ಮೂಡಲಗಿ: ರಾಜ್ಯ ಸರ್ಕಾರವು ಎಲ್ಲಾ ಮಹಾನಗರ ಪಾಲಿಕೆ/ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರ ಸ್ಥಳೀಯ ಸಂಸ್ಥೆಯ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಘೋಷಿಸಬೇಕೆಂದು ಪ್ರಕಾಶ ಮಾರಿಹಾಳ ಆಗ್ರಹಿಸಿದರು.
ಮಂಗಳವಾರದಂದು ಪಟ್ಟಣದ ಪುರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಮೂಡಲಗಿ ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರಿಗೆ ದೊರಕುತ್ತಿರುವ ಸೌಲತ್ತುಗಳಾದ ಕೆ.ಜಿ.ಆಯ್.ಡಿ, ಜಿ.ಪಿ.ಎಫ್. ಜೋತಿ ಸಂಜೀವಿನಿ ಹಾಗೂ ಕರ್ನಾಟಕ ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು 20-25 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ವಾಟರ್‌ಮೆನ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು, ಬೀದಿ ದೀಪ ನಿರ್ವಹಣೆ ಕಾರ್ಮಿಕರು, ಲೋಡರ್ಸ್, ಕ್ಲಿನರ್ಸ್, ಹೆಲ್ಪರ್, ಸ್ಯಾನಿಟರಿ ಸೂಪರವೈಜರ್ ಇನ್ನೂ ಅನೇಕ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಿಂದ ಮುಕ್ತಿಗೊಳಿಸಿ ನೇರ ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಯಡಿ ಪರಿಗಣಿಸುವುದರ ಜೊತೆಗೆ ಇನ್ನೂ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಕ.ರಾ.ದ.ಸಂ.ಸ ಜಿಲ್ಲಾ ಸಂಚಾಲಕರಾದ ರಮೇಶ ಸಣ್ಣಕ್ಕಿ ಮಾತನಾಡಿ ನಗರ ಸ್ವಚ್ಛವಾಗಿರಲು ಪೌರ ಕಾರ್ಮಿಕರ ಪಾತ್ರ ಬಹಳಷ್ಟಿದ್ದು ಅವರ ಬೇಡಿಕೆಗಳು ಸಮಂಜಸವಾಗಿವೆ. ಈ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಕ.ರಾ.ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕರಾದ ಶಾಬಪ್ಪ ಸಣ್ಣಕ್ಕಿ , ಮೂಡಲಗಿ ಶಾಖೆಯ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಯಶವಂತ ಶಿದ್ಲಿಂಗಪ್ಪಗೋಳ, ನಿಸರ್ಗ ಫೌಂಡೇಶನ್ ಅಧ್ಯಕ್ಷ ಈರಪ್ಪ ಢವಳೇಶ್ವರ, ಮಾಜಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಅನ್ವರ್ ನದಾಫ್ ಹಾಗೂ ಅನೇಕ ಮುಖಂಡರು ಸೇರಿದಂತೆ ನಗರದ ಪೌರ ಕಾರ್ಮಿಕರು ಉಪಸ್ಥಿತರಿದ್ದರು.