ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಸಂಸ್ಕೃತಿ ಚಿಂತಕರು , 9739369621
ಗಂಗಾ ಹರಹರ ಗಂಗಾ
ಜ್ಯೇಷ್ಠ ಶುದ್ಧ ದಶಮಿಯಂದು ಗಂಗಾದೇವಿಯು ಶಿವನ ಜಡೆಯಿಂದ ಭಗೀರಥನಿಗಾಗಿ ಧರೆಗಿಳಿದು ಹರಿದಿರುವುದರಿಂದ ಪ್ರತಿ ವರ್ಷ ಗಂಗಾದಶಹರಾದ ಕೊನೆಯ ದಿನವಾದ ಜ್ಯೇಷ್ಠ ಶುದ್ಧ ದಶಮಿ ಈ ಬಾರಿ ಮೇ 30 ರಂದು “ಭಾಗೀರಥಿ” (ಗಂಗಾ) ಜಯಂತಿಯನ್ನು ಬಹು ವಿಜೃಂಭಣೆಯಿಂದ ಎಲ್ಲೆಡೆ ಆಚರಿಸಲಾಗುತ್ತದೆ.
ನೀರಿನ ಸದ್ಭಳಕೆ, ನೀರಿನ ಪಾವಿತ್ರ್ಯದ ಅರಿಯುವಿಕೆ ಮತ್ತು ನೀರಿನ ಪೋಲು ಮಾಡುವಿಕೆಗೆ ಅಂತ್ಯ ಹಾಡುವಿಕೆ ದಿಸೆಯಲ್ಲಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿದರೆ ಅದುವೇ ಭಾಗೀರಥಿ ಜಯಂತಿ ಆಚರಣೆಗೊಂದು ಅರ್ಥಪೂರ್ಣತೆ.
ಈ ಲೋಕದಲ್ಲಿ ಜರುಗುವ ವಿಧದ ಪೂಜೆಗಳು ವಿಧ್ಯುಕ್ತವಾಗಿ ನೆರವೇರಲು ಪವಿತ್ರವಾದ ಜಲವೇ ಮೊದಲು. ದೇವಾನುದೇವತೆಗಳ ಪೂಜೆ, ಈಶ್ವರನ ಅಭಿಷೇಕ, ಲಿಂಗಾರ್ಚನೆ, ಗುರು, ಲಿಂಗ ಜಂಗಮರ ಪಾದ ಪೂಜೆ, ನೈವೇದ್ಯ ಸಮರ್ಪಣೆ ಮುಂತಾದ ವಿಧಿಗಳು ನೀರಿಲ್ಲದೇ ನೆರವೇರಲಾರವು. ನೀರಿನಿಂದಲೇ ಮೊದಲು ಶುಚಿತ್ವಗೊಳಿಸಿ ಪೂಜಿಸಬೇಕಾದ ಶ್ರುತಿಮತ ಸಮ್ಮತವಾದ ಆಚರಣೆ ಅಸ್ತಿತ್ವದಲ್ಲಿದೆ.
ಭಾರತೀಯರ ಮನೆ-ಮನೆಗಳಲ್ಲಿರುವ “ಜಗುಲಿ”ಯ ಮೇಲೆ ತುಂಬಿದ ತಂಬಿಗೆಯೊಂದನಿಟ್ಟು ಅದರ ಮೇಲೆ ತೆಂಗನ್ನಿಟ್ಟು ಪ್ರತಿನಿತ್ಯ ಬೆಳಗು ಮುಂಜಾನೆ ಪೂಜಿಸುವ ಸತ್ಸಾಸಂಪ್ರದಾಯವು ಇಂದಿಗೂ ಪ್ರಚಲಿತವಿದೆ. ಪ್ರಾಚೀನ ಕಾಲದ ಋಷಿಮುನಿಗಳ ಕಮಂಡಲಗಳು ಪವಿತ್ರ ಜಲದಿಂದ ತುಂಬಿರುತ್ತಿದ್ದವು. ಮದುವೆ-ಮುಂಜಿ ಮುಂತಾದ ಸಮಾರಂಭಗಳಲ್ಲಿ ತುಂಬಿದ ಕಲಶ ಹೊತ್ತು ಮನೆಗೆ ತರುವುದು, ಪೂಜಿಸುವುದು ಸರ್ವೇ ಸಾಮಾನ್ಯ. ಪ್ರತಿಯೊಂದು ಗ್ರಾಮದಲ್ಲಿ ಜರುಗುವ ಗ್ರಾಮ ದೇವತೆಗಳ ಉತ್ಸವ, ಜಾತ್ರಾ ಮಹೋತ್ಸವ, ದೇವರ ಮೂರ್ತಿ ಪ್ರತಿಷ್ಠಾಪನೆ, ಮಹಾತ್ಮರ ಪುಣ್ಯರಾಧನೆ, ಗದ್ದುಗೆಯ ಅಭಿಷೇಕ ಮುಂತಾದ ಸಂದರ್ಭಗಳಲ್ಲಿ ಕುಂಭ ಮೇಳದೊಂದಿಗೆ ಸುಮಂಗಲೆಯರು ಮೆರವಣಿಗೆಯ ಮೂಲಕ ಹೊತ್ತು ತಂದ ಕಲಶಗಳಿಂದ ಅಭಿಷೇಕ ಮಾಡಿ ಮಹಾ ಪೂಜೆ ಸಲ್ಲಿಸುವುದು ನಮ್ಮ ಧಾರ್ಮಿಕ ಪರಂಪರೆಯಾಗಿದೆ.
ಕಲಶ ಸ್ಥಾಪನೆ ಮಾಡಿ ಮದುವೆಯ ಮುಹೂರ್ತದೊಂದಿಗೆ ಜಗುಲಿ ಮುಂದಿನ ಅಕ್ಷತೆಯೆಂದು ಸ್ವ-ಗೃಹದಲ್ಲಿ ಅಕ್ಷತಾರೋಪಣವನ್ನು ಮಾಡುವುದು. ಪ್ರತಿ ವರ್ಷ ನಾಗಪಂಚಮಿಯಲ್ಲಿ ಮುತ್ತೈದೆಯರು ನದಿ ಅಥವಾ ಸಮೀಪವಿರುವ ಕೆರೆ ಪೂಜಿಸುವುದು, ಬಾಣಂತಿಯರು ಗಂಡನ ಮನೆಗೆ ಹೋಗುವ ಮುನ್ನ ಹೊಳೆ ಪೂಜಿಸುವುದು, ನದಿ ದಾಟುವಾಗ ನಾಣ್ಯ ಎಸೆದು ಕೈ ಮುಗಿಯುವುದು, ಹಬ್ಬ-ಹರಿದಿನಗಳಲ್ಲಿ ಮನೆಯಲ್ಲಿ ಮಾಡಿದ ಪಂಚ-ಪಕ್ವಾನ್ನಗಳ ಎಡೆಯೊಂದಿಗೆ `ಹೊಳಿಗಂಗವ್ವ”ನ ಪೂಜಿಸಿ ಕಣಕದ ಹಣೆತೆಗಳಲ್ಲಿ ದೀಪವನ್ನು ಹಚ್ಚಿ ಬಾಳೆ ಎಲೆ ಅಥವಾ ತೆಪ್ಪದಲ್ಲಿರಿಸಿ ನದಿಯಲ್ಲಿ ತೇಲಿ ಬಿಡುವುದು, ಮಳೆಗಾಲದಲ್ಲಿ ಸುರಿದ ಮಳೆಯಿಂದ ನದಿ, ಕೆರೆ, ಅಣೆಕಟ್ಟುಗಳ ಜಲಾಶಯಗಳು ತುಂಬಿ ಭರ್ತಿಯಾಗಲೂ ಹಿಂದಿನ ಕಾಲದ ರಾಜ-ಮಹಾರಾಜರೂ ಸಹಿತ ವಿದ್ಯುಕ್ತವಾಗಿ ಪೂಜೆ ಸಲ್ಲಿಸಿ ಬಾಗೀನು ಸಮರ್ಪಿಸುತ್ತಲಿದ್ದರು.
