spot_img
spot_img

ಒಳ್ಳೆಯ ಅಭ್ಯಾಸವನ್ನು ನಿರ್ಮಿಸುವುದು ಹೀಗೆ…

Must Read

- Advertisement -

‘ನಾವು ಯಾವುದನ್ನು ಪದೇ ಪದೇ ಮಾಡುತ್ತೇವೆಯೋ ಅದು ಶ್ರೇಷ್ಠತೆಯ ಕ್ರಿಯೆ ಮಾತ್ರವಲ್ಲ ಉತ್ತಮ ಅಭ್ಯಾಸವಾಗಿ ಬಿಡುತ್ತದೆ.’ ಎಂಬುದು ತತ್ಮಜ್ಞಾನಿ ಅರಿಸ್ಟಾಟಲ್ ಹೇಳಿದ ಮಾತು ನಿಜಕ್ಕೂ ಅರ್ಥಪೂರ್ಣವಾದುದು. ನಾವೆಲ್ಲರೂ ಅಭ್ಯಾಸ ಜೀವಿಗಳು ನಾವು ಪ್ರತಿದಿನ ಅದೇ ಮಾದರಿಗಳನ್ನು ಅನುಸರಿಸುತ್ತೇವೆ. ಒಳ್ಳೆಯ ಅಭ್ಯಾಸಗಳ ಮೊತ್ತವೇ ನಮ್ಮ ವ್ಯಕ್ತಿತ್ವವನ್ನು ಹೊಳೆಯುವಂತೆ ಮಾಡುತ್ತದೆಂಬ ಸಂಗತಿ ನಮಗೆಲ್ಲ ಗೊತ್ತು.

ಹೀಗಾಗಿ ಮೇಲಿಂದ ಮೇಲೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತೇವೆ. ಅವುಗಳನ್ನು ಅಂಟಿಸಿಕೊಳ್ಳಲು ನೋಡುತ್ತೇವೆ. ಜೇಡರ ಹುಳುವಿನಂತೆ ಹಲವಾರು ಬಾರಿ ಕೆಳಕ್ಕೆ ಬೀಳುತ್ತೇವೆ. ಬಿದ್ದ ಮೇಲೆ ಅಭ್ಯಾಸವನ್ನು ರೂಢಿಸಿಕೊಳ್ಳಲು ಆಗುತ್ತಿಲ್ಲವೆಂದು ನಡುವೆ ಕೈ ಬಿಡುತ್ತೇವೆ. ಬಹುತೇಕ ವಿದ್ಯಾರ್ಥಿಗಳ ಮತ್ತು ಬಹಳಷ್ಟು ಜನರ ಅಂಬೋಣವಿದು.

ಇದಕ್ಕೆಲ್ಲ ಕಾರಣ ಹುಡುಕಿ ಹೊರಟರೆ ನಾವು ಬದಲಾವಣೆಯನ್ನು ಬಯಸುವ ನಮಗೆ ನಾವಂದುಕೊಂಡಷ್ಟು ಸರಳವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗದಿರುವುದು ಕಂಡು ಬರುತ್ತದೆ. ಅದಷ್ಟೇ ಅಲ್ಲ ನಮ್ಮ ಸುರಕ್ಷತೆಯ ವಲಯದಲ್ಲಿರಲು ಇಷ್ಟಪಡುವುದು. ಬದುಕಿನಲ್ಲಿ ಕಾಲು ಚಾಚಿ ಮಲಗಿದ ಜಡತ್ವವನ್ನು ಎಬ್ಬಿಸಲು ಆಗದಿರುವುದು ಎನ್ನುವ ಅಂಶಗಳು ಗಮನಕ್ಕೆ ಬರುತ್ತವೆ. ಹಾಗಿದ್ದರೆ ಯಶಸ್ವಿಯಾಗಲು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸರಳ ಮಾರ್ಗಗಳಿಲ್ಲವೇ? ಎನ್ನುವ ಪ್ರಶ್ನೆ ತಲೆಯಲ್ಲಿ ತೂರಿಕೊಂಡು ಕಾಡುತ್ತದೆ. 21 ದಿನಗಳವರೆಗೆ ಸತತ ಯಾವುದನ್ನು ಮಾಡುತ್ತೇವೆಯೋ ಅದು ಅಭ್ಯಾಸವಾಗುತ್ತದೆ ಎಂದು ಕೆಲವರು ಹೇಳುವುದನ್ನು ಕೇಳಿರಬಹುದು.

