spot_img
spot_img

ವಿದ್ವತ್ತಿನ ಮೇರು ಶಿಖರ : ಡಾ. ಮೃತ್ಯುಂಜಯ ರುಮಾಲೆ

Must Read

- Advertisement -
[ಖ್ಯಾತ ಬರಹಗಾರರೂ ವಿದ್ವಾಂಸರೂ ವಿಜಯ ನಗರ ಕಾಲೇಜಿನ ಪ್ರಾಧ್ಯಾಪಕರೂ ಆದ ಡಾ. ಮೃತ್ಯುಂಜಯ ರುಮಾಲೆ ಅವರು ಇಂದು ಸೇವಾನಿವೃತ್ತಿಯಾಗುತ್ತಿದ್ದಾರೆ. ತನ್ನಿಮಿತ್ತ ಈ ನುಡಿಗೌರವ]

ಬಳ್ಳಾರಿ ಜಿಲ್ಲೆಯ ಇತಿಹಾಸವನ್ನು ಅರಿತುಕೊಳ್ಳಬೇಕೆಂದರೆ, ಡಾ. ಮೃತ್ಯುಂಜಯ ರುಮಾಲೆ ಅವರ ಕೃತಿಗಳನ್ನು ಅಧ್ಯಯನ ಮಾಡಬೇಕು ಅಥವಾ ಅವರೊಂದಿಗೆ ಮಾತುಕತೆ ಮಾಡಬೇಕು. ಅಷ್ಟರಮಟ್ಟಿಗೆ ಬಳ್ಳಾರಿ ಇತಿಹಾಸವನ್ನು ಕುರಿತು ಅಧಿಕೃತವಾಗಿ ಹೇಳುವ ಏಕೈಕ ವ್ಯಕ್ತಿ ಎಂದರೆ ಡಾ. ಮೃತ್ಯುಂಜಯ ರುಮಾಲೆ ಅವರು. ಇತ್ತೀಚೆಗೆ ಅವರು ಬರೆದ ‘ಸಂಕೀರ್ಣ ಬಳ್ಳಾರಿ’, ‘ಸ್ವಾತಂತ್ರ್ಯ ಹೋರಾಟ : ಬಳ್ಳಾರಿ’ ಕೃತಿಗಳಂತೂ ಅವರ ಅಪೂರ್ವ ಸಂಶೋಧನೆಗಳಾಗಿವೆ.