ನಮ್ಮ ನಾಡಿನ ದೊರೆ ಮತ್ತು ಸಚಿವರಾದಿಯಾಗಿ ಪ್ರಜಾಕೋಟಿಗೆ ಸಕಲ ಸಮೃದ್ಧಿ ಸುಖ ಶಾಂತಿಯನ್ನು ಕೋರಿ ಬಾಗೀನು ಸಮರ್ಪಿಸುವ ಸತ್ಸಾಸಂಪ್ರದಾಯವು ಇಂದಿಗೂ ಪ್ರಚಲಿತವಿದೆ. ಗಂಗಾ ಸ್ನಾನ ಮಾಡುವುದರಿಂದ ಹತ್ತು ವಿಧವಾದ ಪಾತಕಗಳು ಪರಿಹಾರವಾಗುವುವು. ಆದ್ದರಿಂದ “ಗಂಗಾದೇವಿ”ಗೆ ‘ದಶಹರಾ’ ಎಂಬ ಹೆಸರಿದೆ. ಯಾರೋ ಒಬ್ಬರು ಯಾವುದೋ ಸ್ಥಳದಲ್ಲಿ ಯಾವುದೇ ನೀರಿನಲ್ಲಿ ಸ್ನಾನ ಮಾಡುತ್ತಿರುವಾಗ “ಗಂಗಾ ಗಂಗಾ” “ಹರಹರ ಗಂಗಾ” ಎಂದು ನುಡಿದವನು ಸರ್ವ ಪಾಪಗಳಿಂದ ಮುಕ್ತನಾಗಿ ಸದ್ಗತಿ ಹೊಂದುವನು ಎಂಬ ಪ್ರತೀತಿ ಇದೆ.
ಪಾಪನಿವಾರಿಣಿ ದೇವಗಂಗೆ
ಪ್ರಪಂಚದ ನಾಗರಿಕತೆಗಳೆಲ್ಲ ನದಿತೀರದಲ್ಲೇ ಬೆಳೆದಂಥವು. ಹೀಗಾಗಿ ನಾಗರಿಕರ ಜನಜೀವನದಲ್ಲಿ ನದಿಗಳಿಗೆ ಪ್ರಮುಖ ಸ್ಥಾನವಿದೆ. ಭಾರತೀಯ ಪರಂಪರೆಯಲ್ಲಂತೂ ನದಿಗಳನ್ನು ದೇವರೆಂದೇ ಪೂಜಿಸಲಾಗುತ್ತದೆ. ಭಾರತದ ನದಿಗಳಲ್ಲೆಲ್ಲ ಗಂಗಾನದಿಗೆ ಪ್ರಮುಖವೂ ವಿಶೇಷವೂ ಆದ ಸ್ಥಾನವಿದೆ. ಹಿಮಾಲಯದ ನಾಲ್ಕು ಧಾಮಗಳಲ್ಲಿ ಒಂದಾದ ಗಂಗೋತ್ರಿಯೇ ಈ ನದಿಯ ಉಗಮಸ್ಥಾನ.
ಭಾರತದ ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಗಂಗಾನದಿಯು `ದೇವನದಿ’ ಎಂದೇ ಬಣ್ಣಿಸಲ್ಪಟ್ಟಿದೆ. ಹಿಂದೂಧರ್ಮಿಯರು ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುತ್ತಾರೆ. ಗಂಗಾಮಾತೆ ಶಿವನ ಪತ್ನಿಯೂ ಹೌದು. ಶಿವ ಆಕೆಗೆ ತನ್ನ ಜಟೆಯಲ್ಲೇ ಸ್ಥಾನ ನೀಡಿದ್ದಾನೆ. ಪ್ರತಿದಿನ ಸ್ನಾನ ಮಾಡುವ ಸಂದರ್ಭದಲ್ಲಿ ‘ಹೇ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಕಾವೇರಿ ನದಿಗಳೇ, ನೀವೆಲ್ಲ ನನ್ನ ಸ್ನಾನದ ನೀರಿನಲ್ಲಿ ಬಂದು ಸೇರುವವರಾಗಿ (ಗಂಗಾನದಿ ಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೆ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||)’ ಎಂದು ಪ್ರಾರ್ಥಿಸಿಕೊಳ್ಳಲಾಗುತ್ತದೆ. ಈ ಪ್ರಾರ್ಥನೆಯ ಹಿಂದೆ ತೀರ್ಥಕ್ಷೇತ್ರ, ತೀರ್ಥಸ್ನಾನಗಳಿಂದ ಲಭಿಸುವ ಪುಣ್ಯದ ಪರಿಕಲ್ಪನೆಯ ಹಿನ್ನೆಲೆಯೂ ಇದ್ದಿತು.
ದೇವಗಂಗೆ ಭೂಮಿಗೆ ಬಂದ್ದದ್ದು ಹೇಗೆ ?
