spot_img
spot_img

ಮಹಿಳಾ ರತ್ನ-ಸಾಹಿತ್ಯ ಸಿರಿ ಡಾ.ಗುರುದೇವಿ

Must Read

- Advertisement -

ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಡಾ.ಗುರುದೇವಿ ಹುಲೆಪ್ಪನವರಮಠ ಚಿರಪರಿಚಿತರು. ಶರಣ ಸಾಹಿತ್ಯ, ಹಾಸ್ಯ, ಜೀವನ ಚರಿತ್ರೆ, ಸಂಪಾದನೆ, ವಿಮರ್ಶೆ, ಮಹಿಳಾ ಸಂವೇದನೆ, ಅಭಿನಂದನ ಗ್ರಂಥಗಳಲ್ಲದೇ ಕಾವ್ಯಕ್ಕೂ ಹೆಸರಾದವರು. ಸರಳತೆ ಸೌಮ್ಯ ಕ್ರಿಯಾಶೀಲ ವ್ಯಕ್ತಿತ್ವದ ಗುರುದೇವಿಯವರು ಮೂಲತಃ ಸವದತ್ತಿ ತಾಲೂಕಿನ ಮುರಗೋಡದವರು. ಶರಣ ಸತ್ವ ಸೌಂದರ್ಯಗಳನ್ನು ಸಂಪೂರ್ಣವಾಗಿ ಅನುಭವಿಸಿದ ದಂಪತಿಗಳ ಸತ್ಪುತ್ರಿ. ಬಸವಾದಿ ಶರಣರ ನಡೆ ನುಡಿಗಳನ್ನೇ ಜೀವನವಾಗಿಸಿಕೊಂಡವರು. ಶರಣರ ಆದರ್ಶಗಳ ತಳಹದಿಯ ಮೇಲೆ ಸುಂದರ ಸಮಾಜ ಕಟ್ಟುವ ಕನಸು ಕಂಡವರು.

ಬೆಳೆಯುವ ಸಿರಿ ಮೊಳಕೆಯಲ್ಲಿಯೇ ನೋಡು ಎನ್ನುವಂತೆ ಗುರುದೇವಿಯವರು ವಿದ್ಯಾರ್ಥಿ ದೆಸೆಯಿಂದಲೇ ಏಳನೇ ವರ್ಗದಿಂದ ಸ್ನಾತಕೋತ್ತರ ಅಧ್ಯಯನದವರೆಗೆ ಮೆರಿಟ್ ಸ್ಕಾಲರ್ ಶಿಪ್ ಪಡೆದವರು. ಓದಿನಲ್ಲಿ ಸದಾ ಮುಂದಿದ್ದ ಇವರು ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯಕ್ಕೆ ಹನ್ನೊಂದನೇ ರ್ಯಾಂಕ್ ಹಾಗೂ ಇಂಗ್ಲೀಷ್ ಸ್ನಾತಕೋತ್ತರ ಪದವಿಯಲ್ಲಿ ಎರಡನೇ ರ್ಯಾಂಕ್ ಗಳಿಸಿರುವರು. ಕನ್ನಡದಲ್ಲಿಯೂ ಸ್ನಾತಕೋತ್ತರ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಅವರ ಅಧ್ಯಯನ ಪ್ರೀತಿಗೆ ಹಿಡಿದ ಕನ್ನಡಿ. ನಾಡಿನ ಹೆಸರಾಂತ ಅನುವಾದಕ ಡಾ. ಸಿ ಆರ್ ಯರವಿನತೆಲಿಮಠ ಅವರ ಮಾರ್ಗದರ್ಶನದಲ್ಲಿ ‘ಮೆಟಾಫಿಸಿಕಲ್ ಪೋಯಟ್ರಿ ಆ್ಯಂಡ್ ಕನ್ನಡ ವಚನ ಲಿಟರೇಚರ್- ಅ ಸ್ಟಡಿ ಇನ್ ಕಂಪ್ಯಾರಿಜನ್” ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಿ 1996 ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಪ್ರಬಂಧದ ವಿಷಯನ್ನು ಮೆಚ್ಚಿಕೊಂಡ ಹಾರನಹಳ್ಳಿಯ ಕೋಡಿಮಠದ ಪರಮ ಪೂಜ್ಯ ಶಿವಾನಂದ ಶ್ರೀಗಳು ಮತ್ತು ನಿಡಸೋಸಿಯ ಜಗದ್ಗುರು ಪಂಚಮ ಲಿಂಗೇಶ್ವರ ಪೂಜ್ಯರು ಅದನ್ನು ಮುದ್ರಿಸಿ ಕೋಡಿಮಠದಲ್ಲಿ ಲೋಕಾರ್ಪಣೆ ಮಾಡುವದರೊಂದಿಗೆ ದೇಶ ವಿದೇಶಗಳಿಗೆ ತಲುಪುವಂತೆ ಮಾಡಿದರು.

ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ ಮೂರುವರೆ ದಶಕಗಳು ಎಂದರೆ ಸುದೀರ್ಘ ಕಾಲವೇ ಸರಿ.ಸತತ ಮೂವತೈದು ವರ್ಷಗಳ ಕಾಲ ಕೆ ಎಲ್ ಇ ಸಂಸ್ಥೆಯ ವಿವಿಧ ಮಹಾವಿದ್ಯಾಲಯಗಳಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ವೃತ್ತಿ ಶ್ಲ್ಯಾಘನೀಯ. ಇಂದಿನ ಸ್ಪರ್ಧಾಯುಗದಲ್ಲಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಗರಿಷ್ಟ ಮಟ್ಟದಲ್ಲಿ ಸಾಧನೆ ಮಾಡಲು ನೆರವಾಗಿದ್ದಾರೆ. ದೈಹಿಕ ಆರೋಗ್ಯ, ಮಾನಸಿಕ ಸ್ಥಿರತೆಗಳು ಯಶಸ್ಸಿನ ಗುಟ್ಟುಗಳು ಎಂದು ಶಿಷ್ಯ ಕೋಟಿಗೆ ಬೋಧಿಸಿ ಬಾಳನ್ನು ಬೆಳಗಿಸಿದ್ದಾರೆ. ಪಿಎಚ್‍ಡಿ ಸಂಶೋಧನೆಗೆ ಮಾರ್ಗದರ್ಶಕರಾಗಿ ಲೇಸರ್ ಕಿರಣದಂತೆ ಶಕ್ತಿಶಾಲಿಯಾದ ಕಾರ್ಯ ನಿರ್ವಹಣೆಯೂ ಗುರುದೇವಿಯವರ ಖಾತೆಯಲ್ಲಿದೆ. ಸಂತಸದ ಅನುಭೂತಿಯನ್ನು ನೀಡುತ್ತ ಬೋಧನಾ ಕಾರ್ಯವನ್ನು ನಿರ್ವಹಿಸಿದ ಅದ್ಭುತ ಗುರು,’ಗುರುದೇವಿಯವರು.’

