕ್ಷಣ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲು ನಾಲ್ಕು ಮೆಟ್ಟಿಲುಗಳು ಅವಶ್ಯಕ. ನಿಸ್ವಾರ್ಥ ಆಡಳಿತ ಮಂಡಳಿ, ಕ್ರಿಯಾಶೀಲ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಶಾಲಾ ಕಟ್ಟಡ ಇವೆಲ್ಲವೂ ರಾಮಲಿಂಗೇಶ್ವರ ಕಾಲೇಜಿನಲ್ಲಿ ಇವೆ ಎಂದರು.
ಗ್ರಂಥ ಸಂಪಾದನಾ ಕ್ಷೇತ್ರಕ್ಕೆ ಕೊಡುಗೆ ನೀಡಿದ ಅನೇಕ ವಿದ್ವಾಂಸರ ಲೇಖನಗಳನ್ನು ಕ್ರೋಢೀಕರಿಸಿ ‘ಹಸ್ತಪ್ರತಿ ಮತ್ತು ಗ್ರಂಥಸಂಪಾದನೆ ಒಂದು ಚಿಂತನೆ’ ಎಂಬ ಕೃತಿಯನ್ನು ಡಾ. ಸುರೇಶ ಹನಗಂಡಿಯವರು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಂಪಾದಿಸಿಕೊಟ್ಟಿದ್ದಾರೆ ಎಂದರು.
ಎಸ್.ಆರ್.ಇ. ಸಂಸ್ಥೆಯ ಚೇರಮನ್ನರಾದ ಬಸಗೌಡ ಶಿ. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಬಿ. ಎಸ್. ಗೋರೋಶಿ, ಎಂ. ಎಸ್. ಕಪ್ಪಲಗುದ್ದಿ, ಎಸ್ ಎಂ. ಖಾನಾಪೂರ, ಬಿ. ಕೆ. ಗೋರೋಶಿ, ಎನ್.ಆರ್.ಪಾಟೀಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ವಿದ್ಯಾ ಪಂಡಿತ, ಶೈಕ್ಷಣಿಕ ಸಲಹೆಗಾರ ಕೆ.ಎನ್. ಸಂಗಮ, ಮುಖ್ಯೋಪಾಧ್ಯಾಯ ರಾಜು ಉಪ್ಪಾರ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಶಿಲ್ಪಾ ನಾಯಿಕವಾಡಿ ಮುಂತಾದವರು ಉಪಸ್ಥಿತರಿದ್ದರು.
ಪ್ರೊ. ವಿಲಾಸ ಕೆಳಗಡೆ ಪ್ರಾರ್ಥಿಸಿದರು, ಪ್ರೊ. ಡಿ.ಎಸ್. ಹುಗ್ಗಿ ಸ್ವಾಗತಿಸಿದರು, ಡಾ. ಕೆ.ಎಸ್. ಪರವ್ವಗೋಳ ನಿರೂಪಿಸಿದರು, ಪ್ರೊ. ಶಂಕರ ನಿಂಗನೂರ ವಂದಿಸಿದರು.