ಡಾ. ಮೃತ್ಯುಂಜಯ ರುಮಾಲೆ ಅವರ ಪೂರ್ವಜರು ಮೈಸೂರು ಭಾಗದವರು. ಇವರ ಮುತ್ತಜ್ಜನ ಕಾಲಕ್ಕೆ ಮೈಸೂರು ಮಹಾರಾಜರ ಆಸ್ಥಾನದಲ್ಲಿ ಪೌರೋಹಿತ್ಯ ಮಾಡುವ ಕುಟುಂಬ ಇವರದು. ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುವ ಒಂದು ಮಹತ್ವದ ಜವಾಬ್ದಾರಿ ಇವರ ಕುಟುಂಬದ ಮೇಲಿತ್ತು, ಕಾಲಾನಂತರದಲ್ಲಿ ಮೈಸೂರಿನಿಂದ ರುಮಾಲೆ ಕರಿಬಸಯ್ಯನವರ ಕುಟುಂಬ ಹೊಸಪೇಟೆಗೆ ಬಂದು ನೆಲೆಸಿತು. ಡಾ. ಮೃತ್ಯುಂಜಯ ರುಮಾಲೆ ಅವರ ತಂದೆಯವರು ಸೊಂಡೂರಿಗೆ ಬಂದು ನೆಲೆ ನಿಂತರು. ಇವರು ಸೊಂಡೂರಿನಲ್ಲಿ ದಿನಾಂಕ ೧-೬-೧೯೬೪ರಂದು ಜನಿಸಿದರು. ಒಂದು ಕಾಲದಲ್ಲಿ ಸೊಂಡೂರು ಪ್ರತ್ಯೇಕ ಸಂಸ್ಥಾನವಾಗಿತ್ತು. ಬಳ್ಳಾರಿ ಜಿಲ್ಲೆಯ ಒಂದು ತಾಲೂಕಾದರೂ ತನ್ನದೇ ಆದ ಪ್ರತ್ಯೇಕ ಅಸ್ತಿತ್ವವನ್ನು ಹೊಂದಿತ್ತು. ಈ ಸೊಂಡೂರಿನಲ್ಲಿಯೇ ಡಾ. ಮೃತ್ಯುಂಜಯ ರುಮಾಲೆ ಅವರು ಬಿ.ಎಸ್ಸಿ ವರೆಗಿನ ಅಧ್ಯಯನ ಪೂರೈಸಿದರು. ಓದಿದ್ದು ವಿಜ್ಞಾನವಾದರೂ ಆಂತರ್ಯದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ ಇದ್ದ ಕಾರಣ, ನಂದೀಹಳ್ಳಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾದ ವರುಷವೇ ಮೊದಲ ಬ್ಯಾಚಿನ ವಿದ್ಯಾರ್ಥಿಗಳಾಗಿ ಡಾ. ಮೃತ್ಯುಂಜಯ ರುಮಾಲೆ ಅವರು ಪ್ರವೇಶ ಪಡೆದರು. ಡಾ. ಮೃತ್ಯುಂಜಯ ಹೊರಕೇರಿ ಅವರು ಅಲ್ಲಿ ಪ್ರಾಧ್ಯಾಪಕರಾಗಿದ್ದರು. ಸ್ನಾತಕೋತ್ತರ ಪದವಿ ಪಡೆದ ನಂತರ ‘ರಾಜಾಶ್ರಯದಲ್ಲಿ ಕನ್ನಡ ಸಾಹಿತ್ಯ’ ಎಂಬ ವಿಷಯ ಕುರಿತು ಸಂಶೋಧನೆ ಮಾಡಿ, ಪಿಎಚ್.ಡಿ. ಪದವಿಯನ್ನು ಪಡೆದರು. ಈ ಅಧ್ಯಯನದ ಮೂಲಕ ಅವರು ಏಕಕಾಲಕ್ಕೆ ಸಾಹಿತ್ಯ ಮತ್ತು ಚರಿತ್ರೆಗಳ ಅಧ್ಯಯನಕ್ಕೆ ವ್ಯಾಪಕವಾದ ಭೂಮಿಕೆಯನ್ನು ಸಿದ್ಧಮಾಡಿಕೊಂಡರು. ನಂತರ ಅನೇಕ ಮಹತ್ವದ ಕೃತಿಗಳನ್ನು ಬರೆಯತೊಡಗಿದರು.

ಪಿಎಚ್.ಡಿ. ಪದವಿ ಪಡೆದ ತಕ್ಷಣ ಹೊಸಪೇಟೆ ವಿಜಯ ನಗರ ಕಾಲೇಜಿನಲ್ಲಿ ಡಾ. ಮೃತ್ಯುಂಜಯ ರುಮಾಲೆ ಅವರು ವೃತ್ತಿಜೀವನ ಆರಂಭಿಸಿದರು. ಸಿ.ಬಿ.ಚಂದ್ರಶೇಖರಪ್ಪ ಅವರಂತಹ ಧೀಮಂತ ಪ್ರಾಚಾರ್ಯರು ಕಟ್ಟಿ ಬೆಳೆಸಿದ ವಿಜಯ ನಗರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರಾದರು. ಅಧ್ಯಯನ-ಅಧ್ಯಾಪನ ಜೊತೆಗೆ ಬರವಣಿಗೆ ನಿರಂತರ ಸಾಗಿತು. ಡಾ. ಮೃತ್ಯುಂಜಯ ರುಮಾಲೆ ಅವರ ಮೊದಲ ಆದ್ಯತೆ ಕವಿತೆ. ಆರಂಭದಲ್ಲಿ ಅವರು ಒಳ್ಳೆಯ ಕವಿತೆಗಳನ್ನು ಬರೆದರು. ಒಂದು ಕವನ ಸಂಕಲನವನ್ನು ಕೂಡ ಹೊರತಂದಿದ್ದಾರೆ. ಆದರೆ ಚಾರಿತ್ರಿಕ ಕೃತಿ ರಚನೆಯಲ್ಲಿ ಸಿಗುವ ಆನಂದ ಸೃಜನಶೀಲ ಕೃತಿ ನಿರ್ಮಾಣದಲ್ಲಿ ದೊರೆಯಲಿಲ್ಲವೆಂದು ಅವರು ಹೇಳುತ್ತಾರೆ. ಹೀಗಾಗಿ ಅವರ ಅಂತರಂಗದಲ್ಲಿ ಕಾವ್ಯಾರಾಧನೆ ಇದ್ದಿತ್ತಾದರೂ ಅವರ ಬರವಣಿಗೆಯೆಲ್ಲ ಸಂಶೋಧನೆಯತ್ತ ನಡೆದಿತ್ತು ಎಂಬುದು ಗಮನಾರ್ಹ.

