ಸಿಂದಗಿ: ತಾಲೂಕಿನಲ್ಲಿ ಮುಂಗಾರು-ಹಿಂಗಾರು ಕೈಕೊಟ್ಟ ಪರಿಣಾಮ ಬರದ ಛಾಯೆಯಿಂದ ತತ್ತರಿಸಿರುವ ರೈತರು ಪ್ರತಿವರ್ಷ ಎಳ್ಳ ಅಮವಾಸ್ಯೆ ದಿನದಂದು ತಮ್ಮ ತಮ್ಮ ಹೊಲಗಳಿಗೆ ತೆರಳಿ ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ನೈವೇದ್ಯ ಅರ್ಪಿಸುವ ಸಂಪ್ರದಾಯಕ್ಕೆ ಈ ಬಾರಿ ಹೇಳಿಕೊಳ್ಳುವಷ್ಟು ಸಂಭ್ರಮ ಇರಲಿಲ್ಲ.
ಎಂಬುದು ಸಿಂದಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಈ ಆಚರಣೆ ಕಂಡುಬಂದಿತು.
ಹಿಂದೆಲ್ಲಾ ಈ ಚರಗ ಹಬ್ಬದ ಸಂಭ್ರಮ ಸವಿಯಲು ರೈತರು ನಸುಕಿನಲ್ಲಿಯೇ ಎದ್ದು ಎತ್ತಿನಗಾಡಿಗೆ ಬಣ್ಣ ಬಳಿದು ಎತ್ತುಗಳ ಮೈತೊಳೆದು, ಗಾಡಿಯ ಗಾಲಿಯ ಕೀಲುಗಳಿಗೆ ಎಣ್ಣೆ ಬತ್ತಿ ಹಾಕಿ, ಗಾಡಿಗೆ ಕಮಾನು ಕಟ್ಟಿ ಹೂಗಳಿಂದ ಅಲಂಕಾರ ಮಾಡಿ ಬಣ್ಣ ಹಚ್ಚಿ, ಕೋಡುಗಳಿಗೆ ಹಣಸು ಹಾಕಿ ಜೂಲು, ಗೊಂಡೆ, ಬಣ್ಣದ ಗಾಜಿನ ತುಕ್ಕಡಿಗಳಿಂದ ಜೊಡಿಸಿದ ಬಾಸಿಂಗ್(ಹಣೆಪಟ್ಟಿ) ಕಟ್ಟುತ್ತಿದ್ದರು. ಎತ್ತುಗಳ ಕೊರಳಿಗೆ ಗಂಟೆಗಳ ಸರ ಕಟ್ಟಿ, ಬೆನ್ನ ಮೇಲೆ ಹಲವು ಬಣ್ಣ ಬಣ್ಣದ ಗಜ್ಜರಾ ಹೊದಿಸುತ್ತಿದ್ದರು. ಹೊಸ ಹೊಸ ಬಟ್ಟೆಗಳನ್ನು ತೊಟ್ಟ ಮಕ್ಕಳು, ಇಲಕಲ್ ಸೀರೆಗಳನ್ನು ಉಟ್ಟ ಹೆಣ್ಣು ಮಕ್ಕಳು, ಗಾಡಿಯಲ್ಲಿ ಬಗೆ ಬಗೆಯ ಅಡುಗೆ ಪದಾರ್ಥಗಳ ಬುಟ್ಟಿ, ಗಂಟುಗಳೊಂದಿಗೆ ಕುಳಿತು ಪ್ರತಿ ರೈತ ಕುಟುಂಬಕ್ಕೊಂದರಂತೆ ಬಂಡಿಗಳು ಸಾಲಾಗಿ ಹೊಲಗಳತ್ತ ಹೊರಟರೆ ಅದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿ ಗೋಚರಿಸುತ್ತಿತ್ತು. ಆದರೆ ಇಂದು ಜನಪದ ಸೊಗಡನ್ನು ವಿಜೃಂಬಿಸುವ ಎಳ್ಳು ಅಮವಾಸ್ಯೆಯ ಈ ಸಂಭ್ರಮವು ಕೇವಲ ನೆನಪುಗಳಾಗಿ ಉಳಿದುಕೊಂಡಿವೆ.
ಇಂದು ಎತ್ತಿನ ಗಾಡಿಯ ಬದಲಾಗಿ ಟ್ರ್ಯಾಕ್ಟರ್, ಟಂಟಂ ಆವರಿಸಿಕೊಂಡಿವೆ. ಕಳೆದ ಎರಡು ವರ್ಷಗಳಿಂದ ಕರೋನಾ ಮಹಾಮಾರಿ ಆವರಿಸಿದಲ್ಲದೆ ಹಲವು ವರ್ಷಗಳಿಂದ ಸತತ ಬರದಿಂದಾಗಿ ಅನೇಕ ರೈತರ ಬದುಕು ಸಾಗಿಸುವುದು ದುಸ್ತರವಾಗಿದೆ. ದನ-ಕರುಗಳಿಗೆ ಮೇವನ್ನು ಪೂರೈಸಲು ರೈತ ಅಸಹಾಯಕರಾಗಿದ್ದರಿಂದ ಬಹುತೇಕ ದನ-ಕರುಗಳು ಕಟುಕರ ಪಾಲಾಗಿ ಕಸಾಯಿಖಾನೆ ಸೇರಿ ಎಷ್ಟೋ ದಿನಗಳಾಗಿವೆ. ಹೀಗಾಗಿ ಎಳ್ಳು ಅಮವಾಸ್ಯೆ ಹಬ್ಬ ತನ್ನ ಹಿಂದಿನ ಗತ್ತನ್ನು ಕಳೆದುಕೊಂಡಿದ್ದರೂ ಆಚರಣೆಯ ವಿಷಯದಲ್ಲಿ ರೈತರ ಶ್ರದ್ಧಾ-ಭಕ್ತಿಗೆ ಕಿಂಚಿತ್ತೂ ಕುಂದು ಬಂದಿಲ್ಲ. ಹಬ್ಬದ ಅಡುಗೆಯ ವೈವಿಧ್ಯತೆಯಲ್ಲಿ ಸ್ವಲ್ಪವು ವ್ಯತ್ಯಾಸ ಕಂಡಿಲ್ಲ.
