spot_img
spot_img

Shishunala Sharif Information in Kannada-ಶಿಶುನಾಳ ಶರೀಫರು

Must Read

- Advertisement -

ಶಿಶುನಾಳ ಶರೀಫರು ಈಗಿನ ಹಾವೇರಿ  ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುನಾಳ ಗ್ರಾಮದ ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬ ಮತ್ತು ಹಜ್ಜೂಮ ಇವರ ಮಗನಾಗಿ ಮಾರ್ಚ್ 7, 1819 ರಂದು ಜನಿಸಿದರು.  ಅವರ ಮೂಲ ಹೆಸರು ಮಹಮ್ಮದ ಶರೀಫ.

ಕೂಲಿಮಠದಲ್ಲಿದ್ದು ಮುಲ್ಕೀ ಪರೀಕ್ಷೆಯನ್ನು ಪಾಸುಮಾಡಿದ ನಂತರದಲ್ಲಿ ಶರೀಫರು ಮೋಡಿ ಭಾಷೆಯನ್ನು ಓದಿ ಬರೆಯುವುದಕ್ಕೂ ಕಲಿತುಕೊಂಡರು.  ರೂಢಿಯ ಬಲದಿಂದ ಉರ್ದುವನ್ನು ಕರಗತ ಮಾಡಿಕೊಂಡರು.  ಇವೆಲ್ಲಕ್ಕೂ ಮಿಗಿಲಾಗಿ ಚಿಕ್ಕಂದಿನಲ್ಲಿಯೇ ರಾಮಾಯಣ, ಮಹಾಭಾರತ, ದೇವಿಪುರಾಣ, ಪ್ರಭುಲಿಂಗಲೀಲೆಯ ಪುಟಗಳನ್ನು ತಿರುವಿ ಹಾಕಿದ್ದರು.

ಮೋಜು ಮಜಲುಗಳಲ್ಲಿ ವೇಷಗಾರರ ಜೊತೆ ವೇಷ ತೊಡುತ್ತಿದ್ದರು. ಬಯಲಾಟಗಳಲ್ಲಿ ಬಣ್ಣ ಹಚ್ಚಿ ಪಾತ್ರವಹಿಸುವುದು, ಸರ್ವಜ್ಞ, ಸರ್ಪಭೂಷಣ ಶಿವಯೋಗಿಗಳ ಕವಿಗಳ ಕಾವ್ಯವಾಚನ ಮಾಡುವುದು, ಶಾಸ್ತ್ರ ಪುರಾಣ ನಡೆದಲ್ಲಿ ತಪ್ಪದೆ ಹಾಜರಾಗಿ ಶ್ರವಣ ಮಾಡುವುದು, ಮೊಹರಮ್ ಸಂದರ್ಭದಲ್ಲಿ ರಿವಾಯತ್ ಪದಗಳನ್ನು ರಚಿಸಿ ‘ಹೆಜ್ಜೆಮೇಳ’ ಕುಣಿಸುವುದು; ಇವೇ ಮೊದಲಾದ ವಿಷಯಗಳಲ್ಲಿ ಅವರಿಗೆ ಅತೀವ ಆಸಕ್ತಿಯಿತ್ತು.  

- Advertisement -

ಮುಲ್ಕೀ ಪರೀಕ್ಷೆ ಪಾಸುಮಾಡಿದ ತರುವಾಯ ಶರೀಫರು ಕೆಲಕಾಲ ಶಿಶುನಾಳದ ನೆರೆಯ ಗ್ರಾಮಗಳಾದ ಮಂಡಿಗನಾಳ, ಕ್ಯಾಲಕೊಂಡ, ಪಾಣಿಗಟ್ಟಿ, ಎರಿಬೂದಿಹಾಳ, ಗುಂಜಳ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು.

ಅಧ್ಯಾತ್ಮದ ಹಿಂದೆ ಅವರ ಮನಸ್ಸು ಹೋದದ್ದರಿಂದ ಶಿಕ್ಷಕ ವೃತ್ತಿಗೆ ಶರಣು ಹೊಡೆದು ಮನೆ ಮುಂದೆ ಕಟ್ಟೆಯಲ್ಲಿ ಕುಳಿತು ಸಹಪಾಠಿಗಳೊಂದಿಗೆ ಅಧ್ಯಾತ್ಮ ಚರ್ಚೆ ನಡೆಸುವ ಪರಿಪಾಠ ಹಚ್ಚಿಕೊಂಡರು.  ದಿನೇ ದಿನೇ ಈ ಕುರಿತು ಆಸಕ್ತಿ ಹೆಚ್ಚುತ್ತಿದ್ದ ಅವರ ಮನ ನುರಿತ ಗುರುವಿಗಾಗಿ ಹಾತೊರೆಯುತ್ತಿತ್ತು.

