ಕಾಯಕ : ಚರ್ಮ ಹದಮಾಡುವುದು / ಕುದುರೆ ಲಾಯಕ್ಕೆ ಹುಲ್ಲು ಹಾಕುವುದು
ಸ್ಥಳ: ತಮಿಳುನಾಡು
ಜಯಂತಿ: ಹೊಸ್ತಿಲ ಹುಣ್ಣುಮೆಯಂದು
ಲಭ್ಯ ವಚನಗಳ ಸಂಖ್ಯೆ: ೧೦
ಅಂಕಿತ: ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮ ರಾಮ ರಾಮನ
ಸತ್ಯ ಶುದ್ಧ ಕಾಯಕಕ್ಕೆ ಹೆಸರಾದ ಮಾದಾರ ಚೆನ್ನಯ್ಯನವರು ಬಸವಣ್ಣನವರ ಸಮಕಾಲೀನರು. ಜಾತಿಯಿಂದ ಅಂತ್ಯಜ: ಅಂದರೆ, ಮಾದಿಗ ಜಾತಿಯವರಾದರು, ಕಾಯಕ – ಸಮಾನತೆಯನ್ನು ಹೇಳುವ ಶ್ರೇಷ್ಠ ವಚನಗಳನ್ನು ನೀಡಿದ ಅನುಭಾವಿ. ಇವರು ನುಡಿದಂತೆ ನಡೆಯುವುದು, ನಡೆಯಂತೆ ನುಡಿಯುವುದು ಎಂಬ ಶರಣರ ಧ್ಯೇಯ ವಾಕ್ಯಕ್ಕೆ ಒಳ್ಳೆಯ ಉದಾಹರಣೆ. ಮಾದಾರ ಚೆನ್ನಯ್ಯನವರು ತಮಿಳುನಾಡಿನ ಚೋಳರಾಜನ ಅರಮನೆಯಲ್ಲಿ ಕುದುರೆ ಲಾಯಕ್ಕೆ ಹುಲ್ಲು ಹಾಕುವ ಕೆಲಸ ಮಾಡುತ್ತಿದ್ದರು. ಅನಂತರ ಬಸವಾದಿ ಶರಣರ ವಿಚಾರ, ಆಚಾರಗಳಿಂದ ಪ್ರಭಾವಿತರಾಗಿ, ಕಲ್ಯಾಣಕ್ಕೆ ಬಂದು, ಅಲ್ಲಿ ತನ್ನ ಕುಲದ ಕಾಯಕವಾದ ಚರ್ಮಗಾರಿಕೆಯನ್ನು ಮುಂದುವರಿಸಿದರು. ಬಸವಣ್ಣನವರು ಮಾದಾರ ಚೆನ್ನಯ್ಯನನ್ನು ಹೃದಯಾಂತರಾಳದಿಂದ ಸುತ್ತಿಸಿದ್ದಾರೆ. ಹರಿಹರನ ರಗಳೆಗಳಲ್ಲಿ, ಪಾಲ್ಕುರಿಕೆ ಸೋಮನಾಥ, ಮಲ್ಲಿಕಾರ್ಜುನ ಪಂಡಿತಾರಾದ್ಯರ ಗಣಸಹಸ್ರನಾಮದಲ್ಲಿ ಇವರ ಉಲ್ಲೇಖವಿದೆ. ಅಬಲೂರು, ಜಗಳೂರು ಶಿಲಾಶಾಸನಗಳಲ್ಲಿ ಇವರ ಹೆಸರು ಕಂಡು ಬರುತ್ತದೆ.
ಇವರದೊಂದು ವಚನ:
ನಡೆನುಡಿ ಸಿದ್ಧಾಂತವಾದಲ್ಲಿ, ಕುಲ ಹೊಲೆ ಸೂತಕವಿಲ್ಲ..
ನುಡಿ ಲೇಸು, ನಡೆಯಧಮವಾದಲ್ಲಿ, ಅದು ಬಿಡುಗಡೆಯಿಲ್ಲದ ಹೊಲೆ..
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ, ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ.?
ಆಚಾರವೆ ಕುಲ, ಅನಾಚಾರವೆ ಹೊಲೆ..
ಇಂತೀ ಉಭಯವ ತಿಳಿದರಿಯಬೇಕು..
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾತ್ಮಾ ರಾಮ ರಾಮನಾ..