ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಡೆಗ್ಗನಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯು ಸಮಸ್ಯೆಗಳ ಸುಳಿಗೆ ಸಿಲುಕಿದೆ. ಸುಮಾರು ಎಂಭತ್ತು ವರ್ಷಗಳ ಹಿಂದೆ ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ನದಿಯ ಪಕ್ಕದಲ್ಲಿದ್ದ ಡೆಗ್ಗನಹಳ್ಳಿ ಗ್ರಾಮವನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು.
ಆ ಸಂದರ್ಭದಲ್ಲಿ ನೂತನ ಗ್ರಾಮ ಡೆಗ್ಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಿಸಲಾಯಿತು ಎಂದು ಗ್ರಾಮಸ್ಥರು ಹೇಳುತ್ತಾರೆ.ಅಂದರೆ ಈಗಿರುವ ಶಾಲಾಕಟ್ಟಡಕ್ಕೆ ಸುಮಾರು ಎಂಭತ್ತು ವರ್ಷಗಳು ಕಳೆದಿವೆ.ಇದೀಗ ಈ ಶಾಲೆಯ ಗೋಡೆಗಳು ಬಿರುಕುಬಿಟ್ಟಿದ್ದು, ಶಾಲಾ ಕಟ್ಟಡವು ಕುಸಿದುಬೀಳುವ ಹಂತ ತಲುಪಿದೆ ಎಂದು ಹಿರಿಯ ಸಾಹಿತಿ ,ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮಹೇಶ್ ಜೋಷಿ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರಿಗೆ ದೂರು ನೀಡಿರುವ ಭೇರ್ಯ ರಾಮಕುಮಾರ್ ತಾವು ಇತ್ತೀಚೆಗೆ ಡೆಗ್ಗನಹಳ್ಳಿ ಶಾಲೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂದರ್ಭದಲ್ಲಿ ಸದರಿ ಕನ್ನಡ ಶಾಲೆಯ ಪರಿಸ್ಥಿತಿ ನೋಡಿ ತುಂಬಾ ಆತಂಕವಾಯಿತು ಎಂದು ವಿವರಿಸಿದ್ದಾರೆ.
ಶಾಲೆಯ ಏಳು ಕೊಠಡಿಗಳ ಪೈಕಿ ಎರಡು ಕೊಠಡಿಗಳು ಮಾತ್ರ ಬಳಕೆಗೆ ಅರ್ಹವಾಗಿವೆ. ಉಳಿದ ಐದು ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವಾಗ ಕುಸಿಯುತ್ತದೆಯೋ ಎಂಬ ಆತಂಕ ಮಕ್ಕಳಿಗೆ ಪೋಷಕರಿಗೆ ಉಂಟಾಗಿದೆ ಎಂದು ಡೆಗ್ಗನಹಳ್ಳಿ ಗ್ರಾಮದ ಹಿರಿಯರಾದ ,ಇದೇ ಶಾಲೆಯ ವಿದ್ಯಾರ್ಥಿಗಳೂ ಆಗಿರುವ ಅಪ್ಪಣ್ಣೇಗೌಡರು ಆತಂಕದೊಂದಿಗೇ ದೂರುತ್ತಾರೆ.

ಶಾಲೆಯಲ್ಲಿ ಐವರು ಶಿಕ್ಷಕರು ಹಾಗೂ ಓರ್ವ ದೈಹಿಕ ಶಿಕ್ಷಕರು ಕಾರ್ ನಿರ್ವಹಿಸುತ್ತಿದ್ದಾರೆ.ಒಂದರಿಂದ ಎಂಟನೇ ತರಗತಿಯವರೆಗೆ 112 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಆದರೆ ಇದೀಗ ಶಾಲಾ ಗೋಡೆಗಳು ಬಿರುಕು ಬಿಟ್ಟಿರುವ ಕೊಠಡಿಗಳಲ್ಲೆ ಮಕ್ಕಳು ಅನಿವಾರ್ಯವಾಗಿ ಕಲಿಯಬೇಕಾದ ಪರಿಸ್ಥಿತಿ ಇದೆ.ಇದು ಅತ್ಯಂತ ವಿಷಾದನೀಯ ಸಂಗತಿ ಎಂದು ಶಾಲಾಭಿವೃದ್ದಿ ಸಮಿತಿಅಧ್ಯಕ್ಷರಾದ ಶಿವಕುಮಾರ್ ದೂರುತ್ತಾರೆ.