ಇಂಥ ದೇವಗಂಗೆಯನ್ನು ಭೂಮಿಗೆ ತಂದವನು ಭಗೀರಥ (‘ಭಗೀರಥ ಪ್ರಯತ್ನ’ ಎಂದೇ ಕರೆಯಲ್ಪಟ್ಟ ಇವನ ಅಸೀಮ ಸಾಹಸವು ಸಾಹಸಗಳಿಗೊಂದು ಅನ್ವರ್ಥಕವೂ ಆಯಿತು. ಇವನಿಂದಲೇ ಗಂಗೆಯು ‘ಭಾಗೀರಥಿ’ ಎಂಬ ಅಭಿಧಾನಕ್ಕೂ ಪಾತ್ರಳಾದಳು). ಇಕ್ಷ್ವಾಕುವಂಶದ ಸಗರನೆಂಬ ಚಕ್ರವರ್ತಿಯು ಅಶ್ವಮೇಧಯಾಗಕ್ಕಾಗಿ ಕುದರೆಯನ್ನು ಬಿಟ್ಟಿದ್ದ. ಆ ಯಾಗ ಮುಗಿದರೆ ತನ್ನ ಪದವಿ ಹೋಗುವುದೆಂಬ ಭಯದಿಂದ ದೇವೇಂದ್ರ ಯಾಗದ ಕುದುರೆಯನ್ನು ಕದ್ದು ಕಪಿಲಮುನಿಯ ಆಶ್ರಮದಲ್ಲಿ ಕಟ್ಟಿದ್ದ. ತಮ್ಮ ಕುದುರೆಯನ್ನು ಹುಡುಕುತ್ತ ಸಗರನ ಅರವತ್ತು ಸಾವಿರ ಪುತ್ರರು ಅಲ್ಲಿಗೆ ಬಂದರು. ಕಪಿಲಮುನಿಯೇ ಕುದುರೆಯನ್ನು ಕದ್ದವನೆಂದು ಭಾವಿಸಿ ಆತನಿಗೆ ತೊಂದರೆ ಉಂಟುಮಾಡಿದರು. ಇದರಿಂದ ಕಪಿಲಮುನಿ ಕೋಪಗೊಂಡು ತನ್ನ ತಪಶ್ಯಕ್ತಿಯಿಂದ ಎಲ್ಲರನ್ನೂ ಸುಟ್ಟು ಬೂದಿಯಾಗಿಸಿಬಿಟ್ಟನು. ಇದರಿಂದಾಗಿ ಮುಕ್ತಿ ಹೊಂದದ ಅವರ ಆತ್ಮಗಳು ಅತಂತ್ರವಾಗಿ ಅಲೆಯತೊಡಗಿದವು.
ಸಗರನ ಮೊಮ್ಮಗ ಅಂಶುಮಾನನು ತಂದೆ ಮತ್ತು ಚಿಕ್ಕಪ್ಪಂದಿರನ್ನು ಹುಡುಕುತ್ತ ಕಪಿಲಮುನಿಯ ಆಶ್ರಮದ ಬಳಿ ಬಂದ. ಸ್ವರ್ಗದಲ್ಲಿರುವ ಗಂಗೆಯ ನೀರಿನಿಂದ ಪ್ರೋಕ್ಷಿಸುವುದೊಂದೇ ಅವರ ಆತ್ಮಗಳಿಗೆ ಮುಕ್ತಿ ದೊರೆಯುವ ಮಾರ್ಗ ಎಂದು ಕಪಿಲಮುನಿಯಿಂದ ತಿಳಿಯಿತು. ಈ ಕಠಿಣ ಸಾಧನೆಯು ಅವನಿಂದ ಸಾಧ್ಯವಾಗದಿದ್ದರೂ ಅವನ ವಂಶಸ್ಥ ಭಗೀರಥ ಕಠೋರ ತಪಸ್ಸನ್ನು ಮಾಡಿ ಗಂಗೆಯ ಮನವೊಲಿಸಿದ. ಆದರೆ ಗಂಗೆಯು ಸ್ವರ್ಗದಿಂದ ಒಮ್ಮೆಲ್ಲೇ ಭೂಮಿಗೆ ಧುಮುಕಿದರೆ ಭೂಮಿಯು ಕೊಚ್ಚಿಹೋಗುತ್ತಿತ್ತು. ಹೀಗಾಗಿ ಭಗೀರಥ ಶಿವನ ಮೊರೆಹೋದ. ಶಿವನು ರಭಸದಿಂದ ಧುಮುಕುವ ತೀವ್ರತೆಯನ್ನು ತನ್ನ ಜಟೆಯ ಮೂಲಕ ತಡೆದು ನಿಧಾನವಾಗಿ ಹರಿಯುವಂತೆ ಮಾಡಿದ. ಆ ರೀತಿಯಾಗಿ ಧರೆಗಿಳಿದ ಗಂಗೆ ಭಗೀರಥನನ್ನು ಹಿಂಬಾಲಿಸುತ್ತ ಬೂದಿಯಾಗಿದ್ದ ಸಗರನ ಅರವತ್ತು ಸಾವಿರ ಪುತ್ರರ ಮೇಲೆ ಹರಿದು ಶಾಪ ವಿಮೋಚನೆ ಮಾಡಿದಳು.
ಜ್ಯೇಷ್ಠಮಾಸದ ಶುಕ್ಲಪಕ್ಷದ ದಶಮಿಯನ್ನು ‘ಭಾಗೀರಥಿ ಜಯಂತಿ’ ಎಂದು ಆಚರಿಸಲಾಗುತ್ತದೆ. ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗಾನದಿಯು ಸ್ವರ್ಗದಿಂದ ಭೂಮಿಗೆ ಇಳಿದ ದಿನವಿದು. ಇದಕ್ಕೆ `ದಶಹರ’ (ಹತ್ತು ರೀತಿಯ ಪಾಪಗಳ ವಿನಾಶಿನಿ) ಎಂದೂ ಕರೆಯಲಾಗುತ್ತದೆ. ಹಿಂದಿನ ಹತ್ತು ಜನ್ಮಗಳಲ್ಲಿ ಸಂಗ್ರಹವಾದ ಮಹಾಪಾಪಗಳೂ ಗಂಗಾಸ್ನಾನ ಮಾತ್ರದಿಂದಲೇ ನಾಶವಾಗುವುದರಿಂದ ಕೂಡ ಇದನ್ನು `ದಶಹರಾ’ ಎಂದು ಕರೆಯಲಾಗಿದೆ. ಗಂಗಾನದಿಯು ಭಗೀರಥಿ ಜಯಂತಿ’ಯ ದಿನ ಮಂಗಳವಾರ, ಹಸ್ತಾನಕ್ಷತ್ರ ವೃತೀಪಾತ ಯೋಗ ಇವುಗಳೆಲ್ಲ ಸೇರಿ ಮಹಾಯೋಗ ಸಂಭವಿಸುತ್ತದೆ. ಈ ದಿನ ದಶಾಶ್ವಮೇಧ ಘಾಟ್‍ನಲ್ಲಿ ಮಾಡಿದ ಸ್ನಾನವು ಶರೀರ-ಮಾತು-ಮನಸ್ಸುಗಳಿಂದ ಉಂಟಾದ ಹತ್ತು ವಿಧದ ಪಾಪಗಳನ್ನು ನಾಶಮಾಡುತ್ತದೆ ಎಂಬ ನಂಬಿಕೆ ಇದೆ.
ಹತ್ತು ವಿಧದ ಪಾಪಗಳು ಯಾವುದು ?
