spot_img
spot_img

ನಗು ನಿಜವಾಗಿಯೂ ಅತ್ಯುತ್ತಮವಾದ ಔಷಧವೇ ?

Must Read

- Advertisement -

ಸರ್ವರಿಗೂ ವಿಶ್ವ ನಗುವಿನ ದಿನದ ಶುಭಾಶಯಗಳು.

ನಗು ನಮಗೆ ದೇವರು ನೀಡಿದ ವರದಾನ. ಅಂದೆಂತಹ ಬೇಜಾರು ಇದ್ದರೂ ಒಂದು ಸುಂದರವಾದ ನಗುವಿನ ಮೂಲಕ ಅದನ್ನು ದೂರ ಮಾಡಬಹುದು. ಅದಕ್ಕೇ ಕೆಲವು ಕವಿಗಳು ನಗು ನಗುತಾ ನಲಿ ನಲಿ ಏನೇ ಆಗಲಿ ಎಂದು ಹೇಳಿರುವುದು. ನಗುವಿನಲ್ಲಿ ಅಷ್ಟೊಂದು ಶಕ್ತಿಯಿದೆ.

ನಗುವುದು ಒಂದು ಕಲೆಯಾದರೆ, ನಗಿಸುವುದು ಇನ್ನೊಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಆದ್ದರಿಂದಲೇ ತಾ ನಗಿಸಿ, ನಗುತಾ, ನಗಿಸುವ ಬಾಳು ನಿಮ್ಮದಾಗಲಿ ಎಂದೇ ಹಿರಿಯರು ನಮ್ಮನ್ನು ಆಶೀರ್ವಾದಿಸುತ್ತಾರೆ. ಈ ನಗುವಿಗೆ ಒಂದು ರೀತಿಯ ಪಾಸಿಟಿವ್‌ ಎನರ್ಜಿಯಿದೆ. ಎಂತಹ ಸಮಸ್ಯೆಯನ್ನೂ ಪರಿಹರಿಸುವ ಶಕ್ತಿಯಿದೆ. ನಗು ನಮ್ಮ ಬಾಳಿನ ಔಷಧಿಯಿದ್ದಾಗೆ. ಈ ನಗುವಿನ ಮಹತ್ವವನ್ನು ಗಮನಿಸಿಯೇ ಕೆಲವರು ನಗುವಿಗಾಗಿಯೇ ಒಂದು ದಿನವನ್ನು ಮೀಸಲಾಗಿಟ್ಟಿದ್ದಾರೆ. ಆ ದಿನವೇ ಇಂದು. ಅಂದರೆ ಪ್ರತೀ ವರ್ಷ ಮೇ ತಿಂಗಳ ಮೊದಲ ಭಾನುವಾರ ವಿಶ್ವ ನಗುವಿನ ದಿನವನ್ನಾಗಿ ಆಚರಿಸಲಾಗುತ್ತಿದೆ.

- Advertisement -

ಮೊದಲ ಬಾರಿಗೆ ವಿಶ್ವ ನಗು ದಿನವನ್ನು 1998, ಜನವರಿಯಲ್ಲಿ ಮುಂಬಯಿನಲ್ಲಿ ಆಚರಿಸಲಾಯಿತು. ಇದನ್ನು ಪ್ರಥಮ ಬಾರಿಗೆ ಆರಂಭಿಸಿದವರು ಡಾ. ಮದನ್‌ ಕಟಾರಿಯಾ ಎಂಬವರು. ವಿಶ್ವ ನಗು ಯೋಗ ಅಭಿಯಾನದ ಸಂಸ್ಥಾಪಕರಾದ ಇವರು ನಗುವಿಗಿರುವ ಅನನ್ಯ ಶಕ್ತಿಯನ್ನು ಗಮನಿಸಿ ಇಂಥದ್ದೊಂದು ದಿನವನ್ನು ಆರಂಭಿಸಿದರು. ನಗುವಿನಿಂದ ಇಡೀ ವಿಶ್ವವನ್ನೇ ಶಾಂತಿಯುತವಾಗಿ ಮತ್ತು ಪಾಸಿಟಿವ್‌ ಆಗಿ ಬದಲಾಯಿಸಬಹುದು ಎಂಬ ನಂಬಿಕೆ ಇವರದ್ದು. ಈಗ ಈ ದಿನವನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಆಚರಿಸುತ್ತವೆ.

