“ಬೇರೆಯವರ ಅಭಿಪ್ರಾಯದಿಂದಲೇ ಅನ್ಯರನ್ನು ಅಳೆಯಬಾರದು ಅಥವಾ ಅವರ ಬಗ್ಗೆ ನಾವು ಅಭಿಪ್ರಾಯ ರೂಪಿಸಿಕೊಳ್ಳಬಾರದು. ಯಾವತ್ತೂ ನಮ್ಮ ಮನಸ್ಸು ಮತ್ತು ಹೃದಯ ಹೇಳುವುದನ್ನು ಕೇಳಬೇಕು. ಅದು ಎಂದೂ ನಮ್ಮನ್ನು ದಾರಿ ತಪ್ಪಿಸುವುದಿಲ್ಲ.”
ದೀಪಾವಳಿಯ ಐದು ದಿನಗಳು ವಿಶೇಷವಾದ ಆಚರಣೆಗಳಿಂದ ಮಾನವನಲ್ಲಿ ಜ್ಞಾನವನ್ನು, ಸಂಪತ್ತನ್ನು ಹಾಗು ಆರೋಗ್ಯವನ್ನು ಹೆಚ್ಚಿಸುತ್ತದೆ. ಧನತ್ರಯೋದಶಿ, ಧನ್ವಂತರಿ, ಲಕ್ಷ್ಮಿ, ನರಕಾಸುರ, ಬಲಿಚಕ್ರವರ್ತಿ ಹೀಗೇ ನಮ್ಮ ಜೀವನದಲ್ಲಿ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಜೀವನದ ಸತ್ಯಾಸತ್ಯತೆಯನ್ನು ಅರ್ಥ ಮಾಡಿಸಿ ನಡೆಸುತ್ತದೆ.
ಪುರಾಣ,ಇತಿಹಾಸದಿಂದಲೂ ನಡೆದು ಬಂದಿರುವ ಅನೇಕರ ಕಥೆಯಿಂದ ಜ್ಞಾನ ಹೆಚ್ಚುತ್ತದೆ. ಆದರೆ ಇದೇ ವಾಸ್ತವ ಸ್ಥಿತಿಯನ್ನು ಹಾಳು ಮಾಡುವಂತಾದರೆ ವ್ಯರ್ಥ.
ಹಿಂದೆ ಇಂದು ಮುಂದೆ ಒಂದೇ ಎನ್ನಲಾಗದು. ಹಿಂದಿನ ಧರ್ಮ, ಇಂದಿನ ಧರ್ಮ, ಮುಂದೆಯೂ ಧರ್ಮ ವಾಗಿದ್ದರೆ ಈ ಧರ್ಮದ ನಡುವಿನ ದ್ವೇಷ, ರೋಷ, ಹೋರಾಟ, ಯುದ್ದಕ್ಕೆ ಅವಕಾಶವಿರುತ್ತಿರಲಿಲ್ಲ ಭಿನ್ನಾಭಿಪ್ರಾಯ ದಿಂದ ಸಾಕಷ್ಟು ಅಜ್ಞಾನವೂ ಬೆಳೆಯುತ್ತದೆ. ರಾಜಕೀಯದಿಂದ ಸಾಕಷ್ಟು ಅಹಂಕಾರ ಸ್ವಾರ್ಥ ಬೆಳೆಯುತ್ತದೆ.
ಹೀಗಾಗಿ ನಾವಿಂದು ಮಧ್ಯದಲ್ಲಿ ನಿಂತು ಸರಿ ತಪ್ಪು ಗಳನ್ನು ಕೇವಲಕೇಳಿ, ನೋಡಿ, ಓದಿದರೂ ಹಲವು ವೇಳೆ ಸರಿಯೆನಿಸಿದ್ದೇ ಕೊನೆಗೆ ತಪ್ಪಾಗಿ ತಿರುಗಿ ಬರುತ್ತದೆ. ತಪ್ಪು ಎನಿಸಿದ್ದೇ ಸರಿಯಿತ್ತು ಎನಿಸುತ್ತದೆ. ಕಾಲದ ಬದಲಾವಣೆಯನ್ನು ಸುಲಭವಾಗಿ ತಿಳಿಯಲಾಗದ ಮಾನವ ತಾನೇ ಕಾಲವಾದ ಮೇಲೆ ಬದಲಾವಣೆ ನೋಡಲಾಗದು. ಹೀಗಾಗಿ ಇದ್ದಾಗಲೇ ಬೇರೆಯವರ ಅಭಿಪ್ರಾಯವನ್ನು ಅಧ್ಯಾತ್ಮ ದೃಷ್ಟಿಯಿಂದ ತಿಳಿಯಲು ಅನುಭವದ ಅಗತ್ಯವಿದೆ.