ಪರರಿಗೆ ಏನನ್ನೂ ಕೊಡದೆ ಕೇವಲ ಅವರಿಂದ ಸ್ವೀಕರಿಸುವುದು; ಹಿಂಸೆ ಮಾಡುವುದು; ಪರಸ್ತ್ರೀ ಸಂಗ ಇವು ಮೂರು ಶರೀರದಿಂದ ಸಂಭವಿಸುವ ಪಾಪಗಳು ಕಠೋರವಾಗಿ ಮಾತಾಡುವುದು, ಸುಳ್ಳು ಹೇಳುವುದು, ಚಾಡಿ ಹೇಳುವುದು, ಅಸಂಬದ್ಧವಾಗಿ ಮಾತಾಡುವುದು – ಈ ನಾಲ್ಕು ಮಾತಿನಿಂದುಂಟಾಗುವ ಪಾಪಗಳು. ಪರರ ಸಂಪತ್ತನ್ನು ಅಪಹರಿಸಲು ಯೋಚಿಸುವುದು; ಬೇರೆಯವರಿಗೆ ಕೆಟ್ಟದ್ದಾಗಲೆಂದು ಬಯಸುವುದು; ವ್ಯರ್ಥವಾಗಿ ಮನಸ್ಸಿನ ಆವೇಶ ಹೊಂದುವುದು – ಇವು ಮೂರು ಮಾನಸಿಕ ಪಾಪಗಳು. ಈ ಹತ್ತು ವಿಧವಾದ ಪಾಪಗಳ ನಿವಾರಣೆಗಾಗಿ ನದೀಸ್ನಾನ, ತಿಲತರ್ಪಣ, ಗಂಗಾಪೂಜಾದಿಗಳನ್ನು ಮಾಡಬೇಕು.
`ಸಾವಿರಾರು ಯೋಜನೆಗಳಷ್ಟು ದೂರದಿಂದ ಯಾರು “ಗಂಗಾ ಗಂಗಾ” ಎಂದು ಗಂಗೆಯ ಸ್ಮರಿಸುತ್ತಾನೆಯೋ ಅಂಥವರು ಎಲ್ಲ ಪಾಪಗಳಿಂದ ಮುಕ್ತರಾಗಿ ವೈಕುಂಠಲೋಕಕ್ಕೆ ಹೋಗುತ್ತಾರೆ (ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ | ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ||)’.
ಛಲದಂಕಮಲ್ಲನಂತೆ ಗಂಗೆಯ ಬೆನ್ನು ಹತ್ತಿದ ಭಗೀರಥ. ದೇವಲೋಕದಿಂದ ಆಕೆಯನ್ನೇನ್ನೋ ಧರೆಗೆ ತರಲು ಸಫಲವಾಗಿರುತ್ತದೆ. ಭಗೀರಥನ ಉದ್ದೇಶ ಮನುಕುಲದ ಕಲ್ಯಾಣವಾಗಿರುತ್ತದೆ. ದೇವಗಂಗೆಯ ಸ್ಪರ್ಷ ಮಾತ್ರದಿಂದಲೇ ಹುಲು ಮಾನವರಿಗೂ ಪುಣ್ಯ ಸಂಚಯ ಮಾಡಿಸುವ ಉದ್ದೇಶವಿರುತ್ತದೆ.
ಭಗೀರಥನದು ಲೋಕ ಕಲ್ಯಾಣವಾದರೆ ನಮ್ಮದು ಸ್ವಾರ್ಥ ಕಲ್ಯಾಣದ ದೃಷ್ಟಿ. ದೈವ ನಿರ್ಮಿತ ಪರಿಸರಕ್ಕೆ ಕೊಡಲಿಯೇಟು ಹಾಕಿ ಕಾಂಕ್ರೀಟ್ ಕೋಟೆಗಳನ್ನು ಕಟ್ಟುವ ಹುನ್ನಾರ ನಮ್ಮದು. ಸ್ವಾರ್ಥದ ಕಾರಣ ನದಿ, ಕೊಳಗಳು ಬತ್ತಿವೆ. ಅಂತರ್ಜಲ ಕಾಣದಾಗಿದೆ. ಪವಿತ್ರಳಾದ ಗಂಗೆ, ಯಮುನೆಯರೂ ಕಲುಷಿತರಾಗಿದ್ದಾರೆ. ಇಂದಿನ ದುಸ್ಥಿತಿಯನ್ನು ಭಗೀರಥನೇನಾದರೂ ಕಂದಿದ್ದರೆ ಆತನ ಕಣ್ಣೀರೇ ಮತ್ತೊಂದು ನದಿಯ ಹುಟ್ಟಿಗೆ ಕಾರಣವಾಗುತ್ತಿತ್ತೋ ಏನೋ? ಗಂಗೋತ್ರಿಯ ಗೋಮುಖದಲ್ಲಿ ಜನಿಸುವ ಗಂಗೆ ಒಟ್ಟು 2,525 ಕಿ.ಮೀ ದೂರ ಸಂಚರಿಸುತ್ತಾಳೆ. ಗಂಗೆ ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಜಾರ್ಜಂಡ ಮತ್ತು ಪಶ್ಚಿಮ ಬಂಗಾಳವನ್ನು ಹಾದು ಬಂಗಾಳಕೊಲ್ಲಿ ಸಮುದ್ರವನ್ನು ಸೇರುತ್ತಾಳೆ. ಬಾಂಗ್ಲಾ ಮತ್ತು ಭಾರತದ ನಡುವೆ ಬಾಂಧವ್ಯ ಬೆಸೆಯುತ್ತಾಳೆ. ಬಾಂಗ್ಲಾದೇಶದಲ್ಲಿ ಆಕೆ ಪದ್ಮ ನಾಮಾಂಕಿತಳಾಗುತ್ತಾಳೆ.
ಹೀಗೆ ಗಂಗಾ ನದಿಯ ಸುದೀರ್ಘ ಪಯಣದೊಂದಿಗೆ ಯಮುನಾ, ರಾಮಗಂಗಾ, ಘಾಘ್ರ, ಗಂಡಕ್, ಕೋಶಿ ಮತ್ತು ಮಹಾನಂದಾ ನದಿಗಳು ಸೇರ್ಪಡೆಯಾಗುತ್ತದೆ. ಆ ಕಾರಣದಿಂದಲೇ ಗಂಗೆ ಮಹಾನದಿ. ಜೀವನದಿಯಾದ ಕಾರಣ ಗಂಗಾ ಜಯಂತಿಯ ಆಚರಣೆ. ಗಂಗಾ ಜಯಂತಿ ಉಲ್ಲೇಖ ಪದ್ಮ ಪುರಾಣ, ಬ್ರಹ್ಮ ಪುರಾಣ ಮತ್ತು ನಾರದ ಪುರಾಣದಲ್ಲಿದೆ.
