spot_img
spot_img

‘ಭಾವೈಕ್ಯತೆಯ ಬೆಳಕು’ ಸಾವಳಗಿಯ ಜಗದ್ಗುರು ಲಿಂ ಸಿದ್ಧರಾಮ ಶಿವಯೋಗಿಗಳು

Must Read

- Advertisement -

(೫ ಮೇ ೨೦೨೩ ಸಾವಳಗಿಯ ಲಿಂ. ಜಗದ್ಗುರು ಶ್ರೀ ಸಿದ್ದರಾಮ ಶಿವಯೋಗಿಗಳ ೪೪ ನೇ ಪುಣ್ಯಾರಾಧನೆ ತನಿಮಿತ್ಯ ಲೇಖನ)

ಕಾಶಿ ಕಾಬಾ ಒಂದೇ. ಈಶ್ವರ ಅಲ್ಲಾ ಒಬ್ಬನೇ. ಪುರಾಣ ಕುರಾನ್ ಒಂದೇ. ಎಂಬ ಹಿಂದೂ ಮುಸ್ಲಿಂ ಸಾಮರಸ್ಯದ ಸುಂದರ ಸಂದೇಶದ ನಿದರ್ಶನವನ್ನು ಸಾವಳಗಿಯ ಶ್ರೀ ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಕಾಣಬಹುದು. ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಹಾಗೂ ಕಲಬುರ್ಗಿಯ ಖಾಜಾ ಬಂದೇನವಾಜರ ಸ್ನೇಹದ ಸಂಕೇತವಿದೆ. ಸಾವಳಗಿಯ ಶ್ರೀಮಠದಿಂದ ಭಾರತದ ಜಾತ್ಯಾತೀತ ತತ್ವಕ್ಕೆ ಜೀವಂತಿಕೆ ಬಂದಿದೆ. ದೇಶದ ವಿವಿಧ ಭಾಗಗಳಲ್ಲಿ ಕೋಮು ಗಲಭೆಗಳು ಕಂಡು ಬರುತ್ತಿರುವ ಇಂದಿನ ಸಂದರ್ಭದಲ್ಲಿ ಸಾವಳಗಿ ಮಠವು ಬೀರುವ ಭಾವೈಕ್ಯತೆಯ ಬೆಳಕು ರಾಷ್ಟ್ರೀಯ ಐಕ್ಯತೆಯತ್ತ ಸಾಗಲು ದಾರಿ ದರ್ಶನವಾಗಬಹುದು.

ಈ ಮಠವು ಗೋಕಾಕ ತಾಲೂಕಿನಿಂದ ೧೬ ಕಿಲೋಮೀಟರ್ ಅಂತರದಲ್ಲಿದೆ. ಗೋಕಾಕ್ ರೋಡ್ ರೈಲು ನಿಲ್ದಾಣದಿಂದ ೫ ಕಿಲೋಮೀಟರ ದೂರದಲ್ಲಿದೆ. ಮೊದಲ ನೋಟದಲ್ಲಿ ಮಠವೋ ಮಸೀದಿಯೋ ಎಂಬ ಸಂದೇಹ ಬರುವುದು ಸಹಜ. ಮಠದ ವಿನ್ಯಾಸವು ಮುಸ್ಲಿಂ ವಾಸ್ತು ಶಿಲ್ಪಕ್ಕೆ ಸಂಬಂಧಿಸಿರುವುದೇ ಇದಕ್ಕೆ ಕಾರಣ. ಕಮಾನುಗಳು ಗುಮ್ಮಟ, ಮಿನಾರ್ಗಳು ಮುಸ್ಲಿಂ ಸಂಸ್ಕೃತಿ ದ್ಯೋತಕವಾಗಿವೆ. ಮಠದ ಎಡಬಲ ಹಾಗೂ ಹಿಂಭಾಗಗಳು ಹಿಂದೂ ವಾಸ್ತುಶಿಲ್ಪದ ವಿನ್ಯಾಸವನ್ನು ಹೊಂದಿವೆ. ಹೀಗೆ ಹಿಂದೂ- ಮುಸ್ಲಿಂ  ಸಂಗಮವನ್ನು ಹೊಂದಿರುವುದು ಒಂದು ವೈಶಿಷ್ಟ್ಯವಾಗಿದೆ. ಮಠದ ಕೆಳಭಾಗದಲ್ಲಿಯ ನೆಲಗವಿಯಲ್ಲಿ ಶಿವಲಿಂಗೇಶ್ವರರ ನಿರ್ವಿಕಲ್ಪ ಸಮಾಧಿಯಿದೆ. ಅದರ ಮೇಲ್ಭಾಗದಲ್ಲಿ ಮುಸ್ಲಿಂ ವಾಸ್ತು ಶೈಲಿಯ ಕಮಾನುಗಳು ಗುಮ್ಮಟ ಮಿನಾರುಗಳಿವೆ. ಇದು ಹಿಂದೂ ಮುಸ್ಲಿಂ ಧರ್ಮ ಸಮನ್ವಯ ಸಾರುವ ಇನ್ನೊಂದು ವೈಶಿಷ್ಟ್ಯವಾಗಿದೆ.