ಹೀಗೆ ಅವರ ಮನ ತುಂಬು ಹಂಬಲದ ಅರಸುವಿಕೆಯಲ್ಲಿದ್ದಾಗ ಅವರಿಗೆ ಕಳಸದ ಗುರುಗೋವಿಂದಭಟ್ಟರ ದರ್ಶನ ದೊರಕಿತು.  ಶರೀಫರ ನಿಷ್ಕಪಟ ಆತ್ಮಾರ್ಪಣ ಭಕ್ತಿಭಾವಕ್ಕೆ ಗುರುಗೋವಿಂದರು ಒಲಿದಿದ್ದರು. ಜಾತಿ ವ್ಯಾಮೋಹಿಗಳ ವಿರೋಧಗಳು ಗುರುವನ್ನಾಗಲಿ, ಶಿಷ್ಯನನ್ನಾಗಲೀ ಕಿಂಚಿತ್ತೂ ಅಲುಗಿಸಲಿಲ್ಲ.  

- Advertisement -

“ನನ್ನೊಳಗ ನಾ ತಿಳಕೊಂಡೆ

ಎನಗೆ ಬೇಕಾದ ಗಂಡನ್ನ ಮಾಡಿಕೊಂಡೆ

ಆಜ್ಞಾಪ್ರಕಾರ ನಡಕೊಂಡೆ

ಗುರೂಪದೇಶ ಪಡಕೊಂಡೆ

ಈ ಭವಕೆ ಬಾರದಂತೆ ಮಾಡಿಕೊಂಡೆ

ಗುರುಗೋವಿಂದನ ಪಾದಾ ಹಿಡಕೊಂಡೆ”

ಎಂದು ಗುರುವನ್ನು ಸೇವಿಸಿದ ಶರೀಫರು, ಗುರುವಿನ ಉಪದೇಶ ದೊರೆತು ಸುಜ್ಞಾನದಿಂದ ಪ್ರಕಾಶಿಸುತ್ತಾ,  ಅಜ್ಞಾನವೆಂಬ ಕತ್ತಲೆಯನ್ನು ಕಳೆಯಲು ಕಂಕಣಬದ್ಧರಾಗಿ ಸಂಚಾರಿಯಾದರು.

ಮಗನ ಅಲೆದಾಟದ ಚಟುವಟಿಕೆಗಳು ತಂದೆ ತಾಯಿಗಳಿಗೆ ಒಗಟಾಗಿ ಪರಿಣಮಿಸಿದವು. ಮದುವೆ ಮಾಡಿದರೆ ಸರಿಹೋದಾನೆಂದು ಎಣಿಸಿದರು. ಅಧ್ಯಾತ್ಮದಲ್ಲಿ ತಲ್ಲೀನನಾಗಿದ್ದರೂ ಶರೀಫ ತಂದೆ ತಾಯಂದರಿಗೆ ಎದುರಾಡದೆ ವಿದೇಯನಾಗಿದ್ದ. ವಿವಾಹಕ್ಕೆ ಗುರು ಗೋವಿಂದಭಟ್ಟರ ಒಪ್ಪಿಗೆಯೂ ದೊರೆತು ಕುಂದಗೋಳದ ಫಾತೀಮಾ ಎಂಬ ಕನ್ಯೆಯ ಜೊತೆಯಲ್ಲಿ ವಿವಾಹ ಏರ್ಪಟ್ಟಿತು. ತಮ್ಮ ಮನ ಅಧ್ಯಾತ್ಮದಲ್ಲಿದ್ದರೂ ತಮ್ಮ ಹೆಂಡತಿಯನ್ನು ಶರೀಫರು ಅತ್ಯಂತ ಗೌರವದಿಂದ ಕಂಡರು.

