ಆಂಜನೇಯ ನಗರದಲ್ಲಿ ಚಿಂತನ ಚಾವಡಿ

0
795

ಚಿಂತನ ಚಾವಡಿಯ 3 ನೇ ಗೋಷ್ಠಿ ಆಂಜನೇಯ ನಗರದ ಸಾಹಿತಿ ಶೇಷಗಿರಿ ಮುತಾಲಿಕ ದೇಸಾಯಿ ಅವರ ಮನೆಯಲ್ಲಿ ಇತ್ತೀಚೆಗೆ ಜರುಗಿತು. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಹಿರಿಯ ಸಾಹಿತಿಗಳು ಮತ್ತು ಚಿಂತಕರ ವೇದಿಕೆಯಿಂದ ಸಾಹಿತಿ ಎಸ್.ಎನ್ ಮುತಾಲಿಕ ದೇಸಾಯಿ ಅವರು ರಚಿಸಿರುವ ಕೃತಿಗಳ ಅವಲೋಕನ ಹಿರಿಯ ಸಾಹಿತಿ ಸ ರಾ ಸುಳಕೂಡೆ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

‘ಹಕ್ಕಿ ಹಾಡ ಕೇಳ’ ಕವನ ಸಂಕಲನವನ್ನು ಡಾ. ಗುರುದೇವಿ ಹುಲೆಪ್ಪನವರಮಠ ಪರಿಚಯ ಮಾಡಿಕೊಟ್ಟರು. ನಾವೆಲ್ಲ ಹೂಗುಚ್ಚದಂತೆ ಒಂದಾಗಿ ಬದುಕಬೇಕು. ಜೀವನಕ್ಕಾಗಿ ಉದ್ಯೋಗ -ಆನಂದಕ್ಕಾಗಿ ಬರವಣಿಗೆ ‘ಆದ್ದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವುದು ಪಾಲಕರ ಜವಾಬ್ದಾರಿ ಎ೦ದು ಹೇಳಿದರು. ಈ ಕೃತಿಯಲ್ಲಿ ಭಾಷಾಭಿಮಾನ ದೇಶಾಭಿಮಾನ ಮೂಡಿ ಬಂದಿದೆ ಎಂದು ಹೇಳಿದರು.

ಭಾವಗೀತೆಗಳ ಕವನ ಸಂಕಲನ ‘ಭಾವಸಂಗಮ’ದ ಪರಿಚಯ ಹಾಗೂ ಚಿಂತನವನ್ನು ಉಪನ್ಯಾಸಕರಾದ ಶ್ರೀಕಾಂತ ಶಾನವಾಡ ಮಾಡಿದರು. ಕಾವ್ಯವು ಒಂದು ಸಾಮ್ರಾಜ್ಯವನ್ನು ಕಟ್ಟಬಲ್ಲದು – ಅದೇ ರೀತಿ ಒಂದು ಸಾಮ್ರಾಜ್ಯವನ್ನು ಕೆಡವಬಲ್ಲದು. ಇಂತಹ ಕಾರ್ಯಕ್ರಮದಿಂದ ಕನ್ನಡ ಸಾಹಿತ್ಯವನ್ನು ಬೆಳೆಸುವ ಕಾರ್ಯ ಶ್ಲಾಘನೀಯ ಎಂದರು.

“ಹೇ ಮಾನವ’; ನಾಟಕ ಕೃತಿಯ ಪರಿಚಯವನ್ನು ನಿವೃತ್ತ ಮುಖ್ಯ ಶಿಕ್ಷಕ ಸಿ.ಎಂ ಬೂದಿಗಳ ಅವರು ಮಾಡಿದರು. ನಾಟಕಗಳು ಮನುಷ್ಯನ ಚಿಂತೆ ಹಾಗೂ ದುಗುಡವನ್ನು ದೂರಮಾಡುತ್ತವೆ. ನಾಟಕ ವೀಕ್ಷಣೆಯಿಂದ ಮನಸ್ಸು ಉಲ್ಲಸಿತವಾಗಿ ಒಳ್ಳೆಯ ಕಾರ್ಯಗಳಿಗೆ ಪ್ರೇರಣೆ ನೀಡುತ್ತವೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸ ರಾ ಸುಳಕೂಡೆ ಅವರು, ಚಿಂತನ ಚಾವಡಿಯಲ್ಲಿ ಹೆಚ್ಚು ಜನ ಭಾಗವಹಿಸಿ ಮುತಾಲಿಕ ದೇಸಾಯಿ ಅವರ ಕೃತಿಗಳ ಅವಲೋಕನ ಮಾಡಿದ್ದಾರೆ. ಸದಾ ಇಂತಹ ಚಿಂತನಗಳಲ್ಲಿ ಭಾಗವಹಿಸಿ ಸಾಹಿತಿಗಳಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಶ್ರೀ ಹರಿ ಪ್ರಕಾಶನ ಬೆಳಗಾವಿ, ರೇಣುಕಾ ಎನ್ ಮುತಾಲಿಕ ದೇಸಾಯಿ, ಡಾ ಹೇಮಾ ಸೋನೊಳ್ಳಿ, ಮಲ್ಲಿಕಾರ್ಜುನ ಜೋಗತಿ, ಅಕ್ಕಮಹಾದೇವಿ ತೆಗ್ಗಿ ‘ಶ್ರೀಮತಿ ಚಿಮ್ಮಲಗಿ, ಶ್ರೀಮತಿ ಚೋಬಾರಿ ‘ಆರ್.ಎನ್ ಚಾಪಗಾವಿ, ಅಶೋಕ ಉಳ್ಳೆಗಡ್ಡಿ, ಜಲತ್ಕುಮಾರ ಪೂಣಚಗೌಡ, ಬಿ ಎಲ್ ಸಿಂಗದ, ಶ್ರೀಮತಿ ಕಟ್ಟಿ, ಶ್ರೀ ಹರದಗಟ್ಟಿ ಶ್ರೀ ದೊಡಮನಿ, ಪ್ರಕಾಶ ಪಾಟೀಲ, ಬಿ.ವಿ ಅಣ್ಣಿಗೇರಿ ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಕ ಶಿವಾನಂದ ತಲ್ಲೂರ ಸ್ವಾಗತಿಸಿದರು. ಸಾಹಿತಿ ಬಸವರಾಜ ಸುಣಗಾರ ಪ್ರಾಸ್ತಾವಿಕ ಮಾತನಾಡಿದರು. ಎಂ ವೈ ಮೆಣಸಿನಕಾಯಿ ನಿರೂಪಿಸಿದರು. ಎಸ್ ಎನ್ ಮುತಾಲಿಕದೇಸಾಯಿ ವಂದಿಸಿದರು.