HomeಲೇಖನIdagunji Ganapati History & Information in Kannada- ಇಷ್ಟಾರ್ಥ ಸಿದ್ದಿಸುವ ಇಡಗುಂಜಿ ಗಣಪತಿ

Idagunji Ganapati History & Information in Kannada- ಇಷ್ಟಾರ್ಥ ಸಿದ್ದಿಸುವ ಇಡಗುಂಜಿ ಗಣಪತಿ

 

ನಾರದ ಮುನಿಗಳೇ ಪ್ರತಿಷ್ಠಾಪಿಸಿದ ವಿನಾಯಕನಿರುವ ಪುಣ್ಯಕ್ಷೇತ್ರ ಇಡಗುಂಜಿ

ಇಡಗುಂಜಿ ಉತ್ತರ ಕರ್ನಾಟಕದ ಪವಿತ್ರ ಗಣಪತಿ ಕ್ಷೇತ್ರ. ಸಿದ್ಧಿಪ್ರದ ಅಷ್ಟಕ್ಷೇತ್ರಗಳಲ್ಲಿ ಒಂದೆಂದು ಖ್ಯಾತವಾದ ಇಲ್ಲಿ ಗೋಕರ್ಣದಲ್ಲಿರುವಂತೆಯೇ ಇರುವ ದ್ವಿಭುಜ ಗಣಪ ನೆಲೆಸಿದ್ದಾನೆ.

ಗೋಕರ್ಣದಿಂದ 65 ಕಿ.ಮೀ, ಹೊನ್ನಾವರದಿಂದ ಕೇವಲ 15ಕಿಲೋ ಮೀಟರ್ ಹಾಗೂ ಮುರ್ಡೇಶ್ವರದಿಂದ 23ಕಿಲೋ ಮೀಟರ್ ದೂರದಲ್ಲಿರುವ ಈ ಪವಿತ್ರ ಪುಣ್ಯಧಾಮಕ್ಕೆ ಇಡಗುಂಜಿ ಎಂದು ಹೆಸರು ಹೇಗೆ ಬಂತು ಎಂಬ ಬಗ್ಗೆ ಜನಜನಿತವಾದ ಐತಿಹ್ಯ ಇದೆ.

ಐತಿಹ್ಯ: ಪ್ರಾಚೀನ ಕಾಲದಲ್ಲಿ ಪುರಾಣ ಪ್ರಸಿದ್ಧ ಬ್ರಹ್ಮತೀರ್ಥ ಮತ್ತು ಚಕ್ರತೀರ್ಥ ಎಂಬ ಎರಡು ತೀರ್ಥಗಳಿದ್ದ ಈ ವನಪ್ರದೇಶದಲ್ಲಿ ವಾಲಖೀಲ್ಯ ಎಂಬ ಋಷಿಗಳು ಋಷ್ಯಾಶ್ರಮ ನಿರ್ಮಿಸಿಕೊಂಡು, ಹೋಮ, ಯಾಗ, ಯಜ್ಞಾದಿಗಳನ್ನು ನಡೆಸುತ್ತಿದ್ದರಂತೆ.

ಅವರಿಗೆ ಈ ಯಾಗಾದಿ ಕಾರ್ಯಗಳಿಗೆ ಹಲವು ಬಗೆಯ ವಿಘ್ನಗಳು ಎದುರಾಗುತ್ತಿದ್ದವಂತೆ. ಆ ಸಂದರ್ಭದಲ್ಲಿ ಅಲ್ಲಿ ಕಾಣಿಸಿಕೊಂಡ ತ್ರಿಲೋಕ ಸಂಚಾರಿ ನಾರದ ಮಹರ್ಷಿಗಳು ವಿಘ್ನ ನಿವಾರಕನಾದ ಗಣಪತಿಯ ಪೂಜೆ ಮಾಡುವಂತೆ ತಿಳಿಸಿ, ತಾವೇ ಇಲ್ಲಿಗೆ ಗಣಪನನ್ನು ಕೈಲಾಸದಿಂದ ಕರೆತರುವುದಾಗಿಯೂ ಋಷಿಗಳಿಗೆ ತಿಳಿಸಿದರಂತೆ.

