spot_img
spot_img

ವಿಶೇಷ ಲೇಖನ: ನೀರೆರೆಯಬೇಕಿದೆ ಬದುಕಿನ ಬೇರುಗಳಿಗೆ

Must Read

- Advertisement -

ನೀರೆರೆಯಬೇಕಿದೆ ಬದುಕಿನ ಬೇರುಗಳಿಗೆ

ದೇವರು ನಮಗೆ ನೂರ್ಕಾಲ ಸೊಗಸಾದ ಜೀವನ ಕರುಣಿಸಿದ್ದಾನೆ. ಸಂತಸದ ಜೀವನಕ್ಕೆ ಬೇಕಾದುದ್ದೆಲ್ಲವನ್ನೂ ನಾವು ಜಗಕೆ ಕಾಲಿಡುವ ಮುನ್ನವೇ ನಮಗಾಗಿ ಸೃಷ್ಟಿಸಿದ್ದಾನೆ. ಹಸಿರುಟ್ಟ ಭೂರಮೆ, ಜಗವ ಬೆಳಗುವ ರವಿಚಂದ್ರರು, ಸುಳಿದು ಸೂಸುವ ತಂಗಾಳಿ, ಉಲಿವ ನಲಿವ ಹಕ್ಕಿ ಪಕ್ಕಿ ಒಂದೇ ಎರಡೇ. ಎರಡು ಕಣ್ಣು ಸಾಲದು ನಿಸರ್ಗದ ಸೊಬಗನ್ನು ತುಂಬಿಸಿಕೊಳ್ಳಲು. ಪ್ರಾಕೃತಿಕ ಸೌಂದರ್ಯವನ್ನು ಸವಿಯುವ ಅನುಭವಿಸುವ ಆನಂದಿಸುವ ಅವಕಾಶವು ನಮಗಿದೆ.

ಒಳ್ಳೆಯದನ್ನು ಮಾಡಿ,ನೋಡಿ ಹೇಳಿ, ಕೇಳಿ ದಿವ್ಯ ಭವ್ಯ ಜೀವನ ಅನುಭವಿಸಲು ಭಗವಂತ ಅನುವು ಮಾಡಿಕೊಟ್ಟಿದ್ದಾನೆ. ಅಂದರೆ ಸಾತ್ವಿಕ ಜೀವನ ಸಾಗಿಸುವುದಕ್ಕೆ ಈ ಜಗದಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಆದರೆ ನಾವು ಒಳ್ಳೆಯದನ್ನು ಮಾಡದೆ, ನೋಡದೆ ಕುರುಡರಂತೆ ಕೆಟ್ಟದ್ದರ ಹಿಂದೆ ಓಡುತ್ತಿದ್ದೇವೆ. ಅಮೂಲ್ಯವಾದ ಬದುಕಿನ ನಿಜ ಸಿರಿ ಸಂಪದದ ಬೆಲೆ ತಿಳಿಯದೆ ಒದ್ದಾಡುತ್ತಿದ್ದೇವೆ.

ತನು, ಮನ, ನಿಸ್ಸೀಮವಾದ ಬುದ್ಧಿಮತ್ತೆಯ ಸಾಮರ್ಥ್ಯ, ಭಾವದ ಬೆಲೆ ಗುರುತಿಸದೆ ಜಗದ ಎಲ್ಲ ಆಸ್ತಿಯನ್ನು ನಮ್ಮದಾಗಿಸಿಕೊಳ್ಳುವ ಹುಚ್ಚು ಭ್ರಮೆಯ ಹಿಂದೆ ತಿರುಗುತ್ತಿದ್ದೇವೆ. ಈ ಅಮೂಲ್ಯವಾದ ಜೀವನ ಏನೂ ಕಷ್ಟ ಪಡದೇ ದೊರೆತಿರುವುದರಿಂದ ಅದರ ಬೆಲೆ ನಮಗೆ ತಿಳಿಯುತ್ತಿಲ್ಲ. ಬದುಕಿನ ನಿಜ ಸ್ವರೂಪವನ್ನು ನಿಸರ್ಗದ ಮೌಲ್ಯವನ್ನು ತಿಳಿಯುವಲ್ಲಿ ಸೋತಿದ್ದೇವೆ.

- Advertisement -

ಹಾಗೆ ನೋಡಿದರೆ ತತ್ವಜ್ಞಾನಿಗಳು ದಾರ್ಶನಿಕರು ಸಂತರು ಅನುಭಾವಿಗಳು ಶರಣರು ಈ ವಿಷಯಗಳ ಶೋಧನೆಯಲ್ಲಿ ‘ಬದುಕಿನ ಬೇರುಗಳಿಗೆ ನೀರೆರೆದು ಗಟ್ಟಿಗೊಳಿಸಿದರೆ ಸಿಹಿ ಸಿಹಿ ಫಲವನ್ನು ಅನುಭವಿಸಬಹುದೆಂದು ಸಾಧಿಸಿ ತೋರಿದ್ದಾರೆ. ವಿಜಯ ಪತಾಕೆ ಹಾರಿಸಿದ್ದಾರೆ. ಆದರೆ ನಾವೆಲ್ಲ ಅವುಗಳ ಅನುಷ್ಟಾನದಲ್ಲಿ ಹಿಂದೆ ಬಿದ್ದಿದ್ದೇವೆ.

ಬಾಳು ಗೋಳು

ಇಷ್ಟೆಲ್ಲ ಜ್ಞಾನ ವಿಜ್ಞಾನ ತಂತ್ರಜ್ಞಾನದ ಹೊರತಾಗಿಯೂ ಬದುಕಿನ ಬುಗುರಿ ಯಾವುದೇ ಅಡಚಣೆಯಿಲ್ಲದೇ ತಿರುಗುತ್ತಿಲ್ಲ. ಅದರ ತಿರುಗುವಿಕೆಗೆ ಅಡ್ಡ ನಿಲ್ಲುವ ಗೋಡೆಗಳೇ ಸಾಕಷ್ಟಿವೆ.ಅಜ್ಞಾನ ಅಸಡ್ಡೆ ದುರಹಂಕಾರಗಳು ಸಂಕಷ್ಟಗಳ ಸರಮಾಲೆಯನ್ನು ತರುತ್ತಿವೆ.

ಸಮಸ್ಯೆಗಳು ಕಷ್ಟಗಳು ಒಂದರ ಹಿಂದೆ ಒಂದು ಸಾಲು ಹಚ್ಚಿ ನಮ್ಮನ್ನು ಹಿಂಡಿ ಹಿಪ್ಪಿ ಮಾಡುತ್ತಿವೆ ಬರಬರುತ್ತ ಬದುಕಿನ ಬವಣೆಗಳು ಹೆಚ್ಚುತ್ತಿವೆ. ಬಾಳು ಗೋಳಾಗುತ್ತಿದೆ.. ಬದುಕು ನರಕ ಸದೃಶವಾಗುತ್ತಿದೆ.ಮೊದಲಿಗಿಂತ ಈಗ ಬದುಕು ಬಹಳಷ್ಟು ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಅದಕ್ಕೆಲ್ಲ ಮೂಲ ಕಾರಣವೇನೆಂದು ಹುಡುಕ ಹೊರಟರೆ ಅದು ನಮ್ಮ ಬುಡಕ್ಕೆ ಬಂದು ನಿಲ್ಲುತ್ತದೆ. ನಮ್ಮ ಅಂಕು ಡೊಂಕಾದ ತಪ್ಪಿದ ನಡವಳಿಕೆಗಳೇ ಕಾರಣವೆಂದು ಹೇಳುತ್ತದೆ.

- Advertisement -

ನೈಸರ್ಗಿಕ ಜೀವನದ ನಿಯಮಗಳನ್ನು ಪಾಲಿಸಿದರೆ ನಮ್ಮ ಎಷ್ಟೋ ನೋವುಗಳು ಹೇಳ ಹೆಸರಿಲ್ಲದಂತೆ ಮಾಯವಾಗುತ್ತವೆ.ಬದುಕಿನ ಕಷ್ಟಗಳನ್ನು ಸಾಕಷ್ಟು ಕಡಿಮೆ ಮಾಡಬಹುದು. ನಿಸರ್ಗದ ನಿಯಮಗಳನ್ನು ಪಾಲಿಸುವುದರಿಂದ ಅದು ನಮಗೆ ಬೆಂಬಲ ನೀಡುತ್ತದೆ. ವಾಸ್ತವ ಬಾಳಿನ ನೀತಿ ನಿಯಮಗಳನ್ನು ತಿಳಿದು ಅನುಸರಿಸಿದರೆ ಜೀವನ ನಮಗೆ ದೊಡ್ಡ ಕೊಡುಗೆಗಳನ್ನು ಕೊಡುತ್ತದೆಂಬುದು ಸತ್ಯ. ನಿಜಕ್ಕೂ ಅದು ಅದ್ಭುತ ಸತ್ಯ. ಇದೆಲ್ಲ ಮನುಷ್ಯನಿಗೆ ಅನೇಕ ಸಲ ಅನುಭವಕ್ಕೆ ಬಂದಿದೆಯೆಂಬುದೂ ಸೂರ್ಯನಷ್ಟೇ ಸತ್ಯ.