ಈ ಹಿಂದೆ ಜಿಲ್ಲಾಧಿಕಾರಿಗಳು ತಿಪ್ಪೂರು ಗ್ರಾಮದಲ್ಲಿ ಗ್ರಾಮವಾಸ್ತವ್ಯ ನಡೆಸಿದ್ದಾಗ, ಗ್ರಾಮದ ಶಾಲೆಯ ದುರವಸ್ಥೆ ಬಗ್ಗೆ ಅವರಿಗೆ ದೂರು ನೀಡಿದ್ದೆವು. ಇದುವರೆಗೂ ಏನೂ ಪ್ರಯೋಜನ ಆಗಲಿಲ್ಲ ಎಂದು ಗ್ರಾಮಪಂಚಾಯ್ತಿ ಸದಸ್ಯರಾದ ಡಿ.ಜೆ.ಮಹಾದೇವ್ ನೋವಿನೊಂದಿಗೆ ಆರೋಪಿಸುತ್ತಾರೆ
ತಮ್ಮ ಗ್ರಾಮದ ಶಾಲೆಯಲ್ಲಿ ಮಕ್ಕಳಿಗೆ ತಂತ್ರಜ್ಞಾನದತ್ತ ಆಸಕ್ತಿ ಮೂಡಿಸಲು ಕಂಪ್ಯೂಟರ್ ಸೌಲಭ್ಯವಿಲ್ಲ. ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ಅಗತ್ಯ ವೇದಿಕೆಯ ಸೌಲಭ್ಯವಿಲ್ಲ. ಮಕ್ಕಳು ಹಾಗೂ ಪೋಷಕರು ಮಳೆ ಬಿದ್ದರೆ ಎಲ್ಲಿ ಕಟ್ಟಡ ಕುಸಿಯುತ್ತದೆಯೋ ಎಂಬ ಆತಂಕದಲ್ಲಿದ್ದಾರೆ . ಗ್ರಾಮೀಣ ಶಾಲೆಯನ್ನು ಉಳಿಸಲು ಶೀಘ್ರ ಕ್ರಮಕೈಗೊಳ್ಳಬೇಕೆಂದು ಯುವಸಾಹಿತಿ ಡೆಗ್ಗನಹಳ್ಳಿ ಆನಂದ್ ಅಭಿಪ್ರಾಯ ಪಡುತ್ತಾರೆ ಎಂದು ಗ್ರಾಮಸ್ಥರ ಅಭಿಪ್ರಾಯವನ್ನು ತಮ್ಮ ಪತ್ರದಲ್ಲಿ ಅವರು ವಿವರಿಸಿದ್ದಾರೆ.
ತಾವು ದಯವಿಟ್ಟು ಅವ್ಯವಸ್ಥೆಯ ಬೀಡಾಗಿರುವ ಈ ಶಾಲಾ ಕಟ್ಟಡದ ದುರಸ್ಥಿಗೆ ಕ್ರಮಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಸೂಚಿಸಬೇಕು.ಆ ಮೂಲಕ ಐತಿಹಾಸಿಕ ಗ್ರಾಮೀಣ ಕನ್ನಡ ಶಾಲೆಯ ಉಳಿವಿಗೆ ಕ್ರಮಕೈಗೊಳ್ಳಬೇಕೆಂದು ಎಂದು ಡಾ.ಭೇರ್ಯ ರಾಮಕುಮಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮಹೇಶ್ ಜೋಷಿ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರನ್ನು ಕೋರಿದ್ದಾರೆ.

