spot_img
spot_img

ಕಾಂತಾರ; ಒಂದು ದಂತಕತೆ

Must Read

- Advertisement -

ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು  ೧೮೭೦ ಮತ್ತು ೧೯೭೦ ಹಾಊ ೧೯೯೦ ರ ಮೂರು ಅವಧಿಯನ್ನು ಆಯ್ದುಕೊಂಡು ಭೂಮಿ ಅಸ್ತಿತ್ವದ ಕುರಿತು ಕತೆಯೊಂದು ಕಾಂತಾರದಲ್ಲಿ ತೆರೆದುಕೊಂಡಿದೆ. ಇಲ್ಲಿ ತುಳುನಾಡಿನ ಸಾಂಸ್ಕೃತಿಕ ಪರಿಸರವನ್ನು ದೃವಾರಾಧನೆ ಕಂಬಳದಂತಹ ಸಾಂಸ್ಕೃತಿಕ ಸಂಗತಿಗಳೊಡನೆ ಅಲ್ಲಿನ ಜನರ ಆಡು ಭಾಷೆ ವೇಷಭೂಷಣಗಳೊಂದಿಗೆ ತೆರೆಗೆ ತರಲಾಗಿದೆ. ಕಾಡು ಜನರು ಮತ್ತು ಅರಸೊತ್ತಿಗೆ ಇವುಗಳ ಸಮ್ಮಿಳಿತದೊಡನೆ ಇಂದಿನ ವ್ಯವಸ್ಥೆ ಅರಣ್ಯ ಇಲಾಖೆಯ ಅಧಿಕಾರಿ ಹೀಗೆ ಮೂರು ವಿಭಿನ್ನ ಆಯಾಮಗಳಲ್ಲಿ ಕತೆ ತೆರೆದುಕೊಳ್ಳುತ್ತದೆ.

೧೮೭೦ ರಲ್ಲಿ ಊರಿಗೊಬ್ಬ ರಾಜ.ಅವನಿಗೆ ಎಲ್ಲವೂ ಇದೆ ಆದರೆ ನೆಮ್ಮದಿಯಿಲ್ಲ.ಇದನ್ನರಿಸಿ ಕಾಡಿನಲ್ಲಿ ಹೋಗುತ್ತಾನೆ. ಇಲ್ಲಿ ಕಾಂತಾರ ಎಂದರೆ ದಟ್ಟ ಅರಣ್ಯ. ಅಲ್ಲಿ ಆತನಿಗೆ ದೈವದ ಕಲ್ಲು ಎದುರಾಗುತ್ತದೆ. ಇದನ್ನು ಮನೆಯಲ್ಲಿ ಪೂಜಿಸಲು ಪಂಜುರ್ಲಿ (ವರಾಹ ರೂಪದ ದೈವ) ಅಪ್ಪಣೆ ಕೇಳುತ್ತಾನೆ. ಆಗ ಅದು ತನ್ನ ಧ್ವನಿ ಈ ಕಾಡಿನಲ್ಲಿ ಎಲ್ಲಿಯವರೆಗೆ ಕೇಳುತ್ತದೆಯೋ ಅಷ್ಟು ಜಾಗವನ್ನು ಕಾಡಿನ ಜನರಿಗೆ ಬಿಟ್ಟು ಕೊಡಬೇಕು ಎಂದು ಭಾಸವಾಗುತ್ತದೆ. ರಾಜ ಅದಕ್ಕೆ ಸಮ್ಮತಿಸುತ್ತಾನೆ.

- Advertisement -

೧೯೭೦ ರಲ್ಲಿ ರಾಜನ ಉತ್ತರಾಧಿಕಾರಿ ಭೂತದ ಕೋಲ ಸಮಯದಲ್ಲಿ ಭೂಮಿಯನ್ನು ಮರಳಿ ನೀಡುವಂತೆ ಒತ್ತಾಯಿಸುತ್ತಾನೆ. ಉತ್ಸವ ಮತ್ತು ನ್ಯಾಯಾಲಯಕ್ಕೆ ಹೋಗುವುದಾಗಿ ಎಚ್ಚರಿಸುತ್ತಾನೆ. ಆಗ ಪಂಜುರ್ಲಿ ಎಚ್ಚರಿಸುವ ಮೂಲಕ ಕೆಲವು ತಿಂಗಳಿನಂತೆ ಆತನು ನಿಗೂಢ ಸಾವನ್ನು ಕಾಣುತ್ತಾನೆ.

