spot_img
spot_img

ಕನ್ನಡ ಸಾಹಿತ್ಯದ ಮೊದಲ ಪ್ರಕಾಶಕಿ ಕಥೆಗಾರ್ತಿ ಕಾದಂಬರಿಕಾರ್ತಿ

Must Read

       ಕನ್ನಡ ಸಾಹಿತ್ಯದಲ್ಲಿ ಎಲೆ ಮರೆಯ ಕಾಯಿಯಂತೆ ಅಮೋಘ ಸೇವೆ ಆರಂಭಿಸಿ ಸ್ವಾತಂತ್ರ್ಯ ಹೋರಾಟದ ಜೊತೆಗೆ ಕನ್ನಡ ಸಾಹಿತ್ಯ ಮಹಿಳಾ ಪರ ಚಿಂತನೆಗೆ ತೊಡಗಿಸಿಕೊಂಡ  ಅಪ್ರತಿಮ ಸಾಹಿತಿ ತಿರುಮಲಾಂಬ
ಜನನ
       ನಂಜನಗೂಡು ತಿರುಮಲಾಂಬ ಅನ್ನುವ ದಂತ ಕಥೆ ಜೀವಿಸಿದ್ದು 1887 ರಿಂದ 1982 ರವರೆಗೆ. ಜನಿಸಿದ್ದು ಮೈಸೂರಿನ ಸಮೀಪದ ಹಕೀಮ ನಂಜುಂಡಪ್ಪನ ಹೆಮ್ಮೆಯ ಊರು ನಂಜನಗೂಡಿನಲ್ಲಿ ದಿನಾಂಕ 25 ನೇ ಮಾರ್ಚ್ 1887 ರಂದು. ಐಯಂಗಾರ್ ಮನೆತನ ತಂದೆ ವೆಂಕಟ ಕೃಷ್ಣ ಐಯಂಗಾರ್ ನಂಜನಗೂಡಿನಲ್ಲಿ ವಕೀಲರು ತಾಯಿ ಅಲಮೇಲಮ್ಮ ಗೃಹಿಣಿ. ಸ್ವಾಭಾವಿಕವಾಗಿ ತಮಿಳು ಮನೆಯ ಭಾಷೆ , ಆದರೆ ನಂಜನಗೂಡಿನಲ್ಲಿ ನೆಲೆಸಿದ್ದ ಕುಟುಂಬದ ವ್ಯಾವಹಾರಿಕ ಭಾಷೆ ಕನ್ನಡ . ನಂಜನಗೂಡು ತಿರುಮಲಾಂಬ ಅವರಿಗೆ ಸಣ್ಣ ವಯಸ್ಸಿನಿಂದಲೂ ಕನ್ನಡ ಭಾಷೆಯ ಮೇಲೆ ಸಹಜವಾದ ಒಲವಿತ್ತು, ಅದಕ್ಕೆ ನಂಜನಗೂಡಿನ ಪರಿಸರ ಕಾರಣ ಅನ್ನಬಹುದು, ಇದರಜೊತೆಗೆ ತಮಿಳು  ತೆಲುಗಿನ ಭಾಷೆಯ ಅರಿವೂ ಸಹ ಅವರಿಗೆ ಇತ್ತು.
      ನಂಜನಗೂಡು ತಿರುಮಲಾಂಬ ಈ ನಾಡಿನ ಪ್ರಥಮ ಕನ್ನಡ ಕತೆಗಾರ್ತಿ , ಲೇಖಕಿ , ವೃತ್ತಪತ್ರಿಕೆ ಸಂಪಾದಕಿ, ಪ್ರಕಾಶಕಿ, ಆ ದಿನಗಳಲ್ಲಿ ಪುರುಷ ಪ್ರಧಾನ ಪ್ರಪಂಚದಲ್ಲಿ ಒಬ್ಬ ಮಹಿಳೆ ಇಂತಹ ಕಾರ್ಯ ಮಾಡಿದ್ದಾರೆ ಅನ್ನೋದೆ ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ . ಹಾಗಾಗಿ ಇವರು ನಂಜನಗೂಡಿನ ನೆಲದ ಒಂದು ಅಮೂಲ್ಯ ರತ್ನ .