ರಭಸದಿಂದ ಹರಿಯುತ್ತಿದ್ದ ಗಂಗೆಯ ರೋಷವನ್ನು ಕಡಿಮೆ ಮಾಡಿ ಆಕೆಯ ಅಹಂಕಾರವನ್ನು ಮುರಿದದ್ದೇ ಜಹ್ನುಮುನಿಗಳು. ಜಹ್ನು ಮುನಿಗಳು ಗಂಗೆಯನ್ನೇ ಆಪೋಶನ ತೆಗೆದುಕೊಂಡ ಮಹಾಸಂತ. ಗಂಗೆಗಾಗಿ ಭಗೀರಥ ಮಹಾಮುನಿಯ ಪರಿಪರಿ ಪ್ರಾರ್ಥನೆ. ಭಗೀರಥನ ಪ್ರಾರ್ಥನೆಗೆ ಒಲಿದ ಜಹ್ನು ಮುನಿ. ತನ್ನ ಕಿವಿಯಿಂದ ಆಕೆ ಹೊರಗೆ ಬರುವಂತೆ ಮಾಡುತ್ತಾನೆ. ಹೀಗೆ ಗಂಗೆ ಜಾಹ್ನವಿಯಾಗುತ್ತಾಳೆ. ಭಗೀರಥನ ಪ್ರಯತ್ನದಿಂದ ಬಂದ ಕಾರಣ ಭಾಗೀರಥಿಯಾಗುತ್ತಾಳೆ.
ಭಗೀರಥನ ತಪಕೆ ಮೆಚ್ಚಿ ಭೂಲೋಕಕ್ಕೆ ಬಂದ ಗಂಗೆ
ಗಂಗಾ ನದಿಯ ಪೂಜೆ, ಆರತಿಗೆ ಉತ್ತರ ಭಾರತದಲ್ಲಿ ಹೆಚ್ಚು ಪ್ರಾಮುಖ್ಯತೆ ಕಂಡರೂ ದಕ್ಷಿಣ ಭಾರತದಲ್ಲಿ ಅಂದು ಗಂಗಾ ತಾಳಿಯನ್ನು ಇಟ್ಟು ಗಂಗಮ್ಮ ದೇವಿಯ ಪೂಜೆಗೆ ವಿಶೇಷ ಆದ್ಯತೆ. ಕೆಲವೆಡೆ ಗಂಗಮ್ಮದೇವಿಯ ಉತ್ಸವಗಳು ನಡೆಯುತ್ತವೆ.
ಇಳಿದು ಬಾ ತಾಯೇ ಇಳಿದು ಬಾ… ಹಾಡಿನ ಸಾಲುಗಳು ನಿಮಗೆ ನೆನಪಿರಬಹುದು. ಭಗೀರಥನ ಪ್ರಯ್ನದ ಕಾರಣ ಧವಳ ಗಂಗೆ ಇಳಿದ ಕಥೆಯ ಹಿಂದಿನ ಸಾಲುಗಳವು. ಸಪ್ತ ಪವಿತ್ರ ನದಿಗಳಲ್ಲಿ ಗಂಗೆಯೂ ಒಂದು. ಆದಾಗ್ಯೂ ದೇವತಾರಾಧನೆ, ಪುಣ್ಯಾಹಾರ್ಚನೆ, ಕಲಶಪೂಜೆ ಸೇರಿದಂತೆ ಯಾವ ಆರಾಧನೆಯಲ್ಲೂ ಗಂಗೆಗೇ ಮೊದಲ ಆದ್ಯತೆ. ಮೃತ ಜೀವಿಯ ಮೋಕ್ಷಕ್ಕೂ ಗಂಗೆಯೇ ಕಾರಣೀಭೂತ.
ವೈಜ್ಞಾನಿಕ ದೃಷ್ಟಿಯಲ್ಲಿ ಸಪ್ತನದಿಗಳ ಹರಿವಿನ (ಗಂಗಾ ನದಿ 2,525 ಕಿ.ಮೀ. ಉದ್ದಗಲ ಹರಿದರೆ, ಹಿಮಾಲಯದ ತಪ್ಪಲಲ್ಲಿ ಯಮುನೆಯ ಹರಿವು ಅಂದಾಜು 200 ಕಿ.ಮೀ. ಗೋದಾವರಿ 1,465 ಕಿ.ಮೀ. ನರ್ಮದೆ 1312 ಕಿ.ಮೀ. ಸಿಂಧು 800.75 ಕಿ.ಮೀ., ಕಾವೇರಿ 765 ಕಿ.ಮೀ., ಸರಸ್ವತಿ ಗುಪ್ತಗಾಮಿನಿ) ಲೆಕ್ಕಾಚಾರವನ್ನು ಹಾಕಿದರೂ ಸಹ ಗಂಗೆಯೇ ಜೀವದಾತೆ. ಸಾಕಷ್ಟು ಕೃಷಿಕರ ಆರಾಧ್ಯ ದೇವತೆ. ವೇದಸೂಕ್ತಗಳಲ್ಲಿ ಗಂಗಾ ಮತ್ತು ಯಮುನೆಯರಿಗೆ ಆದ್ಯತೆ.
ಹರನ ಜಟೆಯಿಂದ ಧರೆಗೆ ಇಳಿದ ಗಂಗೆಯ ನೆನಹಿನಲ್ಲಿ ನಡೆಯುವ ಆಚರಣೆಯೇ ‘ಗಂಗಾ ಜಯಂತಿ’. ಗಂಗಾ ನದಿಯ ಹರಿವ ಪ್ರದೇಶಗಳೆಲ್ಲೆಲ್ಲಾ ಅಂದು ಜೀವದಾತೆ ಗಂಗಾಮಾಯಿಗೆ ಭಕ್ತಿಯಲ್ಲಿ ಪೂಜೆ, ಬಾಗಿನ ಸಲ್ಲಿಸಿ ಧನ್ಯತೆ ಅರ್ಪಿಸುವ ದಿನ. ಅಂದಹಾಗೆ ಗಂಗಾಮಾಯಿಯ ಪೂಜೆಯನ್ನು ಯಾವಾಗ ಅಂದರೆ ಆಗ ಮಾಡುವುದಿಲ್ಲ. ಅದಕ್ಕೂ ಒಂದು ಕ್ರಮವಿದೆ. ಅದರ ಹಿಂದೊಂದು ಧನ್ಯತಾ ಭಾವವಿದೆ. ಗಂಗಾ ನದಿಗೆ ಆರತಿ ಎತ್ತುವ ಸುಮಂಗಲೆಯರು ಹೂವನ್ನು ಹಾಕಿ ಪೂಜಿಸುತ್ತಾರೆ. ವಾರಣಾಸಿಯ ದಶಾಶ್ವಮೇಧ ಘಾಟ್‍ನಲ್ಲಿ ನಡೆಯುವ ಗಂಗಾ ಆರತಿಯ ವೈಭವ ನೋಡಲು ಎರಡು ಕಣ್ಣು ಸಾಲದು.