- Advertisement -

ತಮ್ಮ ಸಾಮಥ್ರ್ಯವನ್ನು ತಲುಪ ಬಯಸುವ ಸಾವಿರಾರು ಉಪನ್ಯಾಸಕರಿಗೆ ಸರಳ ನಿಯಮಗಳನ್ನು ಸುಂದರವಾಗಿ ಹೆಣೆಯಲ್ಪಟ್ಟ ಕತೆಗಳೊಂದಿಗೆ ಅಮೂಲ್ಯ ಹರಳಿನಂಥ ಉಪನ್ಯಾಸ, ಆಲಿಸಿದವರಿಗೆ ಗೊತ್ತು ಗುರುದೇವಿಯವರ ಮಾತಿನ ಸಮ್ಮೋಹನ ಶಕ್ತಿ. ಮಠ ಮಂದಿರಗಳಲ್ಲಿ ಗುರುದೇವಿಯವರು ಆದ್ಯಾತ್ಮಿಕತೆಯ ಪರಿಜ್ಞಾನವನ್ನು ಇಂದಿನ ಕಠಿಣ ಯುಗಕ್ಕೆ ಸುಸಂಬದ್ಧವಾಗುವಂತೆ ಹಿಡಿದಿರಿಸಿ ಹೇಳುವ ಪರಿಯೇ ಅನನ್ಯ ಅಪ್ರತಿಮ ಎನಿಸಿಕೊಂಡಿದೆ.ಸ್ವಭಾವತಃ ವಾಸ್ತವವಾದಿಯಾಗಿದ್ದು ತತ್ವಜ್ಞಾನವನ್ನು ಸರಳೀಕರಣಗೊಳಿಸುವ ಕಲೆ ಸಿದ್ಧಿಸಿಕೊಂಡಿದ್ದಾರೆ. ಆದ್ದರಿಂದ ರಾಜ್ಯ ಮಟ್ಟದಲ್ಲಿ ಅತ್ಯಂತ ಬೇಡಿಕೆಯ ಉಪನ್ಯಾಸಕರಾಗಿದ್ದು ಗಮನಾರ್ಹವಾದ ಶಕ್ತಿಯಾಗಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಕಾರಾತ್ಮಕ ಚೈತನ್ಯದ ಚಿಲುಮೆಯಾಗಿದ್ದಾರೆ.

ಮಹತ್ವದ ಸಂದೇಶಗಳನ್ನು ನೀಡುವ ಬಾನುಲಿ ಚಿಂತನಗಳು ನಾಡಿನಾದ್ಯಂತ ಕೇಳುಗರ ಮೆಚ್ಚುಗೆ ಪಡೆದಿವೆ. ಬದುಕನ್ನು ಭವ್ಯಗೊಳಿಸುವ ಮತ್ತು ವಿಸ್ತಾರಗೊಳಿಸುವ ಪರಿಜ್ಞಾನದ ನಿಧಿ ಗುರುದೇವಿಯವರ ಚಿಂತನ ಸಂಕಲನಗಳಲ್ಲಿ ಸಮೃದ್ಧವಾಗಿ ದೊರೆಯುತ್ತದೆ. ಹೀಗಾಗಿ ಕರುನಾಡಿನ ಪ್ರಧಾನ ಚಿಂತಕರ ಪಂಕ್ತಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.ದೂರದರ್ಶನದ ಚಂದನದಲ್ಲಿ ಬೆಳಗು ಕಾರ್ಯಕ್ರಮದಲ್ಲಿ ಸಂದರ್ಶನ ನೀಡಿದ್ದಾರೆ. ಶಿಕ್ಷಣ, ಸಂಶೋಧನೆ, ಮಹಿಳೆ, ಧರ್ಮ ಅಷ್ಟೇ ಅಲ್ಲ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಲೆಕ್ಕವಿಲ್ಲದಷ್ಟು ಉತ್ಕøಷ್ಟ ಉಪನ್ಯಾಸಗಳನ್ನು ನೀಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.. ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಚಾರ ಸಂಕೀರ್ಣ ಕಮ್ಮಟಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಲ್ಪಟ್ಟು ಇಂಗ್ಲೀಷ್ ಮತ್ತು ಕನ್ನಡ ಭಾಷೆ ಸಾಹಿತ್ಯ ವಿಮರ್ಶೆ, ಅನುವಾದ, ಸಂವಹನ ಕ್ರಿಯೆಗಳಿಗೆ ಸಂಬಂಧಪಟ್ಟಂತೆ ನೂರಾರು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿ ವಿದ್ವಜ್ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಉಡಿಗಟ್ಟಿಕೊಂಡಿರುವ ಅಧ್ಯಯನದ ಫಲವಾಗಿ ಸಭೆ ಸಮಾರಂಭಗಳಲ್ಲಿ ಅರಳು ಹುರಿಯುವಂತೆ ನವಿರಾದ ಹಾಸ್ಯದಲ್ಲಿ ಮಾತನಾಡಿ ಶೋತೃಗಳನ್ನು ತಣಿಸುತ್ತಾರೆ.

