spot_img
spot_img

ಗೊಂದಲದ ಗೂಡಿಂದ ಗೆಲುವಿನ ಬಾನಿಗೆ ನೆಗೆಯುವುದು ನಿಮ್ಮ ಕೈಯಲ್ಲೇ ಇದೆ…!

Must Read

- Advertisement -

ನಾಲ್ಕು ರಸ್ತೆಗಳ ನಡುವೆ ನಿಂತು ಯಾವ ಕಡೆ ಪಯಣ ಬೆಳೆಸಿದರೆ ನನಗೆ ಕೆಲಸದಲ್ಲಿ ಲಾಭ ಸಿಗಬಹುದು? ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ಬದುಕನ್ನು ನೆಮ್ಮದಿಯಿಂದ ಕಳೆಯಬಹುದು? ಜೀವನ ಕಟ್ಟಿಕೊಳ್ಳಲು ಸುಲಭವಾಗಬಹುದು? ಈ ರಸ್ತೆಯಲ್ಲಿ ಹೆಜ್ಜೆ ಹಾಕಿದರೆ ಸರಿ ಆಗಬಹುದಾ? ಇಲ್ಲ ಆ ರಸ್ತೆಯಲ್ಲಿ ನಡೆಯೋದು ಒಳ್ಳೆಯದಾ? ಹೀಗೆ ಜೀವನದ ಮುಖ್ಯ ತಿರುವುಗಳಲ್ಲಿ ನಿರ್ಣಯ ಕೈಗೊಳ್ಳುವಾಗ ಮನಸ್ಸಿನಲ್ಲಿ ಹತ್ತು ಹಲವು ಪ್ರಶ್ನೆಗಳು ಕಾಡುತ್ತವೆ. ಗೊಂದಲವನ್ನು ಸೃಷ್ಟಿ ಮಾಡುತ್ತವೆ. ಈ ದಾರಿ ನನಗೆ ಹೇಳಿ ಮಾಡಿಸಿದ್ದು ಅಂತ ಒಂದು ಕ್ಷಣ ಅನಿಸಿದರೆ ಮರುಕ್ಷಣವೇ ಛೇ! ಇಲ್ಲ ಈ ದಾರಿಯಲ್ಲಿ ಬದುಕಿನುದ್ದಕ್ಕೂ ಸಾಗಲು ಸಾಧ್ಯವಿಲ್ಲ ಎನಿಸಿಬಿಡುತ್ತದೆ. ಹೀಗೆ ಆಯ್ಕೆಯಲ್ಲಿ ಗೊಂದಲ ಉಂಟಾದರೆ ಮನಸ್ಸು ದೃಢಗೊಳ್ಳದಿದ್ದರೆ ಬದುಕು ಬದಲಿಸುವ ನಿರ್ಣಯವನ್ನು ತೆಗೆದುಕೊಳ್ಲುವುದಾದರೂ ಹೇಗೆ? ಗೆಲುವಿನ ಹಾದಿಯ ಜಾಡು ಹಿಡಿಯುವುದಾದರೂ ಹೇಗೆ ಅಂತಿರೇನು? ಅಂದ ಹಾಗೆ ಎಂಥ ಎತ್ತರಕ್ಕೇರಿದವರಿಗೂ ಈ ರೀತಿಯ ಗೊಂದಲ ಎದುರು ನಿಂತಿಲ್ಲ ಅಂತಿಲ್ಲ. ಗೊಂದಲದ ಗೂಡಿಂದ ಗೆಲುವಿನ ಬಾನಿಗೆ ನೆಗೆಯಬೇಕೆ? ಹಾಗಾದರೆ ಮುಂದಕ್ಕೆ ಓದಿ.

ಗೊಂದಲ ಎಂದರೆ…?

