ಸಿಂದಗಿ; ಭಾರತ ದೇಶ ಬಲಿಷ್ಠವಾಗಬೇಕಾದರೆ ಪಾರ್ಲಿಮೆಂಟಿನಲ್ಲಿ ಸಂಸದರು, ರಾಜ್ಯ ವಿಧಾನಸಭೆಯಲ್ಲಿ ಶಾಸಕರು ಕುಳಿತು ಸಭೆ ನಡೆಸಿದರೆ ದೇಶ ಮತ್ತು ರಾಜ್ಯ ಪ್ರಗತಿ ಹೊಂದಲು ಸಾಧ್ಯವಿಲ್ಲ ಪ್ರತಿ ಮನೆಯಿಂದಲೇ ಉತ್ತಮ ಶಿಕ್ಷಣ ನೀಡಲು ಮುಂದಾದಾಗ ಮಾತ್ರ ಸಂವಿಧಾನಾತ್ಮಕವಾಗಿ ಈ ದೇಶ ಬಲಿಷ್ಠವಾಗಲು ಸಾಧ್ಯವಾಗುತ್ತದೆ ಎಂದು ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಎಚ್.ಜಿ.ಕಾಲೇಜು ಸಭಾ ಭವನದಲ್ಲಿ ಟಿಎಸ್‍ಪಿಎಸ್ ಮಂಡಳಿವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನನಗೆ ಸಭಾಧ್ಯಕ್ಷಸ್ಥಾನ ದೊರಕಿದೆ ಎಂದರೆ ಅದು ಡಾ. ಅಂಬೇಡ್ಕರರು ಬರೆದ ಸಂವಿಧಾನದಿಂದ ಮಾತ್ರ ಸಿಕ್ಕಿದೆ ನನ್ನ ಸಾಮರ್ಥ್ಯದಿಂದಲ್ಲ. ಅಲ್ಲದೆ ಈ ದೇಶದಲ್ಲಿ ಸಾರ್ವಜನಿಕರು ಭಯವಿಲ್ಲ ನಿರ್ಭಿಡೆಯಿಂದ ಓಡಾಡುತ್ತಿದ್ದಾರೆ ಎಂದರೆ ಅದು ಸಂವಿಧಾನವು ಕಲ್ಪಿಸಿಕೊಟ್ಟಿದೆ ಎಂದರು.
ಜಿಲ್ಲಾಧಿಕಾರಿ ಟಿ.ಭೂಬಾಲನ ಅವರು ಮಾತನಾಡಿ, ಒಬ್ಬ ವ್ಯಕ್ತಿ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಕಾರಣ 1944ರಲ್ಲಿ ಹುಟ್ಟಿಕೊಂಡಿರುವ ಟಿಎಸ್‍ಪಿಎಸ್ ಮಂಡಳಿಯಿಂದ ನಡೆಯುತ್ತಿರುವ ಈ ಸಂಸ್ಥೆ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಕಾರ್ಯನಿರ್ವಹಿಸಿದೆ ಅದಕ್ಕೆ ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಆಸ್ತಿಯ ಮಾಡುವ ಬದಲು ಶಿಕ್ಷಣವಂತರನ್ನಾಗಿ ಮಾಡಿ ಭಾರತದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸಿ ಆವಾಗ್ಗೆ ಸದೃಢ ದೇಶವಾಗುತ್ತದೆ ಅದಕ್ಕೆ ಮೊದಲು ಶಿಕ್ಷಣಕ್ಕೆ ಹೆಚ್ಚು ಕೊಡಿ ಎಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿದ ಆರೋಗ್ಯ ಸೇವೆಯಲ್ಲಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಡಾ. ಶಾಂತವೀರ ಮನಗೂಳಿ ಮಾತನಾಡಿ, 2020-21ನೇ ಸಾಲಿನಲ್ಲಿ ಇಡೀ ದೇಶಕ್ಕೆ ಮಾರಕವಾಗಿ ಅಂಟಿಕೊಂಡಿರುವ ಕೋವಿಡ್-19 ತಡೆಗಟ್ಟುವಲ್ಲಿ ನನ್ನ ಪತ್ನಿ ಡಾ. ಸಂಧ್ಯಾ ಮನಗೂಳಿ ಆದಿಯಾಗಿ ನನ್ನೆಲ್ಲ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಉಚಿತ ಸೇವೆ ಸಲ್ಲಿಸಿದ್ದಾರೆ ಅಂದಾಗ ಈ ಕ್ಷೇತ್ರದಲ್ಲಿ ರೋಗಮುಕ್ತವನ್ನಾಗಿಲು ಅಳಿಲು ಸೇವೆ ಸಲ್ಲಿಸಿದ್ದೇನೆ ಅಲ್ಲದೆ ಆ ಸಂದರ್ಭದಲ್ಲಿ ವಿಜಯಪುರದ ಉಧ್ಯಮಿ ರಫೀಕ ಕಾಣೆ ಅವರು ನನ್ನ ಸೇವೆಗೆ ಹೆಗಲಿಗೆ ಹೆಗಲು ಕೊಟ್ಟು ರೋಗಿಗಳಿಗೆ ಬೇಕಾಗಿರುವ ಆಕ್ಸಿಜನ್ ಪೂರೈಸಿದ್ದಾರೆ ಅವರ ಸೇವೆಯು ಕೂಡಾ ಅಮೋಘವಾದದ್ದು ನನಗೆ ದೊರೆತ ಪ್ರಶಸ್ತಿಯಲ್ಲಿ ಪತ್ರಕರ್ತರ ಪಾತ್ರ ಕೂಡಾ ಪ್ರಮುಖವಾಗಿದೆ ನನ್ನ ಸೆವೆಗೆ ಸಹಕಾರ ನೀಡಿದ ಎಲ್ಲರು ಈ ಪ್ರಶಸ್ತಿಯ ಪಾಲುದಾರರು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಎಂದರೆ ಅದು ಯು.ಟಿ.ಖಾದರ ಅವರು ಈ ಕ್ಷೇತ್ರಕ್ಕೆ ಅವರ ಅವಿನಾವಭಾವ ಸಂಬಂಧವಿದೆ ಖಾದರ ಮನೆತನದಲ್ಲಿ ಸತತ 9 ಬಾರಿ ಚುನಾವಣೆಯಲ್ಲಿ ಗೆದ್ದು ಉನ್ನತ ಸ್ಥಾನದಲ್ಲಿಯೇ ಕಾರ್ಯನಿರ್ವಹಿಸಿದ್ದಾರೆ. ಇವರು 5 ಬಾರಿ ಗೆದ್ದು ಎಲ್ಲ ಮಜಲುಗಳನ್ನು ಏರಿದ್ದಾರೆ. ಮುಂದೆ ಆ ಉಲ್ಲಾಳ ಕ್ಷೇತ್ರ ಎಂದು ಇವರನ್ನು ಸೋಲಿಸುವ ಮಾತೇ ಇಲ್ಲ. ಆ ನಿಟ್ಟಿನಲ್ಲಿ ನಾನು ಕೂಡಾ ಕಾರ್ಯಪ್ರವೃತ್ತನಾಗಿರುವೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ, ಆರೋಗ್ಯ ಸೇವೆಯಲ್ಲಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಡಾ. ಸಂಧ್ಯಾ ಮನಗೂಳಿ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಜಿಪಂ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಸಿಂಧೆ, ಇಂಡಿ ಉಪವಿಬಾಗಾಧಿಕಾರಿ ಅಬಿದ ಗದ್ವಾಲ, ಅಂಜುಮನ ಶಿಕ್ಷಣ ಸಂಸ್ಥೆಯ ಪ್ರ.ಕಾರ್ಯದರ್ಶಿ ಎಸ್.ಎಂ.ಪಾಟೀಲ ಗಣೀಹಾರ, ಸಂಸ್ಥೆಯ ನಿರ್ದೇಶಕರಾದ ಶಿವಪ್ಪಗೌಡ ಬಿರಾದಾರ, ಡಾ. ಮುತ್ತು ಮನಗೂಳಿ, ಬಿ.ಜಿ.ನೆಲ್ಲಗಿ, ವಕೀಲರು, ಬಿ.ಎಸ್.ಪಾಟೀಲ ಡಂಬಳ, ವಿ.ಎಸ್.ಮಾಗಣಗೇರಿ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.
ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಜಿ.ಪಾಟೀಲ ಸ್ವಾಗತಿಸಿದರು. ಪ್ರಾಧ್ಯಾಪಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು. ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಪರಿಚಯಿಸಿದರು.