ಮೂಡಲಗಿ: ಸಮೀಪದ ಅವರಾದಿ ಗ್ರಾಮದವರಾದ, ಕೆಎಲ್‍ಇ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಡಾ. ಅಣ್ಣಾಸಾಹೇಬ ಪರಪ್ಪ ಬಿರಾದಾರಪಾಟೀಲ ಅವರು ರಚಿಸಿದ ಅಪರೂಪದ ಅವರಾದಿ ಎಂಬ ಪುಸ್ತಕವನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುವ ಮೂಲಕ ಗ್ರಾಮದ ಹೆಗ್ಗಳಿಕೆಯ ಪರಿಚಯ ಮಾಡಿಸುತ್ತಿದ್ದಾರೆ.
ಡಾ. ಅಣ್ಣಾಸಾಹೇಬ ಬಿರಾದಾರಪಾಟೀಲ ನಿವೃತ್ತರಾಗಿ ಸದ್ಯಕ್ಕೆ ಬೆಳಗಾವಿಯಲ್ಲಿ ನೆಲೆಸಿದ್ದರೂ ಕೂಡ ತಮ್ಮ ಹುಟ್ಟೂರನ್ನು ಮರೆಯದೇ ಆ ಊರಿನ ಇತಿಹಾಸ, ಸಂಸ್ಕೃತಿ ಹಾಗೂ ಹೆಗ್ಗಳಿಕೆಯನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಆ ಪುಸ್ತಕಗಳನ್ನು ಊರಿನ ಹಾಗೂ ಸುತ್ತಲಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಮೂಲಕ ಹುಟ್ಟೂರಿನ ಮಹಿಮೆಯ ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ.
ಇತ್ತೀಚೆಗೆ ಅವರಾದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ, ಶ್ರೀ ಮಹಾಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆ, ಉದಯ ಹಿರಿಯ ಪ್ರಾಥಮಿಕ ಶಾಲೆಗಳ ಅಂದಾಜು 700 ವಿದ್ಯಾರ್ಥಿಗಳಿಗೆ, 60 ಶಿಕ್ಷಕರಿಗೆ, 100 ಹಿರಿಯರು, ಸಾಹಿತ್ಯ ಪ್ರೇಮಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ನೀಡಿದರು. ಅಲ್ಲದೇ ನೆರೆಯ ಮಹಾಲಿಂಗಪುರದ ಕೆಎಲ್‍ಇ ಪದವಿ ಕಾಲೇಜಿನ ಗ್ರಂಥಾಲಯಕ್ಕೂ ನೂರಾರು ಪುಸ್ತಕಗಳನ್ನು ಉಚಿತವಾಗಿ ನೀಡಿದ್ದಾರೆ.
ಇತ್ತೀಚೆಗೆ ಅವರಾದಿಯ ಸರಕಾರಿ ಪ್ರೌಢಶಾಲೆಯಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮ ಜರುಗಿತು. ಲೇಖಕರಾದ ಡಾ.ಎ.ಪಿ.ಬಿರಾದಾರಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ತಾಯಿ ದಿ.ನೀಲವ್ವ ಪರಪ್ಪ ಬಿರಾದಾರಪಾಟೀಲ ಸ್ಮರಣಾರ್ಥ ಪ್ರತಿ ವರ್ಷ ಸರಕಾರಿ ಪ್ರೌಢಶಾಲೆಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 1001 ನಗದು ಪುಸ್ಕಾರ ನೀಡುವುದಾಗಿ ಘೋಷಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಮಹಾದೇವ ಪಾಟೀಲ, ವೆಂಕಪ್ಪ ನಾಯಿಕ, ಮೋಹನಗೌಡ ನಾಡಗೌಡ, ನಿಂಗಪ್ಪ ಬಿ.ಪಾಟೀಲ, ಅರ್ಜುನಗೌಡ ಪಾಟೀಲ, ಲಕ್ಷ್ಮಣ ಮಳ್ಳಿ, ಗೌಡಪ್ಪ ಪಾಟೀಲ, ಪರಸಪ್ಪ ಬೇವಿನಕಟ್ಟಿ, ತಮ್ಮಣ್ಣೆಪ್ಪಗೌಡ ಪಾಟೀಲ, ವೆಂಕಣಗೌಡ ನಾಡಗೌಡ, ಮಲ್ಲನಗೌಡ ಪಾಟೀಲ, ಕೆ.ಎಂ.ಅವರಾದಿ, ಪ್ರಕಾಶ ಪಾಟೀಲ, ಗಂಗಾಧರ ಹಿರೇಮಠ, ಬಸವರಾಜ ಮೇಟಿ, ಎಸ್.ಎಂ.ಗಸ್ತಿ, ರಮೇಶ ಕಾಂಬಳೆ, ಮಹಾಲಿಂಗ ಪಾಟೀಲ ಹಾಗೂ ಶಿಕ್ಷಕರು ಇದ್ದರು.