ನನ್ನ ಹೇಣ್ತಿ ನೀ

ನನ್ನ ಹೇಣ್ತಿ

ನಿನ್ನ ಹೆಸರೇನ್ಹೇಳಲೆ ಗುಣವಂತೆ

ಮೊದಲಿಗೆ ತಾಯಾಡಿ ನನ್ನ ಹೇಣ್ತಿ

ಸದನಕ್ಕೆ ಸೊಸಿಯಾದೆ ನನ್ನ ಹೇಣ್ತೆ ಮತ್ತೆ

ಮುದದಿಂದ ಮೋಹಿಸಿ ಮದುವ್ಯಾದವನಿಗೆ

ಮಗಳೆಂದೆನಿಸಿದೆ ನನ್ನ ಹೇಣ್ತಿ ತುತ್ತು ನೀಡಿ

ಎನ್ನೆತ್ತಿ ಆಡಿಸಿದ ಹೆತ್ತವ್ವನೆನಸಿದಿ ನನ್ನ ಹೇಣ್ತಿ

ಚಿಕ್ಕಮ್ಮನ ಸರಿ ನೀ ನನ್ನ ಹೇಣ್ತಿ ನನಗ

ತಕ್ಕವಳೆನಿಸಿದಿ ನನ್ನ ಹೇಣ್ತಿ”

ಎಂದು ಅವರು ತಮ್ಮ ಹೆಂಡತಿಗೆ ಕೃತಜ್ಞತೆ ತೋರಿದ್ದಾರೆ. ಈ ದಂಪತಿಗಳಿಗೆ ಹೆಣ್ಣುಕೂಸೊಂದು ಜನಿಸಿತು. ಆದರೆ ಈ ನಶ್ವರತೆಯ ಬದುಕಿನಲ್ಲಿ ಅವರ ಮಗು, ಹೆಂಡತಿ, ತಂದೆ-ತಾಯಿ, ಕೊನೆಗೆ ಅವರಿಗೆ ಮುಕ್ತಿ ತೋರಿದ ಗುರುಗೋವಿಂದರೂ ದೇಹ ತ್ಯಾಗ ಮಾಡಿದಾಗ ಶರೀಫರು ಮನಃಶ್ಯಾಂತಿಗಾಗಿ ಸಾಧು ಸತ್ಪುರುಷರ ಹಾಗೂ ಪುಣ್ಯಕ್ಷೇತ್ರಗಳ ದರ್ಶನ ಪಡೆಯಲು ತೀರ್ಥಯಾತ್ರೆ ಕೈಗೊಂಡರು.  ಶಿರಹಟ್ಟಿ ಫಕೀರಸ್ವಾಮಿ, ವನಸಿಗ್ಗಲಿಯ  ರಾಮಲಿಂಗ ಮೂರ್ತಿ ಸದ್ಗುರುಗಳನ್ನು ದರ್ಶಿಸಿದರು.  ಮೈಲಾರ ಮಹಾದೇವ, ಸವದತ್ತಿ ಬಳಿಯ ಏಳುಕೊಳ್ಳದ ಎಲ್ಲಮ್ಮದೇವಿ, ಚೆನ್ನಬಸವಣ್ಣನ ತಾಣವಾದ ಉಳವಿಗಳನ್ನು ಸಂದರ್ಶಿಸಿದರು.  

ತಮ್ಮ ಕಾಲದ ಸಾಧು-ಸಂತರಾದ ಶ್ರೀ ಚಿದಂಬರ ದೀಕ್ಷಿತರು, ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು, ಗುಡಗೇರಿಯ ಕಲ್ಮಠದ ಸಂಗಮೇಶ್ವರರು, ಅಂಕಲಗಿಯ ಶ್ರೀ ಅಡವಿ ಸ್ವಾಮಿಗಳು, ಅಗಡಿಯ ಶೇಷಾಚಲದ ಸ್ವಾಮಿಗಳು, ಗದುಗಿನ ಶ್ರೀ ಶಿವಾನಂದರು, ಗರಗದ ಶ್ರೀ ಮಡಿವಾಳಪ್ಪನವರು, ನವಲಗುಂದದ ಶ್ರೀ ನಾಗಲಿಂಗಪ್ಪನವರು, ಅವರಾಡಿ ಫಲಾಹಾರ ಸ್ವಾಮಿಗಳು, ವಿಶ್ವಕರ್ಮದ ಪ್ರಭುಸ್ವಾಮಿಗಳು ಹಾಗೂ  ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರು ಮುಂತಾದವರನ್ನೆಲ್ಲಾ ಭೇಟಿಮಾಡಿದ ಶಿಶುನಾಳ ಶರೀಫರು  ಹೃದಯ ತುಂಬಿ ಅವರ ಸದ್ಗುಣಗಳನ್ನು ಬಣ್ಣಿಸಿ ಹಾಡಿದರು.  

