ಮೂಡಲಗಿ – ಮೂಡಲಗಿ ತಾಲೂಕಿನ ಗುಜನಟ್ಟಿ ಗ್ರಾಮದಿಂದ ಕಲ್ಲೋಳಿಯವರೆಗೆ ಸುಮಾರು ೫ ಕಿ. ಮೀ. ರಸ್ತೆಯ ಡಾಂಬರೀಕರಣವನ್ನು ಕೆಲವು ತಿಂಗಳ ಹಿಂದೆ ಕೈಗೊಂಡಿದ್ದು ಸದರಿ ಕಾಮಗಾರಿ ತೀರಾ ಕಳಪೆಯಾಗಿರುವುದರಿಂದ ಅದನ್ನು ಕೈಗೊಂಡ ಗುತ್ತಿಗೆದಾರನಿಗೆ ಕಾಮಗಾರಿಯ ಬಿಲ್ ನೀಡದೆ ತಡೆಹಿಡಿಯಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗುರು ಗಂಗನ್ನವರ ದೂರು ಸಲ್ಲಿಸಿದ್ದಾರೆ.
ಗೋಕಾಕದ ಪಂಚಾಯತ ರಾಜ್ ಇಂಜಿನೀಯರ್ ಉಪವಿಭಾಗದ ಅಭಿಯಂತರರಿಗೆ ಮನವಿ ಸಲ್ಲಿಸಿರುವ ಅವರು, ಕೆಲವೇ ತಿಂಗಳ ಹಿಂದೆ ನಿರ್ಮಿಸಿರುವ ಈ ರಸ್ತೆಯ ಗುಣಮಟ್ಡ ತೀರಾ ಕಳಪೆಯಾಗಿದ್ದು ಈಗಾಗಲೇ ಕಿತ್ತು ಹೋಗುತ್ತಿದೆ. ಇದರ ಗುಣಮಟ್ಟ ತಪಾಸಣೆ ಕೂಡ ಆಗಿಲ್ಲ. ಆದ್ದರಿಂದ ಈ ರಸ್ತೆಗೆ ಸಂಬಂಧಿಸಿದ ಯಾವುದೇ ಬಿಲ್ ಗುತ್ತಿಗೆದಾರನಿಗೆ ನೀಡಬಾರದು ಎಂದು ಮನವಿ ಸಲ್ಲಿಸಿದ್ದಾರೆ.
ಹಿರಿಯ ಅಧಿಕಾರಿಗಳನ್ನು ಕರೆಸಿ ಸಾರ್ವಜನಿಕರ ಸಮ್ಮುಖದಲ್ಲಿ ರಸ್ತೆ ಕಾಮಗಾರಿಯ ಗುಣಮಟ್ಟ ತಪಾಸಣೆ ನಡೆಸಬೇಕು. ಅದರ ವರದಿ ನಮಗೆ ನೀಡಬೇಕು, ಕಳಪೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರನ ಲೈಸೆನ್ಸ್ ರದ್ದು ಮಾಡಬೇಕು ಎಂದು ಗಂಗನ್ನವರ ಆಗ್ರಹಿಸಿದ್ದು , ಇಷ್ಟಾಗಿಯೂ ತಾವು ಬಿಲ್ ಪಾವತಿ ಮಾಡಿದಲ್ಲಿ ತಮ್ಮ ವಿರುದ್ಧ ಕಾನೂನು ಮೊಕದ್ದಮೆ ದಾಖಲಿಸಲು ಮುಂದಾಗಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.