      ಆ ದಿನಗಳ ಆಚಾರದಂತೆ ನಂಜನಗೂಡು ತಿರುಮಲಾಂಬ ಬಾಲ್ಯ ವಿವಾಹ ವಾದರೂ ಹತ್ತನೇ ವಯಸ್ಸಿನಲ್ಲಿ ಗೃಹಸ್ತಾಶ್ರಮಕ್ಕೆ ಕಾಲಿಟ್ಟರು, ಆದರೆ ಹದಿನಾಲ್ಕನೆ ವಯಸ್ಸಿಗೆ ಬರುವ ಹೊತ್ತಿಗೆ ಪತಿ ಇಹಲೋಕ ತ್ಯಜಿಸಿದ್ದರು . ಚಿಕ್ಕವಯಸ್ಸಿನಲ್ಲಿ ಮಗಳ ನೋವ ಮರೆಸಲು ತಂದೆ ವೆಂಕಟ ಕೃಷ್ಣ ಐಯಂಗಾರ್ ಪುರಾಣದ ಕಥನಗಳನ್ನು, ರಾಮಾಯಣ, ಮಹಾಭಾರತ, ಭಾಗವತಗಳ ಜೊತೆಯಲ್ಲಿ ವಿವಿಧ ಬಗೆಯ ಅಂದಿನ ಸಾಹಿತ್ಯಗಳ ವಿಚಾರಗಳನ್ನು ಮಗಳಿಗೆ ಓದಿ ತಿಳಿಸುತ್ತಾ ಮಗಳ ನೋವಿಗೆ ಹೆಗಲು ಕೊಟ್ಟು ನಿಂತರು. ತಂದೆಯಿಂದ ದೊರೆತ ಜ್ಣಾನದ ಬೆಳಕು ನಂಜನಗೂಡು ತಿರುಮಲಾಂಬ ಅವರ ಬದುಕಿನ ದಿಕ್ಕನ್ನು ಕನ್ನಡ ಸಾಹಿತ್ಯದೆಡೆಗೆ ತಂದು ನಿಲ್ಲಿಸಿತು.
      ನಂಜನಗೂಡು ತಿರುಮಲಾಂಬ ಅವರು ತಮ್ಮ ಬಿಡುವಿನ ವೇಳೆಯಲ್ಲಿ ತನ್ನ ಮನೆಯ ಸುತ್ತ ಮುತ್ತ ಇದ್ದ ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡಲು ಮನೆಯಲ್ಲಿ ಪಾಠ ಮಾಡಲು ಪ್ರಾರಂಭಿಸುತ್ತಾರೆ, ಕಾಲ ಕ್ರಮೇಣ ಪಾಠದ ಮನೆ ಶಾಲೆಯಾಗಿ ಬದಲಾಗುತ್ತದೆ. ನಿತ್ಯದ ಮನೆಕೆಲಸಗಳನ್ನು ಪೂರೈಸಿದ ನಂತರ ಕೆಲವು ಮಹಿಳೆಯರಿಗೆ ಬೋಧನೆ ಮಾಡಲು ಮುಂದಾಗುತ್ತಾರೆ, ಇವರ ಜ್ಣಾನದ ಶೈಲಿಗೆ ಮಾರುಹೋದ ಸುತ್ತ ಮುತ್ತಲಿನ ಮನೆಗಳ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರಾರಂಭಿಸುತ್ತಾರೆ. ಜನ ಸಂಪರ್ಕ ಜಾಸ್ತಿಯಾಗುತ್ತಾ ಹೋದಂತೆ ನಂಜನಗೂಡು ತಿರುಮಲಾಂಬ ಅವರ ಮನೆಯ ಕೀರ್ತಿ ಹೆಚ್ಚಿ “ಮಾತೃ ಮಂದಿರ” ಎಂದು ಪ್ರಸಿದ್ಧಿ ಪಡೆಯುತ್ತದೆ. ಇಂತಹ ಸಮಯದಲ್ಲೇ ನಂಜನಗೂಡು ತಿರುಮಲಾಂಬ ಹೊಸ ಸಾಹಸಕ್ಕೆ ಕೈಹಾಕಿ “ಸನ್ಮಾರ್ಗದರ್ಶಿನಿ” ವೃತ್ತ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ . ಇದು ಕನ್ನಡ ನಾಡಿನ ಮೊದಲ ಮಹಿಳಾ ಸಂಪಾದಕಿ ಹೊರತಂದ ವೃತ್ತ ಪತ್ರಿಕೆಯಾಗಿ ಇತಿಹಾಸದಲ್ಲಿ ಸದ್ದಿಲ್ಲದೇ ದಾಖಲಾಗುತ್ತದೆ.