ಅನುಭಾವ ಕವಿಗಳಾದ ಶರೀಫರು ತಾವು ಕಂಡ ಬೆಳಕನ್ನು ಇತರರೂ ಕಂಡು ಪುನೀತರಾಗಬೇಕೆಂಬ ಸದುದ್ದೇಶದಿಂದ ಹಲವಾರು ಪದ್ಯಗಳನ್ನು ರಚಿಸಿದರು. ಈ ಪದ್ಯಗಳಾದರೋ ಕಾವ್ಯ ಸೃಷ್ಟಿಗೆಂದು ರಚಿಸಿದ ಕಾವ್ಯಗಳಾಗಿರದೆ, ಜನ ಬದುಕಬೇಕೆಂದು, ಹಾಗೂ ಧರ್ಮ ಮಾರ್ಗದಿಂದ ಬಾಳಿ ಜೀವನ್ಮುಕ್ತರಾಗಬೇಕೆಂಬ ಘನ ಉದ್ದೇಶದಿಂದ ರಚಿಸಿದ ಕಾವ್ಯಗಳಾಗಿವೆ. ಶರೀಫರ ಕಾವ್ಯ ವೈವಿಧ್ಯಮಯ. ಅವರು ತತ್ವಪದ ಹಾಡಿ ಬೋಧಿಸಿದರು. ದಂಡಕ ಹೇಳಿ ದೇವ-ದೇವಿಯರನ್ನು ಸ್ತುತಿಸಿದರು. ಕಾಲಜ್ಞಾನ ನುಡಿದು ಜನರನ್ನು ಎಚ್ಚರಿಸಿದರು. ಲಾವಣಿ ಹಾಡಿ ನೀತಿ ಬೋಧಿಸಿದರು. ಹೋಳೀ ಹಾಡು ಹೇಳಿ ಚರಿತ್ರೆಯನ್ನು ವಿವರಿಸಿದರು. ಮಂಗಳಾರತಿ ಹಾಡಿ ಸರ್ವರಿಗೆ ಮಂಗಳ ಬಯಸಿದರು. ಅವರು ಜೀವನದ ನಾನಾ ರಂಗಗಳಲ್ಲಿ ಸುಳಿದಾಡಿ ಅನುಭವ ಪಡೆದರು. ಆ ಅಲೌಕಿಕ ಪರಿಜ್ಞಾನದ ಕಣಜವನ್ನೇ ತಮ್ಮ ಕಾವ್ಯಗಳಲ್ಲಿ ತುಂಬಿದರು. ಜೀವನದ ನಿತ್ಯ ಘಟನೆಗಳನ್ನೇ ವಸ್ತುವನ್ನಾಗಿ ಆರಿಸಿಕೊಂಡು, ಇವುಗಳಲ್ಲಿ ಸಾಮಾಜಿಕ ರೀತಿ-ನೀತಿ, ಹಾವ-ಭಾವ, ಬೆಡಗು-ಬಿನ್ನಾಣಗಳನ್ನು ಒಪ್ಪಿಟ್ಟು ಭಕ್ತಿರಸದೊಂದಿಗೆ ಹಾಡಿದರು.

ಗುಡಿಯ ನೋಡಿರಣ್ಣಾ ದೇಹದ

ಗುಡಿಯ ನೋಡಿರಣ್ಣಾ

ಗುಡಿಯ ನೋಡಿರಿದು 

ಪೊಡವಿಗೆ ಒಡೆಯನು

ಅಡಗಿಕೊಂಡು ಕಡು ಬೆಡಗಿನೊಳಿರುತಿಹ”

ಎಂದು ಹಾಡಿ, ದೇವರನ್ನು ಬಾಹ್ಯದಲ್ಲರಸದೆ ತಮ್ಮ ಅಂತರಂಗದಲ್ಲಿಯೇ ಕಾಣಬೇಕೆಂದು ಬೋಧಿಸಿದರು.

ಸಂಸಾರದಿಂದ ಸದ್ಗತಿ ಹೊಂದಿ

ಹವಣರಿತು ಮಾಯೆಯ ಜಯಿಸಿ

ಮರಣ ಗೆಲಿದವನೇ ಶಿವಯೋಗಿ”

ಎಂದು ಒಂದೆಡೆ ಸ್ವಯಂ ಶರೀಫರೇ ಹೇಳಿರುವಂತೆ, ವಿಷಯ ಸುಖದಿಂದ ಜನರ ಲಕ್ಷಣವನ್ನು ಶಿವಯೋಗ ಮಾರ್ಗದೆಡೆಗೆ ತಿರುಗಿಸಲು ಶ್ರಮಿಸಿದ ಶಿಶುನಾಳ ಶರೀಫರು ‘ಶರೀಫ ಶಿವಯೋಗಿ’ಗಳೆಂದೇ ಜನಮಾನಸದಲ್ಲಿ ಪ್ರತಿಷ್ಠಾಪಿತರಾದರು.