- Advertisement -

ಕ್ರಿ.ಶ. ೨೦೧೦ರಲ್ಲಿ ಶಿವಯೋಗಮಂದಿರ ಶತಮಾನೋತ್ಸವ ಕಾರ್ಯಕ್ರಮ ಅತ್ಯಂತ ವಿಧಾಯಕವಾಗಿ ಜರುಗಿತು. ಈ ಸಂದರ್ಭದಲ್ಲಿ ಡಾ. ಮೃತ್ಯುಂಜಯ ರುಮಾಲೆ ಅವರು ‘ಶಿವಯೋಗಮಂದಿರ ಶತಸಂವತ್ಸರ’ ಎಂಬ ಸಾವಿರ ಪುಟಗಳ ಬೃಹತ ಕೃತಿಯನ್ನು ಬರೆದರು. ಈ ಗ್ರಂಥ ರಚನೆಗಾಗಿ ಆಕರಗಳನ್ನು ಹುಡುಕುತ್ತ ಇಡೀ ಕರ್ನಾಟಕವನ್ನು ಸುತ್ತಿದರು. ಈ ಸಂದರ್ಭದಲ್ಲಿ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯಕ್ಕೂ ಬಂದಿದ್ದರು. ಆ ಸಂದರ್ಭದಲ್ಲಿ ಒಂದು ವಾರಗಳ ಕಾಲ ಡಾ. ರುಮಾಲೆ ಅವರನ್ನು ತುಂಬ ಹತ್ತಿರದಿಂದ ಕಾಣುವ ಸುಯೋಗ ನನಗೆ ಲಭಿಸಿತು. ೧೯೧೦ರಿಂದ ಕನ್ನಡದಲ್ಲಿ ಪ್ರಕಟವಾದ ಬಹುತೇಕ ಗ್ರಂಥಗಳನ್ನು ಅವಲೋಕನ ಮಾಡಿದರು. ಸದ್ಧರ್ಮ ದೀಪಿಕೆ, ಶಿವಾನುಭವ, ಶರಣ ಸಂದೇಶ, ಶರಣ ಸಾಹಿತ್ಯ ಮೊದಲಾದ ಪತ್ರಿಕೆಗಳನ್ನು ಸೂಕ್ಷö್ಮವಾಗಿ ಅವಲೋಕಿಸಿ, ಶಿವಯೋಗಮಂದಿರ ಮತ್ತು ಹಾನಗಲ್ಲ ಕುಮಾರ ಶಿವಯೋಗಿಗಳಿಗೆ ಸಂಬAಧಪಟ್ಟ ಅನೇಕ ಹೊಸ ವಿಚಾರಗಳನ್ನು ಸಂಗ್ರಹಿಸಿ, ಸಾವಿರ ಪುಟದ ಬೃಹತ್ ಗ್ರಂಥವನ್ನು ರಚಿಸಿದರು. ಆ ಸಂದರ್ಭದಲ್ಲಿ ಅವರ ಪರಿಶ್ರಮ-ಶ್ರದ್ಧೆ-ನಿಷ್ಠೆ ಹಿಡಿದ ಕೆಲಸವನ್ನು ಮುಗಿಸುವ ಛಲ ಮೊದಲಾದ ಗುಣಗಳನ್ನು ನೋಡಿ ಬೆರಗಾಗಿದ್ದೆ.

