Homeಸುದ್ದಿಗಳುಗುರು ಸ್ಪರಣೆ ಅಂಗವಾಗಿ ವಿಶಿಷ್ಟ ನೃತ್ಯ ಕಾರ್ಯಕ್ರಮ

ಗುರು ಸ್ಪರಣೆ ಅಂಗವಾಗಿ ವಿಶಿಷ್ಟ ನೃತ್ಯ ಕಾರ್ಯಕ್ರಮ

ಬೆಂಗಳೂರು – ಸಮುದ್ಬವ ತಂಡದಿಂದ ಗುರು ವಿದುಷಿ ಡಾ. ಪ್ರಿಯಾ ಗಣೇಶ್ ಹಾಗು ಅವರ ಪುತ್ರಿ ಕು. ಶರ್ಲೋವಿ ಜಿ. ಆತ್ರೇಯ ಯವರು ವಿವಿಧ ನೃತ್ಯಪ್ರಕಾರಗಳಲ್ಲಿ ಗುರುಗಳನ್ನು ಸ್ಮರಿಸುವ ವಿಭಿನ್ನ ವಿಶಿಷ್ಟ ಕಾರ್ಯಕ್ರಮ ಇದೇ ಶನಿವಾರ ಆ.೨ ರಂದು ೫.೦೦ಕ್ಕೆ ನಗರದ ಜಯನಗರ ೮ನೇಬ್ಲಾಕ್ ಜೆ.ಎಸ್.ಎಸ್.ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿದೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ , ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ ಮತ್ತು ಹಿರಿಯ ಸಂಗೀತ ಕಲಾವಿದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಭಾಗವಹಿಸುವರು.

ನಟುವಾಂಗದಲ್ಲಿ ವಿದುಷಿ ಪದ್ಮಗಂಧಿನಿ ರಾವ್ ಹುಲಿಕಲ್ , ವಿ. ಶ್ರೀಯಾ ನಾಯಕ್ , ಗಾಯನದಲ್ಲಿ ವಿದ್ವಾನ್ ಆರ್ ಶಂಕರ ಪ್ರಸಾದ , ವಿದುಷಿ ಡಾ. ಆಶ್ವಿನಿ ಪಿ.ಆರ್ , ಮೃದಂಗದಲ್ಲಿ ವಿದ್ವಾನ್ ಪುದುವೈ ಎಸ್ ಭಾರತ, ವಯೋಲಿನ್ ವಿದ್ವಾನ್ ಟಿ ಶ್ರೀನಿವಾಸನ್, ರಿದಂಪ್ಯಾಡ್ ಮತ್ತು ಕೊಳಲಿನಲ್ಲಿ ವಿದ್ವಾನ್ ಕರಕೈಲ್ ಶರವಣನ್ ಸಹಕರಿಸಲಿದ್ದಾರೆ. ಸಂಗೀತ ಸಂಯೋಜನೆ: ವಿದ್ವಾನ್ ಆರ್ ಶಂಕರ ಪ್ರಸಾದ್, ವಿದುಷಿ ಅಶ್ವಿನಿ ಪಿ ಆರ್

ಸಾಹಿತ್ಯ: ಉಡುಪಿ ಪಿ ಸುದರ್ಶನ್ ,ವಿದ್ವಾನ್ ಆರ್ ಶಂಕರ ಪ್ರಸಾದ್,ಸುಷ್ಮ ಡಿ.ಎಸ್ ನಿರೂಪಣೆ , ಕಲಾಯೋಗಿ ವಿಜಯ ಕುಮಾರ್ ಪ್ರಸಾಧನ , ಕು.ಆವನಿ.ಕೆ, ಲಕ್ಷ್ಮಿ ಅನನ್ಯ ,ಅನನ್ಯ ಮನೋಜ್ , ಸುಮೇಧ ತಲಗಳ್ಳ , ಅಕ್ಷತ ಎನ್, ಭುವನ ಎಸ್.ಮೊದಲಾದ ಸಹಕಲಾವಿದರು ಭಾಗವಹಿಸಲಿದ್ದಾರೆ.