೧೯೯೦ ರ ದಶಕದ ಕತೆ ತೆರೆದುಕೊಳ್ಳುವುದು ನಾಯಕ ನಾಯಕಿಯರ ಭೇಟಿ ಊರಿನ ಮುಖಂಡ ಜಾತ್ರೆಯ ಸನ್ನಿವೇಶ ಶಿವನಾಗಿ ರಿಷಬ್ ಶೆಟ್ಟಿ. ಲೀಲಾ ಪಾತ್ರದಲ್ಲಿ ಸಪ್ತಮಿಗೌಡ.ಉಪ ವಲಯ ಅರಣ್ಯಾಧಿಕಾರಿಯಾಗಿ ಮುರಳೀಧರ ಪಾತ್ರದಲ್ಲಿ ಕಿಶೋರ್. ದೇವೇಂದ್ರ ಸುತ್ತೂರು ಪಾತ್ರದಲ್ಲಿ ಅಚ್ಯುತ್ ಕುಮಾರ. ಸುಧಾಕರ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ. ಬುಲ್ಲನಾಗಿ ಶನಿಲ್ ಗುರು. ರಾಮಪ್ಪನಾಗಿ ಪ್ರಕಾಶ್ ತೊಮಿನಾಡ್. ಕಮಲಾ ಶಿವನ ತಾಯಿಯಾಗಿ ಮಾನಸಿ ಸುಧೀರ. ವಕೀಲನಾಗಿ ನವೀನ ಡಿ. ಪಡೀಲ್.ಸ್ವರಾಜ್ ಶೆಟ್ಟಿ ಗುರುವನಾಗಿ. ಶಿವನ ಸೋದರ ಸಂಬಂಧಿ.ಸುಂದರನ ಪಾತ್ರದಲ್ಲಿ ದೀಪಕ್ ರೈ ಪಾನಾಜೆ ಹೀಗೆ ಎಲ್ಲ ಪಾತ್ರಗಳಲ್ಲಿ ತಮ್ಮ ಸ್ನೇಹಿತರು ಬಂಧುಗಳನ್ನು ಕಲಾವಿದರ ರೂಪದಲ್ಲಿ ರಿಷಬ್ ಶೆಟ್ಟಿ ಕರೆದುಕೊಂಡು ಬರುವ ಜೊತೆಗೆ ತಮ್ಮ ಊರು ಕೆರಾಡಿಯಲ್ಲಿ ಸೆಟ್ ಹಾಕುವ ಮೂಲಕ ತಮ್ಮ ಗ್ರಾಮದ ಜನರು ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿರುವುದು ಸಿನೇಮಾಕ್ಕೊಂದು ಪ್ಲಸ್ ಪಾಯಿಂಟ್.

