ಮೂಡಲಗಿ: ಕೊಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ‍್ಥಿನಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಕೃತ್ಯವನ್ನು ಖಂಡಿಸಿ ಮೂಡಲಗಿಯಲ್ಲಿ ಬುಧವಾರ ವೈದ್ಯರ ಸಂಘ ಹಾಗೂ ನರ್ಸಿಂಗ್ ವಿದ್ಯಾರ‍್ಥಿಗಳಿಂದ ಕಲ್ಮೇಶ್ವರ ವೃತ್ತದಲ್ಲಿ ಮೊಂಬತ್ತಿ ಬೆಳಗಿಸಿ ಮೌನ ಪ್ರತಿಭಟನೆ ಮಾಡಿದರು.
ಡಾ. ಸಚಿನ ಟಿ. ಮಾತನಾಡಿ ‘ವೈದ್ಯ ವಿದ್ಯಾರ‍್ಥಿನಿಯನ್ನು ಅತ್ಯಾಚಾರಗೊಳಿಸಿ ಕೊಲೆ ಮಾಡಿದವರನ್ನು ಗುರುತಿಸಿ ಶಿಕ್ಷಿಸಬೇಕು. ಇಂಥ ಘಟನೆಗಳು ಮುಂದೆ ಯಾವತ್ತೂ ಮರುಕಳಿಸಬಾರದು. ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರಗಳು ದೇಶಕ್ಕೆ ಬಹುದೊಡ್ಡ ಕಳಂಕವಾಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
ಮೂಡಲಗಿ ವೈದ್ಯರ ಸಂಘದ ಅಧ್ಯಕ್ಷ ಡಾ. ಪಿ.ವಿ. ಬುದ್ನಿ ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ದಿನದ ೨೪ ಗಂಟೆ ಮಹಿಳೆಯರು ವೈದ್ಯಕೀಯ ಸೇವೆ ಮಾಡುವುದು ಅನಿವಾರ‍್ಯವಾಗಿದೆ. ಇಂಥ ಘಟನೆಗಳಿಂದ ವೈದ್ಯಕೀಯ ಸೇವೆಗೂ ಚ್ಯುತಿ ಬರುವಂತಾಗಿದೆ ಮತ್ತು ಹಿನ್ನಡೆಯಾಗುತ್ತದೆ. ಸರ‍್ಕಾರವು ಸುರಕ್ಷೆಯ ಬಗ್ಗೆ ತೀವ್ರ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಪರುಶರಾಮ ನಾಯ್ಕ ಅವರು ತಹಶೀಲ್ದಾರ್ ಅವರ ಪರವಾಗಿ ಮನವಿಯನ್ನು ಸ್ವೀಕರಿಸಿ ಸರ‍್ಕಾರಕ್ಕೆ ರವಾನಿಸುವುದಾಗಿ ತಿಳಿಸಿದರು.
ಡಾ. ಪಿ.ವಿ. ಬುದ್ನಿ, ಸಂಘದ ಕಾರ್ಯದರ್ಶಿ ಡಾ. ವೈ.ಬಿ. ಮಳವಾಡ, ಡಾ. ಪ್ರಶಾಂತ ಬಾಬಣ್ಣವರ, ಡಾ. ಪಿ.ಎಸ್. ನಿಡಗುಂದಿ, ಡಾ. ಎಸ್.ಎಸ್. ಪಾಟೀಲ, ಡಾ. ತಿಮ್ಮಣ್ಣ ಗಿರಡ್ಡಿ, ಡಾ. ಎಸ್.ಪಿ. ಮುನ್ಯಾಳ, ಡಾ. ವಿಶಾಲ ಪಾಟೀಲ, ಡಾ. ಜಯಪಾಲ ಉಪ್ಪಿನ, ಡಾ. ಸಂತೋಷ ಆನಿಖಿಂಡಿ, ಡಾ. ರವಿ ಕಂಕಣವಾಡಿ, ಡಾ. ಎಂ.ಎಸ್. ಹಿರೇಮಠ, ಡಾ. ಪ್ರಕಾಶ ನೇಸೂರ, ಡಾ. ಮಹಾಂತೇಶ ಗಾಣಿಗೇರ, ಡಾ. ಪ್ರವೀಣ ಹೊಂಗಲ, ಡಾ. ಅಮಿತ ಬೀಳಗಿ, ಡಾ. ವಿಜಯ ಬೆನಕಟ್ಟಿ, ಡಾ. ರಾಹುಲ ಬೆಳವಿ, ಡಾ. ವಿಶ್ವನಾಥ ಹುದ್ದಾರ ಇದ್ದರು.