ನಗುವನ್ನು ಶ್ರೇಷ್ಠ ಔಷಧ ಎಂದು ಪರಿಗಣಿಸಲಾಗುತ್ತದೆ, ಆದರೆ ಅದು ಬಂಧನಕ್ಕೂ ತಿರುಗಬಹುದು. ನಿಮ್ಮ ನಗುವಿನ ಮೂಲದತ್ತ ನೀವೇಕೆ ಗಮನಹರಿಸಬೇಕು ಎಂಬುದರ ಬಗ್ಗೆ ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ.

🥰 ಸಂತೋಷದ ಒಂದು ಅಭಿವ್ಯಕ್ತಿ
ಬಹಳ ಕಾಲದಿಂದಲೂ ನಗುವು ಒಂದು ಅತ್ಯತ್ತಮವಾದ ಔಷಧವೆಂದು ಜನರು ಹೇಳುತ್ತಾ ಬಂದಿದ್ದಾರೆ. ಇದರರ್ಥ, ಸಂತೋಷದಿಂದ ಇರುವವರು ಸ್ವಾಭಾವಿಕವಾಗಿ ತಮ್ಮನ್ನು ತಾವು ಗುಣಪಡಿಸಿಕೊಳ್ಳುತ್ತಾರೆ ಎಂಬುದನ್ನು ಎಲ್ಲೋ ಯಾರೋ ತಿಳಿದುಕೊಂಡಿದ್ದಾರೆ ಎಂದಾಯಿತು. ನೀವು ಆರೋಗ್ಯದಿಂದಿದ್ದೀರೋ ಅಥವಾ ಅನಾರೋಗ್ಯದಿಂದ ನರಳುತ್ತಿದ್ದೀರೋ ಎನ್ನುವುದು ನಿಮ್ಮ ಶರೀರವು ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅದರ ಕಾರ್ಯನಿರ್ವಹಣೆಯು ಉತ್ತಮವಾಗಿದ್ದರೆ, ಅದನ್ನು ಆರೋಗ್ಯವೆಂದು, ಇಲ್ಲದಿದ್ದರೆ ಅದನ್ನು ಅನಾರೋಗ್ಯವೆಂದೂ ಕರೆಯುತ್ತೇವೆ. ನೀವು ಸಂತೋಷವಾಗಿದ್ದಾಗ ನಿಮ್ಮ ಭೌತಿಕ ಶರೀರವು ಅತ್ಯಮೋಘವಾದ ರೀತಿಯಲ್ಲಿ ಕೆಲಸ ಮಾಡುತ್ತದೆ. ನಿಮ್ಮ ರೋಗವನ್ನು ಗುಣಪಡಿಸುವುದು ನಗುವಲ್ಲ; ಅದನ್ನು ಗುಣಪಡಿಸುವುದು ಸಂತೋಷ. ಆದರೆ, ನಗು ಎಂದರೆ ಸಂತೋಷವಾಗಿರುವುದು ಎಂಬುವಷ್ಟರ ಮಟ್ಟಿಗೆ ಅವೆರಡೂ ಕೂಡಿಕೊಂಡುಬಿಟ್ಟಿದೆ.

- Advertisement -

🥰 ಸಂತೋಷದ ಅರ್ಥ ನಗುವಲ್ಲ. ಸಂತೋಷವೆನ್ನುವುದು ಪ್ರತಿಯೊಂದು ಸಂಭವನೀಯ ರೀತಿಯಲ್ಲೂ ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳಬಹುದು – ಅದು ಯಾವುದೇ ಒಂದು ನಿರ್ದಿಷ್ಟ ರೀತಿಯಲ್ಲಿರಬೇಕಿಲ್ಲ.

