spot_img
spot_img

ರಂಗ ಪ್ರಯೋಗ: ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಾರಸುದರ, ಚಾವುಂಡರಾಯ ನಾಟಕಗಳು

Must Read

- Advertisement -

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಸಮಾಜಮುಖಿ ರಂಗ ಬಳಗದ ವತಿಯಿಂದ ಕಳೆದ ಶನಿವಾರ, ಭಾನುವಾರ ವಾರಸುದಾರ ಮತ್ತು ಚಾವುಂಡರಾಯ ಎಂಬ ಐತಿಹಾಸಿಕ ನಾಟಕಗಳು ಪ್ರದರ್ಶಿತವಾದವು. ಈ ಎರಡೂ ನಾಟಕಗಳ ಕರ್ತೃ ಹಾಸನ ತಾಲ್ಲೂಕಿನ ರಾಯಪುರ ಗ್ರಾಮದ ಜಯರಾಮ್ ಅವರು. ಭಾರತದ ಮತ್ತು ಕರ್ನಾಟಕ ರಾಜ್ಯ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಎರಡೂ ನಾಟಕಗಳು ಉತ್ತಮ ರಂಗ ಪ್ರಯೋಗದಿಂದ ಗಮನ ಸೆಳೆದವು.

ಇದೇ ನಾಟಕಕಾರರ ಸಿರಿಗೆ ಸೆರೆ ನಾಟಕ ಬೆಂಗಳೂರು ಕೆಂಪೇಗೌಡರ ಜೀವನ ಚರಿತ್ರೆ ಆಧರಿಸಿತ್ತು. ಈ ನಾಟಕವನ್ನು ಹಾಸನದಲ್ಲಿ ಮಂಡ್ಯ ತಂಡ ಪ್ರದರ್ಶಿಸಿತ್ತು.   ಪ್ರಸಾದ ಕುಂದೂರು ನಿರ್ದೇಶನದಲ್ಲಿ ಪ್ರದರ್ಶಿತ ವಾರಸುದಾರ ನಾಟಕ ಡೆಲ್ಲಿಯ ಮೊಘಲ್ ಕಾಲದ ಚರಿತ್ರೆಯನ್ನು ರಂಗದ ಮೇಲೆ ತೆರೆದಿಡುತ್ತದೆ. ಪ್ರಸಾದ್ ಕೂಡ ಜಿಲ್ಲೆಯ ಕುಂದೂರು ಮಠ ಗ್ರಾಮದವರು.  ಇವರ ನೇತೃತ್ವದಲ್ಲಿ ಮೈಸೂರಿನ ನಿರಂತರ ಫೌಂಡೇಶನ್ ಈ ಹಿಂದೆ ಚಂದ್ರಶೇಖರ್ ಕಂಬಾರರ ಶಿವರಾತ್ರಿ ನಾಟಕ  ಮತ್ತು ಬಸವಣ್ಣನವರ ವಚನಗಳನ್ನಾಧರಿಸಿದ ಕೂಡಲ ಸಂಗಮ ದೃಶ್ಯರೂಪಕ ಪ್ರದರ್ಶಿಸಿತ್ತು. ಆ ವೇಳೆಗೆ ನಾನು ಬರೆದ ಬರಹಗಳು 2014ರಲ್ಲಿ ಪ್ರಕಟಿತ ನನ್ನ ರಂಗಸಿರಿ ಕಥಾ ಐಸಿರಿ ಕೃತಿಯಲ್ಲಿವೆ, ಎರಡು ಅರಮನೆ ದೃಶ್ಯಗಳ ಹಿನ್ನಲೆಯಲ್ಲಿ ರಾಜತಂತ್ರ ಷಡ್ಯಂತ್ರಗಳನ್ನು ಹೆಣೆಯುತ್ತಾ ಸಾಗುವ ವಾರಸುದಾರ ನಾಟಕ ಷಹಜಹಾನ್ ಕಾಲದ್ದಾದರೂ ಸಮಕಾಲೀನ ರಾಜಕೀಯಕ್ಕೆ ಕನ್ನಡಿ ಹಿಡಿಯುತ್ತದೆ. ಡೆಲ್ಲಿಯ ಚಕ್ರವರ್ತಿ ಶಹಜಹಾನಿನ ಅನಾರೋಗ್ಯ ಮೂಲಕ ತೆರೆದುಕೊಳ್ಳುವ ನಾಟಕ ಗಂಭೀರ ಸ್ವರೂಪದಲ್ಲಿ ತಣ್ಣಗೆ ಸಾಗಿದರೂ ಒಡಲಾಳದಲ್ಲಿ ರೋಷ ದ್ವೇಷ,ಅಸಹನೆಗಳ ಒಡಲುರಿಯ ಬೆಂಕಿಯ ಕೆಂಡವಾಗಿ ಪ್ರಕಾಶಿಸುತ್ತದೆ.