ಅದರಂತೆ ಪಾರ್ವತಿಯ ಬಳಿ ಹೋಗಿ ಗಣಪನನ್ನು ಭೂಲೋಕಕ್ಕೆ ಕಳುಹಿಸುವಂತೆ ಕೋರಿದರಂತೆ. ಮತ್ತು ಗಣಪನಿಗೆ ಪಂಚ ಕಜ್ಜಾಯ, ಕಡುಬು ಕೊಡಿಸುವುದಾಗಿ ತಿಳಿಸಿ ಕರೆತಂದರಂತೆ. ಗಣಪನಿಗೆ ಪಂಚ ಕಜ್ಜಾಯ, ಕಡುಬು ನೀಡಿ ಪೂಜಿಸಿದ ತರುವಾಯ ವಾಲಖೀಲ್ಯ ಮುನಿಗಳು ಯಾವುದೇ ಅಡ್ಡಿ ಆತಂಕ ಇಲ್ಲದೆ ಯಾಗಾದಿ ಕಾರ್ಯಗಳನ್ನು ಮಾಡಿ, ಮುಕ್ತಿ ಹೊಂದಿದರಂತೆ.

ತಾವು ಪೂಜಿಸಿದ ಈ ಸ್ಥಳದಲ್ಲೇ ನೆಲೆಸು ಎಂದು ವಿನಾಯಕನ ಕೋರಿದರಂತೆ. ನಾರದರು ದೇವಶಿಲ್ಪಿ ವಿಶ್ವಕರ್ಮನನ್ನೇ ಕರೆಸಿ, ದ್ವಿಭುಜ ಅಂದರೆ ಎರಡು ಕೈಗಳ ಸುಂದರ ಗಣಪನನ್ನು ನಿರ್ಮಿಸುವಂತೆ ತಿಳಿಸಿದರಂತೆ.

ಆ ಸುಂದರ ಮೂರ್ತಿಯನ್ನು ನಾರದರೇ ಮಾಘಮಾಸದ ಶುಕ್ಲಪಕ್ಷದ ಬಿದಿಗೆಯಂದು ಪ್ರತಿಷ್ಠಾಪಿಸಿದರಂತೆ. ಹೀಗಾಗಿಯೇ ಇಲ್ಲಿ ಪ್ರತಿವರ್ಷ ಮಾಘಮಾಸದಲ್ಲಿ ವಾರ್ಷಿಕೋತ್ಸವದಂದು ವಿಶೇಷ ಪೂಜೆ ನಡೆಯುತ್ತದೆ. ಹೀಗೆ ಇಲ್ಲಿ ಗಣಪ ನೆಲೆಸಿಹ ಎಂದು ಅರ್ಚಕರು ಹೇಳುತ್ತಾರೆ.ನಂತರ ಈ ರಮಣೀಯ ಸಸ್ಯಕಾಶಿಯಲ್ಲಿ ಸುತ್ತಾಡಿದ ನಾರದರು ಗೇರುಸೊಪ್ಪೆ ಪ್ರದೇಶದಲ್ಲಿ ನಿಂತು ಸುತ್ತಲ ಪ್ರದೇಶವನ್ನು ನೋಡಿ ಇದರ ರಮಣೀಯತೆಗೆ ಭಾವಪರವಶರಾದರಂತೆ, ಶರಾವತಿಯ ಮುಖಜಪ್ರದೇಶ ಕಂಡು ಮನಸೋತರಂತೆ.

ಶರಾವತಿ ನದಿಯ ಎಡ ಭಾಗದಲ್ಲಿರುವ ಗಿಡಗಂಟಿಗಳ ಅರಣ್ಯ ಪ್ರದೇಶದ ರಮಣೀಯತೆಗೆ ಮನಸೋತು ಇಡಾಕುಂಜ ಎಂದು ಕರೆದರಂತೆ. ಇಡಾ ಎಂದರೆ ಎಡ, ಕುಂಜು ಎಂದರೆ ಗಿಡಗಂಟೆಗಳಿಂದ ತುಂಬಿರುವ ಅರಣ್ಯಪ್ರದೇಶ ಎಂದರ್ಥವಂತೆ. ಮುಂದೆ ಅದುವೇ ಆಡು ಮಾತಿನಲ್ಲಿ ಇಡಗುಂಜಿ ಆಯಿತೆನ್ನುತ್ತಾರೆ ಸ್ಥಳೀಯರು. ಹೀಗಾಗಿಯೇ ಇಡಗುಂಜಿ ಪೌರಾಣಿಕ ಹಿನ್ನೆಲೆಯ ಕ್ಷೇತ್ರವಾಗಿದೆ.