ರವಿವಾರ ಪಟ್ಟಣದ ಪಂಡಿತ ಯಂಪೂರೆ ಅವರ ಹೊಲಕ್ಕೆ ತಮ್ಮ ಕುಟುಂಬ ಸಮೇತ ದ್ವಿಚಕ್ರ, ತ್ರಿಚಕ್ರ ವಾಹನ ಸೇರಿದಂತೆ ವಿವಿಧ ವಾಹನಗಳಲ್ಲಿ ತಮ್ಮ ಬಂಧು ಮಿತ್ರರ ಹೊಲಗಳಿಗೆ ತೆರಳುವ ದೃಶ್ಯ ಎಲ್ಲೆಡೆ ಕಂಡುಬಂದಿತು. ಆಯಾ ಹೊಲದಲ್ಲಿ ಭೂಮಿಗೆ ಪೂಜೆ ಸಲ್ಲಿಸಿ ಮನೆಯಿಂದ ತಂದ ಸಜ್ಜೆ ಕಡಬು, ಸಜ್ಜೆಯ ರೊಟ್ಟಿ, ಹೂರಣ ಹೋಳಿಗೆ, ಬದನೆಕಾಯಿ, ಕುಂಬಳಕಾಯಿ ಬರ್ಥ, ಶೆಂಗಾ ಚಟ್ನಿ, ಬಗೆ ಬಗೆಯ ಕಾಳಿನ ಪಲ್ಯೆ ಸೇರಿದಂತೆ ಎಲ್ಲ ಅಡುಗೆ ತುಕ್ಕಡಿಗಳನ್ನು ಕೂಡಿಸಿ ಚೌಂಗಿ ಬಲೌವೋ ಚಿಕ್ಕಡಿ ಕಲವೋ ಎಂದು ಹೆಂಗಳೆಯರು ಹೇಳುತ್ತ ಭೂ ತಾಯಿಗೆ ಚರಗ ಸಲ್ಲಿಸಲಾಯಿತು. ನಂತರ ಎಲ್ಲರೂ ಸಾಮೂಹಿಕವಾಗಿ ಭಾರಿ ಭೋಜನದ ಸವಿಯುಂಡರು. ಬಳಿಕ ಹೆಣ್ಣು ಮಕ್ಕಳು ಹರಟೆಯಲ್ಲಿ ಮಗ್ನರಾದರೆ, ಮಕ್ಕಳು ನಗೆ ಚಟಾಕಿಯಲ್ಲಿ ತೇಲಾಡಿದರು. ಹಿರಿಯರು ವಿಶ್ರಾಂತಿಗೆ ಜಾರಿದರೆ, ಯುವಕರು ಬೇರೆ ಬೇರೆ ಆಟಗಳಲ್ಲಿ ತೊಡಗಿದ್ದರು.
ಸಂಜೆಯಾಗುತ್ತಿದ್ದಂತೆ ಇಡೀ ದಿನದ ಸಂಭ್ರಮವನ್ನು ಮೇಲಕು ಹಾಕುತ್ತಾ ಎಲ್ಲ ರೈತ ಕುಟುಂಬಗಳು ಮನೆಯ ದಾರಿ ಹಿಡಿಯುತ್ತಿದ್ದುದು ಸಾಮಾನ್ಯವಾಗಿತ್ತು.
ಈ ಸಂದರ್ಭದಲ್ಲಿ ಭೀಮಾಶಂಕರ ಯಂಪೂರೆ, ಸಚೀನ ಮಂಜಾಳಕರ, ಲಕ್ಷ್ಮೀ ಯಂಪೂರೆ, ರಾಮು ಚಾಕರೆ, ರೇಣುಕಾ ಯಂಪೂರೆ, ರವಿ ಚಾಕರೆ, ಚಂದ್ರಕಲಾ ಯಂಪೂರೆ, ಜಯಶ್ರೀ ಇರಕಲ್, ಲಕ್ಷ್ಮೀ ಕುಶಾಳಕರ, ಸುವರ್ಣಾ ಕಂದಗಲ್, ಅಶ್ವಿನಿ ಯಲಗೋಡ ಸೇರಿದಂತೆ ಅನೇಕರು ಸಾಮೂಹಿಕ ಬ್ರಹ್ಮ ಭೋಜನ ಸವಿದರು.