ಬೀದರ: ಗಡಿ ಜಿಲ್ಲೆ ಬೀದರನಲ್ಲಿ ಬಿಸಿಲಿನ ತಾಪಮಾನ ಏರುತ್ತಿದ್ದಂತೆಯೇ ಜಾತಿ ಲೆಕ್ಕಾಚಾರದಲ್ಲಿ ಟಿಕೆಟ್ ಫೈಟ್ ನಡೆಯುತ್ತಿದೆ ಒಂದೆರೆಡು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣಿ ಘೋಷಣೆಯಾಗಲಿದೆ. ಹೀಗಾಗೀ ಈಗಿನಿಂದಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಪಕ್ಷದ ಅಭ್ಯರ್ಥಿಗಳಿಗಾಗಿ ಹುಡುಕಾಟ ಆರಂಭಿಸಿವೆ.
ಆದರೆ ಮೂರೂ ರಾಜಕೀಯ ಪಕ್ಷಗಳಲ್ಲಿ ಡಜನ್ ಗಟ್ಟಲೆ ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಗಡಿ ಜಿಲ್ಲೆ ಬೀದರನಲ್ಲೂ ಮರಾಠಾ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಸಮುದಾಯಕ್ಕೆ ಒಂದು ಟಿಕೆಟ್ ಕೊಡಿ ಎಂದು ಬಿಜೆಪಿ ವರಿಷ್ಠರಿಗೆ ಒತ್ತಡ ಹಾಕುತ್ತಿದ್ದಾರೆ. ಮರಾಠಾ ಟಿಕೆಟ್ ಕಹಳೆ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಗಡಿ ಜಿಲ್ಲೆಯ ಮರಾಠಿಗರು ಬಿಜೆಪಿ ಪಕ್ಷದ ಟಿಕೆಟಿಗಾಗಿ ಪಣ ತೊಟ್ಟಿದ್ದು ಪ್ರಬಲ ಸಮಾಜವಾದ ಮರಾಠರ ಬೇಡಿಕೆ “ಕಮಲ” ನಾಯಕರಿಗೆ ಸಂಕಷ್ಟ ತಂದಿದೆ. ಈ ಬಾರಿ ಮರಾಠಿಗರಿಗೆ ಟಿಕೆಟ್ ನೀಡಿದೆ ಇದ್ದರೆ ಮರಾಠ ಸಮುದಾಯ ಬಿಜೆಪಿಗೆ ತಕ್ಕ ಪಾಠ ಕಲಿಸುವ ಭೀತಿಯುಂಟಾಗಿದೆ.
ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನೇ ದಿನೇ ಬೆಳೆಯುತ್ತಿದ್ದು ವಿವಿಧ ಸಮುದಾಯಗಳು ವರಿಷ್ಠರ ಮೇಲೆ ಟಿಕೆಟಿಗಾಗಿ ಒತ್ತಾಡ ಹೇರಲು ಮುಂದಾಗಿವೆ. ಅದೇ ರೀತಿ ಗಡಿ ಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ ಹಾಗೂ ಔರಾದ್ನಲ್ಲಿ ಅತಿ ಹೆಚ್ಚು ಮರಾಠಾ ಮತದಾರರು ಇದ್ದು ಸಮುದಾಯಕ್ಕೆ ಟಿಕೆಟ್ ಸಿಗದೆ ಇದ್ದರೆ ಈ ಬಾರಿ ಬಿಜೆಪಿಗೆ ಶಾಕ್ ಕೊಡಲು ರೆಡಿಯಾಗಿದ್ದಾರೆ ಎನ್ನಲಾಗಿದೆ.
