spot_img
spot_img

ಶಿವರಾತ್ರಿಗೆ ನಮ್ಮೂರ ತ್ರಿಕೂಟಲಿಂಗೇಶ್ವರ ಸಂಗಮೇಶ್ವರ ದೇವಸ್ಥಾನ ದಶ೯ನ

Must Read

- Advertisement -

ನಾನು ಹುಟ್ಟಿ ಬೆಳೆದ ಊರು ಗೊರೂರು. ನಮ್ಮೂರಿನ ದೇವಸ್ಥಾನಗಳ ಪೈಕಿ ಪುರಾತನವಾದ ಮತ್ತು ಕಲಾತ್ಮಕವಾದ ದೇವಸ್ಥಾನವೆಂದರೆ ಊರಿನ ಪೂರ್ವ ದಿಕ್ಕಿನಲ್ಲಿರುವ ತ್ರಿಕೂಟಲಿಂಗೇಶ್ವರ ಮತ್ತು ಕೈಲಾಸೇಶ್ವರ ದೇವಸ್ಥಾನ. ತ್ರಿಕೂಟಲಿಂಗೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಕಲ್ಲಿನ ಚಪ್ಪರದ ಛಾವಣಿಯಲ್ಲಿ ದೇವಸ್ಥಾನ ಪ್ರತಿಷ್ಠೆ ದಿನಾಂಕ ೨-೩- ೧೧೬೭ ಎಂದು ಕೊರೆಯಲಾಗಿದೆ.

ಈ ದೇವಸ್ಥಾನದ ಒಳಗೆ ನವರಂಗದ ಕಂಬಗಳಲ್ಲಿ ಪ್ರವೇಶ ದ್ವಾರದ ಎರಡು ಬದಿಗಳಲ್ಲಿ ಮತ್ತು ದೇವಸ್ಥಾನದ ಬಲ ಬದಿಯ ಫೌಂಡೇಶನ್ ಕಲ್ಲಿನಲ್ಲಿ ಶಿಲಾ ಶಾಸನಗಳಿವೆ. ಶಾಸನಗಳಲ್ಲಿ ಈ ದೇವಾಲಯ ಹೊಯ್ಸಳರ ೧ನೇ ನರಸಿಂಹನ (ಇವನ ಕಾಲ ಕ್ರಿ.ಶ. ೧೧೫೨-೧೧೭೩) ಕಾಲದಲ್ಲಿ ದ್ವಾರಾವತಿಯಲ್ಲಿ (ಈಗಿನ ಹಳೇಬೀಡು) ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆ ಮಾಡುತ್ತಿರುವಾಗ್ಗೆ ಇವರ ಆಶ್ರಿತನಾದ ವಿಜಯಾದಿತ್ಯ ಹೆಗ್ಗಡೆ ಶತರುದ್ರ ಯಾಗಪುರಿ ಗೊರವೂರಿನಲ್ಲಿ ತ್ರಿಕೂಟಲಿಂಗವನ್ನು ಸ್ಥಾಪಿಸಿದನೆಂದು ಈ ದೇವಾಲಯಕ್ಕಾಗಿ ಮಾವಿನಕೆರೆಯಲ್ಲಿ ಭೂಮಿಯನ್ನು ಬಿಟ್ಟನೆಂದು ಹೇಳಿದೆ.

ತ್ರಿಕೂಟ ಲಿಂಗೇಶ್ವರ ದೇವಾಲಯ ಹೆಸರೇ ಸೂಚಿಸುವಂತೆ ಮೂರು ಲಿಂಗಗಳುಳ್ಳ ದೇವಾಲಯ.ಗರ್ಭಗುಡಿಯಲ್ಲಿ ಒಂದು ಲಿಂಗ ಅದರಿಂದ ಎಡಗಡೆ ಮತ್ತು ಬಲಗಡೆ ಒಂದೊಂದು ಲಿಂಗ. ಪ್ರತಿ ಲಿಂಗದ ಮೇಲೆಯೂ ಸೊಗಸಾದ ಕೆತ್ತನೆ ಕೆಲಸದಕಮಲದ ಮೇಲ್ಛಾವಣಿಯ ಕಲ್ಲು. ಅದೇ ರೀತಿಯ ಕೆತ್ತನೆ ಕೆಲಸದ ಮೇಲ್ಛಾವಣಿಯ ಸುಖನಾಸಿ. ಮುಂದಕ್ಕೆ ವಿಶಾಲ ನವರಂಗ ಕಂಬದ ಕಲ್ಲುಗಳನ್ನು ಕೆಳಗಡೆ ಚೌಕವಾಗಿ ಅದರಿಂದ ಮೇಲ್ಗಡೆ ಚಚ್ಚೌಕವಾಗಿ ಮತ್ತಷ್ಟು ಅಲಂಕಾರವಾಗಿ ಸೊಗಸಾಗಿ ಕಡೆದದುಂಡುಗಳಿಂದ ನಿರ್ಮಿಸಿದ್ದಾರೆ. ಚಾವಣಿಯ ಮೇಲೆ ಮೂರು ಲಿಂಗಗಳ ಮೇಲೆಯೂ ಅಲಂಕಾರವಾದ ಗೋಪುರ ನವರಂಗದ ಮಧ್ಯೆ ನಿಂತರೆ ಮೂರು ಕಡೆಯೂ ಸಮ ಅಳತೆಯಲ್ಲಿ ಮೂರು ಲಿಂಗಗಳೂ ಶೋಭಿಸುತ್ತವೆ. ಎಲ್ಲಕ್ಕೂ ಕಾಣುವಂತೆ ನಡುವೆ ವೃಷಭ. ಹೊರಗಡೆ ನಿಂತು ನೋಡಿದರೆ ಮೂರು ಗೋಪುರಗಳೂ ಸಮ ಅಳತೆಯಲ್ಲಿ ಮೇಲ್ಛಾವಣಿಯ ಮೇಲೆ ಎದ್ದು ಕಾಣುತ್ತವೆ. ದೇವಾಲಯದ ಮೂರು ಲಿಂಗಗಳೂ ಅತಿ ದೊಡ್ಡದೂ ಅಲ್ಲ ಅತಿ ಸಣ್ಣನೂ ಅಲ್ಲ ಮಧ್ಯಮ ಆಕೃತಿ. ತ್ರಿಕೂಟಲಿಂಗೇಶ್ವರ ದೇವಾಲಯದ ಮೂರು ಲಿಂಗಗಳ ಅಕ್ಕಪಕ್ಕದಲ್ಲಿ ಸುಖನಾಸಿಗೆ ಸೇರಿದಂತೆ ಮಹಿಷಾ ಮರ್ಧಿನಿ ವೀರಭದ್ರ ಗಣಪತಿ ನವದುರ್ಗಿಯರು ಸುಬ್ರಮಣ್ಯೇಶ್ವರ ಮೂರ್ತಿಗಳಿವೆ.

