ನಾನು ಶಾಲಾ ಸಂದರ್ಶನ ಜೊತೆಗೆ ಬರವಣಿಗೆ ರೂಢಿಸಿಕೊಂಡವನು. ಅನೇಕ ಶಿಕ್ಷಕರು ನನ್ನ ಬರವಣಿಗೆಗೆ ಕಾರಣರಾಗಿರುವರು.ಇತ್ತೀಚೆಗೆ ಹಿರಿಯ ಸನ್ಮಿತ್ರ ನನ್ನ ತಾಲ್ಲೂಕಿನ ತಲ್ಲೂರಿನ ಶಿವಾನಂದ ಅಣ್ಣೀಗೇರಿ ಸೋಮಾಪುರದ ತಮ್ಮ ಶಾಲೆಗೆ ಬರಲು ಹೇಳಿ ಅಲ್ಲಿನ ಮಕ್ಕಳ ಫೀ ಆಟದ ವೈಖರಿ ನನಗೆ ತೋರಿಸಿದರು. ಸೊಮಾಪುರ ಸವದತ್ತಿ ತಾಲೂಕಿನ ಪುಟ್ಟ ಹಳ್ಳಿ. ಜಾಲಿಕಟ್ಟಿ ತಲ್ಲೂರ ಮಾರ್ಗಮಧ್ಯದಲ್ಲಿ ೭ ಕಿ.ಮೀ ಅಂತರ ಬೆಟ್ಟದಲ್ಲಿ ಅಂಕುಡೊಂಕಿನ ರಸ್ತೆಯ ಮೂಲಕ ಈ ಗ್ರಾಮ ತಲುಪಬೇಕು.ಒಂದು ಕಾಲಕ್ಕೆ ಅಂದರೆ ಸ್ವಾತಂತ್ರö್ಯ ಪೂರ್ವದಲ್ಲಿ ಇಲ್ಲಿ ಸೋಮ ಎಂಬ ದರೋಡೆಕೋರ ಇದ್ದನಂತೆ. ಆತನಿಗೆ ಭಯಪಟ್ಟು ಈ ಮಾರ್ಗದಲ್ಲಿ ಜನ ಸಂಚರಿಸಲು ಹೋಗುತ್ತಿರಲಿಲ್ಲವಂತೆ. ಸೋಮ ಇದ್ದ ಗ್ರಾಮ ಸೋಮಾಪುರ ಆಗಿದೆ ಎಂದು ಹಿರಿಯ ನಿವೃತ್ತ ತಲ್ಲೂರಿನ ಶಿಕ್ಷಕರಾದ ಮಲಕಣ್ಣವರ ಗುರುಗಳು ನನಗೆ ಹೇಳಿದ ನೆನಪನ್ನು ನೆನೆಯುತ್ತ ಬೆಟ್ಟದ ತಿರುವಿನಲ್ಲಿ ನನ್ನ ಬೈಕ್ ನಲ್ಲಿ ಹೊರಟೆ.ಅಷ್ಟೇ ಅಲ್ಲ ನನ್ನ ಸಂಶೋಧನೆಯ ವಿಷಯ ತಲ್ಲೂರ ರಾಯನಗೌಡರು ಕೂಡ ಸ್ವಾತಂತ್ರö್ಯ ಹೋರಾಟದ ಸಂದರ್ಭದಲ್ಲಿ ಈ ಬೆಟ್ಟದ ತಪ್ಪಲಿನಲ್ಲಿ ಸಂಚರಿಸುತ್ತಿದ್ದ ವಿಚಾರವಾಗಿ ಈ ಸ್ಥಳದಲ್ಲಿ ಅವರು ಸಂಚರಿಸಿದ ಮಾರ್ಗ ಕೂಡ ನಾನು ನೋಡಬೇಕು ಎಂಬ ಕುತೂಹಲದಿಂದ ಸೋಮಾಪುರ ಗುಡ್ಡಕ್ಕೆ ತೆರಳಿದ್ದೆ.
