spot_img
spot_img

ನಿಪ್ಪಾಣಿ ನಗರಸಭೆ ಕರ್ನಾಟಕದ್ದೋ ಮರಾಠಿಗರದ್ದೋ?

Must Read

೩೧ ವರ್ಷಗಳ ಹಿಂದೆಯೇ ಭಗವಾಧ್ವಜ ಹಾರಿಸಲು ಠರಾವು!!

ಕರ್ನಾಟಕ – ಮಹಾರಾಷ್ಟ್ರದ ಗಡಿಭಾಗದಲ್ಲಿರುವ ನಿಪ್ಪಾಣಿ ನಗರವು ಯಾವ ರಾಜ್ಯಕ್ಕೆ ಸೇರಿದೆಯೆಂಬ ಬಗ್ಗೆ ಅನುಮಾನ ಮೂಡುತ್ತಿದೆ. ಯಾಕೆಂದರೆ ಈ ನಗರಸಭೆಯ ಕಟ್ಟಡದ ಮೇಲೆ ಮರಾಠಿಗರ ಸಂಕೇತವಾದ ಭಗವಾಧ್ವಜ ಕಳೆದ ೩೧ ವರ್ಷಗಳಿಂದ ಹಾರಾಡುತ್ತಿದೆ ಆದರೆ ನಮ್ಮ ಕನ್ನಡ ಹೋರಾಟಗಾರರಿಗಾಗಲಿ, ಕನ್ನಡದ ಅನ್ನ ಉಣ್ಣುತ್ತಿರುವ ನಿಪ್ಪಾಣಿ ನಾಗರಿಕರಿಗಾಗಲಿ, ಕನ್ನಡವೇ ನನ್ನುಸಿರು ಎನ್ನುವ ಕರ್ನಾಟಕ ಸರ್ಕಾರಕ್ಕಾಗಲಿ ಗೊತ್ತೇ ಆಗಿಲ್ಲ ಅಥವಾ ಜಾಣ ಕುರುಡೋ ಎಂಬುದು ತಿಳಿಯುತ್ತಿಲ್ಲ.

ಕಳೆದ ಐವತ್ತು ವರ್ಷಗಳಿಂದ ಬೆಳಗಾವಿಯ ಮಹಾನಗರಪಾಲಿಕೆ ಕಟ್ಟಡದ ಮೇಲಿನ ಭಗವಾಧ್ವಜ ತೆರವುಗೊಳಿಸಲು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಆ ಧ್ವಜವನ್ನು ತೆರವುಗೊಳಿಸಬೇಕಾದರೆ ಎಷ್ಟೋ ಜನ ಕನ್ನಡಾಭಿಮಾನಿಗಳು ಜೀವ ತೆತ್ತಿದ್ದಾರೆ. ಹಲವು ಜನರು ಕೋರ್ಟು ಕಚೇರಿ ಅಲೆದಾಡಿದ್ದಾರೆ. ಆದರೂ ಸರ್ಕಾರ ಮನಸು ಮಾಡಲಿಲ್ಲ. ಕೊನೆಗೆ ಸುಪ್ರೀಮ್ ಕೋರ್ಟ್ ಮಧ್ಯ ಪ್ರವೇಶ ಮಾಡಬೇಕಾಯಿತು. 

ಇದೂ ಅದೇ ರೀತಿಯ ಪ್ರಶ್ನೆ. ಮೂವತ್ತು ವರ್ಷಗಳಿಂದ ಭಗವಾಧ್ವಜ ನಿಪ್ಪಾಣಿಯ ನಗರಸಭೆಯ ಮೇಲೆ ಹಾರಾಡುತ್ತಿದೆಯೆಂದರೆ ಗಡಿ ಕನ್ನಡದ ವಿಷಯದಲ್ಲಿ ಈವರೆಗಿನ ಎಲ್ಲಾ ಸರಕಾರಗಳು ಕಣ್ಣು ಕಿವಿ ಬಾಯಿ ಮುಚ್ಚಿಕೊಂಡಿವೆ ಎಂದೇ ಅರ್ಥ. ಆದರೆ ಭಾಷಣ ಬಿಗಿಯುವಾಗ ಮಾತ್ರ ತಾವು ತಿನ್ನೋದು, ಹಾಸಿ ಹೊದೆಯೋದು ಕನ್ನಡವನ್ನೇ ಎಂಬಂತೆ ಮಾತನಾಡುತ್ತವೆ.

