ಸರ್…. ಹೆಂಗರೆ ಮಾಡ್ರಿ ಎರಡ್ ತಿಂಗಳ ಆತು ಎಡತಾಕಕ ಹತ್ತೇನ್ರಿ ಇದೊಂದ್ ಕೆಲಸ ಮಾಡಿಕೊಟ್ಟು ಪುಣ್ಯಾ ಕಟಗೋರಿ ಸಾಹೇಬ್ರ…ಗಂಡ ಸತ್ ರಂಡ್ ಮುಂಡಿ ಅದೀನ್ರಿ ನಂಗ್ ಮಕ್ಕಳ ಮರಿ ಇಲ್ಲರಿ… ವಿಧವಾ ಪೆನಷನ್ ಒಂದ್ ಮಾಡಿಕೊಟ್ಟು ಉಪಕಾರ ಮಾಡ್ರಿ ಅಂತ ತಹಶಿಲ್ದಾರ ಕಚೇರಿ ಯಲ್ಲಿ ಹೊಸದಾಗಿ ಬಂದ ಸಾಹೇಬರ ಎದುರು ಎರಡು ವರ್ಷಗಳ ಹಿಂದಷ್ಟೇ ಬರಗಾಲದಲ್ಲಿ ಸಾಲದ ಸುಳಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡ ಪ್ರಗತಿಪರ ರೈತ ಬಸವಣ್ಣೆಪ್ಪನ ಹೆಂಡತಿ ಗೌರವ್ವ ಕೈ ಮುಗಿದು ನಿಂತಿದ್ದಳು.
ಅಲ್ಲವಾ…ನಾವೆನೋ ನಿನ್ನ ಕಡೆ ನೋಡತಿವು ಆದ್ರ ನೀನೂ ನಮ್ ಕಡೆ ಸ್ವಲ್ಪ ನೋಡಬೇಕಲ್ಲ ಮತ್ತ….ಬರೇ ಕಾಗದಾ ಹಿಡಕೊಂಡ್ ಬಂದ್ರ ಸಹಿ ಮಾಡ ಅಂದ್ರ ಹ್ಯಾಂಗ್ ಮಾಡಾಕ್ ಆಕ್ಕೈತಿ ಅಂದರು. ಮೊದಲೇ ದೊಡ್ಡ ಸಾಹೇಬರ ಮುಂದೆ ನಿಂತು ಧ್ವನಿಬಿದ್ದು ಹೋದಂತಾಗಿ ಅಸಹಾಯಕಳಾಗಿದ್ದ ಗೌರವ್ವ ಆ ಕಡೆಯ ಗೋಡೆಯತ್ತ ಹೊರಳಿ ಭುಜದ ಮೇಲೆ ಬೆರಳಿನಷ್ಟು ಹರಿದಿದ್ದ ಬಿಳಿ ರವಿಕೆಯೊಳಗೆ ಮಡಚಿ ಇಟ್ಟಿದ್ದ ತೋಯ್ದ ಐದನೂರರ ನೋಟು ತೆಗೆಯುತ್ತಿದ್ದಂತೆಯೇ ಸಾಹೇಬರು ಶ್ಯಾನೆ ಅದಿ ನೋಡು ಅನ್ನುತ್ತ ಗೌರವ್ವನ ಅರ್ಜಿಯ ಮೇಲೆ ತಾವೇ ಸೀಲು ಒತ್ತಿ ಸಹಿ ಗೀಚಿ ಇದನ್ನ ಯೋಳ ನಂಬರ್ ಖೋಲೆದಾಗ ಮುದಕಪ್ಪನ ಕಡೆ ಓದ್ ಕೊಡು ಅಂತ ನಸು ನಕ್ಕರು..
