ಮೈಸೂರು: ಗೋಕುಲ್‍ದಾಸ್ ಎಕ್ಸ್‍ಪೋರ್ಟ್ಸ್ ಚಾರಿಟಬಲ್ ಫೌಂಡೇಷನ್, ಬೆಂಗಳೂರು ವತಿಯಿಂದ ಫೆ.23 ರಂದು ನಗರದ ಕೆ.ಆರ್.ಆಸ್ಪತ್ರೆಗೆ ಸುಮಾರು 15 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳು, ವಿದ್ಯುತ್‍ಚಾಲಿತ ಇ-ವಾಹನ ಮತ್ತು ಶುದ್ಧ ಕುಡಿಯುವ ನೀರಿನ ಘಟಕ (ಆರ್.ಓ.ಪ್ಲಾಂಟ್) ಗಳನ್ನು ಹಸ್ತಾಂತರಿಸಲಾಯಿತು.
ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿ ಮಾತನಾಡಿದ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷರಾದ ಮೊಯಿದ್ದೀನ್ ಅವರು, ಕೆ.ಆರ್.ಆಸ್ಪತ್ರೆ ಮೈಸೂರಿನಲ್ಲಿ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದ್ದು, ಇಲ್ಲಿಗೆ ದಿನನಿತ್ಯ ಸಾವಿರಾರು ರೋಗಿಗಳಿಗೆ ತುಂಬಾ ಅವಶ್ಯಕತೆ ಇರುವ ಈ ಉಪಕರಣಗಳನ್ನು ಹಸ್ತಾಂತರಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇದನ್ನು ರೋಗಿಗಳು ವ್ಯವಸ್ಥಿತ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕೆಂದು ಆಶಿಸಿದರು. ಮೈಸೂರು ಮೆಡಿಕಲ್ ಕಾಲೇಜು ಹಾಗೂ ರಿಸರ್ಚ್ ಇನ್ಸ್‍ಟಿಟ್ಯೂಟ್‍ನ ಡೀನ್ ಅಂಡ್ ಡೈರೆಕ್ಟರ್ ಡಾ.ದಾಕ್ಷಾಯಿಣಿ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಗೋಕುಲ್‍ದಾಸ್ ಎಕ್ಸ್‍ಪೋರ್ಟ್ಸ ಕಂಪನಿಯವರು ನಮಗೆ ಈ ಕೊಡುಗೆ ನೀಡಿ, ಸಮಾಜ ಸೇವೆ ಮಾಡುತ್ತಿರುವುದು ನಿಜಕ್ಕೂ ಅವಿಸ್ಮರಣೀಯ, ಇದರ ಅವಶ್ಯಕತೆ ನಮಗೆ ಬಹಳ ದಿನಗಳಿಂದ ಇತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಪರೇಷನ್ ವಿಭಾಗದ ಉಪಾಧ್ಯಕ್ಷ ವಿ.ರಮೇಶ್, ಡಿಜಿಎಂ ಇಹೆಚ್‍ಎಸ್ ಮಹಾಂತೇಶ್ ಬಂಗಾರಿ, ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ ಎಸ್.ವಿ., ಮೈಸೂರಿನ ಶಾಖೆಯ ಸೀನಿಯರ್ ಹೆಚ್‍ಆರ್ ಮ್ಯಾನೇಜರ್ ಶಂಕರ್, ಸಿಬ್ಬಂದಿ ಕೆ.ಎನ್.ಭಾಸ್ಕರ್, ಜನರಲ್ ಮ್ಯಾನೇಜರ್ ಸಿದ್ದೇಶ್ವರಗೌಡ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಶೋಭಾ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಕೆ.ಆರ್.ಆಸ್ಪತ್ರೆಯ ಆರ್‍ಎಂಓ ಡಾ.ನಯಾಂ ಪಾಷಾ ಎಲ್ಲರನ್ನೂ ಸ್ವಾಗತಿಸಿದರು.