ಹೌದು, ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಗೆಲ್ಲುವ ಕುದುರೆಗಳಿಗಾಗಿ ಹುಡುಕಾಟ ಆರಂಭಿಸಿವೆ. ಇತ್ತ ಗಡಿ ಜಿಲ್ಲೆ ಬೀದರನಲ್ಲಿ ಪ್ರಬಲ ಸಮುದಾಯವಾಗಿ ಗುರುತಿಸಿಕೊಂಡಿರುವ ಮರಾಠಿಗರು ಸಮಾಜಕ್ಕೆ ಒಂದು ಟಿಕೆಟ್ ನೀಡಲು ಬಿಜೆಪಿ ಪಕ್ಷದ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೀದರನಲ್ಲಿ 2 ಲಕ್ಷಕ್ಕೂ ಅಧಿಕ ಮರಾಠಾ ಸಮುದಾಯದ ಮತಗಳಿದ್ದು, ಭಾಲ್ಕಿ, ಬಸವಕಲ್ಯಾಣ ಮತ್ತು ಔರಾದ ಕ್ಷೇತ್ರದಲ್ಲಿ ಸಂಖ್ಯೆ ಹೆಚ್ಚಿದೆ. ಜಿಲ್ಲೆಯಲ್ಲಿ ಮರಾಠಾ ಸಮುದಾಯ ರಾಜಕೀಯವಾಗಿ ಹಿಂದುಳಿದಿದ್ದು, 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಮರಾಠಿಗರಿಗೆ ಟಿಕೆಟ್ ನೀಡಿ ಪ್ರಾತಿನಿಧ್ಯ ಕೊಡಬೇಕು ಎಂದು ವರಿಷ್ಠರಿಗೆ ಆಗ್ರಹ ಮಾಡುತ್ತಿದ್ದಾರೆ.
ಬಸವಕಲ್ಯಾಣ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಜಿ ಮುಳೆ, ಅನಿಲ ಭೂಸಾರೆ, ಭಾಲ್ಕಿ ಕ್ಷೇತ್ರದಲ್ಲಿ ಡಾ. ದಿನಕರ್ ಮೋರೆ, ಜನಾರ್ಧನ ಬಿರಾದಾರ, ವಿಜಯಕುಮಾರ ಕರಂಜಕ ಮತ್ತು ಹುಮನಾಬಾದ ಕ್ಷೇತ್ರದಲ್ಲಿ ಪದ್ಮಾಕರ್ ಪಾಟೀಲ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಬೀದರ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಮರಾಠಾ ಸಮಾಜ ಇದೆ. ವಿಧಾನಸಭೆ ಚುನಾವಣೆಯಲ್ಲಿ ಮರಾಠಾ ಸಮುದಾಯಕ್ಕೆ ಒಂದು ಸ್ಥಾನ ಕೊಡಲೇಬೇಕು ಎಂದು ಎರಡು ರಾಷ್ಟ್ರೀಯ ಪಕ್ಷಗಳು ವರಿಷ್ಠರಿಗೆ ಆಗ್ರಹಿಸುತ್ತಿದ್ದಾರೆ. ಇಲ್ಲವಾದರೆ ನಮ್ಮ ಸಮುದಾಯದ ಶಕ್ತಿ ಏನು ಎಂಬುವುದನ್ನು ತೋರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ಮುಖಂಡರು ನೀಡಿದ್ದಾರೆ.
ಜಿಲ್ಲೆಯಲ್ಲಿ ಅಂದಾಜಿನ ಪ್ರಕಾರ ಭಾಲ್ಕಿಯಲ್ಲಿ 70 ಸಾವಿರ, ಬಸವಕಲ್ಯಾಣದಲ್ಲಿ 46 ಸಾವಿರ ಮತ್ತು ಔರಾದನಲ್ಲಿ 22 ಸಾವಿರ ಮರಾಠಾ ಸಮುದಾಯ ಇದೆ. ಸದ್ಯ ಔರಾದ ಮೀಸಲು ಕ್ಷೇತ್ರವಾಗಿರುವ ಕಾರಣ ಭಾಲ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರದಲ್ಲಿ ಸಮಾಜದ ಒಬ್ಬ ಅಭ್ಯರ್ಥಿಗಾದರೂ ಟಿಕೆಟ್ ನೀಡಬೇಕು ಎಂಬ ಕೂಗು ಜೋರಾಗಿದೆ.