🥰 ನಗುವು ಒಂದು ಬಂಧನವಾಗಿಯೂ ಬಿಡಬಹುದು. ಸಂತೋಷವಾಗಿರುವುದು ಎಂದರೆ ನೀವು ಯಾವಾಗಲೂ “ಹ್ಹಹ್ಹಹ್ಹ” ಎಂದು ನಗುತ್ತಿರಬೇಕು ಎಂದು ನೀವು ನಂಬಿದ್ದರೆ, ನೀವು ತುಂಬಾ ಹಾಸ್ಯಾಸ್ಪದವಾಗಿಬಿಡುತ್ತೀರಿ. ಏಕೆಂದರೆ, ನೀವು ಯಾವುದೇ ಸಂದರ್ಭದ ಗಹನತೆ ಮತ್ತು ವ್ಯಾಪ್ತಿಯನ್ನು ಅರಿಯದೆ, ಎಲ್ಲಾ ಸಂಧರ್ಭಗಳಲ್ಲೂ “ಹ್ಹಹ್ಹಹ್ಹ” ಎಂದು ನಗುತ್ತಿರುತ್ತೀರಿ. ಸಂತೋಷದ ಅರ್ಥ ನಗುವಲ್ಲ. ಸಂತೋಷವೆನ್ನುವುದು ಪ್ರತಿಯೊಂದು ಸಂಭವನೀಯ ರೀತಿಯಲ್ಲೂ ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳಬಹುದು – ಅದು ಯಾವುದೇ ಒಂದು ನಿರ್ದಿಷ್ಟ ರೀತಿಯಲ್ಲಿರಬೇಕಿಲ್ಲ. ನಗುವು ಅದರ ಒಂದು ಅಭಿವ್ಯಕ್ತಿಯಾಗಬಹುದು, ಮೌನವು ಅದರ ಇನ್ನೊಂದು ಅಭಿವ್ಯಕ್ತಿಯಾಗಬಹುದು. ಸಂತೋಷವು ನಿಮ್ಮಲ್ಲಿ ಸ್ಥಿರತೆಯನ್ನು ಉಂಟುಮಾಡಬಹುದು ಅಥವಾ ಅದು ನಿಮ್ಮನ್ನು ಕ್ರಿಯಾಶೀಲರನ್ನಾಗಿಸಬಹುದು ಅಥವಾ ಅದು ನಿಮ್ಮಲ್ಲಿ ಕಣ್ಣೀರನ್ನು ತರಿಸಬಹುದು.

ಗೌತಮ ಬುದ್ಧನು ಸಂತೋಷದ ಮೂರ್ತರೂಪವಾಗಿದ್ದರೂ ಸಹ, ಅವನು ನಗುತ್ತಿರುವುದನ್ನು ಯಾವ ಸಮಯದಲ್ಲಿಯೂ ಯಾರೂ ನೋಡಿರಲಿಲ್ಲ. ಗೌತಮನು ಕೇಕೆ ಹಾಕಿ ನಗಲಿಲ್ಲ; ಅಥವಾ ವ್ಯಕ್ತವಾಗುವ ರೀತಿಯಲ್ಲಿ ಮುಗುಳ್ನಗೆಯನ್ನೂ ಬೀರಲಿಲ್ಲ; ಅವನ ಮಂದಹಾಸವೂ ಬಹಳ ಚಿಕ್ಕದಾಗಿದ್ದಿತು. ಸಂತೋಷವೆಂದರೆ ನಗು ಅಥವಾ ಮುಗುಳ್ನಗೆ ಎಂದರ್ಥವಲ್ಲ. ಸಂತೋಷವೆಂದರೆ ನೀವು ಜೀವನದ ಆಂತರ್ಯದಲ್ಲಿದ್ದೀರಿ ಎಂದರ್ಥ. ನೀವು ಅದನ್ನು ಒಂದು ನಿರ್ದಿಷ್ಟವಾದ ಅಭಿವ್ಯಕ್ತಿಗೆ ಕಟ್ಟಿಹಾಕಿದ ತಕ್ಷಣ, ನಿಮ್ಮ ಸಂತೋಷವು ಪ್ರತಿ ಕ್ಷಣ ನಿಮ್ಮೊಂದಿಗಿರುವುದಿಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಂಡಂತೆಯೇ ಸರಿ.