ಬಹಳ ಅದ್ಬುತ ನಿಸರ್ಗ ಮಳೆಗಾಲದಲ್ಲಿ ಈ ಸ್ಥಳಕ್ಕೆ ಬಂದರೆ ಅನೇಕ ಚಿಕ್ಕಪುಟ್ಟ ಜಲಧಾರೆಗಳನ್ನು ನಾವು ಕಾಣಬಹುದು. ಅಲ್ಲಲ್ಲಿ ಕಬ್ಬಿನ ಗದ್ದೆಗಳು ಅಕ್ಕಪಕ್ಕದಲ್ಲಿ ಕಾಣತೊಡಗುತ್ತವೆ.ದಿನಕ್ಕೆ ನಾಲ್ಕಾರು ಸಲ ಮುನವಳ್ಳಿ ಸೋಮಾಪುರ ಬಸ್ ಸಂಚಾರ ಹೊರತುಪಡಿಸಿದರೆ ಈ ಸ್ಥಳಕ್ಕೆ ಬಸ್ ಸಂಚಾರ ಇಲ್ಲ. ಆದರೆ ಆಧುನಿಕ ಭರಾಟೆಯಲ್ಲಿ ಇಲ್ಲಿನ ಜನ ಸ್ವಂತ ವಾಹನ ಹೊಂದಿದ್ದರಿಂದ ನಿಮಗೆ ದಾರಿಯಲ್ಲಿ ಬೈಕ್ ಹಾಗೂ ಕ್ರೂಷರ್ ದಂತಹ ವಾಹನಗಳು ಕಂಡು ಬರುತ್ತವೆ. ಈ ಗ್ರಾಮ ತಲುಪುತ್ತಲೇ ಶಾಲೆ ಇರುವ ಸ್ಥಳವನ್ನು ಅಲ್ಲಿನ ಜನರಲ್ಲಿ ಕೇಳಿದಾಗ ಬೆಟ್ಟದ ತುದಿಯತ್ತ ಬೆರಳು ಮಾಡಿ ತೋರಿಸಿದರು.
ನನ್ನ ಬೈಕ್ ಅವರು ತೋರಿದ ಬೆರಳಿನ ದಾರಿಯತ್ತ ಚಲಿಸಿದೆ.ಎತ್ತರದ ಸ್ಥಳದಲ್ಲಿ ಸುತ್ತುಗೋಡೆ ಹೊಂದಿರುವ ಕಟ್ಟಡ ಕಾಣತೊಡಗಿತು.ಕಬ್ಬಿಣದ ದೊಡ್ಡ ಗೇಟ್ ಹತ್ತಿರ ಬೈಕ್ ನಿಲ್ಲಿಸಿದೆ.ಹಿರಿಯ ಸ್ನೇಹಿತ ಶಿವಾನಂದ ಅಣ್ಣೀಗೇರಿ ನನ್ನ ಸ್ವಾಗತಿಸಲು ಬಂದು ಗೇಟ್ ತೆರೆದನು.ಸ್ನೇಹಿತನೊಡನೆ ಉಭಯಕುಶಲೋಪರಿ ವಿಚಾರಿಸುತ್ತ ಶಾಲೆಯ ಸೌಂದರ್ಯ ಮೆಚ್ಚುಗೆ ವ್ಯಕ್ತಪಡಿಸುತ್ತ ಒಳಗೆ ಹೋಗಿ ಇಡಿಯಾಗಿ ಒಂದು ಸಲ ಶಾಲೆಯ ಪರಿಸರ ಕಣ್ಣಾಡಿಸಿದೆ. ಒಂದೊಂದೇ ಕೊಠಡಿಯ ಸಂದರ್ಶನಕ್ಕೆ ತೆರಳಿದೆ. ಅಲ್ಲಿದ್ದ ಎಲ್ಲ ಶಿಕ್ಷಕರು ನನಗೆ ಪರಿಚಿತರಾಗಿದ್ದವರು. ನಮ್ಮ ಸವದತ್ತಿ ತಾಲೂಕಿನ ಪರಸಗಡ ಪತ್ತಿನ ಸಹಕಾರಿ ಸಂಘಕ್ಕೆ ಈ ಹಿಂದೆ ನಿರ್ದೇಶಕರಾಗಿದ್ದ ಎ.