spot_img
spot_img

ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ ವೈವಿಧ್ಯತೆ

Must Read

spot_img
- Advertisement -

ಶ್ರೀ ಕನಕದಾಸರು (1509-1609) ಕರ್ನಾಟಕದಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ದಾಂತಗಳಿಗೆ ಕಾಣಿಕೆಯಿತ್ತವರು,

ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.

ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ 1509 ರಲ್ಲಿ ಬೀರಪ್ಪ ಮತ್ತು ಬಚ್ಚಮ್ಮ ಎಂಬ ಕುರುಬ ಜಾತಿಗೆ ಸೇರಿದ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪ. ತಂದೆ-ತಾಯಿ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ಹೆತ್ತ ಮಗನಾದುದರಿಂದ ತಿಮ್ಮಪ್ಪನಾಯಕನೆಂದು ಹೆಸರಿಟ್ಟರು. ಇವರ ತಂದೆ ಅಂದಿನ ವಿಜಯನಗರದ ಅರಸರ ದಣ್ಣಾಯಕತ್ವವನ್ನು ವಹಿಸಿಕೊಡು 78 ಹಳ್ಳಿಗಳ ಉಸ್ತುವಾರಿಕೆಯನ್ನು ನೋಡಿಕೊಳ್ಳುತ್ತಿದ್ದರು. ಅದರ ರಕ್ಷಣೆ ನೋಡಿಕೊಳ್ಳಲು ಮಗನಿಗೂ ಕೂಡ ಕ್ಷತ್ರಿಯೋಚಿತ ಸರ್ವ ವಿದ್ಯೆಯನ್ನು ಕಲಿಸಿ ಆ ಮಾಂಡಲೀಕ ಪದವಿಯ ನಿರ್ವಹಣೆಯನ್ನು ನೋಡಿಕೊಂಡು ಹೋಗುವಷ್ಟು ಸಮರ್ಥನನ್ನಾಗಿ ಮಾಡಿದ್ದರೆಂದು ತಿಳಿಯುತ್ತೇವೆ.

- Advertisement -

ತಿಮ್ಮಪ್ಪನಾಯಕನು ತನ್ನ ಅರಸರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಪಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗಲೇ ತನಗೆ ದೊರೆತ ಕನಕವನ್ನು ಜನರಿಗೆ ದಾನ ಮಾಡಿ ಜೀವನದಲ್ಲಿ ನಡೆದ ಹಲವು ಘಟನೆಗಳು ಇವರನ್ನು ಹರಿದಾಸನಾಗುವತ್ತ ಪ್ರೇರೇಪಿಸುವಂತಾಯಿತು. ಅದರ ಪರಿಣಾಮವೇ ಆದಿಕೇಶವನ ದೇವಾಲಯ ಮತ್ತು ನರಸಿಂಹ ದೇವಾಲಯಗಳು ನಿರ್ಮಾಣವಾಗಿದ್ದನ್ನು ಇತಿಹಾಸದಿಂದ ತಿಳಿಯುತ್ತೇವೆ.
ಕನಕದಾಸರು 10 ನೆಯ ಶತಮಾನದಲ್ಲಿ ಆಗಿ ಹೋದ ಪಂಪನಂತೆ ಕವಿಯೂ ಆಗಿದ್ದು ಕಲಿಯೂ ಆಗಿದ್ದರು.

ಇವರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿ ಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯಾದಿಕೇಶವರಾಯ.

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು ಸುಳಾದಿಗಳು ಉಗಾಭೋಗಗಳನ್ನು ರಚಿಸಿರುವುದಲ್ಲದೇ ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮಂಡಿಗೆಗಳ ರೂಪದಲ್ಲಿ ನೀಡಿರುವರು.

