Gokak Falls: ಗೋಕಾಕ ಜಲಪಾತ ಈಗ ಕಳಾಹೀನ; ಸೆಲ್ಫಿ ಮೂರ್ಖರಿಂದಾಗಿ ಹಾಳಾದ ಮೋಜು

0
286

ಗೋಕಾಕ ಫಾಲ್ಸ್ ಅಭಿವೃದ್ಧಿಯಾಗಬೇಕು

ಗೋಕಾಕ: ಕರ್ನಾಟಕದ ನಯಾಗರ ಎಂದು ಕರೆಯಲ್ಪಡುವ ಗೋಕಾಕ ಫಾಲ್ಸ್ ಮಳೆಗಾಲದಲ್ಲಿ ಭೋರ್ಗರೆಯುತ್ತದೆ. ಹೊಸ ಮಳೆಯ ಕಂದು ಬಣ್ಣದ ನೀರು ಬೆಟ್ಟದ ಮೇಲಿಂದ ಜಲಧಾರೆಯಾಗಿ ಕೆಳಗೆ ಬೀಳುತ್ತಿದ್ದರೆ ಗೋಕಾಕದ ಕರದಂಟು ನೀರಾಗಿ ಹರಿಯುತ್ತಿದೆಯೇನೋ ಅನ್ನಿಸುತ್ತದೆ. ಸುಂದರ ಪ್ರಕೃತಿಯ ಮಡಿಲಿನ ನಡುವೆ ಸ್ಥಿತವಾಗಿರುವ ಗೋಕಾಕ ಜಲಪಾತ ನೋಡುವುದೇ ಕಣ್ಣಿಗೆ ಹಬ್ಬ !

ಆದರೆ ಇಂದಿನ ದಿನಗಳಲ್ಲಿ ಗೋಕಾಕ ಜಲಪಾತ ನೋಡಲು ಹೋದರೆ ಪೊಲೀಸರ ಹಲವು ನಿರ್ಬಂಧಗಳಿಂದಾಗಿ ಜಲಪಾತವನ್ನು ಕಣ್ತುಂಬಿ ಕೊಳ್ಳಲಾಗದೆ ಕೇವಲ ದೂರ ನಿಂತು ಘಟಪ್ರಭಾ ನದಿಯ ಭೋರ್ಗರೆತವನ್ನು ಕೇಳಿ, ಅರ್ಧ ಮಾತ್ರ ನೋಡಿ ವಾಪಸು ಬರಬೇಕಾಗುತ್ತದೆ. 

ಇದಕ್ಕೆ ಕಾರಣ ಸೆಲ್ಫಿ ತೆಗೆಸಿಕೊಳ್ಳುವ ಯುವ ಜನಾಂಗ. ಯಮಧರ್ಮನಂತೆ ನದಿಯ ನೀರು ಆರ್ಭಟಿಸುತ್ತ ಹರಿಯುತ್ತ ಅಪಾರ ಆಳಕ್ಕೆ ಧುಮುಕುವುದನ್ನು ನೋಡಲಿಕ್ಕೇ ಒಂದು ರೀತಿಯ ಭಯ ಹುಟ್ಟಿಸುತ್ತಿದ್ದರೆ ಕೆಲವು ಭಂಡ ಯುವಜನಕ್ಕೆ ಅದೇ ಭೀಕರ ಜಲಪಾತದ ತುತ್ತ ತುದಿಗೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಭಂಡತನ. ಇದು ಮೂರ್ಖತನವಲ್ಲದೇ ಮತ್ತೇನೂ ಅಲ್ಲ. ಕೇವಲ ಒಂದೇ ಕ್ಷಣದ ಅಚಾತುರ್ಯದಿಂದ ಅಮೂಲ್ಯ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಹೆತ್ತ ತಂದೆ ತಾಯಿಗೆ ಬಂಧು ಬಳಗಕ್ಕೆ ಅಪಾರ ನೋವು ನೀಡಿ ಹೋಗಬೇಕಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಕೆಲವು ಮೂರ್ಖ ಯುವಕ ಯುವತಿಯರಿಂದಾಗಿ ಜಲಪಾತವನ್ನು ಕಣ್ತುಂಬಿ ಕೊಳ್ಳಲು ಬಂದವರಿಗೆ ನಿರಾಸೆಯಾಗುತ್ತಿದೆ. ಯಾಕೆಂದರೆ ಹೆಜ್ಜೆ ಹೆಜ್ಜೆಗೂ ಪೊಲೀಸರು ನಿರ್ಬಂಧ ಹಾಕಿದ್ದು ಜಲಪಾತದ ಅಂದ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಭೋರ್ಗರೆವ ನದಿ ಜಲಪಾತಗಳ ದಂಡೆಗೆ ನಿಂತು ಪೋಜು ಕೊಡಲು ಹೋಗಿ ಜೀವವನ್ನೇ ಕೊಟ್ಟ ಯುವಕರಿಂದಾಗಿ ಸೃಷ್ಟಿಯ ಅಂದ ಸವಿಯುವ ಅವಕಾಶವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ.