ಇನ್ನು ಕನ್ನಡಪರ ಸಂಘಟನೆಗಳೂ ಈ ಬಗ್ಗೆ ಸೊಲ್ಲೆತ್ತಿರುವುದು ಗಮನಕ್ಕೆ ಬಂದಿಲ್ಲ. ಗಡಿನಾಡಿನ ಕನ್ನಡಪರ ಸಂಘಟನೆಗಳು ಈ ಭಗವಾಧ್ವಜ ದ ವಿರುದ್ಧ ಹೋರಾಟಕ್ಕಿಳಿದಿರುವುದನ್ನು ನೋಡಿಲ್ಲ. ಇದರ ಅರ್ಥವೇನು ? ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಇಷ್ಟು ವರ್ಷಗಳಾದರೂ ತಣ್ಣಗಾಗಿಲ್ಲ ತಣ್ಣಗಾಗುವ ಲಕ್ಷಣಗಳೂ ಇಲ್ಲ ಯಾಕೆಂದರೆ ಮಹಾರಾಷ್ಟ್ರ ದ ಎಮ್ಈಎಸ್ ನಂಥ ಸಂಘಟನೆಯವರು ಗಡಿ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಲಿದ್ದು ತಮ್ಮ ಅಸ್ತಿತ್ವಕ್ಕಾಗಿ ಅದನ್ನು ಜೀವಂತವಾಗಿ ಇಡುವ ಹುನ್ನಾರ ಮಾಡುತ್ತಲೇ ಇರುತ್ತಾರೆ. ಗಡಿಯಲ್ಲಿನ ಮುಗ್ಧ ಮರಾಠಿಗರನ್ನು ಕೆರಳಿಸುತ್ತಲೇ ಇರುತ್ತಾರೆ. ಈ ವಿವಾದ ಕೋರ್ಟಿನ ಅಂಗಳದಲ್ಲಿ ಇದೆ ಎಂದರೂ ಅವರು ಕೇಳುವುದಿಲ್ಲ ಅದನ್ನು ಬಿಸಿಯಾಗಿ ಇಡುತ್ತಾರೆ. ಆದರೆ ನಮ್ಮ ಸರ್ಕಾರ ಮರಾಠಿಗರಿಗೆ ತಕ್ಕ ಉತ್ತರ ನೀಡುವ ಸಿದ್ಧತೆಯಲ್ಲಿ ಇರಬೇಕು. 

ಈಗ ನಿಪ್ಪಾಣಿ ನಗರಸಭೆಯ ಭಗವಾಧ್ವಜವನ್ನು ಇನ್ನೂ ಹಾರಲು ಬಿಟ್ಟಿರುವುದು ಕನ್ನಡಿಗರಿಗೆ ಅವಮಾನಕರ ಪ್ರಸಂಗ ಎನ್ನಬಹುದು. ಗಡಿ ವಿವಾದ ಕೋರ್ಟಿನಲ್ಲಿ ಇದ್ದಾಗ ಯಾವುದೆ ಹೊಸ ಬೆಳವಣಿಗೆಗೆ ಅವಕಾಶ ನೀಡಬಾರದು ಆದರೂ ೨೯.೫.೧೯೯೦ ರಂದು ನಿಪ್ಪಾಣಿ ನಗರಸಭೆಯಲ್ಲಿ ಭಗವಾಧ್ವಜ ಹಾರಿಸಲು ಠರಾವು ಪಾಸು ಮಾಡಿದ್ದು ಕರ್ನಾಟಕ ಸರ್ಕಾರಕ್ಕೆ ಮುಖಭಂಗವೆನ್ನಬಹುದು. ಇಷ್ಟು ವರ್ಷಗಳಾದರೂ ಅದು ಇನ್ನೂ ಇರುವುದು ತೀರಾ ದುರದೃಷ್ಟಕರ.

