spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಸೊಡ್ದಳ ಬಾಚರಸ

12ನೇ ಶತಮಾನ ಶಿವಶರಣರ ಕಾಲ, ಕನ್ನಡಸಾಹಿತ್ಯಕ್ಕೆ ಅತ್ಯಂತ ವಿಶಿಷ್ಟವಾದ, ‘ವಚನ’ ಸಾಹಿತ್ಯವನ್ನು ಜಗತ್ತಿಗೆ ನೀಡಿದಂತಹ ವಿಶೇಷ ಕಾಲ. ಇಂತಹ ಕಾಲದಲ್ಲಿ ನಾವು ಅನೇಕ ಶಿವಶರಣರನ್ನು ಕಾಣುತ್ತೇವೆ. ದೇವರ ದಾಸಿಮಯ್ಯ, ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ, ಘಟ್ಟಿವಾಳಯ್ಯ, ಅಕ್ಕಮಹಾದೇವಿ, ಬೊಂತಾದೇವಿ, ಆಯ್ದಕ್ಕಿ ಲಕ್ಕಮ್ಮ, ಕಾರಿಕಾಲಮ್ಮೆ, ಹೀಗೆ ಇನ್ನೂ ಅನೇಕ ಶಿವಶರಣರ ಸಾಲಿಗೆ ಸೊಡ್ದಳ ಬಾಚರಸರು ಸೇರುತ್ತಾರೆ.

ಸೊಡ್ದಳ ಬಾಚರಸರ ಕಾಲ ಕ್ರಿ.ಶ.1160. ‘ಸೊಡ್ಡಳ’ ಎನ್ನುವುದು ಇವರ ಅಂಕಿತನಾಮವಾಗಿತ್ತು. ಜಗಜ್ಯೋತಿ ಬಸವಣ್ಣನವರಿಗೆ ತುಂಬಾ ಆಪ್ತರಾಗಿದ್ದ ಸೊಡ್ದಳ ಬಾಚರಸರು ಕಲ್ಯಾಣ ನಗರದ ಬಿಜ್ಜಳನ ಅರಮನೆಯ ಕಣಜದಿಂದ ಧಾನ್ಯವನ್ನು ಅಳೆದುಕೊಡುವ ಮತ್ತು ಕೊಟ್ಟುದರ ಲೆಕ್ಕವನ್ನು ಬರೆಯುವ ಕರಣಿಕ ಅಂದರೆ ಲೆಕ್ಕಗುಮಾಸ್ತರಾಗಿದ್ದರು. ಇವರು ಸೌರಾಷ್ಟ್ರ ಸೋಮೇಶ್ವರನ ಭಕ್ತನಾಗಿದ್ದರು. ಬಸವಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರ ಮುಂತಾದ ಕೃತಿಗಳಲ್ಲಿ ಇವರ ಕುರಿತು ಕೆಲವು ವಿವರಗಳು ದೊರೆತಿವೆ. ಇದುವರೆಗೆ ಇವರ 102 ವಚನಗಳು ದೊರೆತಿವೆ. ತತ್ವವಿವೇಚನೆ, ನೀತಿಭೋಧೆ, ಅನ್ಯಮತ, ಅನ್ಯದೈವದೂಷಣೆ, ಶಿವಭಕ್ತಿನಿಷ್ಠೆ ಇವುಗಳು ಇವರ ವಚನಗಳಲ್ಲಿ ಕಂಡುಬರುತ್ತವೆ. ಇವರ ಭಾಷಾಪ್ರಯೋಗ  ಹಾಗೂ ನಿರೂಪಣಾ ಶೈಲಿ ಎಲ್ಲ ವಚನಕಾರರಿಗಿಂತ ಭಿನ್ನವಾಗಿದೆ.

- Advertisement -

ಇದುವರೆಗೆ ಇವರ 108 ವಚನಗಳು
ದೊರೆತಿವೆ. ದೇವರಾಯ ಸೊಡ್ಡಳ/ಮಹಾದಾನಿ ಸೊಡ್ಡಳ(ಸೊಡ್ಡಳ ಎಂಬ ಪದಕ್ಕೆ ‘ಶಿವ/ಈಶ್ವರ’ ಎಂಬ  ತಿರುಳು ಇರಬಹುದೆಂದು ತಿಳಿಯಲಾಗಿದೆ. ಸೊಡ್ದಳ ಬಾಚರಸರ ಪಾತ್ರವು ಬಸವಣ್ಣನವರ ಬದುಕಿನ ನಿರ್ಣಾಯಕ ಹಂತದಲ್ಲಿ ಪ್ರವೇಶವನ್ನು ಪಡೆದಿದೆ. ಸೊಡ್ಡಳ ಬಾಚರಸರು ಬಸವನಿಷ್ಠೆಗೆ ಪ್ರಸಿದ್ಧಿಯಾಗಿದ್ದರು.