ಕೆಲವೆಡೆ ದೀಪದಾನ ಮಾಡುವ ವಾಡಿಕೆಯಿದೆ. ಹೀಗೆ ದಾನವಾಗಿ ಪಡೆದ ಹಣತೆಯಲ್ಲಿ ತುಪ್ಪದ ದೀಪ ಹಚ್ಚಿ ಗಂಗಾ ನದಿಗೆ ತೇಲಿ ಬಿಡುತ್ತಾರೆ. ಗಂಗಾ ನದಿ ತೀರದಲ್ಲಿ ಅಂದು ಗಂಗಾ ಉತ್ಸವ ಜಾತ್ರೆಯ ಮಾದರಿಯಲ್ಲೇ ನಡೆಯುತ್ತದೆ ಗಂಗಾ ಆರತಿ ಸಂದರ್ಭದಲ್ಲಿ ಗಂಗಾಷ್ಟಕ, ಗಂಗಾ ಸೂಕ್ತ, ಗಂಗಾ ಸಹಸ್ರನಾಮ ಸ್ತೋತ್ರ, ಗಂಗಾ ಗಾಯತ್ರಿ ಮಂತ್ರ ಪಠಿಸುತ್ತಾರೆ.. ಜ್ಯೋತಿಷ ಶಾಸ್ತ್ರದ ಪ್ರಕಾರ ಗಂಗೆಯನ್ನು ಪೂಜಿಸಿ ಆಕೆಯ ಮಡಿಲಲ್ಲಿ ಮುಳುಗೇಳುವುದರಿಂದ ಜಾತಕದಲ್ಲಿರುವ ಮಂಗಳಿಕ ಅಥವಾ ಕುಜ ದೋಷ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ.
ದಿವ್ಯತೆಯ ಹರಿವು ಗಂಗಾ
ಗಂಗೆ ಭಾರತೀಯರ ಪಾಲಿಗೆ ಹೆಮ್ಮೆಯಾದಳು. ಈಕೆಯೆಡೆಗಿನ ಶ್ರದ್ಧೆಯನ್ನು ಕಂಡು ವಿದೇಶಿಯರು ನಿಬ್ಬೆರಗಾದರು, ಅಧ್ಯಯನ ವಸ್ತುವಾದಳು… ಗಂಗೆ ಕೇವಲ ನದಿಯಲ್ಲ. ಅದು ಸಂಸ್ಕೃತಿಯ ನಿರಂತರತೆ. ದಿವ್ಯತೆಯ ಹರಿವು ಹಾಗೂ ಶ್ರದ್ಧಾವಂತಿಕೆಯಾದ ಧಾರೆ. ಗಂಗೆ ಭಾರತೀಯರ ಪಾಲಿಗೆ ನದೀದೇವತೆ.
ವಿಷ್ಣುವಿನ ಪಾದಗಳೆಡೆಯಿಂದ ಹುಟ್ಟಿ ಬಂದ ಈಕೆಯನ್ನು ಹರಿ ಪುತ್ರಿಯೆಂದೂ ಹರನ ಜಟೆಗಳಲ್ಲಿ ಬಂಧಿಯಾಗಿ, ಅವನನ್ನು ವರಿಸಿದ್ದರಿಂದ ಹರ ಪತ್ನಿಯೆಂದೂ ಈಕೆ ಪೂಜಿಸಲ್ಪಡುತ್ತಾಳೆ. ಈ ಎರಡು ಗುರುತುಗಳ ಹೊರತಾಗಿಯೂ ಗಂಗೆಗೆ ತನ್ನದೇ ಆದ ಛಾಪು ಮತ್ತು ಮನ್ನಣೆಗಳು ಇವೆ.
ಪೌರಾಣಿಕ ನಂಬುಗೆಯ ಪ್ರಕಾರ, ಸಗರ ರಾಜನ ಮಕ್ಕಳ ಮುಕ್ತಿಗಾಗಿಯೇ ಸ್ವರ್ಗಲೋಕದಿಂದ ಗಂಗೆಯನ್ನು ಭೂಮಿಗೆ ಕರೆಸಿದ್ದು, ಭಗೀರಥ ಸಾವಿರಾರು ವರ್ಷ ಕಾಲ ತಪಶ್ಚರಣೆ ನಡೆಸಿ ಗಂಗೆಯನ್ನು ಭೂಮಿಗೆ ತಂದ. ಧುಮ್ಮಿಕ್ಕಿ ಹರಿದ ಗಂಗೆಯ ವೇಗವನ್ನು ತಡೆಯಲು ಶಿವ ಜಟೆ ಬಿಚ್ಚಿನಿಂತ. ಆಗ ಗಂಗೆ ಅಲ್ಲಿ ಬಂಧಿಯಾದಳು. ಪುನಃ ಭಗೀರಥ ಶಿವನನ್ನು ಒಲಿಸಿಕೊಂಡು ಆಕೆಯನ್ನು ಭೂಮಿಯುದ್ಧಕ್ಕೂ ಕರೆತಂದ. ಹೀಗೆ ಭೂಮಿಗಿಳಿದ ಗಂಗೆ. ತಾನು ಹರಿದ ನೆಲದ ಇಕ್ಕೆಲ್ಲಗಳನ್ನೂ ಹಸಿರಿನಿಂದ ತುಂಬಿ ನಂದನವವಾಗಿಸಿದಳು.
ವೈಶಿಷ್ಟ್ಯ
ವೈಜ್ಞಾನಿಕ ಅಧ್ಯಯನಗಳು ; ಪ್ರತಿಯೊಂದು ನದಿಗೂ ತನ್ನದೇ ಆದ ಸ್ವಯಂ ಶುದ್ಧೀಕರಣ ಸಾಮರ್ಥ್ಯ ವಿದೆ; ಅದರಲ್ಲಿಯೂ ಗಂಗಾನದಿಗೆ ಈ ಸಾಮರ್ಥ್ಯ ಉಳಿದೆಲ್ಲ ನದಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇದೆ’ ಎಂದು ಘೋಷಿಸಿವೆ. ನಮ್ಮ ದೇಶದ ಪ್ರಸಿದ್ಧ ಜೀವ ವಿಜ್ಞಾನಿ ಜಗದೀಶ ಚಂದ್ರಬೋಸ್ ಅವರು, ಗಂಗಾನದಿಯ ನೀರನ್ನು ವಿಶ್ಲೇಷಿಸಿ, ಅದರಲ್ಲಿ ವಿಶಿಷ್ಟವಾದ ರಾಸಾಯನಿಕ ಹಾಗೂ ಖನಿಜದ ಅಂಶಗಳಿದೆಯೆಂದು ಸಾಬೀತುಪಡಿಸಿದ್ದರು. ಗಂಗೆಯ ನೀರಿಗೆ ರೋಗಗಳು ಗುಣಪಡಿಸುವ ಸಾಮಥ್ರ್ಯವಿದೆಯೆಂದೂ ಹೇಳಿದ್ದರು. ಇದು ಸಾಬೀತಾಗುವ ಶತಶತಮಾನಗಳ ಮೊದಲಿಂದಲೆ ಗಂಗೆಯನ್ನು ರೋಗಾಪಹಾರಿಯಾಗಿ, ಆರೋಗ್ಯಕ್ಕಾಗಿ ಬಳಸಲಾಗುತ್ತಿತ್ತು.
ಭಾರತೀಯ ಪ್ರಾಚೀನ ಮೌಲ್ಯಗಳನ್ನು ನಂಬುವವರು ಹಾಗಿರಲಿ, ಮೊಗಲ್ ದೊರೆಗಳು ಕೂಡ ಗಂಗೆಯ ನೀರನ್ನು ಬಳಸುತ್ತಿದ್ದರೆಂದು ಯೂರೋಪಿಯನ್ ಪ್ರವಾಸಿಗಳು ಬರೆಯುತ್ತಾರೆ. ಅಕ್ಬರ್ ಚಕ್ರವರ್ತಿಯಂತೂ ತಾನು ಎಲ್ಲಿಗೆ ಹೋದರೂ ಬಳಸುತ್ತ ಇದ್ದದ್ದು ಗಂಗೆಯ ನೀರನ್ನೇ. ಹಿಂದೆ ನಾವಿಕರು ಕೋಲ್ಕೋತಾದಿಂದ ಲಂಡನ್‍ಗೆ ಹೋಗುವಾಗ ಹಡಗುಗಳಲ್ಲಿ ಗಂಗಾನದಿಯನ್ನು ನೀರನ್ನು ತುಂಬಿರಿಸಿಕೊಳ್ಳುತ್ತಿದ್ದರು. ಅದು ಅನೇಕ ದಿನಗಳ ಪ್ರಯಾಣ ಕಾಲದಲ್ಲಿ ಕೆಡುತ್ತಿರಲಿಲ್ಲ ಹಾಗೂ ಕುಡಿಯಲು ಯೋಗ್ಯವಾಗಿಯೇ ಇರುತ್ತಿತ್ತು. ಆದರೆ ಲಂಡನ್ನಿನಿಂದ ಬರುವಾಗ ತುಂಬಿಕೊಳ್ಳುತ್ತಿದ್ದ ಥೇಮ್ಸ್ ನದಿಯ ನೀರು ಭಾರತ ತಲುಪುವ ವೇಳೆಗೆ ಹಾಳಾಗಿತ್ತಿತ್ತು. ಗಂಗಾನದಿಯ ನೀರು ಬಹುಕಾಲ ಕೆಡದೆ ಇರುವಂಥ ಗುಣವನ್ನು ಪಡೆದುಕೊಂಡಿರುವುದು ಇದರಿಂದ ತಿಳಿದುಬರುತ್ತದೆ.
ಈ ಗುಣದಿಂದಾಗಿಯೇ ಗಂಗೆಯನ್ನು ಕ್ಷೀರಶುಭ್ರಾ, ನಿತ್ಯಶುದ್ಧಾ ಎಂದು ನಮ್ಮ ಪೂರ್ವಜರು ಬಣ್ಣಿಸಿರುವುದು, ಗಂಗಾಜಲವನ್ನು ಗಿಂಡಿಗಳಲ್ಲಿ ಪತ್ರೆಗಳಲ್ಲಿ ತುಂಬಿಕೊಂಡು ತಮ್ಮ ತಮ್ಮ ಊರುಗಳಿಗೆ ಯಾತ್ರಾರ್ಥಿಗಳು ತೆಗೆದುಕೊಂಡು ಹೋಗುತ್ತಾರೆ ಮತ್ತು ಹಾಗೆ ತೆಗೆದುಕೊಂಡು ಹೋದ ಈ ಪವಿತ್ರ ಜಲ, ನಿತ್ಯಶುದ್ಧ ರೂಪದಲ್ಲಿಯೇ ಇರುತ್ತದೆಂಬುದು ತಲತಲಾಂತರದಿಂದ ಸಾಬಿತಾಗಿ ಬಂದಿರುವ ಸಂಗತಿಯಾಗಿದೆ. ಈ `ಶುದ್ಧ ರೂಪ’ ಗಂಗಾ ನದಿಗೆ ಪ್ರಾಪ್ತವಾಗಿರುವುದು ಅತ್ಯಧಿಕ ಪ್ರಮಾಣದಲ್ಲಿ ಇರುವ ಸ್ವಯಂ ಶುದ್ಧೀಕರಣ ಸಾಮಥ್ರ್ಯದಿಂದ ಯಾವ ನದಿಗಳಲ್ಲಿ ಸದಾ ಕಾಲ ಅಗಾಧ ಪ್ರಮಾಣದ ಜಲ ಸಮೃದ್ಧಿ ಇರುತ್ತದೆಯೋ ಅಂಥ ನದಿಗಳಿಗೆ ಸಾಧ್ಯ. ವಿಸ್ತøತ ಪಾತ್ರವುಳ್ಳ ಗಂಗಾನದಿಗೆ ಈ ಸಾಮಥ್ರ್ಯ ಸಹಜವಾಗಿಯೇ ಇದೆ.
ಪ್ರಾಮುಖ್ಯ
ಸ್ವಾತಂತ್ರ್ಯಾನಂತರ ಭಾರತ ವಿಭಜನೆಯ ಕಾಲದಲ್ಲಿ ಜಗದ್ವಿಖ್ಯಾತ ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾಹ್ ಖಾನ್ ಅವರನ್ನು ಪಾಕಿಸ್ತಾನ ಸರ್ಕಾರವು ತಮ್ಮ ದೇಶಕ್ಕೆ ಬಂದು ನೆಲೆಸಲು ಆಹ್ವಾನವಿತ್ತಿತ್ತು. ಆಗ ಉಸ್ಸಾದರು ಅದನ್ನು ತಿರಸ್ಕರಿಸಿದ್ದರು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಉಸ್ತಾದವರಿಗೆ ಅವರು ಕೇಳುವ ಎಲ್ಲ ಸವಲತ್ತುಗಳನ್ನೂ ಒದಗಿಸಿ ಕೊಡುವುದಾಗಿ ಆಮಿಷ ಒಡ್ಡಿತು. ಆಗ ಬಿಸ್ಮಿಲ್ಲಾಹ್ ಖಾನ್ ಕೇಳಿದ್ದು ಒಂದೇ ಪ್ರಶ್ನೆ. `ನನ್ನ ಮನೆಯ ಬಳಿ ಗಂಗೆ ಹರಿಯಬೇಕು. ಸಾಧ್ಯವೇನು!?’ ಅವರ ಈ ಮಾತಿಗೆ ಪಾಕಿಸ್ತಾನ ನಿರುತ್ತರವಾಯಿತು ಮತ್ತು ಉಸ್ತಾದರು ತಮ್ಮ ಅಚ್ಚುಮೆಚ್ಚಿನ ವಾರಾಣಸಿಯಲ್ಲೇ ಉಳಿದುಕೊಂಡರು.
