ಬೀದರ: ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರುವ ಸಂಬಂಧ ಕರೆಯಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಪರಸ್ಪರ ಕೂಗಾಟ-ತಳ್ಳಾಟದ ಘಟನೆ ನಡೆದಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಗ್ರಾಮೀಣ ಘಟಕದ ಅಧ್ಯಕ್ಷ ಆನಂದ ಚವಾಣ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ ಮತ್ತಿತರರು ಸಭೆ ನಡೆಸುತ್ತಿದ್ದರು. ಈ ವೇಳೆ ಕೆಲ ಕಾರ್ಯಕರ್ತರು ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಡಾ. ಭೀಮಸೇನರಾವ ಸಿಂಧೆ ಅವರನ್ನು ಸಭೆಗೆ ಏಕೆ ಕರೆಸಿಲ್ಲ ಎಂದು ತಕರಾರು ತೆಗೆದರು. ಈ ವೇಳೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದರು. ಕುರ್ಚಿಗಳನ್ನು ಎತ್ತಿ ಬಿಸಾಡಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಕೆಲ ನಾಯಕರು ಕೋಪೋದ್ರಿಕ್ತ ಕಾರ್ಯಕರ್ತರನ್ನು ಸಮಾಧಾನ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.
‘ತಾಲ್ಲೂಕಿನ ಇಬ್ಬರು ಕಾಂಗ್ರೆಸ್ ಅಧ್ಯಕ್ಷರೇ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ. ಇವರಿಗೆ ಸಭೆ ನಡೆಸಲು ಯಾವುದೇ ನೈತಿಕತೆ ಇಲ್ಲ’ ಎಂದು ಈ ಸಂದರ್ಭದಲ್ಲಿ ಶರಣಪ್ಪ ಪಾಟೀಲ ದೂರಿದರು.
‘ನಾವು ಜಿಲ್ಲಾ ಅಧ್ಯಕ್ಷರ ಅನುಮತಿ ಪಡೆದು ಇಲ್ಲಿ ಸಭೆ ನಡೆಸುತ್ತಿದ್ದೇವೆ. ಆದರೆ ಶರಣಪ್ಪ ಪಾಟೀಲ ಕೆಲ ಯುವಕರನ್ನು ಕರೆ ತಂದು ಗದ್ದಲ ಎಬ್ಬಿಸಿ ಸಭೆಗೆ ಅಡ್ಡಿ ಮಾಡಿದ್ದಾರೆ. ಈ ಕುರಿತು ಅವರ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದೇವೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ ತಿಳಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