ಇನ್ನೊಂದು ಕಡೆ ಯಪ್ಪಾ ದೌಳವನಾ ನಿನ್ನ ಕಾಲಿಗಿ ಬಿಳತೆನಿ ಕೂಸಿಗಿ ಹುಚ್ ನಾಯಿ ಖಡದೈತಿ ಲಗೂನ ಇಂಜೆಕ್ಷನ್ ಮಾಡ್ರ್ಯೋ ಯಪ್ಪಾ ನಿಮಗ್ ಪುಣ್ಯಾ ಬರತೈತಿ ಅಂದಳು ಕಾಶವ್ವ… ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರೇಚರಿನಲ್ಲಿ ಬಿದ್ದುಕೊಂಡು ನರಳಾಡುತ್ತಿದ್ದ ಐದು ವರ್ಷದ ಹುಡುಗಿಯ ಬಲಗೈಯ್ಯ ಮೊಳಕೈ ಹತ್ತಿರದ ಮಾಂಸವೇ ಕತ್ತರಿಸಿಕೊಂಡು ಹೋಗಿ ಕೂಸು ನರಳಾಡತೊಡಗಿತ್ತು.
ತಡಿಯವ್ವ ಎಷ್ಟ ಬಾಯಿ ಮಾಡಾತಿದಿ ಈಗ ಹನ್ನೆರಡಕ್ ಡಾಕ್ಟರ್ ಬರ್ತಾರ ರಸೀದಿ ಮಾಡಿದ್ರ ನಡಿಯಂಗಿಲ್ಲ ಬ್ಯಾಂಡೇಜ್ ಮಾಡವ್ರಿಗಿ ಹತ್ತಿಪ್ಪತ್ತ ಕೊಟ್ರನ ಮುಂದಿನ ಕೆಲಸ ಅಂದ ಅಟೆಂಡರ್ ಭೀಮಪ್ಪ..
ಅಯ್ಯೋ ಡಾಕ್ಟರ್ ನಿನ್ನೆನೇ ಹೇಳಿದ್ನಲ್ಲ ಇದು ಸೀರಿಯಸ್ ಪೇಷಂಟು…ಆಶಾಗೂ ಹೇಳಿದಿನಿ ಆದ್ರೆ ಇವ್ರು ಯುಗಾದಿ ರಜೆ ಅಂತ ಗೊತ್ತಿದ್ರೂ ಜೀವ ತಿಂತಿದ್ದಾರೆ ಸೀಜರ್ ಮಾಡ್ಬೇಕು ಇಲ್ಲಾಂದ್ರೆ ಬೇಬಿ ಬದಕಲ್ಲ ಅಂದಳು ಆಸ್ಪತ್ರೆಯ ಸೀನಿಯರ್ ನರ್ಸ…ಅದಕ್ಕೆ ಡಾಕ್ಟರ್ರು ನಗುತ್ತ ಮೆಡಿಸಿನ್ ಮುಗದೋಗಿದೆ ಸ್ಟಿಚ್ಚಿಂಗ್ ಥ್ರೆಡ್ ಕೂಡ ಅವ್ರೆ ತರಬೇಕು ಅನಸ್ತೇಶಿಯಾ ಕೊಡೊಕೆ ಪ್ರೈವೆಟ್ ಡಾಕ್ಟ್ರು ಖಾಲಿ ಕೈಯಲ್ಲಿ ಯಾವತ್ತೂ ಬರಲ್ಲ ಅಂತ ಹೇಳಿದಿರಾ ತಾನೆ?? ಅನ್ನುತ್ತಿದ್ದಂತೆಯೇ ನರ್ಸ್ ಎಲ್ಲಾ ಓಕೆ ಇದೆ ಸರ್ ಅನ್ನುತ್ತ ಗರ್ಬಿಣಿಯ ಸ್ಟ್ರೇಚರನ್ನ ಓಟಿ ಗೆ ತಳ್ಳಿದಳು…
ಹೀಗೆ ನಿತ್ಯವೂ ಒಂದಲ್ಲ ಒಂದು ಇಲಾಖೆಯಲ್ಲಿ ಲಂಚಕ್ಕಾಗಿ ಹಲ್ಲು ಕಿಸಿಯುವ, ಫೆಕರು ಫೆಕರಾಗಿ ನಗುತ್ತ ಕೆಲಸ ಮಾಡಿಕೊಡಿ ಅಂತ ಬಂದವರನ್ನ ಮೇಲಿನಿಂದ ಕೆಳಗೆ ಕಣ್ಣು ಹಾಯಿಸುವ ಅದೆಷ್ಟೋ ಭ್ರಷ್ಟ ಸಿಬ್ಬಂದಿ ಗಳ ನಡುವೆ ಪ್ರಾಮಾಣಿಕರನ್ನ ಹುಡುಕುವದೇ ಕಷ್ಟಸಾಧ್ಯವಾಗಿರುವ ದಿನಗಳಿವು.
