ಮೈಸೂರು -ಬೆಂಗಳೂರಿನ ಗೋಕಲ್‍ದಾಸ್ ಎಕ್ಸ್‍ಪೋರ್ಟ್ಸ್ ಚಾರಿಟಬಲ್ ಫೌಂಡೇಶನ್ ವತಿಯಿಂದ ಮಾ.೧ ರಂದು ತಿಲಕ್ ನಗರದಲ್ಲಿರುವ ಅಂಧ ಹಾಗೂ ಶ್ರವಣ ದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಗೆ ‘ನಮ್ಮ ನಡಿಗೆ ಸಾಮಾಜಿಕ ಜವಾಬ್ದಾರಿಗಳ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ರೂ.18 ಲಕ್ಷ ಮೌಲ್ಯದ ಉಪಕರಣಗಳನ್ನು ವಿತರಿಸಲಾಯಿತು.
ಅಂಧ ಮಕ್ಕಳ ಶಾಲೆಗೆ ಪೀಠೊಪಕರಣಗಳು, ಸಂಗೀತ ವಾದ್ಯಗಳು ಹಾಗೂ ಪಿಎ ಸಿಸ್ಟಂ ಹಾಗೂ ಶ್ರವಣ ದೋಷವುಳ್ಳ ಮಕ್ಕಳಿಗೆ ಎರಡು ಮಾತು ತರಬೇತಿ ಉಪಕರಣಗಳು ಹಾಗೂ ಮೂರು ಸ್ಮಾರ್ಟ್ ಕ್ಲಾಸ್ ಟಿವಿ ಸಿಎಸ್‍ಆರ್ ಅನುದಾನದಡಿಯಲ್ಲಿ ವಿತರಿಸಲಾಯಿತು.
ಉಪಕರಣಗಳನ್ನು ವಿತರಿಸಿ ಮಾತನಾಡಿದ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷರಾದ ಮೊಯಿದ್ದೀನ್ ಅವರು ವಿಶೇಷಚೇತನರಲ್ಲಿ ವಿಶೇಷ ಪ್ರತಿಭೆಯೂ ಉಂಟು. ವಿಶೇಷಚೇತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಎಲ್ಲರೂ ಕೈಜೋಡಿಸಬೇಕು. ವಿಶೇಷಚೇತನರಿಗೆ ಅನುಕಂಪ, ಕನಿಕರ ಬೇಕಾಗಿಲ್ಲ. ಬದಲಾಗಿ ಅವರಿಗೆ ಆತ್ಮಸ್ಥೈರ್ಯ ಮೂಡಿಸುವ ಮೂಲಕ ಮುಖ್ಯವಾಹಿನಿಗೆ ತರಲು ಕೆಲಸ ಆಗಬೇಕಾಗಿದೆ. ಯಾರೊಬ್ಬರೂ ಕೂಡ ವಿಶೇಷಚೇತನರನ್ನು ನಿಕೃಷ್ಟವಾಗಿ ಕಾಣಬಾರದು. ಅಂಗವಿಕಲತೆ ಶಾಪವಲ್ಲ, ವರ. ಅವರಲ್ಲಿ ಕೂಡ ಸಾಕಷ್ಟು ಪ್ರತಿಭಾವಂತರಿದ್ದು, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವವರು ಇದ್ದಾರೆ. ಹೀಗಾಗಿ ಇಲ್ಲಿರುವ ಮಕ್ಕಳ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿಶೇಷಚೇತನರಲ್ಲಿ ತಾಯ್ತನದ ಮನಸ್ಸು, ಮಗುವಿನ ಮುಗ್ಧತೆ ಇರುತ್ತದೆ. ಕೇವಲ ತೋರಿಕೆಗಾಗಿ ಸೇವೆ ಮಾಡಬಾರದು. ನಿಜವಾದ ಕಾಳಜಿ ಇದ್ದಲ್ಲಿ ಈ ರೀತಿಯ ವಿಶೇಷಚೇತನರ ಸೇವೆ ಮಾಡಬೇಕು. ನಾವು ಕೊಡುಗೆಯಾಗಿ ನೀಡಿರುವ ರೂ.18 ಲಕ್ಷ ಮೌಲ್ಯದ ಉಪಕರಣಗಳ ಸವಲತ್ತನ್ನು ಸದುಪಯೋಗಪಡಿಸಿಕೊಳ್ಳಬೇಕು. ವಾಕ್ ಮತ್ತು ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳಿಗೆ ಸಾಮಾನ್ಯ ಮಕ್ಕಳಂತೆ ಸಮಾನ ಅವಕಾಶ ದೊರೆಯಬೇಕು ಎಂದು ತಿಳಿಸಿದರು.