ವಂದೇ ಗುರು ಪರಂಪರಾಂ…..
‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ಪ್ರಖ್ಯಾತ ಹೇಳಿಕೆಯ ಹಾಗೆ, ಜೀವನದಲ್ಲಿ, ಪೋಷಕರ ಪಾತ್ರ ಎಷ್ಟಿದೆಯೋ, ಅಷ್ಟೇ ಗುರುಗಳ ಪಾತ್ರವೂ ಇದೆ. ನಮ್ಮಲ್ಲಿರುವ ಅಂಧಕಾರವನ್ನೂ ದೂರ ಮಾಡಿ, ಜ್ಞಾನವೆಂಬ ಬೆಳಕನ್ನು ನೀಡುವ ಮಹಾನ್ ಶಕ್ತಿಯೇ ಗುರು.ಜೀವನದಲ್ಲಿ ಮನಃಶಾಂತಿ ಮತ್ತು ಆನಂದವನ್ನು ಪಡೆಯಲು ಯಾವ ಸಾಧನೆಯನ್ನು ಮಾಡಬೇಕು ಎಂಬುದರ ಯಥಾರ್ಥ ಜ್ಞಾನವನ್ನು ಕೊಡುವವರೇ ಗುರುಗಳು.
ಗುರುವಿನ ತತ್ವವನ್ನರಿಯದೆ ವೇದಗಳಾಗಲೀ, ಪುರಾಣಗಳಾಗಲೀ, ಇತಿಹಾಸ, ಮಂತ್ರವಿದ್ಯೆಯಾಗಲೀ, ಆಗಮ ವಿದ್ಯೆಯಾಗಲೀ, ಜಪ, ತಪ, ಯಜ್ಞ ದಾನಗಳ ಹಿರಿಮೆಯಾಗಲೀ ಅರಿವಾಗದಿರುವುದರಿಂದ, ಗುರುವಿನ ಅನುಗ್ರಹಕ್ಕೋಸ್ಕರ ಗುರುವಿಗೆ ನಮ್ಮ ನಮೋವಾಕ್ಕುಗಳು ಸಲ್ಲಬೇಕು. ಇಂತಹ ಭವ್ಯವಾದ ಗುರುಪರಂಪರೆಯನ್ನು ಒಳಗೊಂಡಿರುವ ಅವರೆಲ್ಲರನ್ನು ನೆನೆಯುವ ಈ ಸುಮಧುರ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಲಿದ್ದೇವೆ. ಅದುವೇ “ಗುರು ಸ್ಮರಣೆ”.

ಕಾರ್ಯಕ್ರಮದಲ್ಲಿ, ವಿವಿಧ ಕಾಲಘಟ್ಟದಲ್ಲಿ ಗುರುತಿಸಿಕೊಂಡ ಪ್ರಮುಖ ಗುರುಗಳನ್ನು ಸ್ಮರಿಸಲಾಗುವುದು. ಅವರುಗಳ ಬಗ್ಗೆ ಒಂದು ಸಂಕ್ಶಿಪ್ತವಾದ ವಿವರಣೆ ಹೀಗಿದೆ.
ಗುರು ಎಂದ ತಕ್ಷಣ ನೆನಪಾಗುವ ಮತ್ತೊಂದು ಹೆಸರುಸರ್ವ ಲೋಕಗಳಿಗೂ ಗುರುಗಳಾಗಿ, ಎಲ್ಲಾ ರೋಗಗಳಿಗೂ ವೈದ್ಯನಾಗಿ, ಎಲ್ಲ ವಿದ್ಯೆಗಳನ್ನು ಬಲ್ಲವನಾಗಿ ಇರುವವನು ದಕ್ಷಿಣಾಮೂರ್ತಿ ಯಾದ ಶಿವ. ಶಿವನ ಸ್ವರೂಪನಾದ ದಕ್ಷಿಣಾಮೂರ್ತಿಯನ್ನು ನಾವು ವಿಶೇಷ ವಾಗಿ ಜ್ಞಾನ ಮತ್ತು ಶಿಕ್ಷಕನ ರೂಪವಾಗಿ ಪೂಜಿಸುತ್ತೇವೆ.

ದ್ವಾಪರ ಯುಗದಲ್ಲಿ, ಮಹಾವೀರನಾದ ಅರ್ಜುನನಿಗೆ ಸರಿಯಾದ ಸಮಯದಲ್ಲಿ ಗೊಂದಲವನ್ನು ನೀಗಿಸಿ, ಮಾರ್ಗದರ್ಶನವನ್ನು ನೀಡಿ ಗುರುವಾಗಿ ಪ್ರೇರೇಪಿಸಿದವನು ಶ್ರೀ ಕೃಷ್ಣನು.
ದಕ್ಷಿಣಾಮೂರ್ತಿ ಹಾಗು ಶ್ರೀ ಕೃಷ್ಣನನ್ನು ನಾವು ಭಗವಂತನಾಗಿ ಪೂಜಿಸುತ್ತೇವೆ. ಇನ್ನು ನಮ್ಮ ತತ್ತ್ವಗಳನ್ನು ಭೋಧಿಸುವ ಋಷಿ-ಮುನಿಗಳಿಗೆ ಬಂದರೆ, ಲಲಿತಕಲೆಗಳಲ್ಲಿ ಪ್ರಸಿದ್ಧವಾದ ನೃತ್ಯ ಕಲೆಗೆ, ಭರತ ಮುನಿಯನ್ನು ನಾಟ್ಯಶಾಸ್ತ್ರದ ಗುರುಗಳಾಗಿ ಪರಿಗಣಿಸುತ್ತೇವೆ.