- Advertisement -

ಇನ್ನು ನಾಯಕ ಶಿವ ಮತ್ತು ಲೀಲಾರ ಪರಿಚಯ. ನಂತರ ರಾಜಕಾರಣಿಯ ಮೂಲಕ ಅವಳು ಅರಣ್ಯ ಇಲಾಖೆಗೆ ಸೇವೆಗೆ ಸೇರುವುದು. ಕಂಬಳದಲ್ಲಿ ಶಿವ ಗೆದ್ದು ತನ್ನ ಮೆಡಲ್ ನ್ನು ಕೊರಳಲ್ಲಿ ಹಾಕಿಕೊಂಡು ಎಲ್ಲರೂ ತನ್ನತ್ತ ನೋಡಲಿ ಎಂದು ಬಯಸುವುದು.ಅರಣ್ಯ ಇಲಾಖೆಯ ಅಧಿಕಾರಿ ಮುರಳೀಧರನ ಆಗಮನ. ಕಾಡಿನ ಒಂದಡಿ ಭೂಮಿಯನ್ನು ಯಾರೂ ಒತ್ತುವರಿ ಮಾಡದಂತೆ ತಡೆಯುವುದು ಹೀಗೆ ಕತೆ ಸಾಗುತ್ತದೆ. ಇದನ್ನು ಶಿವ ವಿರೋಧಿಸುತ್ತಾನೆ. ಕಾಡಿನ ಸನ್ನಿವೇಶಗಳಂತೂ ರೋಚಕ ಅನುಭವವನ್ನು ನೀಡುತ್ತವೆ. ಲಾಲಸೆಯ ಬುದ್ಧಿಯುಳ್ಳ ರಾಜಕಾರಣಿ ದೇವೆಂದ್ರ ಪಾತ್ರದಲ್ಲಿ ಅಚ್ಯುತ್ ನಿರ್ವಹಿಸಿದ ರೀತಿ ನಿಜಕ್ಕೂ ಗಮನ ಸೆಳೆಯುತ್ತದೆ.

ಇಲ್ಲಿ ಅರಣ್ಯ ಭೂಮಿಯ ಒತ್ತುವರಿ. ಜನರನ್ನು ಒಕ್ಕಲೆಬ್ಬಿಸಲು ಮಾಡು ತಂತ್ರ.ಅರಣ್ಯ ಸಂಪತ್ತಿನ ಲೂಟಿ.ಅರಣ್ಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವಿನ ತಿಕ್ಕಾಟದ ಸನ್ನಿವೇಶಗಳು ಚಿತ್ರಕ್ಕೊಂದು ತಿರುವು ನೀಡುತ್ತವೆ. ಈ ನಡುವೆ ಶಿವ ಅವನ ಸ್ನೇಹಿತರು ಜೈಲು ಸೇರುವುದು. ಜೊತಗೆ ದೇವೇಂದ್ರನ ಕುತಂತ್ರಕ್ಕೆ ಒಪ್ಪದ ಗುರುವನ ಕೊಲೆ ಆಗುವುದು. ದೇವೆಂದ್ರ ಶಿವನನ್ನು ಜೈಲಿನಿಂದ ಬಿಡಿಸಿಕೊಂಡು ಬರುವುದು. ಹೀಗೆ ಚಿತ್ರಕ್ಕೊಂದು ವಿಶಿಷ್ಟ ತಿರುವು ಸಾಗುತ್ತದೆ. ಪ್ರತಿ ಸನ್ನಿವೇಶಗಳು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುತ್ತವೆ.

ಆಗಾಗ ಶಿವನ ಕನಸಿನಲ್ಲಿ ಬರುವ ವರಾಹ ಮತ್ತು ಭೂತ ಅವನನ್ನು ಭಯ ಪಡಿಸುವ ಸನ್ನಿವೇಶಗಳು. ಒಮ್ಮೆಯಂತೂ ತಾನು ಮಲಗಿದ್ದ ಸ್ಥಳದಿಂದ ಭಯಗೊಂಡು ದೂರದಲ್ಲಿ ಮಲಗಿದ್ದ ತನ್ನ ತಾಯಿಯ ಬಳಿ ಪುಟ್ಟ ಮಗುವಿನಂತೆ ಮಲಗುವುದು. ಅವನ ಮೈ ಬಿಸಿಯನ್ನು ಕಂಡು ತಾಯಿ ಮರಗುವುದು. ಜೈಲಿನಲ್ಲಿ ಕೂಡ ಭೂತದ ಕನಸು ಕಂಡು ಭಯ ಪಡುವುದು ಇಂತಹ ಸನ್ನಿವೇಶಗಳಲ್ಲಿ ರಿಷಬ್ ಶೆಟ್ಟಿ ಗ್ರಾಮೀಣ ಸೊಗಡಿನಲ್ಲಿ ಗಮನ ಸೆಳೆಯುತ್ತಾರೆ.

