ಬೆಂಗಳೂರು – ಇತ್ತೀಚೆಗೆ ಅಕಾಲಿಕ ನಿಧನವಾಗಿ ಚಲನಚಿತ್ರರಂಗವನ್ನು ಅನಾಥವಾಗಿಸಿದ ಪುನೀತ ರಾಜಕುಮಾರ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಅಪ್ಪು ಅವರ ಸ್ಮರಣಾರ್ಥ ಇಂದು ಹಮ್ಮಿಕೊಳ್ಳಲಾಗಿದ್ದ ಪುನೀತ ನಮನ ಕಾರ್ಯಕ್ರಮದಲ್ಲಿ ಬೊಮ್ಮಾಯಿಯವರು ರಾಜ್ಯದ ಹತ್ತನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ಅವರಿಗೆ ನೀಡುವುದಾಗಿ ಘೋಷಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಘಟಾನುಘಟಿ ಚಿತ್ರಕಲಾವಿದರೆಲ್ಲ ಎದ್ದು ನಿಂತು ಹರ್ಷದ ಚಪ್ಪಾಳೆಯ ಮೂಲಕ ಗೌರವ ತೋರಿದರು.
೧೯೯೨ ರಲ್ಲಿ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಷ್ಟ್ರಕವಿ ಕುವೆಂಪು ಹಾಗೂ ಡಾ.ರಾಜಕುಮಾರ ಅವರಿಗೆ ನೀಡಲಾಗಿತ್ತು. ಈವರೆಗೂ ಒಂಭತ್ತು ಜನರಿಗೆ ಈ ಪ್ರಶಸ್ತಿ ನೀಡಲಾಗಿದೆ. ಹತ್ತನೆಯ ಗೌರವ ಕರ್ನಾಟಕದ ಪ್ರೀತಿಯ ಅಪ್ಪು ಅವರಿಗೆ ಮರಣೋತ್ತರವಾಗಿ ಲಭಿಸಿದೆ.
೧೯೭೫ ರಲ್ಲಿ ಜನಿಸಿದ್ದ ಪುನೀತ್ ಬಾಲ ನಟನೆಯಿಂದಲೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡು ಕರ್ನಾಟಕ ಚಿತ್ರರಂಗದ ಅಭಿಮಾನದ ತಾರೆಯಾಗಿದ್ದರು. ಅನೇಕ ಸಮಾಜೋಪಯೋಗಿ ಚಿತ್ರಗಳಲ್ಲಿ ನಟಿಸಿ ಕೋಟ್ಯಂತರ ಅಭಿಮಾನಿಗಳ ಪ್ರೀತಿ ಹೊಂದಿದ್ದ ಅಪ್ಪು ಇದೇ ಅಕ್ಟೋಬರ್ ೨೯ ರಂದು ತೀವ್ರ ಹೃದಯಾಘಾತದಿಂದ ನಿಧನರಾದಾಗ ಕನ್ನಡ ಚಲನಚಿತ್ರ ರಂಗ ಕತ್ತಲೆಯಲ್ಲಿ ಮುಳುಗಿದಂತಾಯಿತು. ನಟನಾಗಿದ್ದಕೊಂಡು ತೆರೆಯ ಮರೆಯಲ್ಲಿ ಅನೇಕ ದಾನ ಧರ್ಮಗಳನ್ನು ಮಾಡಿರುವ ಪುನೀತ್ ಎಷ್ಟೋ ಜನರ ಬಾಳಿಗೆ ಬೆಳಕಾಗಿದ್ದಾರೆ. ಅಲ್ಲದೆ ತಮ್ಮ ಕಣ್ಣುಗಳನ್ನು ದಾನ ಮಾಡಿ ಎಲ್ಲಾ ಯುವಕರಿಗೆ ದಾರಿದೀಪವಾಗಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪುನೀತ ನಮನ ಕಾರ್ಯಕ್ರಮದಲ್ಲಿ ಇಡೀ ಭಾರತೀಯ ಚಲನಚಿತ್ರ ರಂಗದ ಘಟಾನುಘಟಿ ಕಲಾವಿದರು ಪಾಲ್ಗೊಂಡಿದ್ದರು. ರಜನಿಕಾಂತ್, ಅಮಿತಾಭ ಬಚ್ಚನ್, ಮುಮ್ಮೂಟಿ, ಪ್ರಭಾಸ, ಸುದೀಪ, ಯಶ್, ಜಗ್ಗೇಶ ಅಲ್ಲದೇ ಅನೇಕರು ಪಾಲ್ಗೊಂಡು ಶೃದ್ಧಾಂಜಲಿ ಸಲ್ಲಿಸಿದರು. ಗಾಯಕರು ಪುನೀತ್ ಚಿತ್ರಗಳ ಹಾಡು ಹಾಡುವ ಮೂಲಕ ಗಾನ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರು ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ಅವರಿಗೆ ಘೋಷಣೆ ಮಾಡಿದರು.ಅಲ್ಲದೆ ಡಾ.ರಾಜ್ ಹಾಗೂ ಪಾರ್ವತಮ್ಮ ಅವರಂತೆಯೇ ಪುನೀತ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮುಂದಾಗುತ್ತದೆ ಎಂದರು.
ಸಮಾರಂಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪುನೀತ್ ಅವರಿಗೆ ಅತ್ಯುನ್ನತ ಪ್ರಶಸ್ತಿ ಘೋಷಣೆಗೆ ಸಂತಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರ ಪುನೀತ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮಾತನಾಡಿ, ರಾಜ್ಯದಲ್ಲಿ ಕಲಾವಿದರನ್ನು ತಯಾರಿಸುವ ಸಂಸ್ಥೆಯೊಂದನ್ನು ಪುನೀತ್ ಹೆಸರಿನಲ್ಲಿ ಸರ್ಕಾರ ಆರಂಭಿಸಬೇಕು ಎಂದರು.