- Advertisement -

ಮೂರ್ತಿಗಳೆಲ್ಲಾ ಬೇಲೂರು ಹಳೇಬೀಡು ಮಾದರಿ ಕೆತ್ತನೆಗಳು. ಗರ್ಭಗುಡಿಯ ಬಾಗಿಲು ನಿಲುವಿನಲ್ಲಿ ಅಲಂಕಾರವಾಗಿ ಕೆತ್ತನೆ ಕೆಲಸ ಮಾಡಿದ್ದಾರೆ. ಇದೊಂದು ಕಲಾ ಪೂರ್ಣ ದೇವಸ್ಥಾನ. ತ್ರಿಕೂಟಲಿಂಗೇಶ್ವರ ದೇವಾಲಯದ ಪಕ್ಕದಲ್ಲಿ ಕೈಲಾಸೇಶ್ವರ
ದೇವಸ್ಥಾನವಿದೆ. ಇದು ತಕ್ಕ ಮಟ್ಟಿಗೆ ದೊಡ್ಡ ದೇವಾಲಯ. ಇದರ ಕಲೆ ತ್ರಿಕೂಟಲಿಂಗೇಶ್ವರ ಕಲೆಗಿಂತ ಹಿರಿದು. ಕಂಬಗಳನ್ನು ಹಳೇಬೀಡು ಕಂಬಗಳಂತೆ ಸುಂದರವಾಗಿ ಕಡೆದಿದ್ದಾರೆ. ಈ ದೇವಾಲಯದಲ್ಲಿಯೂ ಗರ್ಭಗುಡಿ ಸುಖನಾಸಿ ಮತ್ತು ನವರಂಗ ಇದೆ. ಇಲ್ಲಿ ನವರಂಗ ವಿಸ್ತಾರವಾಗಿದೆ. ನವರಂಗದ ಮೇಲೆ ಕಡೆದಿರುವ ಕಮಲ ಸಮ ಅಳತೆಯುಳ್ಳದಾಗಿವೆ. ಗರ್ಭಗುಡಿಯಲ್ಲಿ ಈಶ್ವರ ಲಿಂಗವಿದೆ. ಇದು ದೊಡ್ಡದಾಗಿರುವ ಲಿಂಗ. ಕೈಲಾಸೇಶ್ವರ ಲಿಂಗದ ಮುಂದೆ ಬಲಭಾಗ ಸುಕನಾಸಿಯಲ್ಲಿ ಪಾರ್ವತಿ
ಪರಮೇಶ್ವರ ಜೊತೆಯಲ್ಲಿ ಗಣಪತಿ, ಚನ್ನಕೇಶವ, ಸುಬ್ರಮಣ್ಯಸ್ವಾಮಿ, ನಾರಾಯಣಸ್ವಾಮಿ (ಪಾದದಲ್ಲಿ ಆಂಜನೇಯ) ವಿಗ್ರಹಗಳಿವೆ. ತ್ರಿಕೂಟಲಿಂಗೇಶ್ವರ ದೇವಸ್ಥಾನದ ಪ್ರವೇಶದ್ವಾರದ ಎದುರುಗಿರುವ ಲಿಂಗದ ಸುಖನಾಸಿಯಲ್ಲಿರುವ ಬಸವಣ್ಣನ ಪಾದದಲ್ಲಿ ಚಿಕ್ಕದಾದ ಲಿಂಗವಿದೆ ಈ ಲಿಂಗವು ಸೇರಿದರೆ ಪಂಚಲಿಂಗಗಳಾಗುವುದರಿಂದ ನೋಡುಗರಿಗೆ ಪಂಚಲಿಂಗ ದರ್ಶನ ಭಾಗ್ಯ ಲಭ್ಯ. ದೇವಾಲಯಕ್ಕೆ ಸುತ್ತ ಕಾಂಪೌಂಡು ಗೋಡೆ ಇದೆ. ಒಳಭಾಗದಲ್ಲಿ ಸಾಕಷ್ಟು ವಿಶಾಲ ಜಾಗವಿದೆ.
ಒಳಭಾಗದಲ್ಲಿ ಒಂದು ಬಾವಿಯಿದೆ.

ದೇವಸ್ಥಾನದ ಹಿಂಭಾಗ ಒಂದು ಪಾಕಶಾಲೆಯಿದೆ. ಈ ದೇವಸ್ಥಾನದ ಅರ್ಚಕರು ನಾಗಪ್ಪ ಜೋಯಿಸರು. ನಾನು ಊರಿನಲ್ಲಿದ್ದಾಗ ವರ್ಷಕ್ಕೊಮ್ಮೆ ನಾವು ಕುಟುಂಬ ತಪ್ಪದೇ ಸಂಜೆ ಈ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿದ್ದವು.

ಅದೊಂದು ದಿನ ಮಾತ್ರ ದೇವಸ್ಥಾನ ಜನರಿಂದ ತುಂಬಿರುತ್ತಿತ್ತು. ನಾಗಪ್ಪ ಜೋಯಿಸರು ದೇವಸ್ಥಾನದಲ್ಲಿ ಮೈಕ್ ಹಾಕಿಸಿ ಕೇಳಿ ಬರುತ್ತಿದ್ದ ಭಕ್ತಿ ಹಾಡುಗಳು ನಮ್ಮ ಮನೆಯವರೆಗೂ ಕೇಳಿಸುತ್ತಿತ್ತು.