ಶಿವ ಅರಣ್ಯ ಅಧಿಕಾರಿಗಳಿಗೆ ಸಿಗದಂತೆ ಅರಣ್ಯದಲ್ಲಿ ತಪ್ಪಿಸಿಕೊಂಡು ಓಡಾಡುವುದು. ರಾತ್ರಿ ವೇಳೆ ತನ್ನ ಪ್ರೇಯಸಿಯ ಮನೆಗೆ ಬಂದು ಊಟ ಮಾಡುವುದು. ಅವನ ಗೆಳೆಯರಿಗೆ ಊಟ ನೀಡುವ ಸನ್ನಿವೇಶಗಳು ಹೃದಯಸ್ಪರ್ಶಿಯಾಗಿ ಮೂಡಿ ಬಂದಿವೆ. ಇವೆಲ್ಲದರ ನಡುವೆ ಕರಾವಳಿಯ ಸಂಸ್ಕೃತಿಯ ಅನಾವರಣ.ದೈವ ಮತ್ತು ಭೂತಾರಾಧನೆ. ಅಲ್ಲಿನ ಜನರ ಧಾರ್ಮಿಕ ನಂಬಿಕೆಗಳು ಗಮನ ಸೆಳೆಯುತ್ತವೆ. ಶಿವ ಮರ ಕತ್ತರಿಸುವಾಗ ಆ ಮರ ಫಾರೆಸ್ಟ್ ಗಾರ್ಡ್ ಜೀಪ್ ಮೇಲೆ ಬಿದ್ದು ದೊಡ್ಡ ಅಚಾತುರ್ಯವಾಗುತ್ತದೆ. ಶಿವ ಜೈಲು ಸೇರುತ್ತಾನೆ. ಅತ್ತ ಹೊರಗಡೆ ಸೀನ್ ಬದಲಾಗುತ್ತದೆ. ಭೂಮಾಲೀಕನ ನಿಜವಾದ ಮುಖವಾಡ ಬಯಲಾಗುತ್ತದೆ. ದೈವಪಾತ್ರಧಾರಿಯಾಗುವ ಗುರುವನನ್ನು ಕೊಲ್ಲಲಾಗುತ್ತದೆ.

ಶಿವ ಮತ್ತು ಲೀಲ ಸಂಧಿಸುವುದು ಆಗ ಕಿಶೋರ್ ಅವರನ್ನು ಬಂಧಿಸುವ ಸನ್ನಿವೇಶ ನಿಜಕ್ಕೂ ಅದ್ಬುತ ಛಾಯಾಗ್ರಹಣಕ್ಕೆ ನೂರಕ್ಕೆ ನೂರು ಅಂಕಗಳನ್ನು ನೀಡಲೇಬೇಕು. “ನೀನು ನೀಡಿದ ಸರ್ವಿಸ್ ಗೆ ಪ್ರಮೋಷನ್ ಅಂತೂ ಕೊಡಲು ಆಗಲ್ಲ. ಸಸ್ಪೆಂಡ್ ಮಾಡಬಹುದು” ಎನ್ನುವಲ್ಲಿ ಶಿವ ಮತ್ತು ಲೀಲಾರ ಪ್ರೀತಿಗೆ ಅವಳನ್ನು ಆಚೆ ಹೋಗುವಂತೆ ಶಿವ ಒತ್ತಾಯಿಸುವುದು. ನೀನು ಕೆಲಸ ಬಿಡು ಎಂದರೆ ಬಿಡ್ತೀನಿ ಎನ್ನುವ ಲೀಲಾಳ ಮಾತುಗಳು ಹೃದಯ ಕಲಕುವಂತೆ ಮಾಡುತ್ತವೆ.