ಆರ್.ಹಂಚಿನಮನಿ ಅವರ ತರಗತಿ ತಗೆದುಕೊಂಡು ನಂತರ ಸಮನ್ವಯ ಶಿಕ್ಷಣ ತರಬೇತಿಯಲ್ಲಿ ಪರಿಚಿತರಾಗಿದ್ದ ಎಚ್.ಬಿ.ಜಮಾದಾರ ಗುರುಗಳ ತರಗತಿ ವೀಕ್ಷಿಸಿದೆ.ಅಣ್ಣೀಗೇರಿಯವರ ಧರ್ಮಪತ್ನಿ ಶ್ರೀಮತಿ ಪಿ.ಎಸ್.ಗೋಧಿಯವರ ತರಗತಿ ವೀಕ್ಷಿಸಿ ನಂತರ ಸಮನ್ವಯ ಶಿಕ್ಷಣದ ವಿದ್ಯಾರ್ಥಿನಿಯ ಜೊತೆಗೆ ಕಲಿಕಾ ಚಟುವಟಿಕೆಗಳ ಕುರಿತು ಮತನಾಡುವಷ್ಟರಲ್ಲಿ ಊಟದ ವಿರಾಮ.ಮಕ್ಕಳ ಊಟದ ಜೊತೆಗೆ ನನ್ನ ಊಟವಾಯಿತು.
ಮೊದಲೇ ಸ್ನೇಹಿತ ತಿಳಿಸಿದಂತೆ ಗ್ರಾಮೀಣ ಮಕ್ಕಳ ಕ್ರೀಡೆ ಕುರಿತು ವಿವರಣೆ ಪಡೆದುಕೊಂಡೆನು. ಸಾಯಂಕಾಲದವರೆಗೂ ತರಗತಿ ಪ್ರಕ್ರಿಯೆಯಲ್ಲಿ ಮಕ್ಕಳೊಂದಿಗೆ ಪಾಲ್ಗೊಂಡು ಸಾಯಂಕಾಲದ ವಿರಾಮದ ಸಮಯದಲ್ಲಿ ಆಟದ ಬಯಲಿನತ್ತ ನಡೆದೆ.ಮೊದಲೇ ಹೇಳಿದಂತೆ ಫೀ ಆಟ ನಾನು ನೋಡುವ ಕುತೂಹಲ. ಅಲ್ಲಿ ವಿದ್ಯಾರ್ಥಿನಿಯರು ಸೇರಿದ್ದರು. ಒಬ್ಬೊಬ್ಬರ ಪರಿಚಯ ಕೇಳತೊಡಗಿದೆ. ಸುಧಾ ಸಣ್ಣಕೆಂಚನ್ನವರ, ಪ್ರಿಯಾಂಕಾ ಪಟಾತ, ಶ್ರಾವಣಾ ಜಮನಾಳ, ಸವಿತಾ ಸಣ್ಣಕೆಂಚನ್ನವರ, ಐಶ್ವರ್ಯ ಹಾಲಬಾವಿ, ಸಿದ್ಲಿಂಗವ್ವ ನಾಯ್ಕರ, ಪಲ್ಲವಿ ಸಣ್ಣನಾಯ್ಕರ, ಅನಿತಾ ಕೇಂದ್ರನ್ನವರ, ಪ್ರೇಮಾ ಮರಕುಂಬಿ, ಸುಪ್ರೀತಾ ಹಮ್ಮಿಣಿ, ಚಂದ್ರವ್ವ ಬಸಿಡೋಣಿ ಹೀಗೆ ಎಲ್ಲರೂ ತಮ್ಮ ಪರಿಚಯ ಮಾಡಿಕೊಟ್ಟರು.