     ನಂಜನಗೂಡಿನಲ್ಲಿ “ಮಾತೃ ಮಂದಿರ” ಸ್ಥಾಪಿಸಿದ ತಿರುಮಲಾಂಬ ಅವರದು ಬಹಳ ಕುತೂಹಲದ ಸ್ವಭಾವ, ತಾನು ಓದುವ ವೇಳೆ ತಮ್ಮ ಮನಸಿಗೆ ಸರಿ ಅನ್ನಿಸಿದ ವಿಚಾರಗಳನ್ನು ಒಂದೆಡೆ ಟಿಪ್ಪಣಿ ಮಾಡಿಕೊಳ್ಳುವ ಹವ್ಯಾಸ ಅವರಿಗಿತ್ತು. ಜೊತೆಗೆ ತನಗೆ ತಿಳಿದ ವಿಚಾರಗಳನ್ನು ಕಥೆಗಳ ಮೂಲಕ, ನಾಟಕಗಳ ಹಾಗೂ ಹಾಡುಗಳ ಮೂಲಕ, ಜನರಿಗೆ ತಲುಪಿಸುವ ನಿಟ್ಟಿನಲ್ಲಿ “ಮಾತೃಮಂದಿರ” ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ. ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನಂಜನಗೂಡಿನ ನಾಗರೀಕರಿಂದ ನಿರೀಕ್ಷೆಗಿಂತ ಹೆಚ್ಚಾಗಿ ದೊರಕುತ್ತದೆ.
     “ನಂಜನಗೂಡು ತಿರುಮಲಾಂಬ” ಅವರಿಗೆ ಪ್ರಸಿದ್ಧಿ ಅಷ್ಟು ಸುಲಭವಾಗಿ ಬರಲಿಲ್ಲ , ಹಲವು ಘಟನೆಗಳು ಅವರ ಬಾಳಿನಲ್ಲಿ ತಿರುವು ಕೊಟ್ಟಿವೆ ಅಂತಹ ಒಂದು ಘಟನೆ ಇಲ್ಲಿದೆ. ಆ ದಿನಗಳಲ್ಲಿ ಒಮ್ಮೆ ಮೈಸೂರಿನಲ್ಲಿ ಪ್ರಕಟಗೊಳ್ಳುತ್ತಿದ್ದ “ಮಧುರ ಧ್ವನಿ” ಎಂಬ ವಾರ ಪತ್ರಿಕೆಯವರು ಒಂದು ಕಥಾ ಸ್ಪರ್ಧೆಗೆ ಲೇಖನವನ್ನು ಆಹ್ವಾನ ಮಾಡುತ್ತಾರೆ, ಸಹಜವಾಗಿ “ನಂಜನಗೂಡು ತಿರುಮಲಾಂಬ” ಅವರೂ ಸಹ ಒಂದು ಕಥೆಯನ್ನು ಸ್ಪರ್ಧೆಗೆ ಕಳುಹಿಸುತ್ತಾರೆ, ಕತೆಯಲ್ಲಿನ ಉನ್ನತ ಸಾಹಿತ್ಯದ ಗುಣವನ್ನು ನೋಡಿ “ಮಧುರ ಧ್ವನಿ” ವಾರ ಪತ್ರಿಕೆಯ ಸಂಪಾದಕ ಕೆ. ಹನುಮಾನ್ ಎಂಬುವರು ನಂಜನಗೂಡಿಗೆ ಓಡಿ ಬರುತ್ತಾರೆ, ನಂಜನಗೂಡು ತಿರುಮಲಾಂಬ ಅವರ ಮನೆಯಲ್ಲಿ ಕಂಡ ಸಾಹಿತ್ಯಗಳ ಭಂಡಾರ ಕಂಡು ಅಚ್ಚರಿಗೊಳ್ಳುತ್ತಾರೆ, ಅದರಲ್ಲಿ “ವಿಧವಾ ಕರ್ತವ್ಯ ” ಎನ್ನುವ ಬರಹವನ್ನು ಮೆಚ್ಚಿಕೊಂಡು ಅದನ್ನು ಒಂದು ಲೇಖನ ವಾಗಿ ತಮ್ಮ ವಾರ ಪತ್ರಿಕೆಯಲ್ಲಿ ಪ್ರಕಟಣೆ ಮಾಡುತ್ತಾರೆ, ಆ ಲೇಖನ ಅಂದಿನ ದಿನಗಳಲ್ಲಿ ಸಮಾಜದಲ್ಲಿ ಒಂದು ದೊಡ್ಡ ಸಂಚಲನ ಉಂಟು ಮಾಡಿ, ಲೇಖಕಿಯ ಬರವಣಿಗೆಯನ್ನು ಹಲವಾರು ವಿರೋಧ ಮಾಡುತ್ತಾರೆ. ಆದರೆ ಮಗಳ ಪ್ರತೀ ಬೆಳವಣಿಗೆಯಲ್ಲೂ ಅಪ್ಪನ ಬೆಂಬಲ ಇದ್ದ ಕಾರಣ ವಿರೋಧವನ್ನು ಲೆಕ್ಕಿಸದೆ ಸಾಹಿತ್ಯ ಕೃಷಿ ಮುಂದುವರೆಸುತ್ತಾರೆ. ಅದರ ಮುಂದಿನ ಭಾಗವೇ “ಸತಿ ಹಿತೈಷಿಣಿ” ಎಂಬ ಪ್ರಕಾಶನ ಸಂಸ್ಥೆ . ಇಲ್ಲಿಯೂ ಸಹ ಕನ್ನಡ ನೆಲದಲ್ಲಿ ಮೊದಲ ಮಹಿಳಾ ಪ್ರಕಾಶಕಿ ಎಂಬ ಇತಿಹಾಸದ ಭಾಗವಾಗುತ್ತಾರೆ “ನಂಜನಗೂಡು ತಿರುಮಲಾಂಬ”.
ಹೆಮ್ಮೆಯಿಂದ ತಾವು ಆರಂಭಿಸಿದ “ಸತಿ ಹಿತೈಷಿಣಿ” ಎಂಬ ಪ್ರಕಾಶನ ಸಂಸ್ಥೆ ಯಲ್ಲಿ 1913 ರಲ್ಲಿ “ನಂಜನಗೂಡು ತಿರುಮಲಾಂಬ”. ಅವರು ತಮ್ಮದೇ ಆದ ಮೊದಲ ಕಾದಂಬರಿ “ಸುಶೀಲೆ ” ಯನ್ನು ಪ್ರಕಟಿಸುತ್ತಾರೆ . ಆ ಪುಸ್ತಕ ಅಂದಿನ ದಿನಗಳಲ್ಲಿ ಅಲ್ಪ ಸಮಯದಲ್ಲೇ ನಾಲ್ಕು ಮುದ್ರಣ ಕಂಡು ಸುಮಾರು 7000 ಪ್ರತಿ ಮಾರಾಟ ಕಾಣುತ್ತದೆ. ಇದೂ ಸಹ ಅಂದಿನ ದಿನದ ಒಂದು ಮಹಿಳಾ ಲೇಖಕಿಯ ಇತಿಹಾಸವೇ ಸರಿ.
     “ಸತಿ ಹಿತೈಷಿಣಿ” ಪ್ರಕಾಶನ ಸಂಸ್ಥೆ ಯಲ್ಲಿ ತನ್ನ ಪುಸ್ತಕಗಳಲ್ಲದೆ ಇತರ ಲೇಖಕರ ಪುಸ್ತಕಗಳನ್ನು ಸಹ ಪ್ರಕಟಣೆ ಮಾಡುತ್ತಾರೆ. ಶ್ರೀಯುತರಾದ “ಪಣ್ಯಂ ಸುಂದರ ಶಾಸ್ತ್ರೀ”, “ಸರಗೂರು ವೆಂಕಟವರದಾಚಾರ್ಯ” ಡಾಕ್ಟರ್ ಎಸ್.ಎನ್ ನರಸಿಂಹಯ್ಯ ಮುಂತಾದ ದಿಗ್ಗಜರ ಸಾಹಿತ್ಯಗಳನ್ನು ತಮ್ಮ ಪ್ರಕಾಶನ ಸಂಸ್ಥೆಯಿಂದ ಪ್ರಕಟಿಸುತ್ತಾರೆ.