ಜೈಲಿನಿಂದ ಬಿಡಿಸಿಕೊಂಡು ಬಂದ ನಂತರ ನಡೆಯುವ ಸನ್ನಿವೇಶಗಳು ನಿಜಕ್ಕೂ ರೋಮಾಂಚನವನ್ನುಂಟು ಮಾಡುತ್ತವೆ. ದೇವೇಂದ್ರನ ಕುತಂತ್ರ ಒಂದು ಕಡೆಯಾದರೆ ಅರಣ್ಯ ಅಧಿಕಾರಿ ಕಿಶೋರ್ ಕೊನೆಗೆ ತನ್ನ ಒಳ್ಳೆಯತನದ ಮೂಲಕ ಗಮನ ಸೆಳೆದು ಕಾಡು ಜನಗಳ ಪರವಾಗಿ ನಿಲ್ಲುವುದು. “ ಶಿವ. ನಿನ್ನ ನನ್ನ ಆಶಯ ಒಂದೇ “ ಎನ್ನುವಲ್ಲಿ ಚಿತ್ರ ತಿರುವನ್ನು ಪಡೆದುಕೊಳ್ಳುತ್ತದೆ.

ಚಿತ್ರದ ಕೊನೆಯ ಕ್ಲೈಮ್ಯಾಕ್ಸ ದೃಶ್ಯದಲ್ಲಿ ಭೂತ ಶಿವನನ್ನು ಆವಾಹಿಸಿಕೊಳ್ಳುವುದು ನಿಜಕ್ಕೂ ಕುಳಿತ ಸ್ಥಳದಲ್ಲಿ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತು ನೋಡುವಂತೆ ಮಾಡುತ್ತವೆ. ಇದೊಂದು ಅದ್ಬುತ ಜಗತ್ತಿನಲ್ಲಿ ನಾವಿದ್ದೇವೆ ಎಂಬಂತೆ ಭಾಸವಾಗುತ್ತದೆ.
ರಿಷಬ್ ಶೆಟ್ಟಿ ಒಬ್ಬ ನಿರ್ದೇಶಕನಾಗಿ ಎಷ್ಟು ಪರಿಪೂರ್ಣವೋ ಅಷ್ಟೇ ನಾಯಕನಾಗಿಯೂ ಕೂಡ ಇಲ್ಲಿ ಗಮನ ಸೆಳೆಯುತ್ತಾರೆ. ಬೀಡಿ ಸೇದುತ್ತ ತಮ್ಮ ಆಡುಭಾಷೆಯನ್ನು ಹೇಳುವ ಜೊತೆಗೆ ನಾಯಕಿಯನ್ನು ಛೇಡಿಸುತ್ತ ಕಂಬಳದ ಕೋಣವನ್ನು ಓಡಿಸುವಾಗ ಮತ್ತು ಪೈಟಿಂಗ್  ದೃಶ್ಯಗಳಲ್ಲಿ ತಮ್ಮ ಬಾಡಿ ಲ್ಯಾಂಗ್ವೇಜ್ ಮೂಲಕ ಗಮನ ಸೆಳೆಯುತ್ತಾರೆ.

ಪ್ರಮೋದ ಮರವಂತೆಯವರ ರಚನೆಯಲ್ಲಿ ಸಿಂಗಾರ ಸಿರಿಯೇ ಹಾಡಿನ ರಾಗ ಸಂಯೋಜನೆ. ಅದರ ಚಿತ್ರೀಕರಣದ ಜೊತೆಗೆ ಇಡೀ ಸಿನಿಮಾದ ಚಿತ್ರೀಕರಣ ಅಚ್ಚುಕಟ್ಟಾಗಿದೆ. ಛಾಯಾಗ್ರಾಹಕ  ಅರವಿಂದ್ ಕಶ್ಯಪ್. ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಅವರ ಸಂಗೀತ ಜನಪದ ಹಾಡುಗಳ ಬಳಕೆ. ಚಿತ್ರಕ್ಕೆ ಪ್ಲಸ್ ಪಾಯಿಂಟ್. ಇನ್ನು ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ರಿಷಬ್ ಶೆಟ್ಟಿಯವರ ವಸ್ತ್ರ ವಿನ್ಯಾಸಕ್ಕೆ ಅಭಿನಂದನೆ ಸಲ್ಲಿಸಲೇಬೇಕು.ಅವರು ಇಡೀ ಗ್ರಾಮವನ್ನು ಸುತ್ತಿ ಅಲ್ಲಿನ ಜನರ ಉಡುಗೆ ತೊಡುಗೆಯನ್ನು ಅಧ್ಯಯನ ಮಾಡಿ ವಸ್ತ್ರ ವಿನ್ಯಾಸ ಮಾಡಿರುವಲ್ಲಿ ಅವರ ಪರಿಶ್ರಮ ಬಹಳ ಇದೆ.