- Advertisement -

ನಮ್ಮ ಮನೆ ಇದ್ದಿದ್ದು ಗೊರೂರು ಅರಕಲಗೊಡು ಮುಖ್ಯ ರಸ್ತೆ ಬಳಿ ಆದರೂ ಅಲ್ಲಿಯವರೆಗೂ ಸೌಂಡ್ ಕೇಳಿಸುತ್ತಿತ್ತು. ದೇವಸ್ಥಾನದಲ್ಲಿ ಒಂದು ಬಿಲ್ವ ಪತ್ರೆ ಮರವಿತ್ತು. ನಮ್ಮೂರಿನ ಲಕ್ಷ್ಮಮ್ಮ ಎನ್ನುವವರು ಶಿವನ ಭಕ್ತರಿದ್ದರು. ವಿಶೇಷವಾಗಿ ಧರ್ಮಸ್ಥಳದ ಮಂಜುನಾಥನ ಭಕ್ತರಾಗಿದ್ದರು. ಅವರನ್ನು ಬಿಲ್ವ ಪತ್ರದಮ್ಮ ಎಂತೆಲೂ ಸೌದೆ ಮಂಡಿ ಇಟ್ಟುಕೊಂಡು ಇದ್ದಿಲು ಸೌದೆ
ಮಾರುತ್ತಿದ್ದುದರಿಂದ ಸೌದೆಯಮ್ಮ ಎಂದು ಕರೆಯುತ್ತಿದ್ದವು. ಇವರು ಒಂದಿಷ್ಟು ಭಕ್ತಿಗೀತೆ ಹಾಡುತ್ತಿದ್ದರು. ಅವರ ಒಂದು ಹಾಡು ಸ್ವಾರಸ್ಯಕರವಾಗಿತ್ತು. ಒಂದು ದಳದ ಕಮಲದಿಂದ ಎದ್ದು ಬಂದ ಲಿಂಗವೇ ಸತ್ಯ ಶಾಂತಿ ಲಿಂಗವೇ ತ್ಯಾಗ ಮೂರ್ತಿ ಲಿಂಗವೇ..ಎರಡು ದಳದ ಕಮಲದಿಂದನಡೆದು ಬಂದ ಲಿಂಗವೇ.. ಮೂರು ದಳದ ಕಮಲದಿಂದ ಮೂಡಿ ಬಂದ ಲಿಂಗವೇ..ನಾಲ್ಕು ದಳದ ಕಮಲದಿಂದ ಅರಳಿ ಬಂದ  ಲಿಂಗವೇ.. ಹೀಗೆ ಹೇಳುತ್ತಾ ಹೋದರೆ ಐದು ದಾಟಿ ಐವತ್ತಾದರೂ ಮುಗಿಯುತ್ತಿರಲಿಲ್ಲ. ಸೆಂಚುರಿಯವರೆಗೆ ನಾವು ಅಲ್ಲಿರುತ್ತಿರಲಿಲ್ಲ.

ಇತ್ತೀಚೆಗೆ ಗೊರೂರು ಜಾತ್ರೆಗೆ ಆಹ್ವಾನ ಕೊಟ್ಟ ಊರಿನ ಕೆಲ ಮಂದಿ ಅನಂತಣ್ಣ, ನೀವು ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನ, ಜಾತ್ರೆ ಬಗ್ಗೆ ಎಲ್ಲಾ ಬರೆದಿದ್ದೀರಿ. ಹೊಯ್ಸಳರ ಕಾಲದ ಈ ದೇವಸ್ಥಾನದ ಬಗ್ಗೆಯೂ ಬರೆಯಿರಿ. ಈ ದೇವಸ್ಥಾನವನ್ನು ಪುನಶ್ಚೇತನಗೊಳಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಧನ ಸಹಾಯ ಪಡೆದು ಅಭಿವೃದ್ಧಿಪಡಿಸಬೇಕಿದೆ ಎಂದರು.