ಮನಸ್ಸಿನ ಹುಚ್ಚಾಟ

‘ಮನಸ್ಸು ಮತ್ತು ಅದರ ಹುಚ್ಚಾಟವನ್ನು ಹೇಳಲಾಗದು.. ನಮ್ಮ ಭಾವನೆಗಳು ಅಂತಃಪ್ರಚೊದನೆಗಳು ಭಾವೋದ್ರೇಕಗಳನ್ನಂತೂ ವಿವರಿಸಲು ಸಾಧ್ಯವಿಲ್ಲ. ಅದನ್ನು ಹಿಡಿದಿಟ್ಟುಕೊಳ್ಳುವುದೇ ದೊಡ್ಡ ತಪಸ್ಸು.’ ಎನ್ನುತ್ತಾನೆ ಶ್ರೀಕೃಷ್ಣ ಮನುಷ್ಯನ ದುರಾಸೆಗೆ ಪ್ರಕೃತಿ ಮೇಲಿಂದ ಮೇಲೆ ಪಾಠ ಕಲಿಸಿದೆ ಹೀಗಿದ್ದರೂ ಎಚ್ಚೆತ್ತುಕೊಳ್ಳದೇ ಮತ್ತದೇ ಪ್ರಮಾದ ಮಾಡುತ್ತಿದ್ದೇವೆ.

ನಮ್ಮ ಮತ್ತು ಪ್ರಕೃತಿಯ ನಡುವೆ ಬಿರುಕುಗಳನ್ನು ಹೆಚ್ಚಿಸುತ್ತಿದ್ದೇವೆ. ಈಗೀಗಂತೂ ಬಿರುಕು ಸಾಕಷ್ಟು ದೊಡ್ಡದಾಗಿದೆ ಎಂಬುದು ಬರಿಗಣ್ಣಿಗೆ ಕಾಣಿಸುತ್ತಿದೆ. ಬಹುಶಃ ನಮಗೆ ನಾವಾರು ಎಂಬುದು ಅರಿವಿಲ್ಲ. ನಮ್ಮ ಬಗ್ಗೆ ನಾವು ಅರಿವು ಮೂಡಿಸಿಕೊಳ್ಳುವುದು ಜ್ಞಾನದೋಯದ ಮಾರ್ಗ. ಆದರೆ ನಮಗೆ ಪ್ರಾಣಿ ವರ್ಗದಲ್ಲಿ ಶ್ರೇಷ್ಠರು. ಸಹಜೀವಿಗಳ ಜತೆ ಸಹಬಾಳ್ವೆಯಲ್ಲಿ ಬಾಳಬೇಕೆಂಬ ಕಲ್ಪನೆಯೇ ಇಲ್ಲ. ಕಲ್ಪನೆ ಇದ್ದರೂ ಅದೆಲ್ಲವನ್ನೂ ಗಾಳಿಗೆ ತೂರಿ ಸ್ವಾರ್ಥ ದುರಾಸೆ ಮೆರೆಯುತ್ತಿದ್ದೇವೆ.

ಕ್ರೋಧವಾಗಿರಬಹುದು ನಿರಾಶೆಯಾಗಿರಬಹುದು ದುಃಖವಾಗಿರಬಹುದು ಅಸಮಾಧಾನವಾಗಿರಬಹುದು ಅವುಗಳ ಪದರುಗಳನ್ನು ದಾಟಲಾಗದೇ ಹೆಣಗಾಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ನಾವು ನಿಯಮಾನುಸಾರ ಬದುಕಿನ ಆಟವಾಡದೇ ಇರುವುದು. ಇನ್ನೊಂದರ್ಥದಲ್ಲಿ ಹೇಳಬೇಕೆಂದರೆ ನಿಯಮಬಾಹೀರ ಚಟುವಟಿಕೆಗಳಲ್ಲಿ ಇನ್ನಿಲ್ಲದಂತೆ ಮುಳುಗಿರುವುದು.