- Advertisement -

ಉತ್ತರ ಭಾರತದಲ್ಲಿ ಬಾಬಾನಾನಕ ಕಬೀರದಾಸರನ ಒಳಗೊಂಡ ಸತ್ಪುರುಷರು ಹಿಂದೂ ಮುಸಲ್ಮಾನರಲ್ಲಿ ಪರಸ್ಪರ ಪ್ರೇಮ ವಿಶ್ವಾಸ ಐಕ್ಯವನ್ನೇರ್ಪಡಿಸಲು ಯತ್ನಿಸಿದಂತೆ ಕನ್ನಡ ನಾಡಿನಲ್ಲಿ ಸಾವಳಗಿಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಭಿನ್ನಧರ್ಮಗಳ ಸಮನ್ವಯವನ್ನು ಸಾಧಿಸಲು ತಮ್ಮ ಪ್ರಭಾವನ್ನು ಬೀರಿರುವರು. ಇಂತಹ ಭಾವೈಕ್ಯದ ಜಗದ್ಗುರು ಮಹಾ ಪೀಠಾರೋಹಣ ಮಾಡಿದವರು ೧೫ ಮಹಾ ಮಹಿಮರು. ಪ್ರಸ್ತುತ ಜಗದ್ಗುರುಗಳಾದ ಶ್ರೀ ಮ.ನಿ.ಪ್ರ. ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾ ಸ್ವಾಮಿಗಳವರು ೧೫ನೆಯ ಜಗದ್ಗುರುಗಳಾಗಿದ್ದಾರೆ.

