ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲೂ ಹಸಿರಿನೊಂದಿಗೆ ವಿವಿಧ ನಮೂನೆಯ ರಂಗು ರಂಗಿನ ಹೂಗಳು ಕಣ್ಮನ ಸೆಳೆಯುತ್ತವೆ. ಕೆಲವು ಮಹಿಳೆಯರು ಇಂಥ ಚಿತ್ತಾಕರ್ಷಕ ಹೂಗಳನ್ನು ಬೆಳೆಯುವ ಸಲುವಾಗಿ ಮಳೆಗಾಲಕ್ಕೆ ಕಾಯುತ್ತಿರುತ್ತಾರೆ. ಇಳೆಗೆ ತಂಪು ತಂದ ಮಳೆರಾಯ ಸಕಲ ಜೀವಿಗಳಿಗೂ ನವೋಲ್ಲಾಸ ನೀಡುತ್ತಾನೆ.
ಇಡೀ ಪ್ರಕೃತಿಯೇ ಸೌಂದರ್ಯ ರಾಶಿಯಿಂದ ಕಂಗೊಳಿಸುತ್ತಿರುವಾಗ ಹೂಗಳ ಪ್ರೇಮಿಗಳಾದ ಹೆಂಗಳೆಯರು ಪರಿಸರದ ಸೌಂದರ್ಯ ವರ್ಧನೆಯಲ್ಲಿ ತಮ್ಮದೂ ಒಂದಿಷ್ಟು ಪಾಲು ಇರಲೆಂದು ಸಜ್ಜಾಗಿರುತ್ತಾರೆ. ಮಳೆಗೆ ಹಿಗ್ಗಿ ಹೂವಾಗುವ ಪುಷ್ಪಗಳು ಅನೇಕ. ಅವುಗಳಲ್ಲಿ ತಾವರೆಯೂ ಒಂದು.
ಇದನ್ನು ಡೇರೆ ಹೂವೆಂದೂ ಕರೆಯುವರು. ಈ ಸಮಯದಲ್ಲಿ ತಾವರೆಯನ್ನು ತಮ್ಮ ಕೈ ತೋಟದಲ್ಲಿ, ಹೂದೋಟದಲ್ಲಿ ಬೆಳೆಸಲು ಹೆಂಗಳೆಯರು ನಾ ಮುಂದು ತಾ ಮುಂದು ಎಂದು ಸ್ಪರ್ಧೆ ಒಡ್ಡುವಷ್ಟು ಕೌತುಕರಾಗಿರುತ್ತಾರೆ.
ತಾವರೆ ಗಡ್ಡೆ ಪ್ರಕೃತಿ ದತ್ತವಾಗಿ ದೊರೆಯತ್ತದೆ ಕೆಲವೊಮ್ಮೆ ಅವರಿವರನ್ನು ಕೇಳಿ ವಿವಿಧ ಬಣ್ಣದ ಹೂ ಬಿಡುವ ತಾವರೆ ಗೆಡ್ಡೆಗಳನ್ನು ಪಡೆದು ಭೂಮಿಯನ್ನು ಅಗೆದು ಅದರಲ್ಲಿ ಮರಳು ಮಣ್ಣು ಮತ್ತು ಗೊಬ್ಬರದ ಮಿಶ್ರಣ ಮಾಡಿ ಗಡ್ಡೆಯನ್ನು ಅದರೊಳಗಿಟ್ಟು ಬೆಳೆಸುವರು. ಇನ್ನು ಕೆಲವರು ಪ್ಲಾಸ್ಟಿಕ್ ಚೀಲದಲ್ಲಿ ಮಣ್ಣು ಮರಳು ಗೊಬ್ಬರ ಬೆರೆಸಿ ಅದರಲ್ಲಿ ತಾವರೆ ಗಡ್ಡೆಯನ್ನಿಟ್ಟು ಬೆಳೆಸುವರು.
ಸುರಿಯುವ ಮಳೆಗೆ ನೋಡು ನೋಡುತ್ತಿದ್ದಂತೆ ಒಂದೇ ವಾರದಲ್ಲಿ ಚಿಗುರೊಡೆದು ವಿಸ್ಮಯ ಮೂಡಿಸುವುದು. ನಂತರ ಮೊಳಕೆಯೊಡೆದು ಸಣ್ಣ ಸಣ್ಣ ಗಿಎಡವಾಗಿ ಬೆಳೆಯುತ್ತಾ ಹೋಗುತ್ತವೆ. ಈ ಸಂದರ್ಭದಲ್ಲಿ ಗಿಡಗಳಿಗೆ ಕಂಬಗಳನ್ನು ಆಧಾರವಾಗಿಡುವುದು ಸೂಕ್ತ. ತಿಂಗಳು ಕಳೆಯುವಷ್ಟರಲ್ಲಿ ಮೊಗ್ಗುಗಳು ಹಿಗ್ಗಿ ಹಿಗ್ಗಿ ಹೂವಾಗಿ ಮನಸೂರೆಗೊಳ್ಳುತ್ತವೆ.
ಮಳೆಗಾಲದ ನಂತರ ಇವುಗಳಿಗೆ ನೀರುಣಿಸುವುದು ಅತ್ಯಗತ್ಯ. ಮಳೆಗಾಲದ ನಂತರ ಗಿಡ ಒಣಗಿದಾಗ ಗಿಡದ ಬುಡದಲ್ಲಿ ಕಟಾವು ಮಾಡಿ ಪ್ಲಾಸ್ಟಿಕ್ ಚೀಲಗಳನ್ನಿಟ್ಟರೆ ಮತ್ತೆ ಮುಂದಿನ ಮಳೆಗಾಲಕ್ಕೆ ಮನಮೋಹಕ ತಾವರೆಗಳನ್ನು ಬೆಳೆದು ಮನಾನಂದ ಪಡೆಯಬಹುದು.
ಜಯಶ್ರೀ ಅಬ್ಬಿಗೇರಿ, ಬೆಳಗಾವಿ
9449234142