ಕೆಂಡ, ಕಾಣದೇ ಮುಟ್ಟಿದರೂ ಸರಿ ಕಂಡು ಮುಟ್ಟಿದರೂ ಸರಿ ಅದು ಸುಡದೇ ಇರುವುದೇ? ಎನ್ನುವಂತೆ ಗೊಂದಲದ ಕೂಪದಲ್ಲಿ ತಿಳಿದು ಬಿದ್ದರೂ ಸರಿ ತಿಳಿಯದೇ ಬಿದ್ದರೂ ಸರಿ ಅದರಿಂದ ಮೇಲೇಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಎಲ್ಲ ಬಲ್ಲೆನೆಂಬ ಮದ. ಇಲ್ಲವೇ ಏನೂ ತಿಳಿಯದು ಎಂಬ ತಿಳಿಗೇಡಿತನವೇ ಗೊಂದಲ. ಚಿಂತೆಯೇ ಗೊಂದಲದ ಮೂಲ. ಯಾವುದೇ ಒಂದು ವಿಷಯಕ್ಕೆ ಇಲ್ಲ ಸಲ್ಲದ ನೂರಾರು ವಿಚಾರಗಳು ನುಗ್ಗಿದರೆ ಗೊಂದಲ ಸೃಷ್ಟಿಯಾಗುತ್ತದೆ. ಇಲ್ಲದಿದ್ದರೆ ಅದರ ಅಸ್ತಿತ್ವ ಇರುವುದಿಲ್ಲ..

ವೇಗಕ್ಕೆ ತಡೆಯೇ ಗೊಂದಲ:

ಗೊಂದಲ ಎನ್ನುವುದು ಜೀವನ್ಮರಣದ ಸಮಸ್ಯೆಯೇನಲ್ಲ. ನಾ ತೆಗೆದುಕೊಂಡ ನಿರ್ಧಾರಕ್ಕೆ ಹೆತ್ತವರಿಂದ ಪ್ರೋತ್ಸಾಹ ಸಿಗದಿದ್ದರೆ? ಆರ್ಥಿಕ ಸಂಕಷ್ಟ ಉಂಟಾದರೆ? ಬಿಡಿಸಲಾಗದ ತೊಂದರೆಗಳಿಗೆ ಸಿಕ್ಕಿ ಹಾಕಿಕೊಂಡರೆ ಎಂಬ ರೇ ಪ್ರಪಂಚದಲ್ಲಿ ಬಿದ್ದರೆ ನೀವು ಓಡುವ ಮಾರ್ಗದಲ್ಲಿ ಗೊಂದಲವೆಂಬ ಸ್ಪೀಡ್ ಬ್ರೇಕರ್ ನಿರ್ಮಾಣವಾದಂತೆಯೇ ಸರಿ. ಇಂಥ ಗೊಂದಲಗಳು ನಿಮ್ಮ ವೇಗಕ್ಕೆ ಅಡಚಣೆ ಉಂಟು ಮಾಡುತ್ತವೆ. ಗೊಂದಲದಿಂದ ಹೊರ ಬರುವುದು ನಿಮ್ಮ ಕೈಯಲ್ಲಿಯೇ ಇದೆ.   

ಸೂಕ್ತ ನಿರ್ಧಾರವಿರಲಿ:

ನಮ್ಮಲ್ಲಿ ಬಹಳಷ್ಟು ಜನ ವಿಚಾರ ಮಾಡಿ ತೀರ್ಮಾನಕ್ಕೆ ಬರುವುದಕ್ಕಿಂತ ಹಾಗೇ ಸುಮ್ಮನೇ ಆದದ್ದಾಗಲಿ ಎಂದು  ಯಾವುದೇ ಒಂದು ದಾರಿಯಲ್ಲಿ ಹೆಜ್ಜೆ ಹಾಕುತ್ತಿರುತ್ತಾರೆ. ಬದುಕಿನ ಬಂಡಿ ನಿಂತಿರುವುದೇ ಸರಿಯಾದ ಸಮಯದಲ್ಲಿ ನಾವು ತೆಗೆದುಕೊಳ್ಳುವ ಸರಿಯಾದ ನಿರ್ಧಾರದ ಮನಸ್ಥಿತಿಯ ಮೇಲೆ. ಹಾಗೂ ನಾವು ನಡೆಸುವ ಹೋರಾಟದ ಮೇಲೆ. ಸಣ್ಣ ಗೆಲುವೇ ಆಗಿರಲಿ ಅದು ಯಾರೂ ಪುಕ್ಕಟೆ ನೀಡಿದ್ದಲ್ಲ. ಸುಖಾ ಸುಮ್ಮನೇ ನಿಮ್ಮ ಕಡೆ ಒಲಿದು ಬಂದಿದ್ದಲ್ಲ. ಜ್ಯೋಬರ್ಟ್ ನುಡಿದಂತೆ ಅನಿಶ್ಚಿತ ಮನಸ್ಸೆಂದರೆ ಸಂರಕ್ಷಕ ದಳವಿಲ್ಲದ ಪಟ್ಟಣವಿದ್ದಂತೆ  ನಿಮ್ಮ ಮನೋಬಲದ ನಿರ್ಧಾರದ ಫಲವೇ ಗೆಲುವು. ಇದನ್ನೇ ಸಿಂಪಿ ಲಿಂಗಣ್ಣರವರು ಮಾಡಿ ಮುಗಿಸುವ ದೃಢ ನಿಶ್ಚಯದಲ್ಲಿಯೇ ಕಾರ್ಯದ ಸಫಲತೆಯು ಅಡಗಿರುತ್ತದೆ. ಎಂದಿದ್ದಾರೆ.