- Advertisement -

ಇವರ ಮುಖ್ಯ ಕಾವ್ಯಕೃತಿಗಳು ಇಂತಿವೆ 1) ಮೋಹನ ತರಂಗಿಣಿ 2) ನಳಚರಿತ್ರೆ 3) ರಾಮಧ್ಯಾನ ಚರಿತೆ 4) ಹರಿಭಕ್ತಿ ಸಾರ 5) ನೃಸಿಂಹಸ್ತವ (ಉಪಲಬ್ಧವಿಲ್ಲ).

ಕನಕದಾಸರ ಕೀರ್ತನೆಗಳಲ್ಲಿ ಭಗವಂತನಲ್ಲಿ ನಂಬಿಗೆಯನ್ನು ನಾವು ಕಾಣುತ್ತೇವೆ. ಭಗವಂತನನ್ನು ಕಾಣಬೇಕೆಂಬ ಹಂಬಲವೇ ಭಕ್ತಿ. ಜೀವನದ ಯಾವುದೋ ಒಂದು ಘಟ್ಟದಲ್ಲಿ ಭಕ್ತನಾದ ವ್ಯಕ್ತಿ ತನ್ನ ಜೀವನದ ಘಟನೆಗಳನ್ನೆಲ್ಲ ನೆನಪಿಸಿಕೊಂಡು ತನ್ನ ಜೀವನ ಕೆಲವು ಹಂತದಲ್ಲಿ ವ್ಯರ್ಥವಾದ ಬಗ್ಗೆ ಕೊರಗುತ್ತಾನೆ. ಜೊತೆಗೆ ಅದಕ್ಕಾಗಿ ತಾನು ಏನು ಮಾಡಬಲ್ಲೆ ಎಂಬುದರತ್ತ ಚಿಂತನೆಯಲ್ಲಿ ಕೂಡ ತೊಡಗುತ್ತಾನೆ ಇಂಥ ಬದುಕಿಗೆ ಕನಕದಾಸರು ಕೂಡ ಹೊರತಲ್ಲ. ಅದಕ್ಕೆ ಅವರು ಬರೆದಿರುವ ಕೀರ್ತನೆಗಳನ್ನು ನೋಡಬಹುದಾಗಿದೆ.

‘ಭಕ್ತಿ ಇಲ್ಲದವನಿಗೆ ಮುಕ್ತಿ ಇಲ್ಲ’ ಎಂಬುದು ಕನಕದಾಸರ ದೃಢವಾದ ನಿಲುಮೆ. ಈ ಕಾರಣದಿಂದಲೇ ಅವರು ತಮ್ಮನ್ನು ತಾವೇ ವಿಮರ್ಶಿಸಿಕೊಂಡಿದ್ದಾರೆ ಸಂತೈಸಿಕೊಂಡಿದ್ದಾರೆ. “ದೀನ ನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು ಮತಿ ಹೀನ ನಾನು” ಎಂಬುದು ಮಹಾಭಕ್ತನ ವಿಚಾರ ಇಂಥವರಿಗೆ ಭಗವಂತ ಎಲ್ಲವನ್ನೂ ನೀಡಿ ಸಲಹುವನು ಎಂಬ ದೃಢ ವಿಶ್ವಾಸ ಇವರಿಗಿತ್ತು. ಅದಕ್ಕಾಗಿಯೇ ಇವರು ಗಾಬರಿಗೊಳ್ಳುವ ಮನಸ್ಸುಗಳಿಗೆ ಧೈರ್ಯ ಹೇಳಿದ್ದಾರೆ.
” ತಲ್ಲಣಿಸದಿರು ಕಂಡ್ಯ ತಾಳು ಮನವೇ” ಎನ್ನುತ್ತ ಬೆಟ್ಟದ ತುದಿಯಲ್ಲಿನ ಮರಕ್ಕೆ ನೀರು ಉಣಿಸುವವರು ಯಾರು? ಹುಟ್ಟಿಸಿದ ದೇವನೇ ಇದಕ್ಕೆ ಹೊಣೆಗಾರ. ಹಾಗಾಗಿ ಯಾರೂ ಚಿಂತಿಸಬೇಕಾದುದಿಲ್ಲ ಎಂದಿರುವರು.