ಹಾಗೆ ವೈಜ್ಞಾನಿಕ ದೃಷ್ಟಿಯಿಂದ ತಿಳಿಯಲು ಪರೀಕ್ಷೆ ಅಗತ್ಯ. ಯಾವುದೇ ಪರೀಕ್ಷೆಗಳು ಒಳ ಅಂತರಂಗಕ್ಕೆ ಧಕ್ಕೆಯಾದರೆ ಆತ್ಮಹತ್ಯೆ ಪೂರಕವಿದ್ದರೆ ಆತ್ಮಜ್ಞಾನ. ಇಲ್ಲಿ ದೇವರು ಅಸುರರ ನಡುವಿನ ಧರ್ಮ ಅಧರ್ಮ ವನ್ನು ಮಾನವನಾಗಿ ತಿಳಿಯುವ ಪ್ರಯತ್ನ ಮುಖ್ಯ.
ಎಲ್ಲಾ ಮಾನವರಾದರೂ ಮಾನವೀಯ ಗುಣವಿಲ್ಲದೆ ಅಸತ್ಯ ಅನ್ಯಾಯ, ಅಧರ್ಮಕ್ಕೆ ಸಹಕರಿಸಿದರೆ ಹೃದಯ ಹೀನತೆ ಎನ್ನುತ್ತಾರೆ. ವಾಸ್ತವ ಜಗತ್ತಿನಲ್ಲಿ ಹೃದಯದ ಕಸಿ ಮಾಡುವ ವೈದ್ಯರು ಹೆಚ್ಚು, ಅದೇ ಹೃದಯವಂತರನ್ನು ಸೃಷ್ಟಿ ಮಾಡೋದು ಕಷ್ಟ.ಇದಕ್ಕೆ ಬೇಕಿದೆ ಅಧ್ಯಾತ್ಮ.
ಧನತ್ರಯೋದಶಿ, ಲಕ್ಮಿ ಪೂಜೆ ಮಾಡಿ ಹಣವೇನೋ ಗಳಿಸಬಹುದು, ನಂತರ ಹಣದ ದುರ್ಬಳಕೆ ಹೆಚ್ಚಾದರೆ ಅಸುರ ಶಕ್ತಿ ಬೆಳೆಯುತ್ತ ಹೋಗುತ್ತದೆ. ಅಸುರರಿಗೆ ಹಣ ಮಾತ್ರ ಕಾಣೋದು ಬಡತನವನ್ನು ಹಣದಿಂದ ಅಳೆದಂತೆಲ್ಲಾ ಹಣಕ್ಕಾಗಿ ಹೆಣವನ್ನೂ ಮಾರುವ ಸ್ಥಿತಿಗೆ ತಲುಪುತ್ತಾನೆ.
ಆದರೆ, ಇದರಿಂದಾಗಿ ಯಾರ ರೋಗವೂ ಹೋಗೋದಿಲ್ಲ ದುಷ್ಟಶಕ್ತಿಯೂ ನಿಲ್ಲೋದಿಲ್ಲ. ಯಾವುದೇ ಆಗಲಿ ಅತಿಯಾದರೆ ಗತಿಗೇಡು. ಮಹಾಚಕ್ರವರ್ತಿ ಯಾದ ಬಲಿಯ ಕಥೆಯಲ್ಲಿ ಅತಿಯಾದ ದಾನವೂ ಕಷ್ಟ. ಕರ್ಣನ ಕಥೆಯೂ ಇದಕ್ಕೆ ಹೊರತಾಗಿಲ್ಲ.
ಆದರೆ ಇವರಿಬ್ಬರ ಹೆಸರು ಅಮರವಾಗಿದೆ. ಧರ್ಮ ಸ್ಥಾಪನೆಗಾಗಿಯೇ ಭಗವಂತ ಇಬ್ಬರಿಗೂ ಸ್ವತಃ ಮುಕ್ತಿ ಕೊಟ್ಟಿರುವಾಗ ಮುಕ್ತಿ ಎನ್ನುವುದು ಅಸುರರಿಗೂ ಇದೆ ಎಂದಾಯಿತು. ಇಲ್ಲಿ ಅಸುರರೆಂದರೆ ಅತಿಯಾಸೆ ಪಡುವಜೀವಿಗಳಷ್ಟೆ. ಆಸೆ ಪೂರೈಕೆಗೆ ಹೋರಾಟ, ಹಾರಾಟ, ಮಾರಾಟದ ರಾಜಕೀಯ.