ಭಾರತೀಯರ ಭಾವುಕ ಸಂಬಂಧ ಈ ಬಗೆಯದಾದರೆ, ಪಾಶ್ಚಾತ್ಯರ ಕುತೂಹಲ ಮತ್ತೊಂದು ಬಗೆಯದು. ಅಲೆಗ್ಸಾಂಡರ್ ದಂಡಯಾತ್ರೆ ಹೊರಟಾಗ ಆತನ ಗುರು `ನೀನು ಭಾರತಕ್ಕೆ ಹೋದರೆ ಅಲ್ಲಿನ ಮಣ್ಣು, ಗಂಗಾ ಜಲ ಹಾಗೂ ಒಬ್ಬ ಸನ್ಯಾಸಿಯನ್ನು ತಾ’ ಎಂದಿದ್ದರಂತೆ.
18ನೇ ಶತಮಾನದ ಯುರೋಪಿಯನ್ ಚಿಂತಕ ಹಾಗೂ ಬರಹಗಾರ ಪೋಲ್ಟೇರ್, `ಗಂಗಾ ತಟದಲ್ಲಿ ಎಲ್ಲವೂ ಇದೆ. ಜ್ಯೋತಿರ್ವಿಜ್ಞಾನ, ಭೌತ ಶಾಸ್ತ್ರ, ರಾಸಾಯನ ಶಾಸ್ತ್ರ- ಎಲ್ಲವೂ ಗಂಗಾ ತಟದಿಂದಲೇ ಹೊರ ಹೊಮ್ಮುತ್ತವೆ. ಎರಡೂವರೆ ಸಾವಿರ ವರ್ಷಗಳ ಹಿಂದೆ ಪೈಥಾಗರಸ್ ರೇಖಾ ಗಣಿತವನ್ನು ಅಧ್ಯಯನ ಮಾಡಿದ್ದು ಗಂಗಾ ತಟದಲ್ಲಿಯೇ. ಆದ್ದರಿಂದಲೇ ಆತ ಪ್ರಮೇಯವನ್ನು ಗಂಗಾ ತಟದಲ್ಲಿಯೇ. ಆದ್ದರಿಂದಲೇ ಆತ ಪ್ರಮೇಯವನ್ನು ರಚಿಸಲು ಸಾಧ್ಯವಾಯಿತು’ ಎಂದು ಬರೆಯುತ್ತಾರೆ. ಗಂಗೆಯ ಕುರಿತಾಗಿ ಬಹುತೇಕ ಪಾಶ್ಚಾತ್ಯರು, ಅದೊಂದು `ಜ್ಞಾನ ವಾಹಿನಿ’ ಎಂದೇ ಪರಿಗಣಿಸುತ್ತಾರೆ.
ಮಾಲಿನ್ಯ
ಸಾಮಾನ್ಯವಾಗಿ ನದಿಯ ಇಕ್ಕೆಲಗಳಲ್ಲಿ ನಾಗರಿಕತೆ ಬೆಳೆಯುತ್ತದೆ. ಪಟ್ಟಣಗಳು ಹುಟ್ಟಿಕೊಳ್ಳುತ್ತವೆ. ಆದರೆ ಗಂಗೆಯುದ್ದಕ್ಕೂ ಆಧ್ಯಾತ್ಮಿಕತೆ ಹಬ್ಬಿಕೊಂಡಿತು. ಮಠ-ಮಾನ್ಯಗಳು, ದೇಗುಲಗಳು ತಲೆ ಎತ್ತಿದವು. ಸಾಧಕರು ಬೀಡುಬಿಟ್ಟರು. ಗುರುಕುಲಗಳು ಬೆಳೆದುನಿಂತವು. ಹಾಗೆಯೇ ಮುಕ್ತಿಧಾಮಗಳೂ. ಗಂಗೆ ಭಾರತೀಯರ ಪಾಲಿಗೆ ಹೆಮ್ಮೆಯಾದಳು. ಈಕೆಯೆಡೆಗಿನ ಶ್ರದ್ಧೆಯನ್ನು ಕಂಡು ವಿದೇಶಿಯರು ನಿಬ್ಬೆರಗಾದರು, ಅಧ್ಯಯನ ವಸ್ತುವಾದಳು. ದುರಂತವೆಂದರೆ, ಇಷ್ಟೆಲ್ಲ ಬಹುಮಾನ್ಯಳಾದ ಗಂಗೆ ಇಂದು ನಮ್ಮ ಬೇಜವಾಬ್ದಾರಿಯಿಂದ ಮಲಿನಗೊಂಡಿದ್ದಾಳೆ. ಭಾರತೀಯರ ಗಂಗಾಭಕ್ತಿಯನ್ನು ಅಚ್ಚರಿಯಿಂದಲೇ ಮೆಚ್ಚಿಕೊಂಡಿದ್ದ ವಿದೇಶಿಯರು ಇಂದು ಗಂಗೆಯ ಮಾಲಿನ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. `ಗಂಗೆಯನ್ನು ಉಳಿಸಿಕೊಳ್ಳಿ’ ಎಂದು ಜಗತ್ತು ಭಾರತಕ್ಕೆ ಹೇಳುವ ಪರಿಸ್ಥಿತಿಯನ್ನು ನಾವಿಂದು ತಂದುಕೊಂಡಿದ್ದೇವೆ.
ಗಂಗೆ ಮತ್ತು ಉಪನದಿಗಳ ಹರಿಯುವಿಕೆಯ ಒಟ್ಟು ಉದ್ದಳತೆ 12,690 ಕಿ.ಮೀ, ಇದರಲ್ಲಿ ಗಂಗೆಯು 2,500 ಕಿ.ಮೀ, ನಷ್ಟು ಹರಿದು ಕೊನೆಗೆ ಕೋಲ್ಕತ್ತಾ ಬಳಿ ಬಂಗಾಳಕೊಲ್ಲಿಯಲ್ಲಿ ಸೇರುತ್ತಾಳೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಲಿ ವರದಿಯಂತೆ, ಗಂಗಾನದಿಯು 42%ರಷ್ಟು ಭಾಗ ಕಲುಷಿತವಾಗಿದೆ. ಗಂಗೆಯ ನಾಶವೆಂದರೆ ಭಾರತೀಯ ಸಂಸ್ಕೃತಿಯ ನಾಶ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳೂ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಮಿತಿಯಲ್ಲಿ ಜನ ಸಾಮಾನ್ಯರೂ ಕೆಲಸ ಮಾಡುತ್ತಿದ್ದಾರೆ. ಈಗ ಸನ್ನಿವೇಶ ಇನ್ನೂ ಗಂಭೀರವಾಗಿದೆ. ಗಂಗೆಯ ಮಾಲಿನ್ಯ ತಡೆಗಟ್ಟಿ ಆಕೆಯನ್ನು ಉಳಿಸಿಕೊಳ್ಳದೆ ಕೇವಲ ಪೂಜ್ಯ ಭಾವನೆ ತೋರಿದರೆ ಅದರಿಂದ ಏನೂ ಪ್ರಯೋಜನವಾಗದು.
(ವಿವಿಧ ಮೂಲಗಳಿಂದ)