ಅಪಾರವಾದ ಸಾಹಿತ್ಯ ತುಡಿತಕ್ಕೆ ಅವರ 20ಕ್ಕಿಂತಲೂ ಹೆಚ್ಚಿನ ಕೃತಿಗಳು ಸಾಕ್ಷಿಯಾಗಿವೆ. ಗುರುದೇವಿಯವರದು ಹಾಸ್ಯ ವ್ಯಂಗ್ಯ ವಿಡಂಬನೆ ಭರಿತ ಸಾಹಿತ್ಯ ರಚನೆಯಲ್ಲಿ ಎತ್ತಿದ ಕೈ. ಬಿಡುಗಡೆಯ ಸಡಗರ, ನನ್ನಜ್ಜಿ ಗುಜ್ಜಿ, ನೀರು ಬಂತು ನೀರು, ಮೂಗು ಮುರಿಯುವವರು, ಅಜ್ಜಿಗೆ ಜೈ ಜೈ ಜೈ. ಭುವಿಯ ಬೆಳಕು ತನುವೆಂಬ ಹುತ್ತದಲ್ಲಿ, ಶರಣ ಸನ್ನಿದಿ, ಚಿದ್ಬೆಳಗು, ಚಿತ್ಕಿರಣ, ಶರಣರ ದೃಷ್ಟಿಯಲ್ಲಿ ಮನಸ್ಸು, ಶರಣರ ಸೂಳ್ನುಡಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿವೆ.ಇವಲ್ಲದೇ 5 ಸಂಪಾದಿತ ಕೃತಿಗಳು 4 ಸಹ ಸಂಪಾದಕೀಯ ಹಾಗೂ ಬಿಡಿ ಲೇಖನಗಳನ್ನು ಪ್ರಕಟಗೊಳಿಸಿದ್ದಾರೆ. ಅನೇಕ ಬರೆಹಗಳು ಕರ್ನಾಟಕ ವಿಶ್ವವಿದ್ಯಾಲಯ,ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ರಾಯಚೂರಿನ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳ ಪಠ್ಯಕ್ಕೆ ಆಯ್ಕೆಯಾಗಿವೆ. ಇದು ಅವರ ಸಾಹಿತ್ಯದ ಗುಣಮಟ್ಟ ಮತ್ತು ಉಪಯುಕ್ತತೆಯನ್ನು ಸಾರಿ ಹೇಳುತ್ತದೆ.