ಈ ಆಟ ಯಾರು ಮತ್ತು ಯಾವ ಸಂದರ್ಭದಲ್ಲಿ ಆಡುತ್ತಾರೆ ಎಂಬ ವಿವರ ಕೇಳಿದಾಗ ವಿದ್ಯಾರ್ಥಿನಿಯರ ತಾಯಂದಿರು ಶ್ರಾವಣ ಮಾಸದ ನಾಗಪಂಚಮಿ ಸಂದರ್ಭದಲ್ಲಿ ಆಡುವರು ಎಂಬ ಸಂಗತಿ ಹೇಳಿದರು.ಅದನ್ನು ನೋಡಿ ತಾವೂ ಈ ಆಟ ಕಲಿತಿರುವುದಾಗಿ ತಿಳಿಸಿದರು.ಆಟ ಆಡುವ ಸಿದ್ದತೆಯಲ್ಲಿ ತೊಡಿಗಿರಿ ಎಂದು ತಿಳಿಸುವುದಷ್ಟೇ ತಡ ಎಲ್ಲರೂ ವೃತ್ತಾಕಾರವಾಗಿ ನೆಲದ ಮೇಲೆ ಅಂತರದಲ್ಲಿ ಕುಳಿತರು.ಆಗ ಓರ್ವ ವಿದ್ಯಾರ್ಥಿನಿ ಈ ಕೆಳಗಿನ ಹಾಡು ಹೇಳಿದಳು.
ಅಡ್ಡಗೋಡೆ ಮೇಲೆ
ಚಿಕ್ಕ ಬಾಳೆ ಹಣ್ಣು
ಸವಾಲು ಸೊಟ್ಟೆ
ಗೋಧಿ ರೊಟ್ಟಿ(ಚಪಾತಿ)
ಹಿತ್ತಲಕೆ ಹೋದೆ
ಹೀರೇಕಾಯಿ ತಂದೆ
ಪ್ಯಾಟಿಗ್ಹೋದೆ ಪೆಟ್ಟಿಗೆ ತಂದೆ
ಎಷ್ಟು ಮಕ್ಕಳ ಹಡೆದೆ
ಹನ್ನೆರಡು ಮಕ್ಕಳ ಹಡೆದೆ
ಅವರ ಹೆಸರೇನು
ರಾಜಾ ರಾಣಿ
ನನಗೆ ನೀನು ವೈರಿ ನಿನಗೆ ವರಮ ವೈರಿ
ಫಾಜಿ ಪೌ ಪಕ್ಕಾ ಪೌ
ಫೀ ಎಂದು ಹೇಳಿ ಮೊಣಕಾಲೂರಿ ಎಲ್ಲರೂ ಕಾಲುಗಳ ಕಸರತ್ತಿನಲ್ಲಿ ಫೀ ಫೀ ಫೀ ಫೀ ಎನ್ನುವ ಮೂಲಕ ತೊಡಗಿದರು. ನಂತರ ಸ್ವಲ್ಪ ಎದ್ದು ಮತ್ತೆ ತಮ್ಮ ಭಾರವನ್ನು ನಡುವಿನ ಭಾಗಕ್ಕೆ ಒಯ್ದು ಅಲ್ಲಿ ಕಾಲುಗಳ ಮೂಲಕ ಫೀ ಎನ್ನುತ್ತ ದೈಹಿಕ ಕಸರತ್ತಿನಲ್ಲಿ ತೊಡಗಿದರು.ಇದು ಕಬಡ್ಡಿ ಕಬಡ್ಡಿ ಆಟದಲ್ಲಿ ಹೇಗೆ ಕಬಡ್ಡಿ ಕಬಡ್ಡಿ ಎಂದು ಹೇಳುತ್ತಾ ಆಟ ಆಡುತ್ತೇವೆಯೋ ಹಾಗೆ.ಯಾರ ಕಾಲುಗಳು ಸೋತು ಇನ್ಮುಂದೆ ಮಾಡಲಾಗುವುದಿಲ್ಲವೋ ಎಂದು ಸುಮ್ಮನೇ ನಿಲ್ಲುವರೋ ಅವರು ಆ ಆಟದಿಂದ ಔಟ್ ಹೀಗೆ ಕೊನೆಗೆ ಒಬ್ಬರು ಉಳಿಯುವರೆಗೂ ಈ ಆಟ ಸಾಗತೊಡಗಿತು. ದೈಹಿಕವಾಗಿ ಯಾರು ಸದೃಡರೋ ಅವರೇ ಕೊನೆಯಲ್ಲಿ ಉಳಿಯುವರು.