🥰 ಸಂತೋಷ ಎಂದರೇನು ?
ಸಂತೋಷವೆಂದರೆ, ಮೂಲಭೂತವಾಗಿ ನೀವು ಜೀವನದಲ್ಲಿ ಆಳವಾಗಿ ಬೇರೂರಿದ್ದೀರಿ ಎಂದರ್ಥ. ಕೇವಲ ಅದರ ಮೇಲ್ಮೈಯಲಲ್ಲ. ನೀವು ಸಂತೋಷದ ಮೂಲದಲ್ಲಿದ್ದೀರಿ, ಆದ ಕಾರಣ ನೀವೇ ಸಂತೋಷ. ಜನರು ಸಂತೋಷವನ್ನು ಪಡೆಯಲು ವಿರುದ್ಧ ದಿಕ್ಕಿನಲ್ಲಿ ಯಾವಾಗಲೂ ಪ್ರಯತ್ನಿಸುತ್ತಿದ್ದಾರೆ. ಕೆಲವರು ಮದ್ಯಪಾನ ಮಾಡುವುದು ಸಂತೋಷವೆಂದುಕೊಂಡರೆ, ಇನ್ನು ಕೆಲವರು ನಗುವುದನ್ನು ಸಂತೋಷವೆಂದುಕೊಳ್ಳುತ್ತಾರೆ. ನಿಮಗೇ ಗೊತ್ತಲ್ಲ, ಕೆಲವರು ನಗುತ್ತಿರುವ ಜನರ ಒಂದು ಸಮಾಜವನ್ನೇ ಕಟ್ಟಿದ್ದಾರೆ. ಬೀದಿಯಲ್ಲಿ ಎಲ್ಲೆಡೆಯೂ ಅವರು “ಹಹ್ಹಾ, ಹೋಹ್ಹೋ, ಹೀಹ್ಹೀ!” ಎಂದು ನಗುತ್ತಿರುತ್ತಾರೆ. ಆರಂಭದಲ್ಲಿ ಅದು ವಿನೋದವೆನಿಸಬಹುದು, ಆದರೆ ನೀವು ಎಲ್ಲ ಸಮಯದಲ್ಲೂ ನಗುತ್ತಿರುವವರೊಟ್ಟಿಗೆ ಬದುಕಬೇಕೆಂದಾದರೆ, ಅವರ ನಗುವನ್ನು ನಿಲ್ಲಿಸುವ ಸಲುವಾಗಿ ಒಂದು ದಿನ ನಿಮಗವರನ್ನು ಕೊಂದುಬಿಡಬೇಕು ಎಂದೆನಿಸಬಹುದು!

🥰 ನಗುವು ಒಂದು ಪರಿಣಾಮ
ಇತ್ತೀಚಿನ ದಿನಗಳಲ್ಲಿ “ನಗುವ ಯೋಗ” ಎಂಬ ವಿಲಕ್ಷಣ ರೀತಿಯ ಯೋಗವು ಚಾಲ್ತಿಯಲ್ಲಿದೆ. ಒಬ್ಬರ ಎದುರು ಇನ್ನೊಬ್ಬರು ನಿಂತು, ನೀವು “ಹ್ಹಿ, ಹ್ಹಿ, ಹ್ಹಿ,” ಎನ್ನಿರಿ, ನಾನು “ಹ್ಹೆ, ಹ್ಹೆ, ಹ್ಹೆ” ಎಂದು ನಗುತ್ತೇನೆ ಎಂಬ ರೀತಿಯದ್ದು. ಇದು ಹುಚ್ಚುತನವಷ್ಟೆ. ಅಮೇರಿಕನ್ ಶಿಕ್ಷಕನೊಬ್ಬ ನೀವು ದಿನಕ್ಕೆ ಹತ್ತು ನಿಮಿಷಗಳಷ್ಟು ಕಾಲ ನಗಬೇಕು ಎಂದು ಉಪದೇಶ ಮಾಡಿರುವುದನ್ನು ನಾನು ಎಲ್ಲೋ ಓದಿದೆ. ನೀವು ಹಾಗೇನಾದರೂ ಮಾಡಿದ್ದೇ ಆದರೆ, ಶೀಘ್ರದಲ್ಲೇ ಹುಚ್ಚಾಸ್ಪತ್ರೆಯನ್ನು ಸೇರುತ್ತೀರಿ!

ನೋಡಿ, ನಿಮ್ಮ ತೋಟದಲ್ಲಿ ನಿಮಗೆ ಹೂಗಳಿರಬೇಕು ಎಂದಾದರೆ, ನೀವು ಪ್ಲ್ಯಾಸ್ಟಿಕ್ ಹೂಗಳನ್ನು ಖರೀದಿಸಿ, ಅವುಗಳನ್ನು ನಿಮ್ಮ ತೋಟದಲ್ಲಿರಿಸುವುದಿಲ್ಲ ತಾನೇ? ಅದಕ್ಕಾಗಿ ನೀವು ಹೂಗಳಂತೆ ಕಾಣಿಸದಂತಹ ವಿಷಯಗಳಲ್ಲಿ ತೊಡಗಿಸಿಕೊಳ್ಳಬೇಕು – ಮಣ್ಣು, ಗೊಬ್ಬರ, ನೀರು, ಸೂರ್ಯನ ಬೆಳಕು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಇವುಗಳಲ್ಲಿ ಯಾವುದೂ ಸಹ ಹೂಗಳಂತೆ ಕಾಣಿಸುವುದಿಲ್ಲ, ಭಾಸವಾಗುವುದಿಲ್ಲ ಅಥವಾ ಪರಿಮಳವನ್ನೂ ಬೀರುವುದಿಲ್ಲ, ಆದರೆ ನೀವು ಈ ವಿಷಯಗಳನ್ನು ಸರಿಯಾಗಿ ನಿರ್ವಹಿಸಿದ್ದೇ ಆದರೆ ಹೂಗಳು ಅರಳುತ್ತವೆ. ಅಂತೆಯೇ “ಪ್ರತಿದಿನ, ನಾನು ನಗುತ್ತೇನೆ” ಎಂಬ ನಿಲುವನ್ನು ನೀವು ತೆಗೆದುಕೊಂಡ ಮಾತ್ರಕ್ಕೆ ನೀವು ನಗುವುದಿಲ್ಲ. ನಿಮ್ಮೊಳಗೆ ನೀವು ಒಂದು ರೀತಿಯ ಸವಿಯಾದ ಸ್ಥಿತಿಯಲ್ಲಿದ್ದರೆ, ಏತಕ್ಕೆ ಎಂದು ತಿಳಿಯದೆಯೇ ಮಂದಹಾಸವೊಂದು ನಿಮ್ಮ ಮುಖದಲ್ಲಿ ಅರಳುತ್ತದೆ. ಒಂದು ಸಣ್ಣ ಕಚುಗುಳಿಯಿಂದ ನೀವು ನಗುತ್ತೀರಿ. ನಗು ಒಂದು ಪರಿಣಾಮ. ಆ ಪರಿಣಾಮವನ್ನು ಸೃಷ್ಟಿಸಲು ಪ್ರಯತ್ನಿಸಬೇಡಿ. ಅದರ ಪ್ರಕ್ರಿಯೆಯತ್ತ ಗಮನಹರಿಸಿ, ಅದರ ಮೂಲದತ್ತ ಗಮನಹರಿಸಿ.