ತೊಂಭತ್ತರ ದಶಕದಲ್ಲಿ ಕೆ ಎ ಎಸ್ ಬರೆದ ಅಭ್ಯರ್ಥಿಗಳು ನ್ಯಾಯಕ್ಕಾಗಿ ಪ್ರತಿಭಟಿಸಿದಾಗ ಕೆಪಿಎಸ್ ಸಿಯ 1998,1999 ಮತ್ತು 2004 ರ ಗೋಲ್ ಮಾಲ್ ಗಳು ಹೊರಬಿದ್ದದ್ದು ಮತ್ತು ಇತ್ತೀಚೆಗಷ್ಟೇ ಪಿಎಸ್ ಐ ಪರೀಕ್ಷೆಯ ಹಗರಣದಲ್ಲಿ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದ್ದು ಅದಕ್ಕೆ ಸಂಭಂದಿಸಿದಂತೆ ಹಲವರ ಬಂಧನವಾಗಿ ಮರು ಪರಿಕ್ಷೆಯನ್ನ ಬೆಂಗಳೂರಿನಲ್ಲಿ ಏಕಕಾಲಕ್ಕೆ ನಡೆಸಿದ್ದು ನೋಡಿದರೆ ಸರ್ಕಾರಿ ನೌಕರಿ ಗಿಟ್ಟಿಸಲು ನಡೆಯುತ್ತಿರುವ ಪೈಪೋಟಿಯ ನಡುವೆ ಅದೆಷ್ಟೋ ನಿರುದ್ಯೋಗಿಗಳು ಲಕ್ಷಗಟ್ಟಲೆ ಹಣದ ಮಳೆ ಸುರಿಸಿ ವಾಮಮಾರ್ಗವಾಗಿ ನೌಕರಿಗೆ ಬಂದ ಬಳಿಕ ತಾವು ಹಾಕಿದ ಬಂಡವಾಳವನ್ನು ಬಡ್ಡಿ ಸಮೇತ ಮರಳಿ ಪಡೆಯಲು ಲಂಚ ಪಡೆಯುವದು,ಕಾಗದದ ಕಾಮಗಾರಿ ನಡೆಸುವದು,ಮತ್ತು ಅರ್ಹ ಫಲಾನುಭವಿಗಳ ಕೈ ಬಿಟ್ಟು ಎಂಜಲು ಕಾಸು ಕೊಟ್ಟವರ ಪರವಾಗಿ ಕೆಲಸ ಮಾಡುವದು ನೋಡಿದರೆ ಅಂತಹವರಿಗೆಲ್ಲ ಬಡವರ ಶಾಪ ತಟ್ಟದೆ ಇರುತ್ತದಾ ಅನ್ನಿಸುತ್ತದೆ.
ಆದರೆ ಯೋಚಿಸಿ ನೋಡಿದರೆ ಆಗಿನ ಮಟ್ಟಿಗೆ ತುರ್ತಾಗಿ ಬೇಕಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಿಂದ ಹಿಡಿದು ಜಮೀನು ಪರಾಭಾರೆ, ಪಡಿತರ ಚೀಟಿ, ವೋಟರ್ ಐಡಿ ಹೀಗೆ ಹಲವಾರು ಸಣ್ಣ ಪುಟ್ಟ ಕೆಲಸಗಳಿಂದ ಹಿಡಿದು ಎಲ್ಲ ಕೆಲಸಗಳಿಗೂ ಅದ್ರದ್ದೇನ ಕೊಡಬೇಕು ಹೇಳ್ರಿ ಸರ್ ಆದ್ರ ನಮ್ ಕೆಲಸ ಮರಿಬ್ಯಾಡ್ರಿ ಅನ್ನುವ ಜನರೇ ಹೆಚ್ಚಾಗಿರುವಾಗ ಸಹಜವಾಗಿಯೇ ಭ್ರಷ್ಟಾಚಾರ ಇಡೀ ದೇಶದಲ್ಲಿ ತಾಂಡವವಾಡುತ್ತಿದೆ.