ಕಿವುಡು ಮಕ್ಕಳ ಶಾಲೆಯ ಅಧೀಕ್ಷಕ ಉದಯಶಂಕರ್ ಮಾತನಾಡಿ, ವಿಶೇಷ ಮಕ್ಕಳು ಎಲ್ಲರೊಂದಿಗೆ ಬೆರೆಯುವ ವಾತಾವರಣ ಸೃಷ್ಟಿಸುವುದು ಎಲ್ಲರ ಜವಾಬ್ದಾರಿ. ವಿಶೇಷ ಮಕ್ಕಳು ಮನುಕುಲಕ್ಕೆ ಉತ್ತಮ ಕೊಡುಗೆ ನೀಡಬಲ್ಲರು. ಅವರ ಸಾಮರ್ಥ್ಯವನ್ನು ಅರಳಿಸುವ ಶಕ್ತಿ ಪೋಷಕರಲ್ಲಿದೆ ಎಂದು ತಿಳಿಸಿದರು..
ಗೋಕಲ್‍ದಾಸ್ ಎಕ್ಸ್‍ಪೋರ್ಟ್ಸ್ ಫೌಂಡೇಶನ್‍ನ ಡಿಜಿಎಂ ಮಹಾಂತೇಶ ಬಂಗಾರಿ ಮಾತನಾಡಿ, ಶ್ರವಣ ಸಾಧನ ಹಾಕಿಕೊಂಡ ತಕ್ಷಣ ಮಕ್ಕಳು ಮಾತನಾಡುವುದಿಲ್ಲ. ಹಾಗಾಗಿ ಶ್ರವಣ ಸಾಧನವನ್ನು ಪಡೆದುಕೊಂಡ ನಂತರ ಮಕ್ಕಳಿಗೆ ಪೋಷಕರು ತರಬೇತಿ ನೀಡಬೇಕು. ವಿಶೇಷಚೇತನರಿಗೂ ಸಾಮಾನ್ಯರಿಗೆ ನೀಡುವ ಶಿಕ್ಷಣವನ್ನೇ ಕಲ್ಪಿಸಬೇಕು. ಉನ್ನತ ಶಿಕ್ಷಣ ಪಡೆದರೆ ವಿಶೇಷಚೇತನರೂ ಸಾಧನೆಯ ಹಾದಿ ಮೆಟ್ಟುತ್ತಾರೆ. ವಿಶೇಷಚೇತನರು ಅಸಮರ್ಥರಲ್ಲ, ಅವರಲ್ಲೂ ಸಾಧಿಸುವ ಛಲವಿರುತ್ತದೆ. ಅವರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಿಕ್ಷಣದ ಮೂಲಕ ಅಂಗವೈಕಲ್ಯದ ಕೊರತೆ ನಿವಾರಿಸಿ, ದೇಶ ಹಾಗೂ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಲು ವಿಶ್ವಸಂಸ್ಥೆಯು ಹಲವು ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸುತ್ತಿದೆ ಎಂದರು.
ವೇದಿಕೆಯಲ್ಲಿ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುರೇಶ್ ಎಸ್., ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಂಗವಿಕಲ ಕಲ್ಯಾಣಾಧಿಕಾರಿ ಮೋಹನ್, ಅಂಧ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕ ಸತೀಶ್, ಗೋಕಲ್‍ದಾಸ್ ಎಕ್ಸ್‍ಪೋರ್ಟ್ಸ್ ಜನರಲ್ ಮ್ಯಾನೇಜರ್ ಹೆಚ್‍ಆರ್ ಮಲ್ಲಿಕಾರ್ಜುನ್ ಎಸ್.ವಿ., ಮೈಸೂರಿನ ಶಾಖೆಯ ಸೀನಿಯರ್ ಮಾನವ ಸಂಪನ್ಮೂಲ ವ್ಯವಸ್ಥಾಪಕ ಶಂಕರ್, ಸಿಬ್ಬಂದಿ ಕೆ.ಎಸ್.ಭಾಸ್ಕರ್, ಜನರಲ್ ಮ್ಯಾನೇಜರ್ ಸಿದ್ದೇಶ್ವರಗೌಡ ಮತ್ತಿತರರು ಉಪಸ್ಥಿತರಿದ್ದರು.