ಕಲಾ ನಿರ್ದೇಶಕಿ ದರಣಿ ಗಂಗೆಪುತ್ರ ಅವರು ದೇವಸ್ಥಾನ ಮತ್ತು ಮರದ ಮನೆಯನ್ನು ಸುಂದರವಾಗಿ ರಚಿಸಿರುವರು.ಇಲ್ಲಿ ಕಂಬಳದ ರೇಸ್ ಟ್ರ್ಯಾಕ್ ಸೇರಿದಂತೆ ಹಳ್ಳಿಗಾಡಿನ ಮನೆಗಳು, ದನದ ಕೊಟ್ಟಿಗೆ ಅರೆಕಾ ತೋಟಗಳು, ಕೋಳಿಗಳಿಗೆ ಕೂಪ್ ಗಳು ಸೇರಿದಂತೆ ಎಲ್ಲವನ್ನೂ ನೈಜ ಹಳ್ಳಿಯ ವಿನ್ಯಾಸವನ್ನು ಅಧ್ಯಯನ ಮಾಡುವ ಮೂಲಕ ಮಾಡಿದ್ದು ಚಿತ್ರಕ್ಕೊಂದು ಪ್ಲಸ್ ಪಾಯಿಂಟ್ ಹೇಳುತ್ತ ಹೊರಟರೆ ಹತ್ತು ಹಲವು ವಿಶೇಷತೆಗಳನ್ನು ಈ ಚಲನಚಿತ್ರದ ಬಗ್ಗೆ ಹೇಳಬಹುದು.

ರಿಷಬ್ ಶೆಟ್ಟಿಯವರ ಇಡೀ ಕುಟುಂಬವೇ ಇದರಲ್ಲಿ ತೊಡಗಿಸಿಕೊಂಡಿದೆ. ಇನ್ನು ಹೊಂಬಾಳೆ ಪಿಲಂ ನ ವಿಜಯ ಕಿರಗಂದೂರ ಅವರು ಕೂಡ ಈ ಚಲನಚಿತ್ರದ ನಿರ್ದೇಶಕರು ಯಾವ ರೀತಿ ಕತೆಗೆ ಸೆಟ್ ಹಾಗೂ ದೃಶ್ಯ ಸಂಯೋಜನೆಗೆ ಬೇಕಾದ ಎಲ್ಲವನ್ನು ಒದಗಿಸಿದ್ದಾರೆ ಎಂಬುದು ಪ್ರತಿ ದೃಶ್ಯಗಳನ್ನು ನೋಡುತ್ತ ಸಾಗಿದಂತೆ ಕಂಡು ಬರುತ್ತದೆ. ಒಂದು ಚಿತ್ರಕ್ಕೆ ನಿರ್ಮಾಪಕರ ಸಹಕಾರ ಕೂಡ ಮಹತ್ವದ್ದು ಎಂಬುದನ್ನು ಹೊಂಬಾಳೆ ಪಿಲಂ ನವರು ಅಚ್ಚುಕಟ್ಟಾಗಿ ಒದಗಿಸಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು.

ಒಟ್ಟಾರೆ ಹಳ್ಳಿಯ ನೇಟಿವಿಟಿಯ ಕತೆಯನ್ನು ಹೆಣೆದು ಅದಕ್ಕೆ ಕತೆಯನ್ನು ನಿರ್ದೇಶನದ ಜೊತೆಗೆ ನಟನಾಗಿ ರಿಷಬ್ ಶೆಟ್ಟಿಯವರಿಗೆ ಹ್ಯಾಟ್ಸಪ್ ಹೇಳದಿದ್ದರೆ ತಪ್ಪಾದೀತು. ಪರಭಾಷೆ ಚಿತ್ರಗಳಿಗೆ ನಾವೇನೂ ಕಮ್ಮಿಯಿಲ್ಲ ಎಂಬುದನ್ನು ತಮ್ಮ ಕತೆಯ ಮೂಲಕ ಈ ಸಿನಿಮಾ ತೋರಿಸಿಕೊಟ್ಟಿದೆ.