ಇದರ ಪರಿಣಾಮವಾಗಿ ಬಸ್ ಚಾಲಕ ಅಥವಾ ನಿರ್ವಾಹಕನೊಬ್ಬನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಪತ್ತೆ ಐಟಿ,ಈಡಿ ದಾಳಿ ನಡೆದಾಗ ಕೇಜಿ ಗಟ್ಟಲೆ ಚಿನ್ನ ಕಂತೆ ಕಂತೆ ನೋಟುಗಳ ಪ್ರದರ್ಶನ ಸೇರಿದಂತೆ ಹಲವಾರು ವಿಷಯಗಳು ಬೆಳಕಿಗೆ ಬಂದಾಗ ಹೊಟ್ಟೆಯಲ್ಲಿ ಖಾರ ಕಲಸಿದಂತಾಗುತ್ತದೆ.
ಸರ್ಕಾರಿ ಯೋಜನೆಯೊಂದು ಜನಸಾಮಾನ್ಯರಿಗೆ ತಲುಪಬೇಕಾದರೆ ನೂರು ಇದ್ದ ಸಹಾಯಧನ ಮೂರು ಆಗಿರುವದು ಇಂತಹ ಉದಾಹರಣೆಗಳಲ್ಲಿ ಒಂದು.
ಗ್ರಾಮ ಪಂಚಾಯತಿ ಒಂದರ ಪಿಡಿಓ, ಕಾರ್ಯದರ್ಶಿ, ಅಧ್ಯಕ್ಷ,ಉಪಾಧ್ಯಕ್ಷ ರಿಂದ ಹಿಡಿದು ಕೆಲ ತಿಂಗಳ ಹಿಂದಷ್ಟೇ ಹೆಂಡ, ಸೀರೆ, ಸರಾಯಿ ಹಂಚಿ ತನ್ನ ಹಣಬಲದಿಂದ ಗೆದ್ದು ಬಂದ ಮೇಂಬರುಗಳ ತನಕ ಅಭಿವೃದ್ಧಿ ಹೆಸರಿನಲ್ಲಿ ಎಲ್ಲರೂ ಹಣ ಗಳಿಸಲು ಸನ್ನದ್ಧರಾಗಿ ನಿಂತಿರುವಾಗ ಕಳಪೆ ಕಾಮಗಾರಿಯೋ ಕಾಗದದ ಕಾಮಗಾರಿ ಯೋ ಆಗದೆ ಇರಲು ಹೇಗೆ ಸಾಧ್ಯ.
ಖರೆ ಹೇಳಲಿ ಎನೋ ತಮ್ಮಾ ದೇವ್ರಾಣಿ ಪಾ ನನಗೂ ಈ ಹೇಲ್ ತಿನ್ನು ಕೆಲಸ ಸೇರಿಕಿ ಬರಾಂಗಿಲ್ಲ ಆದ್ರ ಏನ್ ಮಾಡೂದ ಪಾ ನಮ್ ಕೆಲಸ ದೇವರ ಕೆಲಸ ಆದ್ರೂ ಬಿಸಿ ತುಪ್ಪ ಉಗಳಾಕ ಬರಂಗಿಲ್ಲ ನುಂಗಾಕ್ ಆಗಂಗಿಲ್ಲ… ನಮದೆನ್ ಐತೋಪಾ ಮ್ಯಾಲಿನವರ ಹೇಳಿದಂಗ ಕೇಳಬೇಕ ಅಷ್ಟ.. ಯಾಕಂದ್ರ ದೇವ್ರು ಕೊಟ್ರೂ ಪೂಜಾರಿ ಕೊಡಬೇಕಲ್ಲೋ ಅನ್ನುವ ಅಸಹಾಯಕ ಎಫ್ ಡಿಸಿ ಮತ್ತು ಎಸ್ ಡಿ ಸಿ ಗಳಿಂದ ಹಿಡಿದು ಸರ್ಕಾರಿ ಕಛೇರಿಯ ಪ್ರಾಮಾಣಿಕ ಜವಾನನೊಬ್ಬನ ತನಕ ಒಬ್ಬೊಬ್ಬರದೂ ಒಂದೊಂದು ಅನಿವಾರ್ಯತೆ ಗಳಿರುವ ಲೋಕವಿದು.