ಒಂದು ಭಾವನಾತ್ಮಕ ವಿಷಯ ಎನ್ನುವುದನ್ನು ಪಕ್ಕಕ್ಕಿಟ್ಟರೆ, ಯಾವುದೇ ನಗರಸಭೆಯ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಧ್ವಜಗಳ ಹೊರತಾಗಿ ಬೇರೆ ಧ್ವಜ ಹಾರಿಸಿದರೆ ಅದು ಅಪರಾಧ. ಅದನ್ನು ಹಾರಿಸಿದ ಮುಖಂಡನಿಗೆ ೩ ತಿಂಗಳ ಜೈಲು ಹಾಗೂ ೫೦೦೦ ರೂ. ದಂಡ ಇದೆಯೆಂಬ ಕಾಯ್ದೆಯೇ ಇರುವಾಗ ಅದನ್ನೇ ಬಳಸಿಕೊಂಡು ಸರ್ಕಾರ ಕ್ರಮ ಕೈಗೊಳ್ಳಬಹುದಿತ್ತು ಆದರೆ ಯಾವ ಸರ್ಕಾರಕ್ಕೂ ಆಗಿಲ್ಲ ! ಪೌರ ಕಾಯ್ದೆಯ ಅಡಿಯಲ್ಲಿ ಹೀಗೆ ಇದೆ ಗಡಿವಿವಾದ ಬಗೆ ಹರಿದು ನಿಪ್ಪಾಣಿ ನಿಮ್ಮದು ಅಂತ ಆದಾಗ ಭಗವಾಧ್ವಜ ಹಾರಿಸಿಕೊಳ್ಳಿ ಅಂತ ಮರಾಠಿಗರಿಗೆ ಕರ್ನಾಟಕ ಸರ್ಕಾರ ಖಡಾಖಂಡಿತವಾಗಿ ಹೇಳಬಹುದಿತ್ತು ಆದರೆ ಬೆಳಗಾವಿಯ ಕರ್ನಾಟಕದ ರಾಜಕಾರಣಿಗಳಲ್ಲಿ ಮೊದಲಿನಿಂದಲೂ ಆ ಸ್ಥೈರ್ಯವಿಲ್ಲವೇ ಇಲ್ಲ. ಎಲ್ಲರೂ ಮರಾಠಿ ಮಾನೂಸಗಳ ಮತ ಗಳಿಗೆ ಮಾರಿಕೊಂಡಿದ್ದಾರೆ.

ಈಗ ಗಡಾದ ಅವರು ಮತ್ತೆ ಗುಡುಗಿದ್ದಾರೆ. ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವು ಗೊಳಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಇವರಿಗೆ ನಿಪ್ಪಾಣಿ, ಬೆಳಗಾವಿ ಅಷ್ಟೇ ಅಲ್ಲದೆ ಕನ್ನಡಕ್ಕಾಗಿ ಹೋರಾಡುವ ಪ್ರತಿ ಸಂಘಟನೆ, ಪ್ರತಿ ವ್ಯಕ್ತಿಯೂ ಬೆಂಬಲ, ಶಕ್ತಿ ನೀಡಬೇಕಾಗಿದೆ. ಕನ್ನಡಿಗರ ಆತ್ಮಬಲ ಹೆಚ್ಚಿಸುವ ಕೆಲಸವಾಗಬೇಕಾಗಿದೆ.

- Advertisement -
- Advertisement -

Latest News

ಕೌಜಲಗಿ ಹೊಸ ತಾಲೂಕು ರಚನೆಗೆ ಸಂಪೂರ್ಣ ಬೆಂಬಲ- ಶಾಸಕ ಬಾಲಚಂದ್ರ ಜಾರಕಿಹೊಳಿ

ಎಲ್ಲರೂ ಸೇರಿ ಒಗ್ಗಟ್ಟಾಗಿ ಕೌಜಲಗಿಯನ್ನು ತಾಲೂಕು ಕೇಂದ್ರವನ್ನಾಗಿಸಲು ಪ್ರಯತ್ನಿಸೋಣ ಕೌಜಲಗಿ(ತಾ.ಗೋಕಾಕ): ಕೌಜಲಗಿ ಹೊಸ ತಾಲೂಕು ರಚನೆಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಅರಭಾವಿ ಶಾಸಕ, ಕೆಎಮ್‍ಎಫ್...
- Advertisement -

More Articles Like This

- Advertisement -
close
error: Content is protected !!