1913 ರಿಂದ 1916 ತಿರುಮಲಾಂಭ ಅವರ ಸಾಹಿತ್ಯ ಕೃಷಿಯ ಉನ್ನತ ದಿನಗಳು. ಆ ಸಮಯದಲ್ಲಿ ತಮ್ಮದೇ ಸಾಹಿತ್ಯದ ಸುಮಾರು ಪುಸ್ತಕಗಳನ್ನು ಬಿಡುಗಡೆ ಮಾಡುತ್ತಾರೆ. ಎಲ್ಲವೂ ಜನರ ಮನ್ನಣೆಯನ್ನು ಗಳಿಸುತ್ತವೆ. ಇವುಗಳಲ್ಲಿ, ಸಣ್ಣ ಕಥೆ, ಕವಿತೆಗಳು, ನಾಟಕಗಳು, ದೊಡ್ಡ ಕಥೆಗಳು, ಪತ್ತೇದಾರಿ ಕಥೆಗಳು, ಹೀಗೆ ಎಲ್ಲಾ ಪ್ರಾಕಾರದ ಸಾಹಿತ್ಯವನ್ನು ಕಾಣಬಹುದಾಗಿರುತ್ತದೆ.
“ನಂಜನಗೂಡು ತಿರುಮಲಾಂಬ” ಅವರು 1913 ರಿಂದ 1939 ರವರೆಗೆ ತನ್ನ ಸಾಹಿತ್ಯ ಗಳನ್ನು ಪ್ರಕಟಿಸುತ್ತಾ ಕನ್ನಡ ಸಾಹಿತ್ಯ ಲೋಕದ ಮಹಿಳಾ ಲೇಖಕಿಯಾಗಿ ಜನ ಮನ್ನಣೆ ಗಳಿಸುತ್ತಾರೆ. ತಮ್ಮ ಜೀವಿತ ಅವಧಿಯಲ್ಲಿ ಸುಮಾರು 28 ವಿವಿಧ ಪ್ರಕಾರದ ಕನ್ನಡ ಸಾಹಿತ್ಯದ ಪ್ರಕಟಣೆಯನ್ನು ಮಾಡುತ್ತಾರೆ. ಇವುಗಳಲ್ಲಿ “ನಭ “, “ವಿಧ್ಯುಲ್ಲತ”, ಹಾಗೂ “ಹರಿಣ” ಪ್ರಮುಖವಾಗಿ ನಿಲ್ಲುತ್ತವೆ. ತಮ್ಮ ಜೀವಿತ ಅವಧಿಯ ಕೊನೆಯ ಕಥೆಯ ಪುಸ್ತಕ “ಮಣಿಮಾಲ” ವನ್ನು 1939 ರಲ್ಲಿ ಪ್ರಕಟಣೆ ಮಾಡುತ್ತಾರೆ. ಮತ್ತೊಂದು ವಿಶೇಷವನ್ನು “ನಂಜನಗೂಡು ತಿರುಮಲಾಂಬ” ರವರು ಸಾಧಿಸಿದ್ದು “ಕರ್ನಾಟಕ ನಂದಿನಿ ” ಎಂಬ ಮಾಸಿಕ ಪತ್ರಿಕೆಯನ್ನು ಹೊರತರುವ ಮೂಲಕ ಈ ಪತ್ರಿಕೆಯಲ್ಲಿ ಕನ್ನಡ ನಾಡಿನ ಮಹಿಳೆಯರಿಗೆ ಸಾಹಿತ್ಯ ಪ್ರಕಟಣೆ ಮಾಡಲು ಅನುಕೂಲ ಮಾಡಿಕೊಡುವ ಪ್ರಯತ್ನವನ್ನು ಈ ಮಾಸಿಕ ಪತ್ರಿಕೆಯ ಮೂಲಕ ಮಾಡಿ ಯಶಸ್ವಿಯಾಗುತ್ತಾರೆ, ಅಂದು ಜಗದ ಕಣ್ಣಿಗೆ ಬೀಳದ ನಾಡಿನ ಹಲವು ಮೂಲೆಯಲ್ಲಿ ಅಜ್ಞಾತರಾಗಿದ್ದ ಹಲವಾರು ಮಹಿಳೆಯರು ತಮ್ಮ ಬರಹಗಳನ್ನು ಈ ಮಾಸಿಕ ಪತ್ರಿಕೆಯಲ್ಲಿ ಪ್ರಕಟಿಸಿ ಹೆಮ್ಮೆ ಪಡುತ್ತಾರೆ. ಆದರೆ ನಂತರದ ದಿನಗಳಲ್ಲಿ ನಡೆದ ಈ ಪ್ರಯೋಗ ಹೆಚ್ಚು ಕಾಲ ಉಳಿಯಲಿಲ್ಲ ಒಬ್ಬ ಧೀರ ಮಹಿಳೆ ಕನ್ನಡ ನಾಡಿನ ಮಹಿಳೆಯರ ಸಾಹಿತ್ಯದ ಧ್ವನಿಯಾಗಲು ಆರಂಭಿಸಿದ್ದ “ಕರ್ನಾಟಕ ನಂದಿನಿ” ತನ್ನ ಪ್ರಕಟನೆಯನ್ನು ನಿಲ್ಲಿಸಿ ಮೌನವಾಗುತ್ತದೆ .