ಇಷ್ಟಕ್ಕೂ ಪೋಲಿಸರು ಟ್ರಿಪಲ್ ರೈಡಿಂಗ್ ಅಂತ ಬೈಕೊಂದನ್ನ ಹಿಡಿದಾಗ,ಆರ್ ಟಿ ಓ ಗಳು ಓವರ್ ಲೋಡ್ ಅಥವಾ ಇನಸೂರೆನ್ಸ ಅಂತ ಗಾಡಿಗಳನ್ನ ಹಿಡಿದಾಗ,ಮತ್ತು ಹೆಲ್ಮೆಟ್ ಫೈನ್ ಅಂತ ರಸೀದಿ ಹರಿಯಲು ಮುಂದಾದಾಗ ಸರ್…ಓ ಸರ್…ಅನ್ನುತ್ತ ಅವರ ಅಸಿಸ್ಟಂಟುಗಳ ಕೈಗೆ ನೂರಿನ್ನೂರರ ನೋಟು ತುರುಕಲು ಹೋಗುವ ಜನ ಕಡ್ಡಾಯವಾಗಿ ನಿಯಮಗಳನ್ನ ಪಾಲಿಸಿದ್ದೇ ಆದರೆ ಆಗಬಹುದಾದ ಜೀವ ಹಾನಿಗಳು ತಪ್ಪುವದರ ಜೊತೆಗೆ ಒಂದಷ್ಟು ಲಂಚಬಾಕತನವೂ ಕೊನೆಯಾದೀತು.
ಸರ್ಕಾರ ಜಾರಿಗೆ ತಂದ ಸಕಾಲ ಯೋಜನೆಯ ಅನುಷ್ಠಾನ ಮತ್ತು ದಾಖಲೆಗಳ ಅಚ್ಚುಕಟ್ಟು ಪರಿಶೀಲನೆಗಳು ನಡೆದರೆ ಸಬ್ ರಿಜಿಸ್ಟ್ರಾರ್ ಕಚೇರಿ ಗಳಲ್ಲಿ ಯಾರದ್ದೋ ಜಮೀನು ಇನ್ಯಾರದೋ ಪಾಲಾಗುವ ದುರಂತಗಳಾದರೂ ತಪ್ಪೀತು.
ಭಾರತದ ಪ್ರತಿಯೊಬ್ಬ ಪ್ರಜೆಯೂ ಯಾವುದೇ ಕೆಲಸ ಅಥವಾ ಯೋಜನೆಗಳ ಫಲಾನುಭವಿ ಆಗುವ ಮುನ್ನ ನಾ ಖಾವೂಂಗಾ ನಾ ಖಾನೇ ದೂಂಗಾ ಅಂತ ನಿತ್ಯವೂ ಶಪಥ ಮಾಡಿಯೇ ಮನೆಯಿಂದ ಹೊರಗೆ ಅಡಿ ಇಟ್ಟಾಗ ಮಾತ್ರ ಒಂದಷ್ಟು ಭ್ರಷ್ಟಾಚಾರ ಮತ್ತು ಲಂಚಬಾಕತನ ನಿರ್ನಾಮವಾದೀತು.