- Advertisement -

ಬದುಕಿನ ಸರಳ ತತ್ವದೊಂದಿಗೆ ಬೆಸೆಯುವ, ಸಂತಸದ ಪದರುಗಳೊಳಗಿನ ಮೋಜಿನ ಲೇಖನಿಯ ಹಾಸ್ಯ ಓದುಗರನ್ನು ಹೊಟ್ಟೆ ತುಂಬಾ ನಗೆಸುವಲ್ಲಿ ಗೆಲ್ಲುತ್ತದೆ. ಜೊತೆಗೆ ಬದುಕಿನ ದೊಡ್ಡ ಪ್ರಶ್ನೆಗಳ ಮೇಲೆ ಬೆಳಕು ಚೆಲ್ಲುತ್ತದೆ.ನಾಡಿನ ಪ್ರತಿಷ್ಠಿತ ಸಂಸ್ಥೆಗಳ ಮತ್ತು ಮಹನೀಯರ ಸ್ಮರಣ ಸಂಚಿಕೆ ಅಭಿನಂದನ ಗ್ರಂಥಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದು ಇವರ ಮೇದಾವಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಇದಷ್ಟು ಸಾಲದೆಂಬಂತೆ ಹಲವಾರು ಸಂಸ್ಥೆಗಳ ಸದಸ್ಯರಾಗಿ ಕಾಲ ಕಾಲಕ್ಕೆ ಅಪೇಕ್ಷಿಸುವ ಸೇವೆಯ ಕಾರ್ಯಗಳಲ್ಲಿ ತನು ಮನ ಧನವನಿತ್ತು ಕ್ರಿಯಾಶೀಲರಾಗಿರುವ ಗುರುದೇವಿಯವರು ಮಹಿಳಾ ಸಮಾಜದ ಮೌಲಿಕ ಆಸ್ತಿ ಆಗಿದ್ದಾರೆ. ಸ್ತ್ರೀ ಪರ ಹೋರಾಟದ ಹಾದಿಯಲ್ಲಿ ವೈಚಾರಿಕವಾಗಿ ಶೈಕ್ಷಣಿಕವಾಗಿ ಹೆಜ್ಜೆ ಹಾಕಿದ್ದಾರೆ. ಗುರುದೇವಿಯವರ ಸಾಮಾಜಿಕ ಕಳಕಳಿಯು ಅಮೋಘ ಸೇವೆಯನ್ನು ಸಾಧನೆಯನ್ನು ಗುರುತಿಸಿ ಅಪಾರ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿವೆ. ಸಾಹಿತ್ಯಕ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರ ಕೊಡಮಾಡಿದ ರಾಣಿ ಚೆನ್ನಮ್ಮಾ ಪ್ರಶಸ್ತಿಯೂ ಇವರ ಮುಡಿಗೇರಿದೆ. 3ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕೆಯಾಗಿದ್ದು ಹೆಮ್ಮೆಯ ವಿಷಯ.

ಬಹುಮುಖ ಪ್ರತಿಭೆಯ ಹಿಂದಿನ ಪ್ರೇರಕ ಶಕ್ತಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಭೂಷಿತ ಶಿಕ್ಷಕ ದಂಪತಿಗಳು. ತಂದೆ ಶಿವಕವಿ, ಪ್ರವಚನ ಭೂಷಣ ಉಳವೀಶ ಮತ್ತು ತಾಯಿ ಶಿಶುಕವಿ ಶಾಂತಾದೇವಿ. ಗುರುದೇವಿಯವರ ಬೌದ್ಧಿಕ ಚಟುವಟಿಕೆಗಳಿಗೆ ಸದಾ ಬೆಂಬಲವಿತ್ತು ಓರ್ವ ಸಬಲ ಮಹಿಳೆಯನ್ನಾಗಿ ರೂಪಿಸಿದ ಮಾದರಿ ತಾಯ್ತಂದೆಯರು. ಶರಣ ಸಂಸ್ಕøತಿಯ ಬದುಕಿನಲ್ಲಿ ಆನಂದ ಕಾಣುತ್ತಿರುವ, ಮಹಾದೇವಿ ಅಕ್ಕನ ಆದರ್ಶಗಳಿಗೆ ಆಕರ್ಷಿತರಾದವರು ಗುರುದೇವಿಯವರು.ಶಿಕ್ಷಣ -ಸಾಹಿತ್ಯ ಸಿರಿ ಡಾ. ಗುರುದೇವಿ ಈಗ ವೃತ್ತಿಯಿಂದ ನಿವೃತಿಯಾದರೂ ‘ಮಹಾಮಹೋಪಾದ್ಯಾಯ’ ಎನ್ನುವ ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ ಸೇವೆಗೆ ಸದಾ ಬದ್ಧರಾಗಿರುವ ಗುರುದೇವಿಯವರು ನಿಜಕ್ಕೂ ಮಹಿಳಾ ರತ್ನವೇ ಸರಿ. ಇಂಥ ಅಪರೂಪದ ಮಹಿಳಾ ಸಾಧಕಿಯರ ಹಾದಿಯಲ್ಲಿ ನಾವೂ ಹೆಜ್ಜೆ ಇಡಬೇಕಿದೆ. ಭದ್ರ ಕರುನಾಡು ಕಟ್ಟಬೇಕಿದೆ.


ಜಯಶ್ರೀ ಅಬ್ಬಿಗೇರಿ
ಬೆಳಗಾವಿ
9449234142

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group