ಈ ದೇಹ ಈ ಜೀವನ ಈ ದೇಹಕ್ಕೆ ಸಂಬಂಧಿಸಿದ ಸುಖ-ದುಃಖ ಭಾವಗಳು ಎಲ್ಲವೂ ಭಗವಂತನವು. ಪಂಚೇಂದ್ರಿಯಗಳು ಅನುಭವಿಸುವ ಸುಖವೆಲ್ಲವೂ ಭಗವಂತನದೇ. ನಮ್ಮ ಅನುಭವವೆಂಬುದು ನೆಪ ಮಾತ್ರ ಯಾವ ಅನುಭವಗಳಿಗೂ ಮನುಷ್ಯರು ಸ್ವತಂತ್ರರಲ್ಲ ಎಂಬ ಭಾವ ಇವರ ಕೀರ್ತನೆಗಳಲ್ಲಿ ಮೂಡಿ ಬಂದಿದೆ. ಭಗವಂತನನ್ನು ಮೆಚ್ಚಿಸಲು ನೇಮವಿಲ್ಲದ ಹೋಮ ಬೇಕಾಗಿಲ್ಲ ಎಂದು ಕಠೋರವಾಗಿ ನುಡಿದಿರುವರು. ಮನುಷ್ಯ ತನ್ನಷ್ಟಕ್ಕೆ ತಾನೇ ಜನಿಸಿದವನಲ್ಲ ಅದಕ್ಕೆ ಭಗವಂತನ ಪ್ರೇರಣೆಯೂ ಕಾರಣ ಎನ್ನುವ ಕನಕದಾಸರು ಭಗವಂತನನ್ನು ಒಡೆಯನೆಂದು ಆರಾಧಿಸುವುದೇ ದಾಸ್ಯಭಾವ ಎಂದು  ‘ದಾಸದಾಸರ ಮನೆಯ ದಾಸಾನುದಾಸ ನಾನು. ಶ್ರೀಪತಿ ರಂಗನೇ, ನಾನು ನಿನ್ನ ಮನೆಯ ದಾಸ’ ಎಂದಿರುವ ಕನಕದಾಸರು ಮಂಕುದಾಸ, ಮರಳುದಾಸ ಬಡದಾಸಾಳಿನ ಆಳಿನದಾಸನ ಅಡಿದಾಸ ಎಂದು ತಮ್ಮನ್ನು ಗುರುತಿಸಿಕೊಂಡಿರುವರು. ಇಲ್ಲಿ ಕಂಡು ಬರುವ ಭಕ್ತಿಯ ತಾದಾತ್ಮ್ಯ ದೊಡ್ಡದು. ಅಷ್ಟೇ ಅಲ್ಲದೇ ಇಂತಹ ದಾಸನಿಗೆ ಹರಿಯೊಂದಿಗೆ ಭಕ್ತಿಯ ಬಹಳ ಸಲುಗೆ, ‘ನಿನ್ನನ್ನು ಹೀಗೆಂದೆನೆ ? ಹಾಗೆಂದನೇ ?’ ಎಂದು ಕೇಳುತ್ತ ಹರಿಯ ಗುಣಾವಗುಣಗಳನ್ನು ಚಿತ್ರಿಸುತ್ತ ಅವನ ಸರ್ವೊತ್ಮಮತ್ವವನ್ನು ಸಾರಿ ಹೇಳಿರುವರು.