- Advertisement -

ಆದರೆ ಅದು ಎಲ್ಲ ಸಮಯದಲ್ಲೂ ಅದು ಕೆಲಸ ಮಾಡುವುದಿಲ್ಲ. ಅಭ್ಯಾಸವನ್ನು ರೂಪಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆಂಬುದು ವ್ಯಕ್ತಿಯನ್ನು ಮತ್ತು ಪರಿಸರದ ಅಂಶಗಳನ್ನು ಅವಲಂಬಿಸಿದೆ. ಉತ್ತಮ ಅಭ್ಯಾಸವನ್ನು ಬೆಳೆಸಲು ಮತ್ತು ಅನುಸರಿಸಲು ನಿಮಗೆ ಪ್ರೇರಣೆ, ಉತ್ತಮ ಯೋಜನೆ ಮತ್ತು ಚಿಂತನೆಯ ವಿಧಾನ ಬೇಕೆಂಬುದು ನೂರಕ್ಕೆ ನೂರರಷ್ಟು ಸತ್ಯ. ನಮ್ಮಂತೆಯೇ ಸಾಮಾನ್ಯರಾಗಿದ್ದ ಯಶಸ್ವಿ ವ್ಯಕ್ತಿಗಳು ತಮ್ಮ ಜೀವನದಲ್ಲಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡು ಅಸಾಮಾನ್ಯರಾಗಿದ್ದು ಹೇಗೆ ಎಂಬುದರ ಬೆನ್ನು ಹತ್ತಿದರೆ ಅದರ ಗುಟ್ಟು ರಟ್ಟಾಗುವುದು. ಹಾಗಾದರೆ ಉತ್ತಮ ಹವ್ಯಾಸ ಅಳವಡಿಸಿಕೊಳ್ಳಲು ಕೆಲ ಸರಳ ಸಲಹೆಗಳನ್ನು ನೋಡೋಣ ಬನ್ನಿ

ಯೋಜನೆ

ಯಾವುದೇ ಕಾರ್ಯ ಸಫಲವಾಗಬೇಕಾದರೆ ಮುಖ್ಯವಾಗಿ ಯೋಜನೆ ಬೇಕೇ ಬೇಕು. ಯೋಜನೆಯಿಲ್ಲದ ಕಾರ್ಯ ಅಷ್ಟು ಸಲೀಸಾಗಿ ಸಂಪೂರ್ಣ ಉತ್ತಮ ಫಲಿತಾಂಶವನ್ನು ನೀಡಲಾರದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಮನೆಯೊಂದನ್ನು ಕಟ್ಟಬೇಕಾದರೆ ಅದಕ್ಕೆ ತಳಪಾಯ ಹಾಕುವ ಮುನ್ನವೇ ಕಟ್ಟಿದ ಮೇಲೆ ಮನೆ ಹೇಗಾಗುತ್ತದೆಂದು ನೀಲ ನಕ್ಷೆಯ ಯೋಜನೆ ತಯಾರಿಸಲಾಗುತ್ತದೆ.

ಅದೇ ರೀತಿ ಶಿಕ್ಷಕರು ಪಾಠ ಮಾಡುವ ಮುನ್ನ ಪಾಠ ಯೋಜನೆಯನ್ನು ತಯಾರಿಸಿಕೊಂಡು ವಿದ್ಯಾರ್ಥಿಗಳಿಗೆ ಯಾವ ಯಾವ ಅಂಶಗಳನ್ನು ಚೆನ್ನಾಗಿ ವಿವರಿಸಿ ಮನದಟ್ಟು ಮಾಡಬೇಕೆಂದು ತಿಳಿದು ಪಾಠ ಮಾಡುತ್ತಾರೆ. ಅಂದರೆ ಎಲ್ಲ ಕ್ಷೇತ್ರಗಳಲ್ಲೂ ಯೋಜನೆ ಬೇಕೇ ಬೇಕೆಂದಾಯಿತು. ಬೆಂಜಮಿನ್ ಫ್ರಾಂಕ್ಲಿನ್ ತನ್ನ ಕೆಟ್ಟ ಅಭ್ಯಾಸಗಳನ್ನು ನಿವಾರಿಸಲು ಮತ್ತು ಹೊಸ ಉತ್ತಮ ಅಭ್ಯಾಸಗಳನ್ನು ಬೆಳೆಸಲು ನವೀನ ಯೋಜನೆ ಹೊಂದಿದ್ದನು.

