ಮಿತಾಹಾರ ನಿರಂತರ ಚಟುವಟಿಕೆಯಿಂದ ಬೊಜ್ಜು, ಸಂಧಿವಾತ ರೋಗಗಳಿಂದ ದೂರ- ಡಾ.ಉಪ್ಪಿನ.
ನಾವು ಮಿತವಾದ ಆಹಾರ, ಕ್ರಿಯಾಶೀಲ ಚಟುವಟಿಕೆಗಳನ್ನು ದಿನಾಲು ಮಾಡುತ್ತಾ ದೇಹದ ಅವಯವಗಳನ್ನು ಕ್ರಿಯೆಗೆ ಒಡ್ಡಿದರೆ ಬೊಜ್ಜು, ಸಂಧಿವಾತದಂತಹ ರೋಗಗಳಿಂದ ದೂರವಿರಬಹುದು ಎಂದು ಡಾ. ಅರ್ಚನಾ ಉಪ್ಪಿನ ಹೇಳಿದರು.
ರವಿವಾರ ದಿ. 25ರಂದು ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಫ. ಗು.ಹಳಕಟ್ಟಿ ಭವನದಲ್ಲಿ ಹಮ್ಮಿಕೊಂಡ ವಾರದ ಸತ್ಸಂಗ ಮತ್ತು ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಖ್ಯಾತ ಸಂಧಿವಾತ ತಜ್ಞೆ ಡಾ. ಅರ್ಚನಾ ಉಪ್ಪಿನ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು.
ಸಂಧಿವಾತ,ಕೀಲು ನೋವು, ಬೊಜ್ಜು ಮಹಿಳೆಯರಲ್ಲಿ ಜಾಸ್ತಿ. ಇದಕ್ಕೆ ಕಾರಣ ಎಲ್ಲಾ ಅಂಗಗಳಿಗೆ ಚಲನೆ ನೀಡದೇ ಇರುವುದು. ವಿಶೇಷವಾಗಿ ದೊಡ್ಡ ಕೆಲಸಗಳನ್ನು ಮಾಡದಿದ್ದರೂ ಚಿಕ್ಕ ಚಿಕ್ಕ ದೇಹಕ್ಕೆ ವ್ಯಾಯಾಮ ಒದಗಿಸುವ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತ ಸಾಗಬೇಕು. ಈಜುವದು ಒಳ್ಳೆಯದು. ಮಿತಾಹಾರ ವಿಶೇಷವಾಗಿ ಸಸ್ಯಾಹಾರ, ವಾರಕ್ಕೊಮ್ಮೆಯಾದರೂ ಉಪವಾಸ , ಕರಿದ ಪದಾರ್ಥ ತಿನ್ನದೆ ಹಸಿರು ಕಾಳು ಸೇವಿಸಿದರೆ ಆರೋಗ್ಯದಲ್ಲಿ ಲವಲವಿಕೆ ಹೆಚ್ಚುವುದು ಎಂದರು.
ಸಂಘಟನೆಯ ಸದಸ್ಯ ಸತೀಶ ಪಾಟೀಲ ಅತಿಥಿಗಳನ್ನು ಪರಿಚಯಿಸುವದರ ಜೊತೆಗೆ ಸಂಘಟನೆ ವತಿಯಿಂದ ಎಲ್ಲ ವರ್ಗದವರಿಗೆ ಎಲ್ಲ ರೀತಿ ಅನುಕೂಲವಾಗುವ ವಿಶೇಷ ಕಾರ್ಯಕ್ರಮಗಳು ಜರುಗುತ್ತಿವೆ ಇದರ ಲಾಭ ಪಡೆಯಿರಿ ಎಂದರು.
ಕಾರ್ಯಕ್ರಮದಲ್ಲಿ ವಿ. ಕೆ. ಪಾಟೀಲ, ಶಂಕರ ಗುಡಸ, ಆನಂದ ಕರ್ಕಿ, ವಿರುಪಾಕ್ಷಿ ದೊಡ್ಡಮನಿ, ಸುಧಾ ಪಾಟೀಲ, ಎಂ ವೈ ಮೆಣಸಿನಕಾಯಿ, ಬಿ ಬಿ ಮಠಪತಿ, ಸಂಗಮೇಶ ಅರಳಿ, ಅಕ್ಕಮಹಾದೇವಿ ತೆಗ್ಗಿ ಸೇರಿದಂತೆ ಅನೇಕ ಶರಣರು ಭಾಗಿಯಾಗಿದ್ದರು.
ಆರಂಭದಲ್ಲಿ ಸುರೇಶ ನರಗುಂದ ಸ್ವಾಗತಿಸಿದರು, ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಪಚನಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.