ಲಂಚಪಡೆಯುವಾಗ ಸಿಕ್ಕಿ ಬಿದ್ದರೂ ಕೂಡ ಇಲಾಖಾವಾರು ತನಿಖೆ ಅಂತ ಮೂರು ತಿಂಗಳೋ ಆರು ತಿಂಗಳೋ ಅಮಾನತ್ತಿನಲ್ಲಿ (ಸಸ್ಪೆಂಡ) ಇರಿಸಿ ಅರ್ಧ ಸಂಭಳ ಕೊಡುವ ಮತ್ತು ಆನಂತರದ ಕೆಲತಿಂಗಳಲ್ಲಿ ಕ್ಲೀನ್ ಚಿಟ್ ಕೊಡುವ ಮನಸ್ಥಿತಿಗಳು ದೂರವಾಗಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದಾಗ ಮಾತ್ರ ಲಂಚಬಾಕರ ಹಾವಳಿ ಕಡಿಮೆ ಆದೀತು.
ಪತ್ರಕರ್ತ ಅಥವಾ ಸಮಾಜ ಸೇವಕ ಅನ್ನಿಸಿಕೊಂಡ ವ್ಯಕ್ತಿಯೊಬ್ಬ ಯಾವ ಪ್ರತಿಫಲದ ಆಪೇಕ್ಷೆಯೂ ಇಟ್ಟುಕೊಳ್ಳದೆ ಕೇವಲ ಪ್ರಶ್ನೆ ಮಾಡಿ ಭ್ರಷ್ಟರನ್ನು ಹೆದರಿಸಿ ಅವರು ಎಸೆಯುವ ಬಿಸ್ಕತ್ತು ತಿಂದು ಬಾಲ ಅಲ್ಲಾಡಿಸುವ ಶ್ವಾನಗಳಾಗದೆ ಭ್ರಷ್ಟಾಚಾರದ ವಿರುದ್ಧ ಘರ್ಜಿಸುವ ಹುಲಿಗಳಾದಾಗ ಮಾತ್ರ ಲಂಚಬಾಕತನ ಮತ್ತು ಭ್ರಷ್ಟಾಚಾರ ಮೂಲದಿಂದಲೇ ಮುಕ್ತಾಯವಾದೀತು.
ಅಂದಹಾಗೆ ಈಗಿನ ದಿನಗಳಲ್ಲಿ ಗಾಂಧಿವಾದ ನಡೆಯುವದಿಲ್ಲ ದಿನಗಳು, ತಿಂಗಳುಗಳು, ವರ್ಷಗಳು ಕಳೆದರೂ ಅದೆಷ್ಟೋ ಹೋರಾಟಗಳಿಗೆ ಕ್ಯಾರೇ ಅನ್ನುವವರೂ ಇಲ್ಲದ ಪರಿಸ್ಥಿತಿ ನೋಡಿದಾಗ ಮಾಹಿತಿ ಹಕ್ಕಿನ ಅಡಿಯಲ್ಲಿ ಅಥವಾ ಸಂಬಂಧ ಪಟ್ಟ ಇಲಾಖೆಯ ಮೇಲಾಧಿಕಾರಿಗಳು ಮತ್ತು ಶಾಸಕ ಸಚಿವರ ಗಮನ ಸೆಳೆಯುವಲ್ಲಿ ಹಾಗೂ ವಿಷಯವನ್ನು ಹೆಚ್ಚು ಜನರಿಗೆ ತಲುಪಿಸುವಲ್ಲಿ ಸಂಘಟನೆಗಳು ಮತ್ತು ನೊಂದ ಫಲಾನುಭವಿಗಳು ಎಡವುತ್ತಿರುವದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಆದ್ದರಿಂದ ಸಾಮಾಜಿಕ ಜಾಲತಾಣದ ಸದುಪಯೋಗವೂ ಭ್ರಷ್ಟಾಚಾರ ತಡೆಯುವ ಅಸ್ತ್ರವಾಗಿ ಬಳಕೆಯಾಗಬೇಕಾದ ತುರ್ತು ಅಗತ್ಯವಿದೆ ಅನ್ನುವದು ನನ್ನ ಅಭಿಪ್ರಾಯ ಇದಕ್ಕೆ ನೀವೆಲ್ಲಾ ಏನಂತೀರಿ?
ದೀಪಕ ಶಿಂಧೇ
9482766018