ಬೆಂಗಳೂರು: ಮೈಸೂರು ರಸ್ತೆಯಿಂದ ಕೆಂಗೇರಿಗೆ ಸಾಗುವ ನಮ್ಮ ಮೆಟ್ರೋದ ವಿಸ್ತೃತ ನೇರಳೆ ಮಾರ್ಗವನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹಸಿರು ನಿಶಾನೆ ತೋರಿಸುವ ಮೂಲಕ ಆಗಸ್ಟ್ 29 ರಂದು ಉದ್ಘಾಟಿಸಿದರು.
ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದ 7.5 ಕಿಲೋಮೀಟರ್ ಮೆಟ್ರೋ ನೇರಳೆ ರೈಲು ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ವಸತಿ ಮತ್ತು ನಗರ ವ್ಯವಹಾರ ಮತ್ತು ಪೆಟ್ರೋಲಿಯಮ್ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ನಾಯಂಡಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು .
“ನಗರದ ಹಿರಿಮೆಗೆ ಮೆಟ್ರೋ ರೈಲು ಮಾರ್ಗ ಒಂದು ಹೆಮ್ಮೆ” : ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಬೆಂಗಳೂರು ನಗರದ ಹಿರಿಮೆಗೆ ಮೆಟ್ರೋ ರೈಲು ಮಾರ್ಗ ಒಂದು ಹೆಮ್ಮೆಯಾಗಿದೆ ಎಂದರು.
ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ರೂಪುರೇಷೆಗಳ ಮೂಲಕ ಉತ್ತಮ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದೇ ಸರ್ಕಾರದ ಧ್ಯೇಯವಾಗಿದೆ ಎಂದರು.
ನಗರದ ಅಭಿವೃದ್ಧಿಯ ಪ್ರಗತಿ ಪರಿಶೀಲನೆ ಗಾಗಿ ಪ್ರತಿನಿತ್ಯ ಒಂದು ಗಂಟೆ ಮೀಸಲಿಟ್ಟು ನಗರ ಪ್ರದಕ್ಷಿಣೆ ಮಾಡಿ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಗರ ವ್ಯವಹಾರ ಮತ್ತು ಪೆಟ್ರೋಲಿಯಮ್ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಯವರು ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಜಾಗತಿಕ ಮಟ್ಟದಲ್ಲಿ ಬೆಂಗಳೂರು ತಂತ್ರಜ್ಞಾನ ನಗರವಾಗಿ ರೂಪಗೊಂಡಿರುವ ಪರಿಣಾಮದಿಂದಾಗಿ ಅಗತ್ಯ ಮೂಲಭೂತ ಸೌಕರ್ಯ ಹಾಗು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ, ನೆರವು ನೀಡಲಿದೆ ಎಂದು ನುಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬೆಂಗಳೂರು ನಗರದಲ್ಲಿ ವೇಗದ ಪ್ರಯಾಣ ಮತ್ತು ಸ್ಮಾರ್ಟ್ ಚಲನಶೀಲತೆ ಆಯ್ಕೆಗಳನ್ನು ಸಕ್ರಿಯಗೊಳಿಸಲು ಮತ್ತು ಸರ್ವಾಂಗೀಣ ಪ್ರಗತಿಗೆ ಆದ್ಯತೆ ನೀಡುವ ಮೂಲಕ ಹಲವಾರು ಕೋಟಿ ರೂಗಳ ಅತಿ ಹೆಚ್ಚು ಅನುದಾನವನ್ನು ನೀಡಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ದೂರದೃಷ್ಟಿ ಚಿಂತನೆಯ ಹೆಜ್ಜೆಗುರುತುಗಳನ್ನು ಮಾರ್ಗದರ್ಶನವಾಗಿ ಇಟ್ಟುಕೊಂಡು ಆಧುನಿಕ ಸಕಲ ವ್ಯವಸ್ಥೆಯುಳ್ಳ ನವ ಬೆಂಗಳೂರು ನಿರ್ಮಾಣದ ಗುರಿ ಹೊಂದಲಾಗಿದೆ ಹಾಗು ಉತ್ತಮ ವ್ಯಾಪಾರ ವಹಿವಾಟು ಹಾಗೂ ಜನಸಾಂದ್ರತೆ ಹೆಚ್ಚು ಇರುವ ಕಡೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸುಗಮ ಸಂಚಾರದ ವ್ಯವಸ್ಥೆಗಾಗಿ ಮೆಟ್ರೋ ರೈಲು ಮಾರ್ಗ ಬಹಳ ಉಪಯುಕ್ತವಾಗಲಿದೆ ಮತ್ತು ವಿಜ್ಞಾನ-ತಂತ್ರಜ್ಞಾನ, ಕೈಗಾರಿಕೆ,ಸಂಶೋಧನೆಯಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲುವ ಬೆಂಗಳೂರು ನಗರಕ್ಕೆ ಅಗತ್ಯ ಮೆಟ್ರೋ ರೈಲು ಮಾರ್ಗ ಇಲ್ಲದಿರುವುದನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು . .
“ಮೆಟ್ರೋ ಭದ್ರತಾ ಸಿಬ್ಬಂದಿಗೆ ಸಲಾಂ“
ನೀಲಿ ಬಣ್ಣದ ಅಂಗಿ -ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ತಲೆಗೆ ಒಂದೂ ಟೋಪಿ ಹಾಕಿ, ಶೋ ಧರಿಸಿ ಕ್ರಾಯಕ್ರಮಕ್ಕೆ ಬಂದ ಗಣ್ಯರನ್ನು ಮೆಟ್ರೋ ನಿಲ್ದಾಣಕ್ಕೆ ಮೆಟ್ರೋ ಸಂಸ್ಥೆಯ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ರಕ್ಷಣೆಯ ಕಾರ್ಯ ನಿರ್ವಹಿಸುವ ಭದ್ರತಾ ಪಡೆಯ ಸಿಬ್ಬಂದಿಗಳು ಶಿಸ್ತಿನಿಂದ ಸ್ವಾಗತಿಸಿದ್ದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತ್ತು .
ನಾಯಂಡಳ್ಳಿ ಮೆಟ್ರೋ ನಿಲ್ದಾಣದ ಮುಂಭಾಗವನ್ನು ಹೂವಿನಿಂದ ವಿಶೇಷ ವಾಗಿ ಅಲಂಕಾರ ಮಾಡಲಾಗಿತ್ತು .
ಲೋಕಸಭಾ ಸದಸ್ಯರಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ, ಸಚಿವರಾದ ಆರ್ ಅಶೋಕ್,ಎಸ್. ಟಿ. ಸೋಮಶೇಖರ್, ಮುನಿರತ್ನ, ಎಂಟಿಬಿ ನಾಗರಾಜ್, ಕೆ. ಗೋಪಾಲಯ್ಯ, ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೃಷ್ಣಪ್ಪ, ಬಿಎಂಆರ್ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ತೀರ್ಥಹಳ್ಳಿ ಅನಂತ, ಕಲ್ಲಾಪುರ