- Advertisement -

ಮೊಗಲ್‍ ಇತಿಹಾಸದಲ್ಲಿ ಷಹಜಹಾನನ ಕಾಲವನ್ನು ಸುವರ್ಣ ಯುಗವೆಂದು ಹೇಳಲಾಗಿದೆ. ಇವನ ಕಾಲದಲ್ಲಿ ಮೊಗಲ್ ಸಾಮ್ರಾಜ್ಯ ತನ್ನ ವಿಸ್ತಾರದ ಪರಾಕಾಷ್ಠೆಯನ್ನು ಮುಟ್ಟಿತು. ಷಹಜಹಾನನ ಆಳ್ವಿಕೆ ಆಡಂಬರ  ವೈಭೋಗಗಳಿಂದ ಕೂಡಿತ್ತಾದರೂ ನೈಜ ಸ್ಥಿತಿ ತದ್ವಿರುದ್ದವಾಗಿತ್ತು. ಹೊರನೋಟದ ಆಕರ್ಷಣೆ  ವೈಭವದ ಮುಸುಕನ್ನು ತೆಗೆದು ಒಳಹೊಕ್ಕು ನೋಡಿದಲ್ಲಿ ಆಗಿನ ಆಡಳಿತ ಜನಜೀವನದ ಸ್ಥಿತಿಗತಿಗಳು ಆರ್ಥಿಕ ಪದ್ಧತಿ ಅನೇಕ ಸಮಸ್ಯೆಗಳ ಗೂಡಾಗಿತ್ತು. ಇವನ ಕಾಲದಲ್ಲಿ ಪ್ರಾರಂಭವಾದ ಆರ್ಥಿಕ ದಿವಾಳಿತನ ಮುಂದಿನ ಆಳ್ವಿಕೆಯ ಕಾಲದಲ್ಲಿ ಮತ್ತಷ್ಟು ಹೆಚ್ಚಿ ಮೊಗಲ್ ಸಾಮ್ರಾಜ್ಯದ ಪತನಕ್ಕೆ ಕಾರಣವಾಯಿತು. ಷಹಜಹಾನನ ಆಳ್ವಿಕೆಯ ಕೊನೆಯ ದಿನಗಳು ದುರಂತ ಹಾಗೂ ದುಃಖಮಯವಾಗಿತ್ತು. ಇದಕ್ಕೆ ಸಿಂಹಾಸನದ ಉತ್ತರಾಧಿಕಾರಿ ಆಗಿ ಅವನ ಮಕ್ಕಳಲ್ಲಿ  ಆರಂಭವಾದ ಅಂತರ್ಯುದ್ದ  ಮಹಾಭಾರತ ಕಥೆಯ ಕುರುಕ್ಷೇತ್ರ ಯುದ್ದದಂತೆಯೇ ಸೈ. ಷಹಜಹಾನನಿಗೆ ದಾರಶುಕೋ, ಶೂಜು, ಔರಂಗಜೇಬ್ ಮತ್ತು ಮುರಾದ್ ಎಂಬ ನಾಲ್ವರು ಗಂಡು ಮಕ್ಕಳು. ಇವರೆಲ್ಲರೂ ರಾಜ್ಯಪಾಲರಾಗಿ ದಂಡನಾಯಕರಾಗಿ ನಾಗರಿಕ ಸೈನಿಕ ಆಡಳಿತದಲ್ಲಿ ಸಾಕಷ್ಟು ಅನುಭವ ಪಡೆದಿದ್ದರು. ಆದರೆ ಅವರ ವೈಯಕ್ತಿಕ ಗುಣ ಲಕ್ಷಣಗಳಲ್ಲಿ ವ್ಯತ್ಯಾಸಗಳಿದ್ದವು. ಹಿರಿಯ ಮಗ ದಾರಶುಕೋ ಉದಾತ್ತ ಮನೋಭಾವದವ. ಸರ್ವಧರ್ಮ ಪ್ರಿಯನು ಹಾಗೂ ವಿದ್ವಾಂಸನಾಗಿದ್ದನು. ಅಥರ್ವ ವೇದ ಮತ್ತು ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ತರ್ಜುಮೆ ಮಾಡಿಸಿದನು. ಎಲ್ಲ ಧರ್ಮದ ಜನರ ಒಡನಾಡಿಯಾಗಿದ್ದನು. 

ಔರಂಗಜೇಬನು ಅಸಾಧಾರಣವಾದ ಕಾರ್ಯನಿಷ್ಠೆ, ಅತ್ಯುತ್ತಮ ರಾಜತಾಂತ್ರಿಕ, ಸೈನಿಕ ಕೌಶಲ್ಯ ಮತ್ತು ಪ್ರಶ್ನಾತೀತ ಆಡಳಿತ ಅರ್ಹತೆಗಳ ಸರದಾರ. ಉಳಿದ ಇಬ್ಬರಲ್ಲಿ ಶೂಜ ಬುದ್ಧಿವಂತ ವೀರಯೋಧ. ಆದರೆ ಇವನದು ವಿಲಾಸಮಯ ಜೀವನ. ಮುರಾದ್‍ನು ನಿಷ್ಕಪಟಿ ಆದರೆ ಪಾನಪ್ರಿಯ. ನಾಟಕದಲ್ಲಿ ಭಟರು ರೈಲಿನಂತೆ ಚಲಿಸುವುದು ವಿಶೇಷವಾಗಿದೆ. ಕೋಮು ದಳ್ಳುರಿಯ ಬೀಜ  ಆ ಕಾಲದಿಂದಲೂ ಹೇಗೆ ಬಿತ್ತಲ್ಪಡುತ್ತಾ ಬಂದಿದೆ ಎಂಬುದನ್ನು ತಿಳಿಸುತ್ತದೆ. ರಾಜಕೀಯ ಘಟನಾವಳಿಗಳ ಜಟಿಲತೆಯ ಕೇಂದ್ರವಾಗಿ ಮೂರು ಪ್ರಧಾನ ಪಾತ್ರಗಳ ಆಂತರಿಕ ಬಹಿರಂಗ ಯುದ್ಧವು  ನಾಟಕದ ಕೇಂದ್ರ ಬಿಂದುವಾಗಿದೆ. ಇತಿಹಾಸದ ಕ್ರೂರ ರಾಜನೀತಿಯ ಆಟಿಕೆಗಳಾಗಿ ಮೊಘಲ್ ವಂಶಜರಾದ ಶಹಜಹಾನ್ ದಾರಾಶಿಖೋ ಮತ್ತು ಔರಂಗಜೇಬ್ ಕೇವಲ ತಮ್ಮ ವೈಯಕ್ತಿಕ ನಿಲುವುಗಳಿಗೆ ಮತ್ತು ನಾವು ನಂಬಿರುವ ತತ್ವಗಳೇ ಈ ಲೋಕದ ಅತಿ ಮುಖ್ಯ ವಿಚಾರ ಎನ್ನುವ ಧೋರಣೆಯಲ್ಲಿ  ಜನಸಾಮಾನ್ಯರು ಹೇಗೆ ನರಳುತ್ತಾರೆ ಎಂಬುದನ್ನು ಬಿಂಬಿಸಿದೆ. ನಾಟಕದಲ್ಲಿ ದಾರಾಶಿಕೊ ಪಾತ್ರದಲ್ಲಿ ದೇವಿಪ್ರಸಾದ್, ಔರಂಗಜೇಬ್‍ನಾಗಿ ಪ್ರಶಾಂತ್. ಮುರಾದ ಭಕ್ಷ್ ಪಾತ್ರದಲ್ಲಿ ಸಂಜೀತ್ ಹೆಚ್.ಎಂ. ಮತ್ತು ಶಹಜಹಾನ್ ಪಾತ್ರವನ್ನು ಆಕರ್ಷ ಒಳಗೊಂಡಂತೆ ಇಡೀ ತಂಡದ ಅಭಿನಯ ನೇಪಥ್ಯದ ರಂಗ ಸಜ್ಜಿಕೆ, ಬೆಳಕಿನ ವ್ಯವಸ್ಥೆಯಲ್ಲಿ ಆಕರ್ಷಸಿತು. 