ಆರಂಭದಲ್ಲಿ ಮಾತ್ರ ಮೇಲಿನ ಹಾಡನ್ನು ಹೇಳಿ ಒಮ್ಮೆ ಗಟ್ಟಿಯಾಗಿ ಹೇಳಿ ಫೀ ಎಂದರೋ ಮುಗಿಯಿತು ಪ್ರತಿಯೊಬ್ಬರೂ ಫೀ ಫೀ ಎನ್ನುತ್ತ ಕಾಲುಗಳ ಸರ್ಕಸ್ ಪ್ರಾರಂಭ ಇದೊಂದು ದೈಹಿಕ ಚಟುವಟಿಕೆ.ನಾವು ಕಬಡ್ಡಿ ಆಟ ಆಡುವಾಗ ಕಬಡ್ಡಿ ಕಬಡ್ಡಿ ಎನ್ನುತ್ತ ಹೇಗೆ ಕ್ರೀಡೆಯಲ್ಲಿ ತೊಡಗುತ್ತೇವೆಯೋ ಹಾಗೆ ಫೀ ಫೀ ಎನ್ನುತ್ತ ಕಾಲುಗಳ ಆಂಗಿಕ ಚಲನೆ ಇಲ್ಲಿ ಜರುಗುತ್ತದೆ. ಯಾರಿಗೆ ಫೀ ಎಂದು ಹೇಳುತ್ತ ಕಾಲುಗಳ ಚಟುವಟಿಕೆ ಮಾಡಲಾಗುವುದಿಲ್ಲವೋ ಅವರು ಔಟ್ ಆಗುವರು.
ಇಂದಿಗೂ ಸೋಮಾಪುರದ ಹಿರಿಯ ಹೆಣ್ಣು ಮಕ್ಕಳು ನಾಗರ ಪಂಚಮಿ ಸಂದರ್ಭದಲ್ಲಿ ಈ ಆಟ ಆಡುತ್ತಿರುವುದು ಗ್ರಾಮೀಣ ಕ್ರೀಡೆಯ ಉಳಿದಿರಲು ಸಾಕ್ಷಿ.ಅದನ್ನು ಶಾಲಾ ಮಕ್ಕಳು ಕೂಡ ನೋಡಿ ಕಲಿಯುವ ಮೂಲಕ ಶಾಲೆಯಲ್ಲಿ ಸಂಜೆಯ ಅಲ್ಪ ವಿರಾಮದ ಸಮಯದಲ್ಲಿ ಶಾಲಾ ಆವರಣದಲ್ಲಿ ಗಮನಿಸಿದ ನನ್ನ ಸ್ನೇಹಿತ ಶಿವಾನಂದ ಅಣ್ಣಿಗೇರಿ ಇದನ್ನು ನನಗೆ ತೋರಿಸಲೆಂದು ಸೋಮಾಪುರ ಶಾಲೆಗೆ ಸಂದರ್ಶನಕ್ಕೆ ಬರಲು ಹೇಳಿದ್ದರು.ನಿಜಕ್ಕೂ ಮಕ್ಕಳ ಆಸಕ್ತಿಯ ಈ ಆಟ ಕಂಡಾಗ ಗ್ರಾಮೀಣ ಕ್ರೀಡೆಯ ಬಗ್ಗೆ ಬರಹ ರೂಪಿಸಲೆಂದು ಮಕ್ಕಳ ಪರಿಚಯದೊಂದಿಗೆ ಶಾಲೆಯ ಅವಧಿಯವರೆಗೂ ನಿಂತು ಮಕ್ಕಳೊಂದಿಗೆ ವಿವರ ಪಡೆದು ಮನೆಯತ್ತ ಮರಳಿದೆ.
ಗ್ರಾಮೀಣ ಕ್ರೀಡೆಗಳ ವಿಶಿಷ್ಟ-ವೈಶಿಷ್ಟ್ಯ ಅಪಾರ, ಹಾಗಾಗಿ ಈ ನನ್ನ ಬರವಣಿಗೆ ಗ್ರಾಮೀಣ ಆಟಗಳಿಗೆ ಸಮರ್ಪಣೆ. ಇವು ಹಲವಾರು ಪ್ರಾಕಾರಗಳಲ್ಲಿದ್ದು, ಈ ಬರವಣಿಗೆಯ ಮೂಲಕ ಕೆಲವೊಂದನ್ನ ನೆನಪಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ.ಆಟಗಳಲ್ಲಿ ಅದ್ಬುತ ಶಕ್ತಿ ಅಡಗಿದೆ.