ಭಗವಂತನನ್ನು ಗೆಳೆಯನೆಂದು ಕಾಣುವ ಸಖ್ಯಭಾವದ ಕೀರ್ತನೆಗಳು ಕನಕದಾಸರ ಪದ್ಯಗಳಲ್ಲಿ ದೊರೆಯುತ್ತವೆ. ಮಾನವ ವಿಚಾರಶೀಲನಾಬೇಕು ಮೂಢನಾಗಬಾರದು, ಹರಿಹರರಲ್ಲಿ ಭೇದ ಕೂಡದು, ಎಂಬ ಮಾತುಗಳು ಅವರ ಕೀರ್ತನೆಗಳಲ್ಲಿ ಬರುತ್ತವೆ. ”ನಾರಾಯಣ ಎಂಬ ನಾಮದ” ಎಂಬ ಪದ್ಯದಲ್ಲಿ “ನಾಲಿಗೆ ಎಂಬುದನ್ನು ಕೂರಿಗೆ ಮಾಡಿ ನಾರಾಯಣ ಎಂಬ ಬೀಜವನ್ನು ಬಿತ್ತಬೇಕು, ಹೃದಯವೇ ಹೊಲ, ದೇಹವೇ ನೇಗಿಲು. ಶ್ವಾಸ ನಿಃಶ್ವಾಸಗಳೆಂಬ ಎತ್ತುಗಳನ್ನು ಹೂಡಿ ಜ್ಞಾನವೆಂಬ ಹಗ್ಗದಲ್ಲಿ ನಿಯಂತ್ರಿಸಿ ನಾರಾಯಣ ಬೀಜವನ್ನು ಬಿತ್ತಬೇಕು” ಎಂದು ಹೇಳಿರುವರಲ್ಲದೇ “ಎಲ್ಲಿರುವನೋ ರಂಗ” ಎಂಬ ಪದ್ಯದಲ್ಲಿ ದೇವರು ಸರ್ವಾಂತರ್ಯಾಮಿ, ಪ್ರಹ್ಲಾದನ ಕೋರಿಕೆ ಕಂಬದಲ್ಲಿ ಬಂದ ಸಾವಿನ ದವಡೆಯಲ್ಲಿದ್ದ ಅಜಮಿಳನಿಗೆ ಒಲಿದ ಮೊಸಳೆಯಿಂದ ಹಿಡಿಯಲ್ಪಟ್ಟ ಗಜಾಸುರನನ್ನು ರಕ್ಷಿಸಿದ. ಅಣು ಮಹತ್ತುಗಳಲ್ಲಿರುವ ಪರಿಪೂರ್ಣನು ದೇವರು ಎಲ್ಲಿದ್ದಾನೆ ಎಂಬ ಸಂಶಯ ಸಲ್ಲದು ಎಂದು ಉದಾಹರಣೆಗಳನ್ನು ನೀಡುತ್ತ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿರುವರು.

“ಆರು ಬಾಳಿದರೇನು” ಎಂಬ ಪದ್ಯದಲ್ಲಿ *ನಾರಾಯಣನ ನಾಮಸ್ಮರಣೆ ಮಾಡದಿದ್ದಲ್ಲಿ ಏನಿದ್ದರೂ ಎಷ್ಟಿದ್ದರೂ ವ್ಯರ್ಥ* ಎಂಬುದನ್ನು ಹಲವು ದೈನಂದಿನ ಸಂಗತಿಗಳನ್ನು ಉದಾಹರಿಸುತ್ತ ತಿಳಿಸಿರುವರು. ಊಟ ಮಾಡಲು ಬಾರದವನಿಗೆ ಮೃಷ್ಟಾನ್ನ ಭೋಜನ ನಿಷ್ಪ್ರಯೋಜಕ. ಹಣ್ಣು ಬಿಡದ ಮರ ಹಾಳಾದರೆ ಏನೂ ತೊಂದರೆಯಿಲ್ಲ ಕಣ್ಣಿಲ್ಲದವನಿಗೆ ಕನ್ನಡಿಯ ಮಹತ್ವ ತಿಳಿಯದು, ಪುಣ್ಯವಿಲ್ಲದ ಪ್ರೌಢಿಮೆಗೆ ಬೆಲೆಯಿಲ್ಲ, ಪ್ರೀತಿಯನ್ನೇ ತಿಳಿಯದವರಿಗೆ ಮಕ್ಕಳಿದ್ದರೂ ವ್ಯರ್ಥ, ಸಣ್ಣ ಮನಸ್ಸುಳ್ಳ ಅರಸರ ಸೇವೆಗೂ ಬೆಲೆಯಿಲ್ಲ ಹಾಗೆಯೇ ಸ್ವಾಭಿಮಾನವಿಲ್ಲದವನ ಬದುಕಿಗೆ ಅರ್ಥವಿಲ್ಲ ಎಂದೆಲ್ಲ ಹೇಳುತ್ತ ತನ್ನ ಆರಾಧ್ಯ ದೈವ ಕಾಗಿನೆಲೆಯಾದಿಕೇಶವನನ್ನು ಸ್ಮರಿಸದೇ ಇದ್ದರೆ ಏನೂ ಪ್ರಯೋಜನವಿಲ್ಲ ಎಂದು ಸೊಗಸಾಗಿ ಹೇಳಿರುವರು.