- Advertisement -

ಜೀವನದಲ್ಲಿ ಬಹಳ ಉಪಯುಕ್ತವೆಂದು ಭಾವಿಸಿದ 13 ಸದ್ಗುಣಗಳನ್ನು ಪಟ್ಟಿ ಮಾಡಿದರು. 13 ವಾರಗಳ ಅವಧಿಯಲ್ಲಿ ವಾರಕ್ಕೆ ಒಂದು ಸದ್ಗುಣವಾಗಿ ಕೆಲಸ ಮಾಡುವುದರಿಂದ ಕೆಲವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆಂದು ಒಂದು ವೇಳೆ ಒಳ್ಳೆಯ ಅಭ್ಯಾಸ ಇನ್ನೂ ಮೈಗೂಡಿಸಿಕೊಳ್ಳಲು ಆಗಿಲ್ಲವೆಂದು ಭಾವಿಸಿದರೆ ಅದೇ ಚಕ್ರವನ್ನು ಪುನರಾವರ್ತಿಸುವುದು. ಮೈಗೂಡಿಸಿಕೊಂಡಿದ್ದರೆ ಮುಂದಿನದನ್ನು ಮುಂದುವರೆಸುವ ಯೋಜನೆ ಒಳ್ಳೆಯದೆಂದು ಹೇಳಿದ. ‘ಅಭ್ಯಾಸವನ್ನು ಅಭ್ಯಾಸವಾಗಿಸಲು ಯೋಜಿತ ವಿಧಾನದ ಅಗತ್ಯವಿದೆ.

ನಿಗದಿತ ಗುರಿ ನಿರ್ಧರಿಸಿ

ಗುರಿಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸದೇ ಹೋದರೆ ಹೊಸ ಅಭ್ಯಾಸ ದುರ್ಬಲಗೊಳ್ಳುತ್ತವೆ. ದೊಡ್ಡ ದೊಡ್ಡ ಕೆಲಸಗಳನ್ನು ಸಾಧಿಸುವ ಸುಲಭ ದಾರಿಯೆಂದರೆ ಅದನ್ನು ನಿತ್ಯ ಹೇಗೆ ಮತ್ತು ಎಷ್ಟು ಸಾಧಿಸಲು ಸಾಧ್ಯವೆಂಬುದನ್ನು ನೀವೇ ಹೊಂದಿಸಿಕೊಳ್ಳುವುದು.

ಹೊಂದಿಸಿಕೊಂಡದ್ದು ನಿರ್ದಿಷ್ಟ ವಾಸ್ತವಿಕವಾಗಿ ಸಾಧಿಸಬಹುದಷ್ಟು ಇರಬೇಕು. ಮತ್ತು ಸಮಯಕ್ಕೆ ಅನುಗುಣವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಈಗಾಗಲೇ ಅಸ್ತಿತ್ವದಲ್ಲಿರುವ ಉತ್ತಮ ಹವ್ಯಾಸಗಳನ್ನು ಗುರುತಿಸಿ ಗುರಿಯನ್ನು ಸಾಧಿಸಲು ಸಹಾಯ ಮಾಡುವಂತೆ ಮಾಡಿ. ದಿನ ನಿತ್ಯದ ಜೀವನಕ್ಕೆ ಸೂಕ್ತವಾದ ಅಭ್ಯಾಸವನ್ನು ಆಯ್ಕೆ ಮಾಡಲು ಪ್ರಯತ್ನಿಸಿ ಇದರಿಂದ ಹೊಂದಿಕೊಳ್ಳುವುದು ಸುಲಭ.

ಇದರೊಂದಿಗೆ ಅಭ್ಯಾಸ ಅಭ್ಯಾಸವಾಗಿ ರೂಪುಗಳ್ಳಲು ಸಹಾಯವಾಗುವಂತಹ ಪ್ರೇರಣೆ ಹುಡುಕಿ. ಪ್ರೇರಣೆ ಅಭ್ಯಾಸವನ್ನು ಮುಂದುವರಿಸುತ್ತವೆ. ಪ್ರತಿಯೊಬ್ಬರೂ ‘ನಿಧಾನ ಮತ್ತು ಸ್ಥಿರವಾದ ಓಟವನ್ನು ಗೆಲ್ಲುತ್ತಾರೆ.’ ಎಂಬ ಧ್ಯೇಯವಾಕ್ಯವನ್ನು ಕೇಳಿದ್ದೇವೆ. ನಿಮ್ಮ ದೈನಂದಿನ ಜೀವನದಲ್ಲಿ ನೀವು ಅಂಟಿಸಿಕೊಳ್ಳಬಹುದಾದ ಅಭ್ಯಾಸದ ಗುರಿಗಳನ್ನು ಹೊಂದಿಸುವುದು ಮತ್ತು ಅವುಗಳನ್ನು ಪರಿಚಯಿಸಿ ಬೆನ್ನು ಹತ್ತುವುದು ಮುಖ್ಯ. ಯಾವುದೇ ಆಗಲಿ ಹಟಾತ್ ಅಥವಾ ತೀವ್ರ ಬದಲಾವಣೆಗಳಿಗೆ ಕಾರಣವಾಗುವುದಿಲ್ಲ.