ಪ್ರಸ್ತುತ ಈಗಿರುವ ದೇವಾಲಯವನ್ನು ಕ್ರಿ.ಶ. 4-5ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ದೇವಾಲಯದ ಜೀರ್ಣೋದ್ಧಾರವನ್ನೂ ಮಾಡಲಾಗಿದೆ. ದೇವಾಲಯ ವಿಶಾಲವಾದ ಪ್ರದೇಶದಲ್ಲಿದೆ.

ಗಾರೆಯಿಂದ ನಿರ್ಮಿಸಿದ ಕಲಾತ್ಮಕ ಮಂಟಪದ ಮೇಲೆ ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ನಾರದರು ಹಾಗೂ ವಾಲಖೀಲ್ಯ ಮುನಿಗಳ ಸಹಿತ ಕೈಲಾಸ ಪರ್ವತದಲ್ಲಿರುವ ಗಾರೆಯ ಶಿಲ್ಪವಿದೆ. ದೇವಸ್ಥಾನ ಶಿಖರ ಗೋಪುರದಲ್ಲಿ 22 ತೊಲ ಚಿನ್ನದ ಲೇಪವುಳ್ಳ 78 ಕಿ.ಗ್ರಾಂ. ತೂಕದ ಪಂಚಲೋಹದ ಕಳಶ ಸ್ಥಾಪಿಸಲಾಗಿದೆ.

ಗರ್ಭಗೃಹದಲ್ಲಿ ವಿಶ್ವೇಶ್ವರ ಪೀಠದ ಮೇಲೆ ನಿಂತಿರುವ ದ್ವಿಭುಜ ಗಣಪತಿಯ ಕೃಷ್ಣ ಶಿಲೆಯ ಮೂರ್ತಿಯಿದೆ. ಗಣಪತಿಯು ತನ್ನ ಬಲಗೈನಲ್ಲಿ ಕಮಲವನ್ನು ಹಿಡಿದಿದ್ದಾನೆ. ಎಡಗೈನಲ್ಲಿ ಕಡುಬಿನ ಪಾತ್ರೆಯಿದ್ದು, ಸೊಂಡಲಿನಿಂದ ಕಡುಬು ತೆಗೆದುಕೊಂಡು ತಿನ್ನುತ್ತಿರುವ ರೀತಿಯಲ್ಲಿ ಈ ವಿಗ್ರಹವಿದೆ. ಈ ಗಣಪನ ವಿಗ್ರಹವನ್ನು ಬಾಲ ಗಣಪತಿ ಎನ್ನುತ್ತಾರೆ. ಎರಡೂ ದಂತ ಇರುವುದು ಈ ಗಣಪತಿಯ ವಿಶೇಷ.

ಇಡಗುಂಜಿಯ ದ್ವಿಭುಜ ಗಣೇಶನಿಗೆ ಅಡಕೆ ಬೆಳೆಗಾರರ ದೊಡ್ಡ ಭಕ್ತವೃಂದವೇ ಇದೆ. ಅಡಕೆ ತೋಟಗಳಿಗೆ ಕೊಳೆರೋಗ ಬಂದರೆ, ಇವರು ಇಡಗುಂಜಿ ಗಣಪನಿಗೆ ಹರಕೆ ಹೊರುತ್ತಾರೆ ಹೀಗಾಗಿ ಈ ಗಣಪನಿಗೆ ಕೊಳೆಯಡಿಕೆ ಗಣಪ ಎಂಬ ಹೆಸರು ಬಂದಿದೆ.

ಪ್ರತಿವರ್ಷವೂ ರಥಸಪ್ತಮಿಯ ದಿನ ಇಲ್ಲಿ ವೈಭವದ ರಥೋತ್ಸವ ಜರುಗುತ್ತದೆ.ಭಾದ್ರಪದ ಶುಕ್ಲ ಚೌತಿಯ ವರಸಿದ್ಧಿ ವಿನಾಯಕನ ವ್ರತದ ದಿನ ಇಲ್ಲಿ ಜನಜಾತ್ರೆಯೇ ಸೇರುತ್ತದೆ.


ಎಮ್ ವೈ ಮೆಣಸಿನಕಾಯಿ

RELATED ARTICLES

Most Popular

close
error: Content is protected !!
Join WhatsApp Group