ಕನಕದಾಸರು ತಾಯಿ ಶಾರದೆಯನ್ನು ಭಕ್ತಿ ಪರವಶರಾಗಿ ಭಜಿಸಿದ ರೀತಿಯನ್ನು “ವರವಕೊಡು ಎನಗೆ ವಾಗ್ದೇವಿ” ಪದ್ಯದಲ್ಲಿ ಕಾಣಬಹುದು. ವಿದ್ಯಾಧಿದೇವತೆಯಾದ ಶಾರದೆಯನ್ನು ಸ್ತುತಿಸುತ್ತ “ಚಂದ್ರಮುಖದ ಮುಗುಳ್ನಗೆಯು, ಶೋಭಿಸುವ ಕಿವಿಯ ಮುತ್ತಿನೋಲೆಯು, ಶುಭ್ರವಾದ ದಂತಕಾಂತಿಯ ಕಮಲದ ಎಸಳಿನ ಆಕಾರದ ಕಣ್ಣುಳ್ಳ ಈ ದೇವಿ ನನ್ನ ಹೃದಯ ತೆರೆದಿದ್ದಾಳೆ. ಕೋಟಿ ಸೂರ್ಯರ ಕಾಂತಿಯಿಂದ ಹೊಳೆಯುವ, ಮಹಾಕವಿಗಳ ಹೃದಯ ಕಮಲದಲ್ಲಿ ವಾಸಿಸುವ ಪ್ರಸಿದ್ದಪುರವಾದ ಕಾಗಿನೆಲೆಯ ಆದಿಕೇಶವನ ಮಗನೆನಿಸಿದ ಕನಕನಿಂದ ಸ್ತುತಿಸಲ್ಪಡುವ ವಾಗ್ದೇವಿಯೇ ವರವ ಕೊಡು ಎನಗೆ” ಎನ್ನುವ ಭಕ್ತಿ ಪರವಶ ಭಾವ ನಿಜಕ್ಕೂ ಅದ್ಭುತವಾದುದು.