- Advertisement -

ನಿಶ್ಚಯವೊಂದಿದ್ದರೆ ನಿಧಾನವಾಗಿಯಾದರೂ ಗೆಲುವು ಸಾಧ್ಯ. ಒಲ್ಲದ ಮನಸ್ಸಿನಿಂದ ಪಯಣ ಆರಂಭಿಸಿದರೆ ಸೋಲು ಬೇತಾಳನಂತೆ ಬೆನ್ನಿಗೆ ಜೋತು ಬೀಳುತ್ತದೆ. ಉದ್ದೇಶವು ದೃಢವಿದ್ದರೆ ಗೆಲುವೂ ದೃಡವೇ ಎತ್ತರಕ್ಕೇರಿದ ಮಹನೀಯರನ್ನು ನಿಮ್ಮ ಗೆಲುವಿನ ಗುಟ್ಟೇನು ಎಂದು ಪ್ರಶ್ನಿಸಿದರೆ ಬಹುತೇಕ ಬಾರಿ ಸಿಗುವ ಉತ್ತರ ಸೂಕ್ತ ಸಮಯದಲ್ಲಿ ನಾ ತೆಗೆದುಕೊಂಡ ಸೂಕ್ತ ನಿರ್ಧಾರವೇ ನನ್ನ ಗೆಲುವಿಗೆ ಕಾರಣ ಎಂಬುದಾಗಿರುತ್ತದೆ.

ಸವಾಲಿಗೆ ಸಿದ್ಧರಾಗಿ:

ನೀವು ಜೀವನದಲ್ಲಿ ಬಹು ಕ್ಷೇಮಕರ ಆಟವಾಡಲು ನಿರ್ಧರಿಸಿದರೆ, ನೀವಿನ್ನು ಹೆಚ್ಚು ಬೆಳೆಯುವುದು ಬೇಡವೆಂದು ತೀರ್ಮಾನಿಸಿದ್ದೀರಿ ಎಂದರ್ಥ. ಸುತ್ತ ಮುತ್ತಲಿನಲ್ಲಿರುವ ಜನ ಸುಲಭದ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ನಾನು ಅದೇ ಮಾರ್ಗದಲ್ಲಿ ಸಾಗಿದರಾಯ್ತು ಎಂದು ಸೂಕ್ತ ಸಮಯದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಮುನ್ನಡೆಯಬೇಕೆಂದರೂ ದಾರಿ ಕಾಣದಂತಾಗುತ್ತದೆ. ಸವಾಲು ಸ್ವೀಕರಿಸಿದರೆ ಮೈಮೇಲೆ ಕಷ್ಟದ ಬೆಟ್ಟವನ್ನು ಎಳೆದುಕೊಂಡಂತೆ ಎಂದು ಭಾವಿಸಿ ಬೆಂಕಿಯೊಡನೆ ಆಡಿದರೆ ಮೈ ಸುಡುತ್ತದೆ ಎಂದು ಬೊಬ್ಬಿಟ್ಟರೆ ಪ್ರಯೋಜನವಿಲ್ಲ. ಜೀವನ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿ ಗೊಣಗುವ ಮಟ್ಟಕ್ಕೆ ಬಂದು ನಿಂತು ಕೊಳ್ಳುತ್ತದೆ. ನೀವು ಎರಡು ಕುದುರೆಗಳನ್ನು ಒಮ್ಮೆಲೇ ಸವಾರಿ ಮಾಡಲು ಸಾಧ್ಯವಿಲ್ಲವಾದರೆ ನೀವು ಸರ್ಕಸ್ಸಿನಲ್ಲಿ ಇರಲು ಸಾಧ್ಯವಿಲ್ಲ. ಮೈಯೆಲ್ಲ ನಡುಗದೆ,ಎದೆ ನೆಟ್ಟಗೆ ಮಾಡಿಕೊಂಡು ಸವಾಲು ಸ್ವೀಕರಿಸಿ. ಯಶೋ ಜೀವನ ಸಂಪೂರ್ಣವಾಗಿ ಸವಾಲು ಸ್ವೀಕರಿಸುವ ಛಾತಿಯಲ್ಲಿದೆ ಎನ್ನುವ ದಿವ್ಯ ಸಂದೇಶವನ್ನು ಬದುಕಿ ತೋರಿಸಿದವರು ಅಬ್ರಾಹಾಂ ಲಿಂಕನ್.