ಈ ಪತ್ರೆಗೀ ಫಲ, ಈ ಪುಷ್ಪಕೀ ಫಲ,
ಈ ಪೂಜೆಗೀ ಫಲವೆಂಬ ಕೈಕೂಲಿಕಾರರೆಲ್ಲ
ಕರ್ಮಿಗಳಯ್ಯಾ,
ಸ್ವರ್ಗನರಕಗಳನುಂಬ ಕರ್ಮಿಗಳಯ್ಯಾ,
ಒಡಲೊಡವೆ ಪಡೆದರ್ಥವ ಮೃಡದೇವ ಸೊಡ್ಡಳಂಗರ್ಪಿತವೆಂದಾತ
ಬೆಡಗಿನ ಶಿವಪುತ್ರ ಉಳಿದವರಂತಿರಲಿ

ನಮ್ಮ ಭಕ್ತಿಯ ಶೈಲಿಯನ್ನು ಈ ವಚನ ತಿಳಿಸುತ್ತದೆ. ನಾವುಗಳು ಯಾವ ಪೂಜೆ ಮಾಡಿದರೆ ಏನು ಫಲ  ದೊರೆಯುತ್ತದೆ? ಎಂದು ಯೋಚಿಸಿ ಪೂಜೆ ಮಾಡುತ್ತೇವೆ. ನಾವು ಹೀಗೆ ಮಾಡಲು ಇದು ಕೇವಲ ನಮ್ಮ
ನಿರ್ಧಾರವಲ್ಲ ಹೊರತಾಗಿ, ಇದೆಲ್ಲಾ ನಮ್ಮನ್ನು ಪ್ರತಿದಿನ ತಮ್ಮ ಮಾತುಗಳಿಂದ ವಂಚಿಸುವ ಪುರೋಹಿತಶಾಹಿಗಳ ತಂತ್ರವಾಗಿದೆ. ಇದನ್ನು ಮನಗಂಡ ಶರಣರು ಇವರ ಎಲ್ಲಾ ಕುತಂತ್ರಗಳನ್ನು ಬಯಲಿಗೆ ತಂದರು.

- Advertisement -

ನಾವೀಗಾಗಲೇ ತಿಳಿದಂತೆ ಒಂದೊಂದು ಮಠ, ಮಂದಿರಗಳಲ್ಲಿ, ಒಂದೊಂದು ಪೂಜೆಗೆ ಒಂದೊಂದು ದರ ನಿಗದಿಯಾಗಿರುತ್ತದೆ. ಆ ಎಲ್ಲಾ ಪೂಜೆಗಳ ಯಾದಿಯನ್ನು ಪೂಜಾರಿಯೇ ನಮಗಳಿಗೆ ನೀಡುತ್ತಾನೆ, ಅದರಂತೆ ಪೂಜಿಸುವ ನಮ್ಮನ್ನು ಸೊಡ್ಡಳ ಬಾಚರಸ ‘ಕೈಕೂಲಿ’ ಮಾಡುವವರಿಗೆ ಹೋಲಿಸುತ್ತಾನೆ. ಕೂಲಿಕಾರರು ತಮ್ಮ ಕೂಲಿಯ ಬಗ್ಗೆ ಯೋಚಿಸುವ ಹಾಗೆ ಡಾಂಭಿಕ ಭಕ್ತರು ಕೂಡ, ತಮ್ಮ ಭಕ್ತಿಯನ್ನು ಅನುಸರಿಸಿ ಅದರ ಜೊತೆಗೆ ಸ್ವರ್ಗ-ನರಕಗಳ ಪ್ರಾಪ್ತಿಯ ಕುರಿತು ಯೋಚಿಸಿ ಲೆಕ್ಕಾಚಾರವನ್ನು ಹಾಕುತ್ತಾರೆ ಎಂದು ವಚನಕಾರರಾದ ಸೊಡ್ಡಳ ಬಾಚರಸ ವ್ಯಂಗ ಮಾಡಿದ್ದಾರೆ. ಕಾರಣ ಇದು ನಿಜವಾದ ಭಕ್ತಿಯಲ್ಲ, ಇದನ್ನು ಬಿಡಿ, ನಿಮ್ಮ ಶುದ್ಧವಾದ ಭಕ್ತಿ, ನಿಮ್ಮ ನಿರ್ಮಲವಾದ ಮನಸ್ಸು ಇವುಗಳನ್ನು ಆ ಶಿವನಿಗೆ ಅರ್ಪಿಸಿ ಎಂದು ಸೊಡ್ಡಳ ಬಾಚರಸರು ಕೇಳಿಕೊಂಡಿದ್ದಾರೆ.