ಕನಕದಾಸರ ಕೀರ್ತನೆಗಳು ಕಾವ್ಯ ಕಲ್ಪನೆಗಳು “ಪಂಚೇಂದ್ರಿಯಗಳೆಂಬ ಮಂಚಿಗೆಯ ಹಾಕಿರಯ್ಯ, ಚಂಚಲವೆಂಬ ಹಕ್ಕಿಯನ್ನು ಓಡಿಸಿರಯ್ಯ, ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ, ಆಯುಷ್ಯದ ರಾಸಿಯನ್ನು ಅಳಿಯಿರಯ್ಯ” ಎಂಬ ಕಲ್ಪನೆಯಂತೆ ಭಾವಪರವಶರನ್ನಾಗುವಂತೆ ಮಾಡುವ ಜೊತೆಗೆ ಮಾನವೀಯತೆಯ ನೆಲೆಯನ್ನು ಕಟ್ಟಿ ಕೊಡುತ್ತವೆ ಒಂದಕ್ಕಿಂತ ಒಂದು ಕೀರ್ತನೆಗಳು ದೇಸೀಯ ಸವಿ ತಿರುಳಿನಿಂದ ಕೂಡಿದ್ದು ಅವರ ಜೀವನವೇ ಮಹಾಕೃತಿಯಾಗಿತ್ತು ಎಂಬುದನ್ನು ಅವರ ಚರಿತ್ರೆಯನ್ನು ನೋಡಿದಾಗ ಕಂಡುಬರುತ್ತದೆ. ಕನಕದಾಸರು ತಮ್ಮ ಜೀವನ ಮತ್ತು ಸಾಹಿತ್ಯ ಸಿದ್ದಿಯಿಂದ ಕನ್ನಡಿಗರಿಗೆ ಬೆಳಕನ್ನು ನೀಡುವ ಚಿರಂತನ ಪ್ರದೀಪಗಳಲ್ಲಿ ಒಂದಾಗಿದ್ದಾರೆ

ತಾನು ಭಕ್ತನಾಗುವದಕ್ಕೆ ಕಾರಣ ಭಗವಂತನೇ. ಅವನ ಪ್ರೇರಣೆಯಿಲ್ಲದೇ ಏನೂ ಆಗದು. *ಎಳ್ಳು ಕಾಳಿನಷ್ಟು ಭಕ್ತಿಯಿಲ್ಲದ ನನ್ನನ್ನು ನೀನೇ ಸಲಹಬೇಕು* ಎಂದು ಶ್ರೀ ಹರಿಯನ್ನು ಕನಕದಾಸರು ದೀನರಲ್ಲಿ ದೀನರಾಗಿ ಪ್ರಾರ್ಥಿಸಿದ್ದಾರೆ. ”ದೀನ ನಾನು ಸಮಸ್ತ ಲೋಕಕೆ, ದಾನಿ ನೀನು ವಿಚಾರಿಸಲು, ಮತಿ ಹೀನ ನಾನು” ಎಂಬುದು ಕನಕದಾಸರ ವಿಚಾರವಾಗಿದೆ. ಇಂಥವರಿಗೆ ಭಗವಂತನು ಎಲ್ಲವನ್ನೂ ನೀಡಿ ಸಲಹುವನು ಎಂಬ ದೃಢವಿಶ್ವಾಸ ಕನಕದಾಸರಿಗಿದೆ. ಅದಕ್ಕಾಗಿಯೇ “ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯ ಬೇಡ” ಎಂದು ಹಾಡಿರುವರು. ಇವರು ತಮ್ಮ ಭಾಗವತ ಪುರಾಣಗಳಲ್ಲಿ ಕೂಡ ನವವಿಧವಾದ ಭಕ್ತಿಯನ್ನು ಹೇಳಿದ್ದಾರೆ. ಇವುಗಳಲ್ಲಿ ಭಕ್ತ ಹಾಗೂ ಭಗವಂತನಲ್ಲಿ ಮಾನವ ಸಂಬಂಧಗಳನ್ನು ಗುರುತಿಸುವ ದಾಸ್ಯ, ಸಖ್ಯ, ಮಧುರ ವಾತ್ಸಲ್ಯ, ಹಾಗೂ ಶಾಂತ ಸ್ವಭಾವಗಳನ್ನು ಭಕ್ತಿ ಪರವಶರಾಗಿ ಯಾವ ರೀತಿ ಭಗವಂತನನ್ನು ಸ್ತುತಿಸಬೇಕು ಎಂಬುದನ್ನು ತಿಳಿಸಿರುವರು. ಕಂಡ ಕಂಡ ದೈವಗಳಿಗೆ ಶರಣು ಹೋಗುವವರನ್ನು ಕನಕದಾಸರು ಕಟುವಾಗಿ ಟೀಕಿಸಿದ್ದಾರೆ. ಅಂತರಂಗ ಬಹಿರಂಗಗಳಲ್ಲಿ ಢಾಂಬಿಕತೆಯನ್ನು ತುಂಬಿದ ಭಕ್ತಿ ಭಕ್ತಿಯೇ ಅಲ್ಲ ಎಂಬುದನ್ನು ಕೂಡ ಅವರು ಸೂಕ್ಷ್ಮತೆಯ ಮೂಲಕ ತಿಳಿಸಿರುವರು.