ಈಗ ಅದು ಹಲವು ಭಾಷೆಗಳಿಗೂ ಡಬ್ ಆಗಿ ಅಲ್ಲಿಯೂ ಕೂಡ ಗಲ್ಲಾಪೆಟ್ಟಿಗೆ ದೋಚುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಈಗಲೂ ‘ಕಾಂತಾರ’ ಕಲೆಕ್ಷನ್ ಭರ್ಜರಿಯಾಗಿದೆ. ಅಕ್ಟೋಬರ್‌ 14ರ ನಂತರ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗೂ ಈ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಸದ್ಯ ಹಿಂದಿ ವರ್ಷನ್‌ನಲ್ಲಿ ಹೊಸ ದಾಖಲೆಯೇ ಸೃಷ್ಟಿಯಾಗಿದೆ.

‘ಕಾಂತಾರ’ ಹಿಂದಿ ವರ್ಷನ್‌ನಿಂದ 9 ದಿನಗಳಿಗೆ 19.60 ಕೋಟಿ ರೂ. ಗಳಿಕೆ ಆಗಿದೆ. ಭಾರತೀಯ ಚಿತ್ರರಂಗದ ಗಣ್ಯರು ದಿಗ್ಗಜರು ಈ ಸಿನೇಮಾ ನೋಡುವ ಮೂಲಕ ರಿಷಬ್ ಶೆಟ್ಟಿಯವರಿಗೆ ಅಭಿನಂದಿಸುತ್ತಿರುವ ಸುದ್ದಿಗಳನ್ನು ನೋಡುತ್ತಿರುವ ನಾವೆಲ್ಲಾ ಒಬ್ಬ ಒಳ್ಳೆಯ ನಿರ್ದೇಶಕನಾಗಿ ರಿಷಬ್ ಶೆಟ್ಟಿ ಮುಂದಿನ ದಿನಗಳಲ್ಲಿ ಕೂಡ ನಮ್ಮ ಭಾಷೆ ನಮ್ಮ ಸಂಸ್ಕೃತಿ ನಮ್ಮ ಆಚರಣೆಗಳನ್ನು ಒಳಗೊಳ್ಳುವ ಉತ್ತಮ ಕಥೆಗಳನ್ನು ಸಿನಿಮಾ ಆಗಿ ಮಾಡುವಂತಾಗಲಿ ಎಂದು ಹಾರೈಸೋಣ.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦   ೮೯೭೧೧೧೭೪೪೨

- Advertisement -
- Advertisement -

Latest News

ನಮ್ಮ ಊರ ಜಾತ್ರೆಯೊಂದನ್ನು ನಿಮ್ಮ ಬದುಕಿನ ಯಾತ್ರೆಗೆ ಹೋಲಿಸುತ್ತ….

ಹಾಯ್, ಹಲೋ, ನಮಸ್ಕಾರ...ಸ್ನೇಹಿತರೆ ನೀವೆಲ್ಲ ಹೇಗಿದ್ದೀರಿ? ಬಹಳಷ್ಟು ಜನ ಪರವಾಗಿಲ್ಲ ಚೆನ್ನಾಗಿದ್ದೀವಿ ಅಂತೀರಿ ಇನ್ನು ಕೆಲವಷ್ಟು ಜನ ಅಯ್ಯೋ ಅದ್ ಏನ್ ಕೇಳ್ತೀರಾ ಬಿಡಿ ಅನ್ನುವಂತಹ...
- Advertisement -

More Articles Like This

- Advertisement -
close
error: Content is protected !!
Join WhatsApp Group