🥰 ನಿಮ್ಮೊಳಗೆ ನೀವು ಒಂದು ರೀತಿಯ ಸವಿಯಾದ ಸ್ಥಿತಿಯಲ್ಲಿದ್ದರೆ, ಏತಕ್ಕೆ ಎಂದು ತಿಳಿಯದೆಯೇ ಮಂದಹಾಸವೊಂದು ನಿಮ್ಮ ಮುಖದಲ್ಲಿ ಅರಳುತ್ತದೆ. ಒಂದು ಸಣ್ಣ ಕಚುಗುಳಿಯಿಂದ ನೀವು ನಗುತ್ತೀರಿ.

🥰 ಸಂತೋಷವೆನ್ನುವುದು ನೀವು ಮಾಡಬೇಕಾದಂತಹ ವಿಷಯವಲ್ಲ. ನಿಮ್ಮೊಳಗೆ ತುಡಿಯುತ್ತಿರುವ ಜೀವದ ಮೂಲ ಪ್ರಕ್ರಿಯೆಗೆ ನೀವು ಯಾವುದೇ ಅಡೆತಡೆಗಳನ್ನು ಒಡ್ಡದಿದ್ದರೆ, ಸಂತೋಷವೆನ್ನುವುದು ಒಂದು ಸ್ವಾಭಾವಿಕ ಫಲಿತಾಂಶ. ಸಂತೋಷವೆನ್ನುವುದು ಒಂದು ಸಾಧನೆಯಲ್ಲ, ಸಂತೋಷವು ನಿಮ್ಮ ಮೂಲ ಸ್ಥಿತಿ. ಯೋಗದಲ್ಲಿ, ನಾವು ಒಬ್ಬ ಮನುಷ್ಯನನ್ನು ಐದು ಶರೀರಗಳ ಒಂದು ರಚನೆಯಾಗಿ ನೋಡುತ್ತೇವೆ: ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶ. “ಆನಂದ” ಎಂಬ ಪದವನ್ನು ಸಂತೋಷವೆಂದು ಅರ್ಥೈಸಬಹುದು. ಆದ್ದರಿಂದ ನಿಮ್ಮ ಅಂತರಾಳವೇ ಸಂತೋಷ. ದೇಹದ ಮೊದಲ ಮೂರು ಆಯಾಮಗಳು – ಭೌತಿಕ, ಮಾನಸಿಕ ಮತ್ತು ಪ್ರಾಣಶಕ್ತಿ ಶರೀರಗಳು ಸರಿಯಾದ ಹೊಂದಾಣಿಕೆಯಲ್ಲಿದ್ದರೆ, ನಿಮ್ಮ ಅಂತರಾಳವು, ಅಂದರೆ ಪರಮಾನಂದವು ಸ್ವಾಭಾವಿಕವಾಗಿ ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ.
ಸದಾ ನಗುತ್ತಿರಿ, ಇತರರನ್ನೂ ನಗಿಸುತ್ತಿರಿ.

ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿಯಲ್ಲಿ ಸ್ವಚ್ಛತೆ ಮಾಯ ; ಎಲ್ಲೆಡೆ ಕಂಗೊಳಿಸುತ್ತಿವೆ ತಿಪ್ಪೆಗಳು !

ಮೂಡಲಗಿ - ನಗರದಲ್ಲಿ ಪ್ರಧಾನ ಮಂತ್ರಿ ಮೋದಿಯವರ ಸ್ವಚ್ಛ ಭಾರತ ಅಭಿಯಾನವೆಂಬುದು ಕಾಣೆಯಾಗಿದ್ದು ನಗರದ ಎಲ್ಲೆಡೆ ಕಸ, ಕಡ್ಡಿ, ತಿಪ್ಪೆಗಳು ಕಂಗೊಳಿಸುತ್ತಿವೆ. ಇದರಿಂದ ನಗರದ ತುಂಬೆಲ್ಲ ಸೊಳ್ಳೆಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group