ಮರೆವಿನ ಅಂತಸ್ತಿನಲ್ಲಿ

ಬದುಕೆಂಬ ಗಿಡದ ಬೇರುಗಳಿಗೆ ಕೊಡಲಿ ಪೆಟ್ಟು ಹಾಕಿ ಸಿಹಿ ಸಿಹಿಯಾದ ಹಣ್ಣುಗಳನ್ನು ಬಯಸಿದರೆ ಅದು ಹೇಗೆ ತಾನೇ ಫಲ ಕೊಟ್ಟೀತು ಹೇಳಿ? ನಮ್ಮನ್ನು ನಾವು ಅರಿತುಕೊಳ್ಳಲು ಸಮಯ ಕೊಡಲಾಗದಷ್ಟು ಗೌಜು ಗದ್ದಲದಲ್ಲಿ ಬಿದ್ದಿರುವುದು. ಮರೆವಿನ ಅಂತಸ್ತಿನಲ್ಲಿ ಗಾಢ ನಿದ್ರೆಯಲ್ಲಿದ್ದೇವೆ. ಗಾಯದ ಮೇಲೆ ಗೊತ್ತಿದ್ದೂ ಬರೆಗಳನ್ನು ಎಳೆದುಕೊಳ್ಳುತ್ತಿದ್ದೇವೆ.. ದಯೆ ಕರುಣೆ ಮಮತೆ ಒಲುಮೆ ತೋರುವುದನ್ನು ನೆನಪು ಹಾರುತ್ತಿದ್ದೇವೆ.

ಇವೆಲ್ಲವುಗಳಿಂದ ಜಾಗೃತವಾಗದಿದ್ದರೆ ಬದುಕು ಬಲವಾದ ಹೊಡೆತವನ್ನು ಕೊಡುತ್ತದೆ. ಪರಿಸರ ಸಂರಕ್ಷಣೆಯನ್ನು ಅವರಿವರ ಹೊಣೆಯೆಂದು ಹೊತ್ತೊಗೆಯದೆ ವೈಯಕ್ತಿಕ ಹೊಣೆಗಾರಿಕೆ ಹೊತ್ತುಕೊಳ್ಳುವ ಮೂಲಕ ಪ್ರಜ್ಞಾಪೂರ್ವಕ ಜೀವನ ನಡೆಸಬೇಕಿದೆ.

ಕಲುಷಿತ ಮನಸ್ಸುಗಳನ್ನು ಹಸನುಗೊಳಿಸಬೇಕಿದೆ. ತೋರಿಕೆಯ ಭಕ್ತಿ ಬೂಟಾಟಿಕೆಯಿಂದ ದೇವರನ್ನು ಮೆಚ್ಚಿಸುವ ಬದಲು ನಿರ್ಮಲ ಮನಸ್ಸಿನಿಂದ ಒಲಿಸಿಕೊಳ್ಳಬೇಕಿದೆ. ಬದುಕಿನಲ್ಲಿ ಸಹಜವಾಗಿ ಸಾಗುತ್ತಿದ್ದರೆ ಆತನೇ ಮೆಚ್ಚಿಕೊಳ್ಳುತ್ತಾನೆ.

ಮನಸ್ಸಿನ ಕೊಳೆಗಳನ್ನು ಸ್ವಚ್ಛಗೊಳಿಸಿ ಪ್ರಕೃತಿಯನ್ನು ಸಹಜೀವಿಗಳನ್ನು ತೆರೆದ ಮನಸ್ಸಿನಿಂದ ಪ್ರೀತಿಸಲು ಪ್ರಯತ್ನಿಸಬೇಕು. ಕ್ರಮೇಣ ಅದು ಅಭ್ಯಾಸವಾಗುತ್ತದೆ. ಬದುಕಿನ ಬೇರುಗಳಿಗೆ ನೀರೆರದು ಪೋಷಿಸಿದರೆ ಮಾತ್ರ ಗಟ್ಟಿಯಾಗುತ್ತವೆ.

ಆಗ ಬದುಕು ಹೂದೋಟದಲ್ಲಿನ ಹೂವು ಅರಳುವಂತೆ ಸಹಜವಾಗಿ ಅರಳುತ್ತದೆ. ಎಲ್ಲೆಲ್ಲೂ ಸಂತಸದ ಗಂಧದ ಸುಗಂಧ ಸೂಸುತ್ತದೆ.


ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರ

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group