ಜೀವನ ಒಂದು ಆಟ:

ಜೀವನವೆನ್ನುವುದು ಯಾರಿಗೂ ಬಿಡಿಸಲು ಬಾರದ ಕಗ್ಗಂಟೇನಲ್ಲ. ತನ್ನ ಬಾಲ್ಯದಲ್ಲಿ ನೋವು  ಅವಮಾನದಲ್ಲೇ ನೊಂದು ಬೆಂದರೂ ತನ್ನ ಸ್ಪಷ್ಟ ನಿರ್ಧಾರದಿಂದ ಜೀವನ ಒಂದು ಆಟ ಗೊಂದಲದಲ್ಲಿ ಬೀಳದೇ ಧೈರ್ಯದಿಂದ ಆಡುತ್ತಲೇ ಸಾಗಬೇಕು.ಎಂಬ ಸಿದ್ದಾಂತದಿಂದ ಇಡೀ ಜಗವನ್ನೇ ಬೆಳಗಿದರು ಬರ್ನಾರ್ಡ್ ಷಾ.ರಷ್ಯಾದ ರಾಜ ವಂಶದಲ್ಲಿ ಜನಿಸಿದ ಟಾಲ್ ಸ್ಟಾಯ್ ಸಿರಿವಂತಿಕೆಯ ಮದದಲ್ಲಿ ಬೀಳದೇ ತಾನು ಮಹಾ ಮಾನವತಾವಾದಿಯಾಗಿ ಬಾಳಬೇಕೆಂದು ಸೂಕ್ತ ನಿರ್ಧಾರ ತೆಗೆದುಕೊಂಡು ನಿರಾಡಂಬರವಾಗಿ ನಿಗರ್ವಿಯಾಗಿ ಬಾಳಿದರು. ನೀವು ನಿಮ್ಮ ಮನಸ್ಸಿನಿಂದ ಆಳಲಾಗುತ್ತಿದ್ದರೆ ನೀವು ಒಬ್ಬ ರಾಜ. ದೇಹದಿಂದಾದರೆ ಒಬ್ಬ ಗುಲಾಮ ಎಂಬ  ಆದರ್ಶ ಮೆರೆದರು ಅಂತರಾಷ್ಟ್ರೀಯ ಖ್ಯಾತಿಯ ಕಾದಂಬರಿಗಳನ್ನು ಕೊಡುಗೆಯಾಗಿಯೂ ನೀಡಿದರು.

