ಶಾರದಾವಿಲಾಸ ಶಿಕ್ಷಣ ಸಂಸ್ಥೆಯಲ್ಲಿ 75ನೇ ಗಣರಾಜ್ಯೋತ್ಸವ
ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಂದು 75ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮಶ್ರೀ, ಭಟ್ನಾಗರ್ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸಿ.ಎಫ್.ಟಿ.ಆರ್.ಐ ವಿಶ್ರಾಂತ ನಿರ್ದೇಶಕರಾದ ಡಾ.ವಿ.ಪ್ರಕಾಶ್ ರವರು ಮಾತನಾಡಿ, ದೇಶವನ್ನು ಕಾಯುವ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಹಗಲು-ಇರುಳು ಎನ್ನದೇ ತಮ್ಮ ಜೀವವನ್ನು ಪಣವಾಗಿಟ್ಟು ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಇವರ ಸೇವೆಯನ್ನು ನಾವು ಎಂದಿಗೂ ಮರೆಯಬಾರದು ಎಂದರು.
ಭಾರತ ದೇಶ ಸರ್ವ ಸ್ವತಂತ್ರವಾದ ದೇಶ, ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ಭರತ ಭೂಮಿಯಲ್ಲಿ ವಿಶೇಷವಾದ ಸಂವಿಧಾನವನ್ನು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿರುವುದು ಅತ್ಯಂತ ಸಂತಸದ ಗೌರವದ ವಿಚಾರ. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲದಲ್ಲಿ ಅನೇಕ ಕಾನೂನುಗಳನ್ನು ವಿಧಿಸಿ ತೊಂದರೆ ಪಡಿಸುತ್ತಿದ್ದ ಸಂದರ್ಭದಲ್ಲಿ ಬಾಬಾ ಸಾಹೇಬರು ಸಂವಿಧಾನವನ್ನು ರಚಿಸಿ ಸಮಾನತೆ ಸಹಬಾಳ್ವೆಯನ್ನು ತಂದು ಜನರಿಗೆ ಸಂವಿಧಾನದ ಮೂಲಕ ಸರ್ವರೂ ಸಮಾನರು ಎಂದು ತಿಳಿಸಿದ ಮಹಾ ಮಾನವತಾವಾದಿ ಎಂದು ಹೇಳಿದರು.
ಯುವಶಕ್ತಿ ಒಗ್ಗೂಡಿದರೆ ದೇಶ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರಲ್ಲದೆ ಯುವಕರು ಶಿಕ್ಷಣವನ್ನು ಪಡೆಯುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಭಾರತ ಬಲಿಷ್ಠವಾಗಿ ಮುಂದುವರೆಯಬೇಕಾದರೆ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಹೊಂದಬೇಕು 2030 ರ ವೇಳೆಗೆ ಎಲ್ಲ ರಂಗಗಳಲ್ಲೂ ನಾವು ಮುಂಚೂಣಿಯಲ್ಲಿರಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಎಸ್.ಎಲ್.ರಾಮಚಂದ್ರ ಧ್ವಜಾರೋಹಣ ನೆರೆವೇರಿಸಿ ಮಾತನಾಡಿ, ದೇಶದ ಏಳಿಗೆಗೆ ಸಮರ್ಪಣಾ ಮನೋಭಾವದಿಂದ ತ್ಯಾಗ ಬಲಿದಾನಕ್ಕೆ ಒಳಗಾದ ಹುತಾತ್ಮರನ್ನು ಸ್ಮರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಚಂದ್ರಶೇಖರ್, ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಆರ್.ನರಸಿಂಹ, ಆರ್.ಎಸ್.ಮೋಹನ್ ಮೂರ್ತಿ, ಎಸ್.ಅಚ್ಯುತ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದೂಷಿ ಕಾವ್ಯಾಶ್ರೀ ಆರ್ ರಾವ್ ಪ್ರಾರ್ಥನೆ ಸಲ್ಲಿಸಿದರೆ, ಪ್ರಾಂಶುಪಾಲರಾದ ಡಾ.ಎಂ.ದೇವಿಕಾ ಸ್ವಾಗತಿಸಿದರು, ಡಾ.ಹನುಮಂತಚಾರ್ ಜೋಶಿ ಅತಿಥಿಗಳನ್ನು ಪರಿಚಯಿಸಿದರೆ, ನಿವೃತ್ತ ಶಿಕ್ಷಕ ವೆಂಕಟರಮಣ ಭಟ್ ವಂದಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.