೨೦೨೨ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ. ವಸಂತ ಕುಮಾರ ಅವರು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ನಿಮಿತ್ಯ ೭೫ ಕೃತಿಗಳನ್ನು ಪ್ರಕಟಿಸಬೇಕೆಂಬ ಬೃಹತ್ ಯೋಜನೆ ರೂಪಿಸಿದರು. ಇದರಲ್ಲಿ ಹದಿನೈದು ಕೃತಿಗಳ ಸಂಪಾದನೆಯ ಜವಾಬ್ದಾರಿಯನ್ನು ಡಾ. ಮೃತ್ಯುಂಜಯ ರುಮಾಲೆ ಅವರಿಗೆ ನೀಡಿದರು. ಕ್ಲುಪ್ತ ಅವಧಿಯಲ್ಲಿ ಕೃತಿ ರಚನೆ ಮಾಡುವುದು ತುಂಬ ಕಷ್ಟದ ಕೆಲಸ. ಹೀಗಿದ್ದೂ ಡಾ. ರುಮಾಲೆ ಅವರು ಈ ಯೋಜನೆಯನ್ನು ಒಂದು ಸವಾಲಾಗಿ ಸ್ವೀಕರಿಸಿ, ಕಾರ್ಯೋನ್ಮುಖರಾದರು. ತಾವೇ ಐದು ಕೃತಿಗಳನ್ನು ರಚಿಸಿದರು. ನನ್ನಿಂದ ಐದು ಕೃತಿಗಳನ್ನು ಬರೆಯಿಸಿದರು. ಸಾಹಿತ್ಯ ಅಕಾಡೆಮಿಯಂತಹ ಉನ್ನತಮಟ್ಟದ ಸಂಸ್ಥೆಯಿಂದ ನನ್ನ ಐದು ಕೃತಿಗಳು ಪ್ರಕಟವಾಗುವಲ್ಲಿ ಡಾ. ರುಮಾಲೆ ಅವರು ತೋರಿದ ಪ್ರೀತಿ, ನನ್ನ ಮೇಲೆ ತೋರಿದ ಕಳಕಳಿ ಅನನ್ಯ-ಅಪರೂಪ. ಅತ್ಯಂತ ಕಿರಿಯನಾದ ನನ್ನಿಂದ ಐದು ಕೃತಿಗಳನ್ನು ಅಲ್ಪಾವಧಿಯಲ್ಲಿ ಬರೆಯಿಸಿದರು. ಏಕಕಾಲಕ್ಕೆ ೭೫ ಕೃತಿಗಳು ಲೋಕಾರ್ಪಣೆಯಾದವು. ಇದು ಡಾ. ರುಮಾಲೆ ಅವರ ಕೆಲಸದ ಮೇಲಿನ ಶ್ರದ್ಧೆ ನಿಷ್ಠೆಯನ್ನು ತೋರಿಸುತ್ತದೆ. ಇಷ್ಟೇ ಅಲ್ಲದೆ, ಡಾ. ವಸಂತ ಕುಮಾರ ಅವರ ಒತ್ತಾಯದ ಮೇರೆಗೆ ‘ಕವಿಗಳು ಕಂಡ ಭಾರತ’ ಎಂಬ ನಾಲ್ಕು ಬೃಹತ್ ಸಂಪುಟಗಳನ್ನು ಡಾ. ರುಮಾಲೆ ಅವರು ಅತ್ಯಂತ ಸಮರ್ಥವಾಗಿ ಸಂಪಾದಿಸಿ ಕೊಟ್ಟರು. ಬಸವಪ್ಪ ಶಾಸ್ತಿçಗಳಿಂದ ಇತ್ತೀಚಿನ ಕವಿಗಳ ವರೆಗಿನ ಎಲ್ಲ ಕವಿಗಳ ರಾಷ್ಟ್ರೀಯ ಚಿಂತನೆಯ ಅಪರೂಪದ ಒಂದು ಸಂಪಾದನೆಯನ್ನು ಡಾ. ರುಮಾಲೆ ಅವರು ಮಾಡಿಕೊಟ್ಟರು. ಇದು ಕನ್ನಡ ಸಾಹಿತ್ಯಲೋಕದಲ್ಲಿ ಚಿರಕಾಲ ಉಳಿಯುವ ಕಾರ್ಯವಾಗಿದೆ.

