ಸಿಂದಗಿ; ದೇಶದ ಪ್ರತಿಯೊಬ್ಬ ನಾಗರಿಕನೂ ಸಂವಿಧಾನವನ್ನು ಅರಿಯುವುದು ಅಗತ್ಯವಾಗಿದೆ ಎಂದು ಪಿ.ಯು.ಸಿ ಪ್ರಥಮ ವರ್ಷದ ವಿದ್ಯಾರ್ಥಿಯಾದ ಕುಮಾರ ಕಾಶಿನಾಥ ಬಳುಂಡಗಿ ಅಭಿಪ್ರಾಯಪಟ್ಟರು.
ಪಟ್ಟಣದ ಪಿ.ಇ.ಎಸ್. ಗಂಗಾಧರ ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನ ಕಾರ್ಯಕ್ರಮದ ಅಂಗವಾಗಿ ಸ್ನೇಹಿತರನ್ನುದ್ದೇಶಿಸಿ ಮಾತನಾಡುತ್ತಾ ದೇಶದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯು ಅದನ್ನು ಅರಿತು ಪಾಲಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನವನ್ನು ಪಾಲಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಸಮಾಜದಲ್ಲಿ ಅಸಮಾನತೆ, ಜಾತೀಯತೆ, ಭಿನ್ನತೆಗೆ ಕಾರಣವಾಗಿದೆ. ಇಂತಹ ಘಟನೆಗಳು ದೇಶದ ಏಕತೆಗೆ ಮಾರಕವಾಗುತ್ತಿವೆ. ವಿದ್ಯಾವಂತರಾದ ಯುವಪೀಳಿಗೆ ದೇಶದ ಸಂವಿಧಾನದ ಆಶಯಗಳನ್ನು ಈಡೇರಿಸಲು ಕಂಕಣಬದ್ಧರಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕಿ ಕುಮಾರಿ ಅಶ್ವಿನಿ ಚನಾಳ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಆರ್.ಬಿ. ಗೋಡಕರ ಅವರು ಸಂವಿಧಾನದ ಕುರಿತು ಮಾತನಾಡಿದರು. ಉಪನ್ಯಾಸಕರಾದ ಅಮೀರಬಾಷಾ ಮೋಪಗಾರ ಸ್ವಾಗತಿಸಿದರು. ಮಹಾಂತೇಶ ದಂಡವತ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.