ಭಾರತೀಯ ತತ್ವಶಾಸ್ತ್ರದಲ್ಲಿ ಪ್ರಮುಖ ಆಚಾರ್ಯ ತ್ರಯರು – ಶ್ರೀ ಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು ಹಾಗು ಶ್ರೀ ರಾಮಾನುಜಾಚಾರ್ಯರು.
ಶ್ರೀ ಶಂಕರಾಚಾರ್ಯರು “ಅಖಂಡ ಸತ್ಯ”ವನ್ನು ಸಾರುವ “ಅಧ್ವೈತ ಸಿದ್ಧಾಂತ”ವನ್ನು ಪ್ರತಿಪಾದಿಸಿದರು. “ಅಹಂ ಬ್ರಹ್ಮಾಸ್ಮಿ” ಎಂದು ಹೇಳಿ ಅಂತಿಮ ಸತ್ಯವು ನನ್ನಲ್ಲಿಯೇ ಅಡಗಿದೆ ಎಂಬುದನ್ನು ಸೂಚಿಸುತ್ತದೆ.

ಶ್ರೀ ಮಧ್ವಾಚಾರ್ಯರು “ದ್ವೈತ ಸಿದ್ಧಾಂತ”ದ ಮೂಲಕ ಆತ್ಮ ಹಾಗು ಪರಮಾತ್ಮ ಎರಡೂ ಬೇರೆ ಬೇರೆ ವಾಸ್ತವಿಕತೆಗಳು ಮತ್ತು ಅವುಗಳು ಪರಸ್ಪರ ಅವಲಂಬಿತವಾಗಿರುತ್ತದೆ ಎಂದು ಸಾರಿದ್ದಾರೆ.
ರಾಮಾನುಜಾಚಾರ್ಯರು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಒತ್ತು ಕೊಡುವ “ವಿಶಿಷ್ಟಾದ್ವೈತ” ಎಂಬ ತತ್ತ್ವವನ್ನು ಭೋದಿಸಿದರು. ಅವರ ಸಿದ್ಧಾಂತಗಳು ಆತ್ಮ ಹಾಗು ಬ್ರಹ್ಮನ ನಡುವೆ ಬಹುತ್ವ ಮತ್ತು ವ್ಯತ್ಯಾಸವಿದೆ ಎಂದು ಪ್ರತಿಪಾದಿಸುತ್ತವೆ.

೧೪ನೇ ಶತಮಾನದ ಇನ್ನೋರ್ವ ಪ್ರಮುಖ ದಾರ್ಶನಿಕ ಗುರುಗಳು ವಿದ್ಯಾರಣ್ಯರು ಹಕ್ಕ-ಬುಕ್ಕರಿಗೆ ಮಾರ್ಗದರ್ಶಕರಾಗಿದ್ದು, ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣೀಭೂತರಾದರು. ೧೨ನೇ ಶತಮಾನದ ಪ್ರಮುಖ ಸಮಾಜ ಸುಧಾರಕರು ನಮ್ಮ ವಚನಕಾರರು. ಸಮಾಜದ ಸುಧಾರಣೆಗಾಗಿ ಎಲ್ಲರಿಗು ಅರ್ಥವಾಗುವಂತೆ, ತಮ್ಮ ವಚನ ಸಾಹಿತ್ಯದ ಮೂಲಕ ಮಾರ್ಗದರ್ಶನ ನೀಡಿದವರಲ್ಲಿ ಅಗ್ರರು ಬಸವಣ್ಣನವರು. ಸಮಾಜದ ನ್ಯೂನತೆಗಳನ್ನು, ಜನರಿಗೆ ತಿಳಿ ಹೇಳಿ, ಇನ್ನಷ್ಟು ಉತ್ತಮರಾಗಿ ಬಾಳಲು, ಸಾಕಷ್ಟು ಪ್ರಯತ್ನವನ್ನು ಮಾಡಿದ್ದಾರೆ.

ಪುರುಷ ಪ್ರಧಾನ ಸಮಾಜದಲ್ಲಿ ದಿಟ್ಟತನದಿಂದ ಎದ್ದು ನಿಂತು, ಕ್ರಾಂತಿಕಾರಿ ಮಹಿಳೆಯಾಗಿ ತತ್ತ್ವಜ್ಞಾನವನ್ನು ಭೋಧಿಸಿ, ಸಮಾಜ ಸುಧಾರಣೆಯ ಜವಾಬ್ದಾರಿ ಹೆಣ್ಣು ಮಕ್ಕಳಿಗೂ ಇದೆ ಎಂದು ನಿರೂಪಿಸಿದವರು ಅಕ್ಕಮಹಾದೇವಿ.

ಹಿಂದೆ ಗುರು, ಮುಂದೆ ಗುರಿ – ಇದ್ದರೇ ಏನನ್ನಾದರೂ ಸಾಧಿಸಬಹುದು ಎನ್ನುವ ಹಾಗೆ ನಾವು ಎಲ್ಲ ಕ್ಷೇತ್ರಗಳಲ್ಲಿ, ಗುರುಗಳನ್ನು ಹಾಗು ಮಾರ್ಗದರ್ಶಕರನ್ನು ಕಾಣಬಹುದು. ಅವರುಗಳ ಸ್ಮರಣೆ ಮಾಡುವುದು ಬಹು ಅಪರೂಪದ, ವಿಶಿಷ್ಟವಾದ ಕಾರ್ಯಕ್ರಮವಿದೆಂದು ಆಯೋಜಕರ ಅಭಿಪ್ರಾಯವಾಗಿದೆ.
ವಿವರಗಳಿಗೆ : 98807 78589

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group