ಈ ಬಾರಿ ಬಿಜೆಪಿ ವರಿಷ್ಠರು ಮರಾಠಿಗರಿಗೆ ಟಿಕೆಟ್ ಕೊಟ್ಟು ಸಾಮಾಜಿಕ ನ್ಯಾಯ ಒದಗಿಸುತ್ತಾರೆ ಜೊತೆಗೆ ಭಾಲ್ಕಿಯಲ್ಲಿ ಈಶ್ವರ ಖಂಡ್ರೆ ಸೋಲುತ್ತಾರೆ ಎಂದು ಹೇಳುತ್ತಿದ್ದಾರೆ ಜಿಲ್ಲೆಯ ಮರಾಠಾ ಆಕಾಂಕ್ಷಿಗಳು.
ಹಿಂದಿನಿಂದಲೂ ಬಿಜೆಪಿಗೆ ಮರಾಠಿಗರು ನಿಷ್ಠರಾಗಿದ್ದು ಪಕ್ಷ ಸಹ ಪ್ರತಿ ಚುನಾವಣೆಯಲ್ಲಿ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡಿದೆ. ಹೀಗಾಗೀ ಇಂದು ಬಿಜೆಪಿ ಪಕ್ಷದ ಮೇಲೆ ಟಿಕೆಟ್ ಗಾಗಿ ಒತ್ತಡ ಹೆಚ್ಚಾಗಿದ್ದು ಬಿಎಸ್ ವೈ ಸಿಎಂ ಆಗಿದ್ದಾಗ ಮರಾಠಾ ಸಮುದಾಯವನ್ನು 2ಎ ಗೆ ಸೇರಿಸುವ ಭರವಸೆ ನೀಡಿದ್ದರು.ಆದರೆ ಈ ಭರವಸೆ ಈಡೇರಿರಲಿಲ್ಲ. ಬಸವಕಲ್ಯಾಣ ಉಪಚುನಾವಣೆಗೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಅಂದು ಮರಾಠಾ ಸಮುದಾವನ್ನು 2ಏಗೆ ಸೇರ್ಪಡೆ ಮಾಡುವ ಕೆಲಸ ಮಾಡಿದರು. ಇನ್ನೂ ಎಂಎಲ್ಸಿ ಸ್ಥಾನ ಹಾಗೂ ಮರಾಠಾ ನಿಗಮ ಮಂಡಳಿ ರಚನೆ ಜೊತೆಗೆ ಶಿವಾಜಿ ಪಾರ್ಕ್ ಸ್ಥಾಪನೆಗೆ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿ ಅಂದು ಕಲ್ಯಾಣ ನಾಡಿನ ಮರಾಠಿಗರ ಮುನಿಸು ಶಮನ ಮಾಡಿದರು ಬಿಜೆಪಿ ನಾಯಕರು.
ಆದರೆ ಈ ಬಾರಿ ಮರಾಠಾ ಸಮುದಾಯಕ್ಕೆ ಟಿಕೆಟ್ ನೀಡಿದ್ದೆಯಾದರೆ, ಅಲ್ಲಿ ಗೆಲುವು ಸುಲಭವಾಗುವುದು. ಜೊತೆಗೆ ಇದರ ಪ್ರಭಾವ ಜಿಲ್ಲೆಯ ಎಲ್ಲಾ ಕಡೆಗಳಲ್ಲಿಯೂ ಆಗುತ್ತದೆ. ಇದರಿಂದ ಜಿಲ್ಲೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಲಿದೆ ಎಂಬುದು ಸಮುದಾಯದ ಅಭಿಪ್ರಾಯವಾಗಿದೆ.