ಗೋಕಾಕ: ಕೇಂದ್ರ ಸರ್ಕಾರದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ಬೂಸ್ಟ್ ನೀಡಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರದಂದು ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಕುರಿತು ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, ರೈತರಿಗೆ, ವ್ಯಾಪಾರಸ್ಥರಿಗೆ ಮತ್ತು ಜನ ಸಾಮಾನ್ಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ವಿಶೇಷವಾಗಿ ರೈತರು ಸಾವಯವ ಪದಾರ್ಥಗಳನ್ನು ಬೆಳೆಯಲು ಬಜೆಟ್‍ನಲ್ಲಿ ಉತ್ತೇಜನ ನೀಡಲಾಗಿದೆ. ಈ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢವಾಗಿಸಲು ಬಜೆಟ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಕಾವೇರಿ-ಪೆನ್ನಾರ್, ಪೆನ್ನಾರ್-ಕೃಷ್ಣಾ, ಗೋದಾವರಿ-ಕೃಷ್ಣಾ ಸೇರಿದಂತೆ ನದಿ ಜೋಡಣೆಗಳ ನಿರ್ಧಾರ ರಾಷ್ಟ್ರವನ್ನು ಸಮೃದ್ಧ ಮಾಡುವಲ್ಲಿ ಮಹತ್ವ ಪಡೆದುಕೊಂಡಿದೆ. ಇದರೊಟ್ಟಿಗೆ ಸಹಕಾರಿ ಸಂಘಗಳ ಮೇಲಿನ ತೆರಿಗೆಯನ್ನು ಇಳಿಸಿರುವುದು, ಸೌರ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಆಧ್ಯತೆ ಕೊಟ್ಟಿರುವುದು, ಹೊಸ ಕಂಪನಿಗಳಿಗೆ ತೆರಿಗೆ ವಿನಾಯತಿ, ದೇಶದಲ್ಲಿ ಡಿಜಿಟಲ್ ರೂಪಾಯಿ ಘೋಷಣೆ, ಔಷಧಗಳ ಮೇಲಿನ ಸುಂಕ ಇಳಿಕೆಯಂತಹ ಜನಪರ ಘೋಷಣೆಗಳನ್ನು ಗಮನಿಸಿದರೆ ಇದೊಂದು ಜನಪ್ರಿಯ ಮತ್ತು ಜನಪರವಾದ, ರೈತಪರವಾದ ಬಜೆಟ್ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.
ಕೊರೋನಾ ವೇಳೆ ಮಕ್ಕಳು ಅನುಭವಿಸಿದ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಪಿಎಂ ಇ-ವಿದ್ಯಾ ಯೋಜನೆ ಅಡಿಯಲ್ಲಿ “ಒನ್ ಕ್ಲಾಸ್ ಒನ್ ಟಿವ್ಹಿ” ಚಾನೆಲ್ ಅನ್ನು ವಿಸ್ತರಿಸಿದ್ದು, ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಮಾಡಿಕೊಡಲಾಗಿದೆ. 5ಜಿ ಹರಾಜಿಗೆ ಕ್ರಮ ಕೈಗೊಂಡಿರುವುದು ದೂರ ಸಂಪರ್ಕ ಕ್ಷೇತ್ರದಲ್ಲಿ ದೇಶವನ್ನು ಹೊಸ ಮೈಲಿಗಲ್ಲಿನತ್ತ ಕೊಂಡೊಯ್ಯಲಿದೆ ಎಂದು ಹೇಳಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಮುಂಗಡ ಪತ್ರವನ್ನು ಸ್ವಾಗತಿಸಿದ್ದಾರೆ.