ಈ ಹಿಂದಿನ ಜಗದ್ಗುರುಗಳು ಅಂದರೆ ೧೪ ನೆಯ ಜಗದುರುವಾಗಿ ಬಂದವರು ಶಿವಯೋಗಿ ಸಿದ್ದರಾಮ ಸ್ವಾಮಿಗಳು. ಸಿದ್ದರಾಮ ಸ್ವಾಮಿಗಳು ಯಕ್ಕುಂಡಿಯ ಮುರುಘರಾಜೇಂದ್ರ ಸ್ವಾಮಿಗಳ ಕರಕಮಲ ಸಂಜಾತರು. ರಾಘವಾಂಕ ಚರಿತ್ರೆ, ಗುರುರಾಜ ಚರಿತ್ರೆ ಕಾವ್ಯಗಳನ್ನು ವಿರಚಿಸಿದ ಸಿದ್ದನಂಜೇಶ, ಚಿಕ್ಕನಂಜೇಶ ಕವಿಗಳ ವಂಶಜರು. ಸಾವಳಗಿಯ ಪೀಠಕ್ಕೆ ಜಗದ್ಗುರುವಾಗಿ ಬರುವ ಮುನ್ನ ಯಕ್ಕುಂಡಿ ವಿರಕ್ತಮಠದ ಪೀಠಾಧಿಪತಿಗಳಾಗಿದ್ದರು. ಅಲ್ಲಿದ್ದಾಗಲೇ ಹುಳು ಹತ್ತಿ ನಾಶಾವಾಗಬಹುದಾಗಿದ್ದ ಅನೇಕ ತಾಡೋಲೆ ಗ್ರಂಥಗಳನ್ನು ಪ್ರೊಫೆಸರ್ ಶಿ.ಶಿ. ಬಸನಾಳರ ಜೊತೆಗೆ ಬೆಳಕಿಗೆ ತಂದು ಖ್ಯಾತರಾದವರು. ೧೯೫೮ ರಲ್ಲಿ ಪ್ರಕಟವಾದ ಭೀಮ ಕವಿಯ ಬಸವ ಪುರಾಣ ತಾಡೋಲೆ ಕೋರಿ ಕಾಗದ ಪ್ರತಿ ಒದಗಿಸಿದವರೇ ಈ ಸಿದ್ದರಾಮ ಶಿವಯೋಗಿಗಳು.

ಧಾರವಾಡದ ಮೃತ್ಯುಂಜಯ ಶಿವಯೋಗಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಶಿವಾನುಭವ ಗೋಷ್ಠಿಗಳ ಪ್ರಧಾನ ಸಂಚಾಲಕರಾಗಿ, ಸಾವಧಾನ ಪತ್ರಿಕೆಯ ವ್ಯವಸ್ಥಾಪಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅನುಭವ ಮತ್ತು ಖ್ಯಾತಿಗಳನ್ನು ಪಡೆದಿದ್ದರು. ೧೯೫೩ ನೆಯ ಜನವರಿ ೨೨ ರಂದು ಸಾವಳಗಿ ಮಠದ ಪೀಠಾಧಿಕಾರ ವಹಿಸಿಕೊಂಡು ತಮ್ಮ ಶುಭ್ರಚರಿತ್ರೆ, ಸದಾಚಾರಗಳಿಂದ ಭಕ್ತರ ಮೇಲೆ ಅಪಾರ ಪ್ರಭಾವ ಬೀರಿದ್ದರು. ಜಗದ್ಗುರುಗಳ ಆಗಿದ್ದರೂ ಕೂಡ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಬಸವ ವಚನವನ್ನು ಅಕ್ಷರ ಸಹ ಆಚರಣೆಯಲ್ಲಿ ತಂದ ಸರಳ ನಿಗರ್ವಿ ಮತ್ತು ಮುಗ್ಧ ಭಕ್ತಿಯ ಆಚಾರ ವಿಚಾರ ಸದಾಚಾರವನ್ನು ಶಿವಲಿಂಗೇಶನ ಸದ್ಭಕ್ತರು ಗುರುತಿಸಿ ಪೂಜ್ಯರ ಮೇಲೆ ಅಪಾರವಾದ ಭಕ್ತಿಯನ್ನು ಅರ್ಪಿಸಿದರು ಜಾತಿ ಸಮರಸ್ಯದ ಪ್ರಯೋಗವನ್ನು ಬಸವಣ್ಣನವರು ಮಾಡಿದರು ಆದರೆ ಧರ್ಮ ಸಮನ್ವಯದ ಪ್ರಯೋಗವನ್ನು ಶಿವಲಿಂಗೇಶ್ವರರು ಮಾಡಿದರು. ಕರ್ತೃ ಶಿವಲಿಂಗೇಶ್ವರನಲ್ಲಿ ಇವರಿಟ್ಟ ಭಕ್ತಿಯಂತೂ ಅಗಾಧವಾದದ್ದು. ಸ್ವತಃ ಅನುಷ್ಠಾನ ಮಾಡುತ್ತಿದ್ದರಲ್ಲದೇ ರುದ್ರಾನುಷ್ಠಾನ ಮಾಡುತ್ತಿದ್ದರು. ೧೯೭೮ ರಲ್ಲಿ ಲಿಂಗೈಕ್ಯರಾದರು