ಭಾನುವಾರ ಪ್ರದರ್ಶಿತ ಚಾವುಂಡರಾಯ ಗಂಗರಸರ ಕಡೆಗಾಲದ ಹೃದ್ಯ ಚಿತ್ರಣದ ಐತಿಹಾಸಿಕ ನಾಟಕ. ನಿರ್ದೇಶನÀ ಹುಲಗಪ್ಪ ಕಟ್ಟಿಮನಿ ಅವರದು. ಚಾವುಂಡರಾಯ ಮಹಾರಾಜ ಮಾರಸಿಂಹನ ಸೇನಾಧಿಪತಿ ಮುಖ್ಯ ಸಚಿವ ನಿಷ್ಠಾವಂತ ಪ್ರಾಣ ಮಿತ್ರ. ಅಧಿಕಾರಕ್ಕಿಂತ ಆದರ್ಶ ಜೀವನ ದೊಡ್ಡದೆಂದು ಬಾಳಿದವನು. ಚಾವುಂಡರಾಯ ತನ್ನ ಅಂತರಂಗದ ಕರೆಗೆ ಓಗೊಟ್ಟು ಲೌಕಿಕದಿಂದ ಬಿಡುಗಡೆಯತ್ತ ಹೆಜ್ಜೆ ಹಾಕುತ್ತಾನೆ. ಭಾವನಾತ್ಮಕ ಬೆಸುಗೆಯಿಂದ ಬಿಡಿಸಿಕೊಂಡು ವಸ್ತುನಿಷ್ಠವಾಗಿ ಹಾಗೂ ಇತಿಹಾಸದ ಚೌಕಟ್ಟಿಗೆ ಎರವಾಗುದಂತೆ ರಚಿತ ನಾಟಕ. ರಾಜನಾಗುವ ಎಲ್ಲಾ ಅರ್ಹತೆಗಳು ಇದ್ದರೂ ದಂಡನಾಯಕನಾಗಿಯೇ ಉಳಿಯುವುದು ಚಾವುಂಡರಾಯನ ವೈಶಿಷ್ಟ್ಯ. ಆತ ಸ್ವತ: ಗದ್ಯಕವಿ. ಚಾವುಂಡರಾಯ ಪುರಾಣವನ್ನು ಬರೆದಿದ್ದಾನೆ. ಇವನ ಒಡನಾಟದಲ್ಲಿ ಒಂದಷ್ಟು ಕಾಲ ಇದ್ದು ಪ್ರಭುತ್ವದ ಒಳ ಸುಳಿಗಳನ್ನು ಅರಿತವನು ಕವಿ ರನ್ನ. ಇಲಿ ್ಲರನ್ನನು ಒಂದು ಪಾತ್ರ. ಆಗಿನ ರಾಜರು, ಸಾಮಂತರು, ಪಾಳೇಗಾರರು ನಿರಂತರವಾಗಿ ಗಡಿ ಕಾಯುವ ಅದನ್ನು ವಿಸ್ತರಿಸಿಕೊಳ್ಳುವ ಯುದ್ಧದಲ್ಲಿ ತೊಡಗಿದ್ದರು. ಅಂತಹ ಸಂದರ್ಭದಲ್ಲಿ ವಿಸ್ತಾರವಾದ ಗಂಗವಾಡಿ ಸಾಮ್ರಾಜ್ಯ ವನ್ನು 10 ವರ್ಷ ಯುದ್ಧ ಮುಕ್ತ ಮಾಡಿದ್ದು ಚಾವುಂಡರಾಯನ ರಾಜತಾಂತ್ರಿಕ  ಪರಾಕ್ರಮದ ಹಿರಿಮೆ. ಯುದ್ಧದ ಅನಿವಾರ್ಯ ಕಾಣದ ಚಾವುಂಡರಾಯನಿಗೆ ರಾಜನೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ  ರಾಜನ ಇಚ್ಛೆಗೆ ವಿರುದ್ಧವಾಗಿ ಪ್ರಭುತ್ವವನ್ನು ತೊರೆಯುತ್ತಾನೆ.

- Advertisement -

ಈ ಹಂತದಲ್ಲಿ ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಪ್ರತಿಮೆ ನಿರ್ಮಿಸುತ್ತಾನೆ. ಚಾವುಂಡರಾಯ ಮತ್ತು ಅತನ ಕಾಲದ ರಾಜಪ್ರಭುತ್ವ, ಜೈನಧರ್ಮದ ಒಳ ಹೊರಗಿನ ಸ್ವರೂಪ ಮತ್ತು ಸಂಘರ್ಷಗಳನ್ನು  ನಾಟಕ ಅರಿಯಲು ಪ್ರಯತ್ನಿಸಿದೆ. ಚಾವುಂಡರಾಯ ಪಾತ್ರದಲ್ಲಿ ಪವನ, ರಾಚಮಲ್ಲ ಬಹುಬಲಿ ಪಾತ್ರದಲ್ಲಿ ರಾಹುಲ್ ಶ್ರೀನಿವಾಸ್ ರನ್ನನಾಗಿ ಪ್ರವೀಣ್ ಕರಡೇರ, ಮಾರಸಿಂಹ ಪಾತ್ರದಲ್ಲಿ ಜಿ.ಆನಂದ್ ರಕ್ಕಸಗಂಗ ಸಂಜಿತ್‍ಗೌಡ, ಪಾಂಚಲ ದೇವ ಪಾತ್ರದಲ್ಲಿ ಶರತ್. ನೇಮಿನಾಥ ಪಾತ್ರದಲ್ಲಿ ಸುಮುಕ ಪಟೇಲ್, ಅಜಿತ ಸೇನ ಕಿರಣ್‍ಗೌಡ ಇವರೇ ಮೊದಲಾಗಿ ಐತಿಹಾಸಿಕ ಪಾತ್ರಗಳಲ್ಲಿ ನಟಿಸಿದ ಕಲಾವಿದರೂ  ಎಲ್ಲಾ ನಟರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.


ಗೊರೂರು ಅನಂತರಾಜು, ಹಾಸನ 

ಪೋನ್ 9449462879. 

ವಿಳಾಸ : ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group