ಕೆಲವೇ ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಇಲ್ಲಿನ ಪ್ರಸಿದ್ಧ ತಂತಿ ಪೂಲ್ ಮೇಲೆ ಹೋಗಿ ನದಿಯ ನೆತ್ತಿಯ ಮೇಲೆಯೇ ನಿಂತು ಅಪಾರ ಆನಂದ, ಮೋಜು ಅನುಭವಿಸಬಹುದಿತ್ತು. ಈ ಕಡೆಯಿಂದ ಆ ಕಡೆಗೆ ಹೋಗಿ ಗುಡ್ಡದ ಮೇಲೆ ನಿಂತು ಒಂದು ಆ್ಯಂಗಲ್ ನಲ್ಲಿ ಜಲಪಾತವನ್ನು ವೀಕ್ಷಿಸಬಹುದಿತ್ತು. ಆ ಸೇತುವೆ ಹಳೆಯದಾದ ಕಾರಣ ಹಾಗೂ ಈ ಸೆಲ್ಫಿ ಹುಚ್ಚಿನ ಹುಚ್ಚು ಯುವಕರ ಕಾರಣದಿಂದಾಗಿ ತಂತಿಯ ಪೂಲ್ ಮೇಲೆ ಹೋಗುವುದನ್ನು ಬಂದ್ ಮಾಡಲಾಗಿದೆ. ಜಲಪಾತದ ಸಮೀಪ ಹೋಗಲು ಇನ್ನೂ ಒಂದು ದಾರಿ ಇದ್ದು ಅಲ್ಲಿಯೂ ಪೊಲೀಸ್ ಕಾವಲು ಹಾಕಲಾಗಿದೆ. ಒಂದು ಸುರಂಗದಂಥ ಮಾರ್ಗದ ಮೂಲಕ ಫಾಲ್ಸ್ ಪಕ್ಕದಲ್ಲಿಯೇ ಇರುವ ವಿದ್ಯುತ್ ಉತ್ಪಾದಕ ಯಂತ್ರದ ಸಮೀಪ ಹೋಗಬಹುದಿತ್ತು ಅದನ್ನೂ ಬಂದ್ ಮಾಡಿದ್ದಾರೆಂದು ತಿಳಿದುಬಂತು. ಗೋಕಾಕ ಫಾಲ್ಸ್ ದಲ್ಲಿ ಇನ್ನೀಗ ಮೊದಲಿನ ಮೋಜು, ಆಕರ್ಷಣೆ, ಆನಂದ ಇಲ್ಲವಾಗಿದೆ.

ಪ್ರವಾಸೋದ್ಯಮಕ್ಕೆ ಉತ್ತಮ ಚೇತರಿಕೆ ನೀಡಬಲ್ಲ ಗೋಕಾಕ ಫಾಲ್ಸ್ ಅನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಸಮೀಪದಿಂದಲೇ ಜಲಪಾತವನ್ನು ನೋಡಲು ಅನುಕೂಲವಾಗುವಂತೆ ಅದರ ಎದುರಿನಲ್ಲಿ ಈ ಬೆಟ್ಟದಿಂದ ಆ ಬೆಟ್ಟಕ್ಕೆ ಒಂದು ಮಜಬೂತಾದ ಸೇತುವೆ ಅಥವಾ ರೋಪ್ ವೇ ಹಾಕಿ ಪ್ರವಾಸಿಗರ ಆನಂದವನ್ನು ಹೆಚ್ಚಿಸಬಹುದಾಗಿದೆ. ಈ ಸಮಯದಲ್ಲಿ ಹೇಗೆ ಬೇಕಾದರೂ ಸೆಲ್ಫಿ ತೆಗೆದುಕೊಂಡರೂ ಅಪಾಯ ಸಂಭವಿಸದ ಹಾಗೆ ಒಂದು ಪಾಯಿಂಟ್ ಮಾಡಬಹುದು. ಫಾಲ್ಸ್ ಸುತ್ತಮುತ್ತ ಒಳ್ಳೆಯ ಊಟ ನೀಡುವ ಹೊಟೇಲುಗಳನ್ನು ಆರಂಭಿಸಬೇಕು. ನದಿಯಲ್ಲಿ ದೋಣಿ ವಿಹಾರಕ್ಕೆ ಅವಕಾಶ ಕೊಡಬಹುದು….

ಹೀಗೆ ಅನೇಕ ಪ್ರಕಾರದಲ್ಲಿ ಗೋಕಾಕ ಫಾಲ್ಸ್ ನಲ್ಲಿ ಅಭಿವೃದ್ಧಿ ಕಾರ್ಯಕೈಗೊಂಡು ಮಹಾರಾಷ್ಟ್ರ, ಗೋವಾ, ಉತ್ತರ ಕರ್ನಾಟಕದಿಂದ ಆಗಮಿಸುವ ಅಪಾರ ಸಂಖ್ಯೆಯ ಪ್ರವಾಸಿಗರಿಗೆ ಒಂದು ಹೊಸ ಅನುಭೂತಿ ಸಿಗುವಂತೆ ಮಾಡಬಹುದಾಗಿದೆ. ಪ್ರವಾಸೋದ್ಯಮ ಇಲಾಖೆ ಈ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಿ.


ಉಮೇಶ ಬೆಳಕೂಡ, ಮೂಡಲಗಿ