ಅದು ಖಂಡಿತವಾಗಿಯೂ ಕಾಲಾನಂತರದಲ್ಲಿ ಲಾಭಗಳನ್ನು ಪಡೆಯುತ್ತದೆ. ಶಿಕ್ಷೆ ಅಥವಾ ಬಹುಮಾನ ನೀಡದಿದ್ದರೆ ಮನಸ್ಸು ಏನನ್ನು ಮಾಡಲು ಬಯಸುವುದಿಲ್ಲ ಆದರೆ ಆಂತರಿಕ ಪ್ರೇರಕವೊಂದಿದ್ದರೆ ನೀವು ಬಯಸಿದ್ದನ್ನು ರೂಢಿಸಿಕೊಳ್ಳುವುದು ಸುಲಭ. ಅವಾಸ್ತವಿಕ ಗುರಿಗಳನ್ನು ಮಾಡಿದರೆ ಮತ್ತು ಅವುಗಳನ್ನು ಸಾಧಿಸಲು ಸಾಧ್ಯವಾಗದಿದ್ದರೆ ಅದು ನಿಮ್ಮನ್ನು ನಿರಾಶಗೊಳಿಸುತ್ತದೆ ಮತ್ತು ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ‘ನೀವು ಅಗಿಯುವುದಕ್ಕಿಂತ ಹೆಚ್ಚಿನದನ್ನು ಕಚ್ಚಬೇಡಿ.’

ಸಕಾರಾತ್ಮಕವಾಗಿರಿ

‘ಇದನ್ನು ಮಾಡಲು ಸಾಧ್ಯವಿಲ್ಲ.’ ಎಂದು ಹೇಳುವ ಬದಲು ನೀವು ‘ಇದನ್ನು ಹೇಗೆ ಮಾಡಬಹುದು?’ ಎಂದು ಕೇಳಿ ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಹೆಚ್ಚಿನದನ್ನು ಮಾಡಲು ಸಾಧ್ಯವಾಗುವುದು.

ಸಕಾರಾತ್ಮಕ ಆಲೋಚನೆಗಳು ಸಂತೋಷದ ಕ್ಷಣಗಳಿಗೆ ಕಾರಣವಾಗದಿರಬಹುದು ಆದರೆ ಉತ್ತಮ ಅಭ್ಯಾಸಗಳನ್ನು ಬೆಳೆಸುವ ಕೌಶಲ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಗತಿಸಿದ ನಿನ್ನೆ ಬಗೆಗ ತಲೆ ಕೆಡಿಸಿಕೊಳ್ಳದಿರಿ. ಕೈಯಲ್ಲಿರುವ ಕ್ಷಣದ ಬಗೆಗೆ ಮಾತ್ರ ಗಮನಹರಿಸಿ.ಅದು ಉಜ್ವಲ ಭವಿಷ್ಯತ್ತಿಗೆ ಸಹಾಯ ಮಾಡುತ್ತದೆ.

ಅಚ್ಚರಿಯೆಂದರೆ ಸಕಾರಾತ್ಮಕತೆಯಿಂದ ಆಗಾಗ್ಗೆ ನೀವು ಚಿಂತೆ ಮಾಡುವ ವಿಷಯಗಳು ಸಹ ಸಂಭವಿಸುವುದಿಲ್ಲ. ‘ಸಂಭವಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಅದಕ್ಕಾಗಿ ನಿಮ್ಮ ಜೀವನವನ್ನು ಏಕೆ ಹಾಳು ಮಾಡಿಕೊಳ್ಳುವಿರಿ? ಚಿಂತೆಯನ್ನು ದೂರ ಸರಿಸಿ. ನಕಾರಾತ್ಮಕ ಭಾವನೆಗಳನ್ನು ಹೋಗಲಾಡಿಸಿ.’ನಾಳೆಗಾಗಿ ಇಂದೇ ಸಜ್ಜಾಗಲೂಬಹುದು. ಆದರೆ ನಿನ್ನೆಯನ್ನು ಇಂದು ತರಲಾಗುವುದಿಲ್ಲ.