ಕನ್ನಡದ ಅನುಭಾವ ಸಾಹಿತ್ಯದಲ್ಲಿ ವಚನ ಸಾಹಿತ್ಯದ ನಂತರ ದಾಸ ಸಾಹಿತ್ಯ ಪ್ರಮುಖವಾಗಿದ್ದು. ಅದರಲ್ಲಿಯೂ ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ ಅವರು ಭಗವಂತನಲ್ಲಿ ಇಟ್ಟಿರುವ ಅನನ್ಯ ಪ್ರೀತಿ, ಮುಕ್ತಿಯನ್ನು ಬದುಕಿನಲ್ಲಿ ಪಡೆಯಬೇಕಾದರೆ ದೃಢವಾದ ಭಕ್ತಿ ಇರಬೇಕು ಎಂಬುದನ್ನು ಪ್ರತಿಪಾದಿಸಿರುವರು.
ಇವರ ಕೀರ್ತನೆಗಳು ಭಗವಂತನನ್ನು ಕುರಿತ ಭಕ್ತನ ತನ್ಮಯತೆಯನ್ನು ತೋರಿಸುತ್ತವೆ. ಅತ್ಯಂತ ತೀವ್ರವಾದ ಭಾವ ಹಾಡಾಗಿ ಹೊರಹೊಮ್ಮಿದೆ. ಭಗವಂತ ಮತ್ತು ಭಕ್ತನ ನಡುವಿನ ಗಾಢ ಸಂಬಂಧದ ನಿಬಿಡ ಭಾವವೇ ಕೀರ್ತನೆಯ ರೂಪದಲ್ಲಿ ಸಾಕಾರಗೊಂಡಿವೆ. ಅಷ್ಟೇ ಅಲ್ಲ ಇವರ ಕೀರ್ತನೆಗಳು ಸಹಜತೆಯಿಂದ ದೇಶೀಯ ಸೊಗಡಿನಿಂದ ಕೂಡಿವೆ. ಇವರು ಮಹಾಭಕ್ತರಾಗಿರುವಂತೆ ಮಹಾಕವಿಯ ಸತ್ವವನ್ನು ಉಳ್ಳವರು ಕೂಡ ಇವರು ಎಂಬುದನ್ನು ಇವರ ಕೀರ್ತನೆಗಳ ಮೂಲಕ ನಾವು ಕಾಣಬಹುದಾಗಿದೆ.
ಕನಕದಾಸರು ತಮ್ಮ ಜೀವನ ಮತ್ತು ಸಾಹಿತ್ಯ ಸಿದ್ಧಿಯಿಂದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಜ್ವಲ ನಕ್ಷತ್ರವಾಗಿರುವರು.

ವೈ.ಬಿ.ಕಡಕೋಳ
ಶಿಕ್ಷಕ, ಸಾಹಿತಿಗಳು
ಮಾರುತಿ ಬಡಾವಣೆ.ಸಿಂದೋಗಿ ಕ್ರಾಸ್.ಮುನವಳ್ಳಿ
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
ಮುನವಳ್ಳಿ 591117

- Advertisement -

LEAVE A REPLY

Please enter your comment!
Please enter your name here

- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group