ಹೇಮಾವತಿ ಯಗಚಿ ನದಿ ಸಂಗಮವಾಗುತ್ತಿದ್ದ ಸ್ಥಳದಲ್ಲಿದ್ದ ಸಂಗಮೇಶ್ವರ ಲಿಂಗ ಮತ್ತು ಪೊನ್ನಾಥಪುರದಲ್ಲಿದ್ದ ಲಕ್ಷ್ಮಿ ನರಸಿಂಹ ದೇವರುಗಳನ್ನು ತಂದು ಹೇಮಾವತಿ ವಸತಿ ಕಾಲನಿಯ ಸಂಗಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಸಂಗಮೇಶ್ವರ ಲಿಂಗ ಸ್ಥಾಪನೆ ಪೀಠ ಬಹಳ ಗಾತ್ರವಾಗಿದ್ದು ಅಲ್ಲಿಂದ ತರುವಾಗ ಭಿನ್ನವಾದುದರಿಂದ ಅದನ್ನು ಕೈಲಾಸೇಶ್ವರ ದೇವಸ್ಥಾನದ ಪಾಕಶಾಲೆಯಲ್ಲಿ ಇಟ್ಟಿದ್ದರು. ಮೂಲ ಲಿಂಗ, ಗರುಡಗಂಬ ಮತ್ತು ಅದಕ್ಕೆ ಲಗತ್ತಾಗಿದ್ದ ಪೀಠ ತರಲಾಗದ ಕಾರಣ ಅದು ಸಂಗಮದಲ್ಲಿ (ಹೇಮಾವತಿ ಜಲಾಶಯದ ಹಿನ್ನಿರಿನಲ್ಲಿ) ಮುಳುಗಿದೆ ಎಂದು ಅರ್ಚಕರು ಈ ಹಿಂದೆ ಹೇಳಿದ್ದರು.
ಪೊನ್ನಾಥಪುರದ ಪಕ್ಕದ ಕಾಕನಹಳ್ಳಿಯಲ್ಲಿ ಸಂಗಮೇಶ್ವರಪ್ಪ ಎಂಬ ಜಮೀನುದಾರ ಈಶ್ವರ ಭಕ್ತರೊಬ್ಬರಿದ್ದರಂತೆ.

ಅವರಿಗೆ ಸ್ವಪ್ನದಲ್ಲಿ ಈಶ್ವರನು ಕಾಣಿಸಿಕೊಂಡು ಯಗಚಿ-ಹೇಮಾವತಿ ನದಿ ಸಂಗಮದ ಬಳಿ ನನ್ನ ಲಿಂಗವನ್ನು ಸ್ಥಾಪಿಸು ಎಂದು ಅಣತಿಯಿತ್ತು, ಅಂತೆಯೇ ಸಂಗಮೇಶ್ವರನು ನಡೆದುಕೊಂಡು ಈ ದೇವಸ್ಥಾನದ ಪೂಜಾ ಕಾರ್ಯ ನಡೆಸಲು ಜಮೀನು ದತ್ತಿ ಬಿಟ್ಟಿರಂತೆ. ಈ ದತ್ತಿ ಜಮೀನನ್ನು ವರ್ಷಕ್ಕೊಬ್ಬ ಅರ್ಚಕರು ಪೂಜೆ ನಡೆಸಿಕೊಂಡು ಸಾಗುವಳಿ ಮಾಡಿಕೊಂಡು ಬರುತ್ತಿದ್ದರಂತೆ.

ಲಕ್ಷ್ಮಿ ನರಸಿಂಹ ದೇವಸ್ಥಾನವನ್ನು ಪೊನ್ನಾಥಪುರದಲ್ಲಿ ದಿವಾನ್ ಪೂರ್ಣಯ್ಯರ ಕಾಲದಲ್ಲಿ ಖಾಯಂ ಗುತ್ತೆದಾರರು
(ಜೋಡಿದಾರರು) ನಿರ್ಮಿಸಿದರಂತೆ. ಗೊರೂರಿನಲ್ಲಿ ಪಶ್ಚಿಮ ದಿಕ್ಕಿನಲ್ಲಿ ಯೋಗಾನೃಸಿಂಹನು ಯೋಗದಲ್ಲಿ ಕುಳಿತಿದ್ದರಿಂದ ಕೋಪಗೊಂಡ ಲಕ್ಷ್ಮಿ ಪೂರ್ವ ದಿಕ್ಕಿನಲ್ಲಿದ್ದ ಪೊನ್ನಾಥಪುರಕ್ಕೆ ಹೋಗಿ ಅಲ್ಲೇ ಇದ್ದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನೆಲೆಗೊಂಡಳೆಂದು ಪ್ರತೀತಿ ಇದೆ. ಸಂಗಮೇಶ್ವರ ದೇವಸ್ಥಾನ ಸಾಲಂಕೃತವಾಗಿದೆ. ಬಲಬದಿಯ
ಗರ್ಭ ಗುಡಿಯಲ್ಲಿ ಸಂಗಮೇಶ್ವರ ಲಿಂಗ ಸುಖನಾಸಿಯಲ್ಲಿ ಲಿಂಗ ಕಾಣುವಂತೆ ವೃಷಭವಿದೆ. ಸುಖನಾಸಿಯ ಬಾಗಿಲ ಬಲಕ್ಕೆ ಗಣೇಶ ಮತ್ತು ಎಡಗಡೆಗೆ ಪಾರ್ವತಿ ವಿಗ್ರಹಗಳಿವೆ. ಬಲಗಡೆಯ ಗರ್ಭಗುಡಿಯಲ್ಲಿ ಲಕ್ಷ್ಮಿ ನರಸಿಂಹ ವಿಗ್ರಹವಿದೆ. ನರಸಿಂಹನ ತೊಡೆಯ ಮೇಲೆ ಲಕ್ಷ್ಮಿ ಕುಳಿತಿದ್ದಾಳೆ. ಈ ವಿಗ್ರಹಕ್ಕೆ ಪ್ರಭಾವಳಿ ಇದೆ. ಸುಖನಾಸಿಯಲ್ಲಿ ಬಲಗಡೆಗೆ ಸತ್ಯನಾರಾಯಣಸ್ವಾಮಿ ವಿಗ್ರಹವಿದೆ. ಶ್ರೀದೇವಿ ಭೂದೇವಿ ಮತ್ತು ನಾರಾಯಣ ಉತ್ಸವ ದೇವರು ಇದಕ್ಕೆ ಲಗತ್ತಾಗಿ ಪ್ರಭಾವಳೆ ಅಡ್ಡೆಯನ್ನು ಬಲಬದಿ ಇರಿಸಲಾಗಿದೆ. ನವರಂಗವನ್ನು ಸಭಾಂಗಣದಂತೆ ನೆಲಹಾಸನ್ನು
ಮೊಜೈಕ್‌ನಲ್ಲಿ ಮಾಡಲಾಗಿದೆ. ಅರ್ಧ ಗೋಡೆ ಇಟ್ಟಿಗೆಯಲ್ಲೂ ಉಳಿದರ್ಧ ಕಬ್ಬಿಣದ ಸರಳುಗಳಿಂದ ಮಾಡಲ್ಪಟ್ಟಿದ್ದು ಗ್ಲಾಸ್ ಫ್ರೇಮ್‌ನ್ನು ಹೊದಿಸಲಾಗಿದೆ.