ನಿಜವಾದ ಬುದ್ಧಿವಂತಿಕೆ ಜಾಣತನ ಉಪಯೋಗಿಸಿ ಸಕಾರಾತ್ಮಕ ಆಲೋಚನೆಗಳನ್ನು ನಿಮ್ಮದಾಗಿಸಿಕೊಂಡರೆ ಹೊಸ ಉತ್ತಮ ಹವ್ಯಾಸಗಳನ್ನು ಅಂಟಿಸಿಕೊಳ್ಳುವುದು ನೀರು ಕುಡಿದಷ್ಟು ಸಲೀಸೆನಿಸುತ್ತದೆ.

ಅತಿಯಾದ ಆಯ್ಕೆ ನಿವಾರಿಸಿ

ಹಾಗೆ ನೋಡಿದರೆ ಜೀವನ ಹಲವಾರು ಆಯ್ಕೆಗಳ ಆಟದಂತಿದೆ. ಅದಕ್ಕೆ ವಿದ್ವಾಂಸರು ‘ಜೀವನ ಆಯ್ಕೆಗಳ ಸರಣಿ’ ಎಂದಿದ್ದಾರೆ. ಪ್ರತಿನಿತ್ಯ ಪ್ರತಿ ಕೆಲಸ ಮಾಡುವುದರ ಹಿಂದೆಯೂ ಸಾಕಷ್ಟು ಆಯ್ಕೆಗಳು ನಮ್ಮ ಮುಂದೆ ನಿಲ್ಲುತ್ತವೆ. ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆಂಬುದು ಮುಂದಿನ ಫಲಿತಾಂಶವನ್ನು ನಿರ್ಧರಿಸುತ್ತದೆ.

ಹೀಗಾಗಿ ಆಯ್ಕೆ ಮಾಡಿಕೊಳ್ಳುವಾಗ ಅವಸರಿಸಬಾರದು. ಕೆಲವೊಮ್ಮೆ ಸಣ್ಣ ಸಣ್ಣ ಸಂಗತಿಗಳನ್ನು ಆಯ್ಕೆ ಮಾಡುವ ವಿಧಾನಗಳು ದೊಡ್ಡದಾಗಿ ತಲೆ ತಿನ್ನುತ್ತವೆ. ಇಂದು ಯಾವ ಬಣ್ಣದ ಬಟ್ಟೆ ಧರಿಸುವುದು ಎನ್ನುವುದೂ ದೊಡ್ಡ ಯೋಚನೆಯಾಗಿ ಕಾಡಬಹುದು. ಬರಾಕ್ ಒಬಾಮ ಕಪ್ಪು ಮತ್ತು ನೀಲಿ ಬಣ್ಣದ ಸೂಟ್ ಗಳನ್ನು ಮಾತ್ರ ಧರಿಸಲು ಇಷ್ಟಪಡುತ್ತಾರೆ. ಮತ್ತು ಬೇರೆ ಯಾವುದೇ ಬಣ್ಣವನ್ನು ಏಕೆ ಇಷ್ಟಪಡುವುದಿಲ್ಲ ಎಂಬುದಕ್ಕೆ ಕಾರಣ ಅತಿಯಾದ ಆಯ್ಕೆ ನಿವಾರಿಸುವುದು ಇದ್ದರೂ ಇರಬಹುದಲ್ಲವೇ? 1990 ರ ದಶಕದಲ್ಲಿ ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕರಾಗಿದ್ದ ರಾಯ್ ಬೌಮೆಸ್ಟರ್ ಅವರ ಅಧಯಯನದಲ್ಲಿ ಪುನರಾವರ್ತಿತ ಆಯ್ಕೆಗಳನ್ನು ಮಾಡುವುದರಿಂದ ನೀವು ಚುರುಕಾದ ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಯಬಹುದೆಂದಿದ್ದಾರೆ. ಆಯ್ಕೆಗಳನ್ನು ಸ್ಪಷ್ಟಪಡಿಸುವುದೊಂದೇ ಅತಿಯಾದ ಆಯ್ಕೆ ನಿವಾರಣೆಗೆ ದಾರಿ. ಇದರಿಂದ ಒತ್ತಡ ಮತ್ತು ನಿರಾಶದಾಯಕ ಸ್ಥಿತಿಯನ್ನು ಅನುಭವಿಸದೆ ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳಲು ಸಾಧ್ಯ.