ಭಾವನೆಗಳ ಪ್ರತಿಬಿಂಬ:

ಬದುಕು ನಮ್ಮ ಭಾವನೆಗಳಿಗೆ ತಕ್ಕನಾಗಿ ಸ್ಪಂದಿಸುತ್ತದೆ ಇಂದು ನಾವೇನಾಗಿದ್ದೇವೆಯೋ ಅದು ನಮ್ಮ ಭಾವನೆಗಳ ಪ್ರತಿಬಿಂಬ ಗೊಂದಲದಂಥ ನಕಾರಾತ್ಮಕತೆಯೆಡೆಗೆ ಚಿತ್ತ ಹರಿಸಿದರೆ ಬದುಕು ಛಿದ್ರವಾಗಿ ಸಾಕಪ್ಪಾ ಸಾಕೆನಿಸುತ್ತದೆ.   ಶಾಂತ ಚಿತ್ತರಾಗಿ ಸಂಯಮದಿಂದ ಸೂಕ್ತ ನಿರ್ಧಾರ ತೆಗೆದುಕೊಂಡು, ಏಕಾಗ್ರತೆಯಿಂದ ಗುರಿ  ಬೆನ್ನತ್ತಿದರೆ ಗೆಲುವಿನ ಶಿಖರದ ನೆತ್ತಿಯ ಮೇಲೆ ಭದ್ರವಾಗಿ ನಿಲ್ಲಬಹುದು.

- Advertisement -

ನಿಮ್ಮ ಶಕ್ತಿ ದೌರ್ಬಲ್ಯಗಳ ಅರಿವಿದ್ದರೆ ಮಾತ್ರ ಗೊಂದಲದ ಗೂಡಿನಿಂದ ಹೊರ ಬರಲು ಸಾಧ್ಯ. ಶಕ್ತಿ ದೌರ್ಬಲ್ಯ ಅರಿಯದವ ತನಗೆ ಗೊತ್ತಿಲ್ಲದಂತೆ ಸಂಚಿತ ಸುಖದಿಂದ ವಂಚಿತನಾಗುತ್ತಾನೆ. ಅಂತರಂಗದ ಮಾತಿಗೆ ಕಿವಿಗೊಡಿ ಸೀಮಾತೀತವಾದ ಸುಖ ಸಂತೋಷ ನೀಡುತ್ತದೆ. ದೃಡ ನಿರ್ಧಾರ ಬಂಡವಾಳವಾಗಿಸಿಕೊಂಡರೆ ಲಾಭಕರ ಅಷ್ಟೇ ಅಲ್ಲ ಶ್ರೇಯಸ್ಕರವೂ ಹೌದು.

ಚೈತನ್ಯ ತುಂಬಿಕೊಳ್ಳಿ:

ಸಣ್ಣ ಪುಟ್ಟ ವಿಷಯಗಳ ಬಗೆಗೆ ನಿರ್ಣಯಿಸಬೇಕಾದಾಗಲೂ ಗೊಂದಲದಲ್ಲಿ ಬೀಳುವ ರೋಗ ಬಹಳ ಜನರಿಗೆ ಅಂಟಿಕೊಂಡಿದೆ. ಇದುವರೆಗೂ  ನಡೆದು ಬಂದ ದಾರಿಯನ್ನು ಒಮ್ಮೆ ಅವಲೋಕಿಸಿ. ಅದೆಷ್ಟೋ ಸಮಸ್ಯೆ ಸವಾಲುಗಳನ್ನು ಎದುರಿಸಿದ್ದೀರಿ. ಇನ್ನೇನು ಜೀವನಕ್ಕೆ ಪೂರ್ಣವಿರಾಮವಿಡುವ ಗಳಿಗೆ ಬಂತು ಎನ್ನುವಂಥ ಗಂಡಾಂತರದಿಂದ ಪಾರಾಗಿರಬಹುದು. ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಸಂದರ್ಭ ಬಂದೇ ಬರುತ್ತವೆ. ಆಗ ಭೂತಕಾಲವನ್ನು ನೆನೆದು ಚೈತನ್ಯ ತುಂಬಿಕೊಳ್ಳಿ. ಹತ್ತುವ ಪ್ರಯತ್ನ ಮಾಡದವನು ಕೆಳಗೆ ಬೀಳುವುದಿಲ್ಲ.ಗೊಂದಲದ ಗೂಡಿಂದ ಆಗಸಕೆ ನೆಗೆಯುವುದು ನಿಮ್ಮ ಕೈಯಲ್ಲೇ ಇದೆ ಪ್ರಯತ್ನಿಸಿ ಜಯ ಗಳಿಸಿ.


ಜಯಶ್ರಿ ಜೆ. ಅಬ್ಬಿಗೇರಿ

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group