ಫೀ ಎಂದು ಉಸಿರು ಹಿಡಿದು ಜೋರಾಗಿ ಹೇಳಿ ಕಾಲುಗಳ ಸಹಾಯದ ಮೂಲಕ ಶರೀರದ ಭಾಗವನ್ನು ಮೊಣಕಾಲೂರಿ ಕುಳಿತ ಭಂಗಿಯ ಮೂಲಕ ಹೇಳಿ ಕಾಲುಗಳ ಚಲನೆ ಮಾಡುವ ಈ ಆಟ ಇಂದಿಗೂ ಸೋಮಾಪುರ ಗ್ರಾಮದ ವಯಸ್ಕ ಮಹಿಳೆಯರು ಶ್ರಾವಣ ಮಾಸದಲ್ಲಿ ಆಡುವ ಆಟ. ಮಕ್ಕಳು ತಮ್ಮ ಹಿರಿಯರು ಆಡುವುದನ್ನು ನೋಡಿ ಕಲಿತು ಶಾಲೆಯಲ್ಲಿ ಆಟದ ಸಮಯದಲ್ಲಿ ಆಡುವರು. ಮುಖ್ಯ ಶಿಕ್ಷಕರಾದ ಅಣ್ಣೀಗೇರಿಯವರು ಮಕ್ಕಳ ಈ ಆಟ ಕಂಡು ಅವರಲ್ಲಿ ಈ ಆಟ ಆಡಲು ಪ್ರೋತ್ಸಾಹಿಸಿರುವರು.
ಮುಂಚೆ ನಮ್ಮ ಶಿಕ್ಷಕರು ನಮಗೆ ನಮ್ಮ ಲೆಕ್ಕದ ಪಾಠ,ಹೇಳುವಾಗ ದೈಹಿಕ ಅಂಗಗಳನ್ನು ಬಳಸಿ ಅಂದರೆ ಕೈ ಹಾಗೂ ಕಾಲುಗಳ ಬೆರಳುಗಳ ಬಳಸಿ ಕೂಡಿಸುವ ಕಳೆಯುವ ಬಾಯಿ ಲೆಕ್ಕಗಳನ್ನು ಮಾಡಿಸುತ್ತಿದ್ದ ರೀತಿ ನೆನಪಾಯಿತು. ಇದು ಕೈ ಕಾಲುಗಳಿಗೆ ಒಳ್ಳೆಯ ಆಕ್ಯುಪಂಚರ್ ಒದಗಿಸುತ್ತಿತ್ತು. ನಮ್ಮಲ್ಲಿ ದೈಹಿಕ ಚಟುವಟಿಕೆ ಜೊತೆಗೆ ಆಲೋಚನಾ ಶಕ್ತಿ ಹಾಗೂ ಮುಂದಾಲೋಚನೆ ವೃದ್ಧಿಸುತ್ತಿತ್ತು.ಕೂಡಿ ಆಡುವ ಹೊಂದಾಣಿಕೆ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ,ಇಲ್ಲಿ ಕಂಡು ಬರುತ್ತಿತ್ತು.
ಇದು ನಮಗೆ ದೇಹದ ಸಮತೋಲನ ಹೆಚ್ಚಿಸುತ್ತಿತ್ತು. ಕೈ,ಕಾಲುಗಳಲ್ಲಿ ರಕ್ತ ಸಂಚಾರ ವೃದ್ಧಿಸಿ ಸದೃಢವಾಗುವಂತೆ ಮಾಡುತ್ತಿತ್ತು. ಜೀವನದಲ್ಲಿ ಗುರಿ ಹೊಂದುವ ಕಲೆ ಹೀಗೆ ಗ್ರಾಮೀಣ ಆಟಗಳ ವಿಶಿಷ್ಠತೆಗಳು ಅನೇಕ. ಅಂತವುಗಳಲ್ಲಿ ಫೀ ಎಂದು ಹೇಳಿ ಆಡುವ ದೈಹಿಕ ಕಸರತ್ತು ಮೂಡಿಸುವ ಈ ಆಟ ಕಂಡಾಗ ನಮ್ಮ ಹಿರಿಯರು ಶ್ರಮಪಟ್ಟು ಹುಟ್ಟಹಾಕಿರುವ ಆಟಗಳನ್ನು ಕಲಿತು. ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕಲಿಸುವ ಪ್ರಯತ್ನ ಇನ್ನೂ ಉಳಿಯಬೇಕಾಗಿದೆ ಎಂಬ ಸಂಗತಿ ನೆನಪಿಸುವ ಮೂಲಕ ಈ ಬರಹ ರೂಪಿಸಿರುವೆ.