ತನ್ನ ಎಲ್ಲಾ ಸಾಹಸಗಳಿಗೂ ಜೊತೆಯಾಗಿ ನಿಂತ ತಂದೆ ಯವರ ಮರಣ “ನಂಜನಗೂಡು ತಿರುಮಲಾಂಬ” ರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತದೆ, ತಂದೆಯ ಮರಣದ ನೋವನ್ನು ಸಹಿಸಲಾರದೇ ಸಾಹಿತ್ಯ ಕ್ಷೇತ್ರದಿಂದ ವಿಮುಖರಾಗಿ ಮೌನಕ್ಕೆ ಶರಣಾಗುತ್ತಾರೆ ತನ್ನ ಕೊನೆಗಾಲದ ದಿನದ ವರೆಗೂ ನೋವನ್ನು ಅನುಭವಿಸುತ್ತಾ 31 ನೇ ಆಗಸ್ಟ್ 1982 ರಲ್ಲಿ ತಮ್ಮ ಜೀವನದ ಪಯಣವನ್ನು ಮುಕ್ತಾಯಗೊಳಿಸಿ ಜ್ಣಾನದಾತೆ ಸರಸ್ವತಿಯ ಮಡಿಲನ್ನು ಸೇರುತ್ತಾರೆ.
ಇವರ ಬದುಕಿನ ಕಾಲದಲ್ಲಿ ಅಂದು ಮೈಸೂರು, ಮದ್ರಾಸ್, ಬಾಂಬೆ ಸರಕಾರಗಳು ಇವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ತಮ್ಮ ಅಭಿಮಾನವನ್ನು ಈ ಮಹಿಳಾ ಲೇಖಕಿಗೆ ಅರ್ಪಣೆ ಮಾಡಿವೆ.
ಇಂತಹ ಒಂದು ಅದ್ಭುತ ಚೇತನ ನಮ್ಮ ನಾಡಿನಲ್ಲಿತ್ತು ಅನ್ನೋದೆ ಒಂದು ಹೆಮ್ಮೆ , ಮೈಸೂರು ಜಿಲ್ಲೆಯ ನಂಜನಗೂಡಿನ ಕಪಿಲೆಯ ಮಡಿಲಲ್ಲಿ ಇಂತಹ ಅದೆಷ್ಟು ಚೇತನಗಳು ಅರಳಿವೆಯೂ ಆ ಹಕೀಮ್ ನಂಜುಂಡಪ್ಪನೆ ಬಲ್ಲ.
ಕಥೆಗಾರ್ತಿ ಕಾದಂಬರಿಕಾರ್ತೆ ಪ್ರಕಾಶಕಿ ಲೇಖಕಿ ಸ್ತ್ರೀ ಪರ ಹೋರಾಟಗಾರ್ತಿ ಸೂರ್ಯ ಚಂದ್ರರ ಸಾಕ್ಷಿಯ ಸಾವಿಲ್ಲದ ಶರಣರು
( ಚಿತ್ರ ಕೃಪೆ : ಅಂತರ್ಜಾಲ )
ಡಾ ಶಶಿಕಾಂತ ಪಟ್ಟಣ ರಾಮದುರ್ಗ
- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group