ತಮ್ಮ ಅವಸಾನಕಾಲವನ್ನು ಮುಂಚೆಯೇ ಮನಗಂಡ ಶರೀಫರು ಅದಕ್ಕಾಗಿ ದುಃಖಪಡದೆ ತಾವು ತಮ್ಮ ಜೀವಿತ ಅವಧಿಯಲ್ಲಿ ಯಾವ ತತ್ವಗಳಿಗಾಗಿ ಬದುಕನ್ನು ಸವೆಸಿದರೋ ಅವುಗಳ ಅನುಷ್ಠಾನಕ್ಕೆ ಕರೆಕೊಟ್ಟರು.  

1889 ರ ವರ್ಷದಲ್ಲಿ ಶಿಶುನಾಳ ಶರೀಫರು ಮರಣ ಹೊಂದಿದ ಕೂಡಲೇ ಅವರ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ಜರುಗಿಸಬೇಕೋ ಅಥವಾ ಮುಸ್ಲಿಂ ಸಂಪ್ರದಾಯದಂತೆ ಜರುಗಿಸಬೇಕೋ ಎಂದು ಅವರ ಶಿಷ್ಯರಲ್ಲಿ ಗೊಂದಲವುಂಟಾಯಿತು. ಕೊನೆಗೆ ಈರ್ವ ಪಂಗಡಗಳಲ್ಲಿ ಒಡಂಬಡಿಕೆಯಾಗಿ ಒಂದು ಕಡೆ ಕುರಾನಿನ ಪಠಣವೂ ಮತ್ತೊಂದೆಡೆ ಮಂತ್ರಗಳ ಪಠಣವೂ ನಡೆದವು.  ‘ಇವ ನಮ್ಮವ, ಇವ ನಮ್ಮವ’ ಎನ್ನುವ ಅಭಿಮಾನದಿಂದ ಎಲ್ಲರೂ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು.  ಶರೀಫರು ನಿಧನರಾದ ಹತ್ತು ವರ್ಷದ ನಂತರದಲ್ಲಿ ಅವರ ಗದ್ದುಗೆಯಲ್ಲಿ ಅಪಾರ ಶಿಷ್ಯ ಬಳಗದವರಿಂದ ಪೂಜೆಗೊಳ್ಳಲ್ಪಡುವ ಸಂಪ್ರದಾಯ ಪ್ರಾರಂಭಗೊಂಡು ನಿರಂತರವಾಗಿ ಮುಂದುವರೆಯುತ್ತಿದೆ. ಸರ್ವಮತದವರೂ ಶರೀಫಜ್ಜನಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವುದನ್ನು ಇಂದೂ ಕಾಣಬಹುದಾಗಿದೆ. ಅವರು ರಚಿಸಿದ ಪದಗಳಂತೂ ನಿರಂತರ ಪ್ರವಹಿನಿಯಾಗಿ ಕನ್ನಡ ಜನಪದದಲ್ಲಿ ಹಾಸುಹೊಕ್ಕಾಗಿದೆ. ಈ ಮಹಾನ್ ಚೇತನಕ್ಕೆ ಕರ್ನಾಟಕ ಶಿಕ್ಷಕರ ಬಳಗದ ವತಿಯಿಂದ ನಮ್ಮ ಭಕ್ತಿಯ ನಮನ.


 ಹೇಮಂತ ಚಿನ್ನು 

 ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ನೆತ್ತಿಗೇರಿದ ಸಿಟ್ಟು ಇಳಿಸೋದು ಹೀಗೆ

ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ ಎಂಬ ಮಾತು ಎಲ್ಲರಿಗೂ ಗೊತ್ತುಂಟು ಆದರೂ ಸಿಟ್ಟನ್ನು ನಿಯಂತ್ರದಲ್ಲಿರಿಸಲು ಹರಸಾಹಸ ಪಡುತ್ತೇವೆ. ಒಂದೊಂದು ಸಂದರ್ಭದಲ್ಲಂತೂ ಸಿಟ್ಟಿನಿಂದ ಅನೇಕ...
- Advertisement -

More Articles Like This

- Advertisement -
close
error: Content is protected !!
Join WhatsApp Group