ಇಂತಹ ಆಟಗಳು ನಮ್ಮ ದೈಹಿಕ ಆಂಗಿಕ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತವೆ. ಇವುಗಳಿಂದ ಗ್ರಾಮೀಣ ಜನಪದರ ಆಚಾರ ವಿಚಾರ ಸಂಸ್ಕೃತಿಯ ಉಳಿವು ಸಾಧ್ಯ.ದೈಹಿಕ ಚಲನೆಯ ಜೊತೆಗೆ ಸೋಲು ಗೆಲವನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿ ಮೂಡಿ ಬರುವುದು.ಪರಸರದಲ್ಲಿ ಈ ಚಟುವಟಿಕೆ ಜರಗುವುದರಿಂದ ಪರಿಸರದ ಒಡನಾಟ ಮೂಡಿಬರುವುದು. ಹಿರಿಯರು ಕಿರಿಯರು ಈ ಆಟದಲ್ಲಿ ತೊಡಗುವ ಮೂಲಕ ಎಲ್ಲರಲ್ಲೂ ಈ ಚಟುವಟಿಕೆ ಉಳಿದಿರುವುದು. ಅವಸಾನದ ಅಂಚಿನಲ್ಲಿರುವ ಇಂತಹ ಕ್ರೀಡಾಚಟುವಟಿಕೆಯನ್ನು ಇಲ್ಲಿನ ಶಿಕ್ಷಕರು ಪ್ರೋತ್ಸಾಹಿಸಿ ಉಳಿಸುತ್ತಿರುವುದು ಸಂತಸದ ಸಂಗತಿ.
ಇಂದಿನ ಮೋಬೈಲ್ ಯುಗದಲ್ಲಿ ದೈಹಿಕ ಚಟುವಟಿಕೆಗಿಂತ ಮೋಬೈಲ್ ಮೇಲೆ ಶರೀರದ ಅವಯವಗಳು ಕೇಂದ್ರೀಕೃತವಾಗುವ ಮೂಲಕ ಶಾರೀರಿಕ ಬೆಳವಣಿಗೆ ಕುಂಠಿತಗೊಳ್ಳುತ್ತಿರುವುದು ವಿಷಾದನೀಯ ಸಂಗತಿ.ಇಲ್ಲಿ ದೈಹಿಕ ಕಸರತ್ತಿನ ಜೊತೆಗೆ ನಮ್ಮ ನೆನಪಿನಂಗಳದಲ್ಲಿ ಸದಾ ಮಾಸದ ಚಟುವಟಿಕೆ ಉಳಿಯುತ್ತದೆ.ಆರಂಭದ ಪುಟ್ಟ ಹಾಡು ಆಟಕ್ಕೆ ನಾಂದಿ ಮಾತ್ರ.ಆದರೆ ನಂತರ ನಡೆಯುವ ಚಟುವಟಿಕೆ ಮಹತ್ವದ್ದು.ಇಂತಹ ಕ್ರೀಡೆ ಸೋಮಾಪುರದಂತಹ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಉಳಿದಿವೆ.ಅವುಗಳ ದಾಖಲೀಕರಣ ಜರುಗುವ ಅವಶ್ಯಕತೆ ಕೂಡ ಇದೆ ಎಂದು ಮಾತ್ರ ಹೇಳಬಲ್ಲೆ.
ವೈ.ಬಿ.ಕಡಕೋಳ