ಡಾ. ರುಮಾಲೆ ಅವರು ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದವರು. ‘ಮಲ್ಲಿಕಾರ್ಜುನ ವಚನಾಂಕಿತ’ ಎಂಬ ಒಂದು ಅಂಕಿತದ ಬೆನ್ನು ಹತ್ತಿ ಒಂದು ಪುಸ್ತಕವನ್ನೇ ಅವರು ರಚಿಸಿದ್ದಾರೆ. ೨೦೦೯ರಲ್ಲಿ ಈ ಕೃತಿ ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ತುಮಕೂರಿನಲ್ಲಿ ಲೋಕಾರ್ಪಣೆಯಾಯಿತು. ಈ ಸಂದರ್ಭದಲ್ಲಿ ನಾನು ಬರೆದ ಕೃತಿಯೊಂದು ಸಿದ್ಧಗಂಗೆಯ ಸಿದ್ಧಪುರುಷ ಡಾ. ಶಿವಕುಮಾರ ಸ್ವಾಮೀಜಿಯವರಿಂದ ಲೋಕಾರ್ಪಣೆಗೊಂಡಿತು. ನಾವಿಬ್ಬರು ಅಂತಹ ಪರಮ ತಪಸ್ವಿಗಳಿಂದ ಆಶೀರ್ವಾದವನ್ನು ಏಕಕಾಲಕ್ಕೆ ಪಡೆದು ಧನ್ಯತೆಯನ್ನು ಅನುಭವಿಸಿದೆವು. ಇದೊಂದು ನನ್ನ ಜೀವನದಲ್ಲಿ ಮರೆಯಲಾರದ ಘಟನೆಯಾಗಿದೆ.

- Advertisement -

‘ವಚನ ನಿಘಂಟು’ ಮತ್ತು ‘ರಗಳೆಗಳ ನಾಮಕೋಶ’ ಎಂಬ ಎರಡು ಅಮೂಲ್ಯ ಆಕರ ಗ್ರಂಥಗಳನ್ನು ಡಾ. ರುಮಾಲೆ ಅವರು ರಚಿಸಿದ್ದಾರೆ. ಅದರಲ್ಲೂ ‘ವಚನ ನಿಘಂಟು’ ಅವರಿಗೆ ಅಪಾರ ಕೀರ್ತಿ ಮತ್ತು ಗೌರವವನ್ನು ತಂದುಕೊಟ್ಟಿತು. ವಚನಾಭ್ಯಾಸಿಗಳಿಗೆ ತುಂಬ ಅನುಕೂಲವಾಗುವ ಈ ನಿಘಂಟು ಜನಾದರಣೀಯವಾಯಿತು. ವಚನಕಾರರು ಒಂದು ಶಬ್ದಕ್ಕೆ ಇಪ್ಪತ್ತಾರು ಬಗೆ ಬಗೆಯ ಅರ್ಥಗಳನ್ನು ಹೇಳಿರುವುದನ್ನು ಡಾ. ರುಮಾಲೆ ಅವರು ಗುರುತಿಸಿ ಕೊಟ್ಟಿರುವುದು ಅವರ ಭಾಷಾಜ್ಞಾನಕ್ಕೆ, ವಚನಗಳ ಆಳ ಅಧ್ಯಯನಕ್ಕೆ ಪರಮ ನಿದರ್ಶನವೆನಿಸಿದೆ.

ಡಾ. ರುಮಾಲೆ ಅವರು ಏನೇ ಮಾಡಿದರೂ ಬೃಹತ್ತಾದದ್ದನ್ನೇ ಮಾಡುತ್ತಾರೆ. ಅವರ ಕೃತಿಗಳನ್ನು ನೋಡಿದರೆ ಸೋಜಿಗವೆನಿಸುತ್ತದೆ. ಅವರು ಸಂಪಾದಿಸಿದ ವೈ. ನಾಗೇಶ ಶಾಸ್ತಿçಗಳ ಸಮಗ್ರ ಸಾಹಿತ್ಯ, ಅಲ್ಲಂ ಕರಿಬಸಪ್ಪ-ಅಲ್ಲಂ ಸುಮಂಗಳಮ್ಮ, ಹಾನಗಲ್ಲ ಕುಮಾರ ಶಿವಯೋಗಿಗಳ ಸಮಗ್ರ ಸಾಹಿತ್ಯ, ಹೊಸಪೇಟೆ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಪೂಜ್ಯ ಡಾ. ಸಂಗನ ಬಸವ ಸ್ವಾಮೀಜಿ ಅವರ ಅಭಿನಂದನ ಗ್ರಂಥ ‘ಹರಿದ ಹೆದ್ದೊರೆ’ ಮೊದಲಾದ ಕೃತಿಗಳು ಗಾತ್ರದಲ್ಲೂ ಸತ್ವದಲ್ಲೂ ಬೃಹತ್ತಾಗಿರುವುದನ್ನು ಗಮನಿಸಬಹುದು.