ಸೊಡ್ಡಳ ಬಾಚರಸರ ಕೆಲವು ವಚನಗಳು:

1. ಉಂಡುಂಡು ಜರಿದವನು ಯೋಗಿಯೆ?
ಅಶನಕ್ಕೆ ಅಳುವವನು ಯೋಗಿಯೆ?
ವ್ಯಸನಕ್ಕೆ ಮರುಗುವವನು ಯೋಗಿಯೆ?
ಆದಿವ್ಯಾಧಿಯುಳ್ಳವನು ಯೋಗಿಯೆ?
ಯೋಗಿಗಳೆಂದಡೆ ಮೂಗನಾಗಳೆ ಕಪಯಿವೆ.
ಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳಾ,
ಸಿದ್ಧರಾಮನೊಬ್ಬನೆ ಶಿವಯೋಗಿ.

2. ಅಂಗ ಲಿಂಗಕ್ಕೆ ಗೂಡಾಯಿತ್ತು, ಲಿಂಗ ಅಂಗಕ್ಕೆಗೂಡಾಯಿತ್ತು.
ಅಂಗಲಿಂಗಸಂಗವೆಂಬ ಸಂದಳಿದು
ನಿಜಲಿಂಗೈಕ್ಯವಾಯಿತ್ತು.
ಭಾವ ನಿರ್ಭಾವ ನಿಷ್ಪತ್ತಿಯಲ್ಲಿ,
ಮಹಾದಾನಿ ಸೊಡ್ಡಳಂಗೆ ಸರ್ವನಿರ್ವಾಣವಾಯಿತ್ತು

3) ಅರೆ ಬಿರುದು ನುಡಿದವರು ಕೇಳಿರೆ
ಕೆರಳಿಕೆಯ ನುಡಿವರು
ನೆರೆದ ಮಂದಿಯ ಕಂಡುಬ್ಬುವರು
ಕೊಬ್ಬುವರು
ನಿರುತದ ಕಾಳಗವೆಂದಡೆ ಬಿರುದ
ಬಿಸಾಡುವರು, ಅರೆದು ಭಕ್ತಿಯ ಮಾಡಿ,
ನೆರೆಭಕ್ತನೆಂದರೆ ಎಂತು ಮೆಚ್ಚುವನಯ್ಯಾ,
ನಮ್ಮ ದೇವರಾಯ ಸೊಡ್ಡಳ.

ಸೊಡ್ಡಳ ಬಾಚರಸರು ತಮ್ಮ ವಿಶಿಷ್ಟವಾದ ವಚನಗಳ ಮೂಲಕ ಡಾಂಭಿಕರಲ್ಲಿ ಭಕ್ತಿಯ ಸುಧೆಯನ್ನು
ಹರಿಸುತ್ತಾ, ಸಮಾಜವನ್ನು ತಿದ್ದಲು ಪ್ರಯತ್ನಿಸಿದ್ದಾರೆ. ಕಾರಣ ನಾವುಗಳು ಕೂಡ ಈ ಶರಣರು ಹಾಕಿಕೊಟ್ಟ ಮಾರ್ಗದಲ್ಲಿಯೇ ಸಾಗಿ, ಮುಕ್ತಿಯನ್ನು ಪಡೆಯೋಣ.

ಸಿದ್ದಲಿಂಗಮ್ಮ ಹಿರೇಮಠ.
ಮುಖ್ಯಸ್ಥರು, ಕನ್ನಡವಿಭಾಗ,
ಕೆಎಲ್‍ಇ ಸಂಸ್ಥೆಯ ಪ್ರೇರಣಾ ಮಹಾವಿದ್ಯಾಲಯ, ಹುಬ್ಬಳ್ಳಿ.
ಮೊ. ಸಂಖ್ಯೆ : 9886254368

- Advertisement -
- Advertisement -

Latest News

ಕೃತಿ ಪರಿಚಯ

ಕೃತಿ ಪರಿಚಯ: ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಲೇಖಕ : ಸಿ. ವೈ. ಮೆಣಸಿನಕಾಯಿ ಪ್ರಕಾಶಕರು: —ಶೀರಾಮ್ ಬುಕ್ ಸೆಂಟರ್ ಮಂಡ್ಯ “ಬೈಲಹೊಂಗಲ ನಾಡ ಚಂದ, ಗಂಗಾಳ ಮಾಟ ಚಂದ ಗಂಗೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group