ನವರಂಗದಲ್ಲಿ ತೂಗು ಹಾಕಿರುವ ಗಜೇಂದ್ರ ಮೋಕ್ಷದ ಚಿತ್ರವಿರುವ ಬೃಹದಾಕಾರದ ಫೋಟೋವಿದೆ. ನವರಂಗದಲ್ಲಿ ಎರಡು ಮಂಟಪಗಳಿವೆ. ಪ್ರವೇಶದ್ವಾರದ ಮೇಲ್ಟಾವಣಿಯಲ್ಲಿ ಗಣೇಶ ಮೂರ್ತಿಯಿದೆ. ಹಿಂಭಾಗದಲ್ಲಿ ಎರಡೂ ದೇವರುಗಳ ಗರ್ಭಗುಡಿಗೆ ಹೊಂದಿಕೊಂಡಂತೆ ೨ ಗೋಪುರಗಳಿವೆ. ಲಕ್ಷ್ಮಿ ನರಸಿಂಹ ಗರ್ಭಗುಡಿಗೆ ಹೊಂದಿಕೊಂಡಂತಿರುವ ಗೋಪುರದಲ್ಲಿ ವಿಷ್ಣುವಿನ ಹತ್ತು ಅವತಾರಗಳ ಪ್ರತಿಮೆಗಳಿವೆ. ಶ್ರೀ ಯೋಗ ನೃಸಿಂಹಸ್ವಾಮಿ
ದೇವಸ್ಥಾನದಲ್ಲಿರುವ ಹತ್ತು ಅವತಾರಗಳ ಮೂರ್ತಿಗಳಿಗೂ ಇವುಗಳಿಗೂ ಕಲೆಗಾರಿಕೆಯಲ್ಲಿ ವ್ಯತ್ಯಾಸವಿದ್ದರೂ ಶಿಲ್ಪಿ ಮಾತ್ರ ಒಬ್ಬನೇ ಅವರೇ ದೀನ್ ಬಾಲನ್. ಮೇಲಿನ ಹಂತದಲ್ಲಿ ನಾಲ್ಕು ದಿಕ್ಕಿಗೂ ಉಗ್ರನರಸಿಂಹ, ಗರುಡನ ವಿಗ್ರಹಗಳಿವೆ. ಸಂಗಮೇಶ್ವರ ಗರ್ಭಗುಡಿಗೆ ಹೊಂದಿಕೊಂಡಂತಿರುವ ಗೋಪುರದಲ್ಲಿ ಬ್ರಹ್ಮ, ಚಾಮುಂಡೇಶ್ವರಿ, ಗಂಗಾವತರಣ, ನಟರಾಜ, ನಂದಿ, ಅರ್ಧನಾರೀಶ್ವರ, ಶಿವಪಾರ್ವತಿ, ಭೂತಗಣ ಮೂರ್ತಿಗಳಿವೆ.

ಈಶ್ವರ (ಲಿಂಗ) ವಿಷ್ಣು (ನರಸಿಂಹ) ದೇವರುಗಳನ್ನು ಒಂದೇ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವುದರಿಂದ ಈ ದೇವಸ್ಥಾನವನ್ನು ಹರಿಹರೇಶ್ವರ ದೇವಸ್ಥಾನವೆಂತಲೂ ಕರೆಯುತ್ತಾರೆ. ಈ ದೇವಸ್ಥಾನದ ಎರಡು ಬದಿಗೂ ನವಗ್ರಹ ಮತ್ತು ವಿಘ್ನೇಶ್ವರ ಮೂರ್ತಿಗಳಿಗೆಂದು ಗರ್ಭಗುಡಿಯನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನದ ಸುತ್ತ ಮುಳ್ಳು ತಂತಿ ಬೇಲಿ ಇದೆ. ಒಳಗೆ ಜಾಗ ಸಾಕಷ್ಟು ವಿಸ್ತಾರವಾಗಿದ್ದು ಹೂ ಗಿಡ ಮರಗಳನ್ನು ಬೆಳೆಸಲಾಗಿದೆ. ಕೂರಲು ಕಲ್ಲು ಆಸನಗಳಿವೆ. ಇದೇ ರೀತಿ ಹೊಯ್ಸಳರ ಕಾಲದ ತ್ರಿಕೂಟ ಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿದರೆ
ಒಳಿತು.


ಗೊರೂರು ಅನಂತರಾಜು,
ಹಾಸನ.
ಮೊಬೈಲ್: ೯೪೪೯೪೬೨೮೭೯.

ವಿಳಾಸ: ಹುಣಸಿನಕೆರೆ ಬಡಾವಣೆ,
೨೯ನೇ ವಾಡ್೯,
ಶ್ರೀ ಶನೈಶ್ಚರ ದೇವಸ್ಥಾನ ರಸ್ತೆ,
ಹಾಸನ.

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group