ಡಾ. ರುಮಾಲೆ ಅವರು ಜೀವನ ಚರಿತ್ರೆಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರು. ಅವರು ಇಬ್ಬರು ಮೃತ್ಯುಂಜಯ ಸ್ವಾಮಿಗಳ ಚರಿತ್ರೆಯನ್ನು ಬರೆದಿದ್ದಾರೆ. ಒಂದು ಧಾರವಾಡ ಮುರುಘಾಮಠದ ಮೃತ್ಯುಂಜಯ ಸ್ವಾಮಿಗಳು, ಇನ್ನೊಂದು ಮುಧೋಳ ಗವಿಮಠದ ಮೃತ್ಯುಂಜಯ ಸ್ವಾಮಿಗಳು. ಈ ಎರಡೂ ಜೀವನ ಚರಿತ್ರೆಗಳು ಡಾ. ರುಮಾಲೆ ಅವರ ತಪಸ್ಸಿನ ಫಲವೆನ್ನುವಂತೆ ಮೂಡಿಬಂದಿವೆ. ಅಷ್ಟು ವ್ಯಾಪಕ ವಿಷಯ ಸಂಗ್ರಹ, ಆ ಕಾಲಮಾನದ ಸ್ಥಿತಿಗಳ ಸಮತೂಕದ ವಿಶ್ಲೇಷಣೆ ಅನನ್ಯ-ಅಪರೂಪವಾಗಿವೆ.

ಡಾ. ರುಮಾಲೆ ಅವರು ನಮ್ಮ ನಾಡಿನ ಬಹುತೇಕ ಮಠಾಧೀಶರ ಪ್ರೀತಿ ಗೌರವಗಳಿಗೆ ಪಾತ್ರರಾದವರು. ಅನೇಕ ಮಠಗಳು ಅವರ ಕೃತಿಗಳನ್ನು ಪ್ರಕಟಿಸಿವೆ. ೨೦೨೦ರಲ್ಲಿ ಶಿವಮೊಗ್ಗ ಬಸವ ಕೇಂದ್ರದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಅವರು ‘ಇಷ್ಟಲಿಂಗ : ವಿವಿಧ ಆಯಾಮಗಳು’ ಎಂಬ ವಿಚಾರ ಸಂಕಿರಣ ಆಯೋಜಿಸಿದರು. ಈ ವಿಚಾರ ಸಂಕಿರಣದ ಸಂಯೋಜಕರಾಗಿ ಡಾ. ರುಮಾಲೆ ಅವರನ್ನು ಪೂಜ್ಯರು ಜವಾಬ್ದಾರಿ ನೀಡಿದರು. ಈ ಸಂದರ್ಭದಲ್ಲಿ ‘ಇಷ್ಟಲಿಂಗ ಸಾಮಾಜಿಕ ಆಯಾಮ’ ಕುರಿತು ನನಗೆ ಭಾಷಣ ಮಾಡಲು ಡಾ. ರುಮಾಲೆ ಅವರು ಹೇಳಿದಾಗ ನನಗೆ ಆಶ್ರ್ಯವೆನಿಸಿತು. ನಾನು ಭಾಷಣಕಾರನಲ್ಲ ಎಂದು ವಿನಂತಿಸಿಕೊಂಡೆ, ಹೀಗಿದ್ದೂ ಡಾ. ರುಮಾಲೆ ಗುರುಗಳು ನನ್ನನ್ನು ಶಿವಮೊಗ್ಗ ಬಸವ ಕೇಂದ್ರಕ್ಕೆ ಬರಲು ಆಜ್ಞಾಪಿಸಿದರು. ನಾನು ಮಾಡಿದ ಭಾಷಣವನ್ನು ಬರೆದುಕೊಟ್ಟೆ. ಈ ಲೇಖನವನ್ನು ಡಾ. ರುಮಾಲೆ ಅವರು ತಮ್ಮ ಸಂಪಾದನೆ ‘ಇಷ್ಟಲಿಂಗ ವಿವಿಧ ಆಯಾಮಗಳು’ ಕೃತಿಯಲ್ಲಿ ಪ್ರಕಟಿಸಿರುವುದು ನನ್ನಲ್ಲಿ ಧನ್ಯತೆಯನ್ನುಂಟು ಮಾಡಿದೆ.