ಕೊನೆ ಹನಿ

ಹೊಸ ಅಭ್ಯಾಸವನ್ನು ರೂಪಿಸಲು ಉತ್ತಮ ಮಾರ್ಗವೆಂದರೆ ಅದನ್ನು ಅಸ್ತಿತ್ವದಲ್ಲಿರುವ ಅಭ್ಯಾಸಕ್ಕೆ ಕಟ್ಟಿಹಾಕುವುದು ಎಂದು ತಜ್ಞರು ಹೇಳುತ್ತಾರೆ. ಕೆಟ್ಟ ಅಭ್ಯಾಸಗಳನ್ನು ಆರಂಭದಲ್ಲಿ ಬೆಳೆಸಲಾಗುತ್ತದೆ ಏಕೆಂದರೆ ಅವು ನಾವು ಒತ್ತಡದಲ್ಲಿರುವಾಗ ನಿರಾಶೆಯಲ್ಲಿರುವಾಗ ಅಲ್ಪಾವಧಿಗಾದರೂ ಸಂತೋಷವನ್ನು ಕೊಡುತ್ತವೆ.

ಆದರೆ ನಂತರ ಕೆಟ್ಟ ಅಭ್ಯಾಸಗಳ ಜಾಲದಲ್ಲಿ ಬಿದ್ದ ಮೇಲೆ ಹೊರಬರುವುದು ಕಷ್ಟವೆನಿಸುವುದು. ಅದು ಒಂಥರ ಮೆತ್ತನೆಯ ಗಾದೆಯ ಮೇಲೆ ಜಿಗಿದಂತೆ ಅದರಿಂದಾಚೆ ಬರಲು ಇಚ್ಛಿಸಿದರೂ ಅದರಲ್ಲೇ ಬೀಳುವಂತೆ ಮಾಡುತ್ತದೆ. ಹೊಸ ಉತ್ತಮ ಅಭ್ಯಾಸಗಳಿಗೆ ನೀವು ಬದ್ಧರಾಗಬೇಕಾದ ಮಾನಸಿಕ ಶಕ್ತಿಯನ್ನು ಹೊಂದಲು ದೃಢತೆಯನ್ನು ಹೂಡಿಕೆ ಮಾಡಿ. ಉತ್ತಮ ಅಭ್ಯಾಸಗಳು ರಾತ್ರೋರಾತ್ರಿ ರೂಪುಗೊಳ್ಳುವುದಿಲ್ಲ.

ಆದರೆ ಕ್ರಮೇಣ ರೂಪುಗೊಳ್ಳದೇ ಇರುವುದಿಲ್ಲ. ಅಭ್ಯಾಸ ರೂಪಿಸುವಲ್ಲಿ ಸಣ್ಣ ಹಿನ್ನಡೆಗಳು ನಿರಾಶದಾಯಕ ಕ್ಷಣಗಳು ಸಾಮಾನ್ಯ ಅವುಗಳಿಗೆ ಹೆದರಿ ಅಭ್ಯಾಸವನ್ನು ಕೈ ಬಿಡಬಾರದು. ಅಭ್ಯಾಸದ ಶಾಶ್ವತ ರೂಪುಗೊಳ್ಳುವಿಕೆಗೆ ನಿಮ್ಮ ಪರಿಸರ ಮತ್ತು ದೈನಂದಿನ ವೇಳಾಪಟ್ಟಿಯನ್ನು ಬದಲಿಸಬೇಕು.ನಡವಳಿಕೆಯ ಬದಲಾವಣೆಗೆ ಉನ್ನತ ಮಟ್ಟದ ಪ್ರೇರಣೆಯ ಅಗತ್ಯವೂ ಇದೆ. ದಾರಿಯಲ್ಲಿ ನಿಲ್ಲುವ ಅಡೆತಡೆಗಳನ್ನು ತೆರುವುಗೊಳಿಸಿದಾಗ ಒಳ್ಳೆಯ ಅಭ್ಯಾಸಗಳನ್ನು ರೂಪಿಸಲು ಸಾಧ್ಯ.


ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group