- Advertisement -

ಸದ್ಯದ ಪೀಠ ಪೀಠಾಧಿಪತಿಗಳಾದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ೧೫ ನೆಯವರಾಗಿ ೧೯೭೮ ಮೇ ೧೮ರಂದು ಜಗದ್ಗುರುಗಳಾಗಿ ಬಂದನಂತರ ಭವ್ಯ ಪರಂಪರೆ ಮುಂದುವರಿಸಿಕೊoಡು ಹೊಟಿದ್ದಾರೆ. ಮಠದ ವೈಭವದ ಜಾತ್ರೆಯು ನಾಡನ ಹೊರನಾಡುಗಳ ನಾನಾ ಭಾಗದ ಜನರನ್ನು ಆಕರ್ಷಿಸುತ್ತಲಿದೆ. ಸಂಗೀತ ಸಾಹಿತ್ಯ ಮಹಾ ಪೋಷಕರಾದ ಪೂಜ್ಯರು ಸ್ವತಃ ಸಂಗೀತಗಾರರಾಗಿದ್ದಾರೆ. ದಾಸೋಹ ಪ್ರೇಮಿಗಳಾದ ಇವರು ವೈವಿಧ್ಯಮಯವಾದ ಪ್ರಸಾದವನ್ನು ಸಿದ್ಧಪಡಿಸಿ ಭಕ್ತರಿಗೆ ತೃಪ್ತಿಪಡಿಸುವುದರಲ್ಲಿ ಇವರಿಗೆ ಮಹದಾನಂದ. ಕಾಲ ಕಾಲಕ್ಕೆ ಪರಂಪರೆಯ ಜಗದ್ಗುರುಗಳ ಸ್ಮರಿಸಿಕೊಳ್ಳುವ ಮೂಲಕ ಸಂಗೀತ ಉಪನ್ಯಾಸ ಕೀರ್ತನೆ ಪ್ರವಚನ ಸಾಂಸ್ಕೃತಿಕ ಸಮಾರಂಭಗಳನ್ನು ಏರ್ಪಡಿಸಿ ಕವಿ, ಕಲಾವಿದ ಸಾಹಿತಿಗಳಿಗೆ ವೇದಿಕೆ ನೀಡಿ ಪ್ರೋತ್ಸಾಹಿಸುವುದು ಸನ್ಮಾನಿಸಿ ಗೌರವಿಸುವದು ನಿರಂತರ ನಡೆಸಿಕೊಂಡು ಬಂದಿದ್ದಾರೆ ಅದರಂಗವಾಗಿ  ಧರ್ಮ ಸಮನ್ವಯದ ಸಿದ್ಧಸಂಸ್ಥಾನ ಮಹಾಪೀಠ ಸಾವಳಗಿಯ ೧೪ ನೆಯ ಜಗದ್ಗುರುಗಳಾಗಿ ಬಂದ ಶಿವಯೋಗಿ ಸಿದ್ದರಾಮೇಶ್ವರರ ೪೪ನೇ ಪುಣ್ಯರಾಧನೆ ಮತ್ತು ಗಣರಾಧನೆ ಸಮಾರಂಭವನ್ನು ದಿನಾಂಕ ೦೫ ಮೇ ೨೦೨೩ ರಂದು ಬೆಳಗಿನಿಂದ ರಾತ್ರಿಯವರೆಗೆ ದಿನಪೂರ್ತಿ ಸರಳ ಸುಂದರ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.


ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಗದಗ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group