ಡಾ. ರುಮಾಲೆ ಅವರು ಶರಣರ ಕಾಯಕ-ದಾಸೋಹ ತತ್ವಗಳನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದವರು. ತಮ್ಮ ದುಡಿಮೆಯ ಒಂದು ಭಾಗ ಸಮಾಜಸೇವೆಗೆ ಸಲ್ಲಬೇಕೆಂಬ ಅಪೇಕ್ಷೆಯುಳ್ಳವರು. ಇತ್ತೀಚೆಗೆ ಸಿದ್ಧಗಂಗಾ ಮಠದ ಪೂಜ್ಯರಿಗೆ ಒಂದು ಲಕ್ಷ ರೂ.ಗಳ ದಾಸೋಹ ನೀಡಿದರು. ತಾವು ಹೀಗೆ ಕೊಟ್ಟ ಯಾವುದೇ ದಾಸೋಹ ಸೇವೆಯನ್ನು ಯಾರಲ್ಲೂ ಎಂದೂ ಹೇಳಿಕೊಂಡವರಲ್ಲ. ಬಲಗೈಯಿಂದ ಕೊಟ್ಟದ್ದು, ಎಡಗೈಗೆ ಗೊತ್ತಾಗಬಾರದು ಎಂಬ ನಿಲುವುದು ಅವರದು. ತಾವು ಮಾಡುವ ಈ ಧನ ದಾಸೋಹದ ಕುರಿತು ಅವರು ಎಂದು ಯಾರ ಮುಂದೆಯೂ ಹೇಳಿ ಜಂಭಕೊಚ್ಚಿಕೊಂಡವರಲ್ಲ. ಅಷ್ಟೊಂದು ನಿರಪೇಕ್ಷ ಭಾವ ಅವರದು.

ಡಾ. ರುಮಾಲೆ ಅವರ ಸಾಹಿತ್ಯಸೇವೆಗೆ ಅನೇಕ ಗೌರವ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವರೆಂದು ಪ್ರಶಸ್ತಿಗಳಿಗೆ ಆಸೆ ಪಟ್ಟವರಲ್ಲ. ಯಾವ ಪ್ರಶಸ್ತಿಗೂ ಅವರು ಅರ್ಜಿ ಹಾಕಿದವರಲ್ಲ. ಹೀಗಿದ್ದೂ ಅವರ ಸಾಹಿತ್ಯ ಸೇವೆಯನ್ನು ಗಮನಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಡಾ. ತಿಪ್ಪೇರುದ್ರಸ್ವಾಮಿ ಪ್ರಶಸ್ತಿ, ವಚನ ನಿಘಂಟು ಕೃತಿಗೆ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಹಳಕಟ್ಟಿಶ್ರೀ ಪ್ರಶಸ್ತಿ, ಎಚ್ಚೆನ್ ಪ್ರಶಸ್ತಿ ಮೊದಲಾದ ಗೌರವಗಳು ಅವರಿಗೆ ಸಂದಿವೆ.
ಇಂದು ವಯೋಸಹಜ ಕಾರಣವಾಗಿ ವೃತ್ತಿಯಿಂದ ಡಾ. ರುಮಾಲೆ ಗುರುಗಳು ತಮ್ಮ ಅಧ್ಯಾಪನ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಅವರ ನಿವೃತ್ತಿ ಜೀವನವು ಅತ್ಯಂತ ಸುಖಕರವಾಗಿರಲಿ, ಅವರಿಂದ ಕನ್ನಡ ಸಾಹಿತ್ಯ ಲೋಕ ಸಿರಿವಂತಗೊಳ್ಳುವ ಇನ್ನೂ ಅನೇಕ ಅಮೂಲ್ಯ ಕೃತಿರತ್ನಗಳು ರಚನೆಯಾಗಲಿ ಎಂದು ಪ್ರೀತಿಪೂರ್ವಕ ಆಶಿಸುವೆ.

ಪ್ರಕಾಶ ಗಿರಿಮಲ್ಲನವರ
ಬೆಳಗಾವಿ
ಮೊ: ೯೯೦೨೧೩೦೦೪೧

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಿಂದಗಿ ಮಂಡಲ ವತಿಯಿಂದ ರಸ್ತಾರೋಖೋ ಪ್ರತಿಭಟನೆ

ಸಿಂದಗಿ - ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದು, ರಾಜ್ಯದಲ್ಲಿನ ಕಾನೂನ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಹಾಗೂ ವಾಲ್ಮೀಕಿ ನಿಗಮದ ಹಗರಣದ...
- Advertisement -

More Articles Like This

- Advertisement -
close
error: Content is protected !!
Join WhatsApp Group