ಈ ರಾಜಕೀಯದಲ್ಲಿ ಧರ್ಮವಿದ್ದರೆ ಉತ್ತಮ ಸಮಾಜ. ಅಧರ್ಮವಿದ್ದರೆ ಕ್ರಾಂತಿಯಹೋರಾಟ. ಹೀಗೇ ಒಂದೇ ಭೂಮಿಯಲ್ಲಿರುವ ಮಾನವನಿಗೆ ತಾನು ಯಾರ ಹಿಂದೆ ನಡೆಯುತ್ತಿದ್ದೇನೆ ನಾನ್ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗದೆ ಹೋದರೆ ಜನ್ಮಾಂತರದ ಹೊರೆ ಇಳಿಸಿಕೊಳ್ಳಲು ಕಷ್ಟ.
ಆಚರಣೆಯ ಹಿಂದಿನ ಉದ್ದೇಶ ತತ್ವಜ್ಞಾನದಿಂದ ಜೀವನದ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಬೇಕು ರಾಜಯೋಗ. ನಮ್ಮತನ, ನಮ್ಮವರು,ನಮ್ಮ ಜ್ಞಾನ,ಧರ್ಮ ಕರ್ಮವನ್ನು ನಾವೇ ಬಿಟ್ಟು ನಡೆದು ನಮ್ಮವರನ್ನೇ ಆಳಲು ಹೋದರೆ ಜನನ ಮರಣದ ನಡುವಿನ ಜೀವನ ನಿರಂತರ.
ಸಾಧ್ಯವಾದಷ್ಟು ಸತ್ಯದೆಡೆಗೆ ಧರ್ಮದ ಪ್ರಕಾರ ನಡೆಯುವುದು ಅಗತ್ಯ. ಯಾರೂ ಶಾಶ್ವತವಲ್ಲ.ಶ್ರೀ ಕೃಷ್ಣನ ಕಾಲದಲ್ಲಿದ್ದ ದೇವಾಸುರರ ಶಕ್ತಿ ಇಂದಿಗೂ ಅಗೋಚರವಾಗಿದೆ ಮುಂದೆ ಯೂ ಇರುತ್ತದೆ. ಅವರಲ್ಲಿದ್ದ ಜ್ಞಾನವನ್ನು ತಿಳಿದರೆ ಇಂದಿಗೂ ಜ್ಞಾನವಿದೆ ಬೆಳೆಸಿಲ್ಲ. ಶಿಕ್ಷಣ ಶಿಕ್ಷೆ ನೀಡುವ ಕ್ಷಣವಾಗಿದೆ.ಭೌತಿಕ ವಿಜ್ಞಾನದೆಡೆಗೆ ಸಾಗುತ್ತಾ ಅಧ್ಯಾತ್ಮ ವಿಜ್ಞಾನಿ ಮರೆಯಾದರೆ ಭೂಮಿಯ ಮೇಲೆ ಇರೋದೆ ಕಷ್ಟ.ಆತ್ಮಾವಲೋಕನ ದಿಂದ ನಿಧಾನವಾದರೂ ಸರಿ ದಾರಿಯಲ್ಲಿ ನಡೆಯುತ್ತಿದ್ದರೆ ದಾರಿ ತಪ್ಪೋದಿಲ್ಲ ಎನ್ನುವರು ಮಹಾತ್ಮರು.
ಆತ್ಮಜ್ಯೋತಿ ಕಣ್ಣಿಗೆ ಕಾಣದು ಹೊರಗಿನ ದೀಪ ಕಾಣುತ್ತದೆ ಆದರೆ ಶಾಶ್ವತವಾಗಿರದು. ದೀಪದಿಂದ ದೀಪಾವಳಿ. ಒಬ್ಬರಿಂದ ಒಬ್ಬರಿಗೆ ಬೆಳಗುವತ್ತ ದೀಪಗಳ ಸಾಲು ಹೆಚ್ಚಾಗಲಿ. ಒಂದು ಕಡೆ ಕತ್ತಲು ಇನ್ನೊಂದು ಕಡೆ ಬೆಳಕಿನ ಅಬ್ಬರವಿದ್ದರೆ ಮನರಂಜನೆಯಾಗುತ್ತದೆ. ಹಾಗಾಗಿ ಎಲ್ಲರ ಮನೆಯ ದೀಪವೂ ಶುದ್ಧವಾಗಿದ್ದರೆ ಸ್ವಚ್ಚಭಾರತ. ಭ್ರಷ್ಟಾಚಾರ ತುಂಬಿದ ರಾಜಕೀಯದಿಂದ ತಾತ್ಕಾಲಿಕ ದೀಪ ಬೆಳೆಸಬಹುದು. ಶಾಶ್ವತವಾಗಿರುವ ಆತ್ಮಜ್ಯೋತಿಗೆ ಜ್ಞಾನದೀಪ ಅಗತ್ಯವಾಗಿದೆ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು