ಮೂಡಲಗಿ: ಪಟ್ಟಣದ ನಾಗಲಿಂಗ ನಗರದ ನಿವಾಸಿಯಾದ ಫಾತಿಮಾ ಹುಸಮನಸಾಹೇಬ ಮುಲ್ಲಾ ಎಂಬ ವೃದ್ದಳು ಬಾಡಿಗೆ ಮನೆಯಲ್ಲಿ ಸುಮಾರು ವರ್ಷಗಳಿಂದ ಬೆಚ್ಚಗೆ ಇರಲು ಸರಿಯಾದ ಸೂರಿಲ್ಲದೇ ಬಿಸಿಲು, ಚಳಿ, ಮಳೆ ಲೆಕ್ಕಿಸದೇ ಹಂಪಿಗೆ ಹೋಗುವುದಕ್ಕಿಂತ ಈ ಕೊಂಪೆಯಲ್ಲಿರುವುದೇ ಲೇಸೆಂದು ಕೊಂಪೆಯನ್ನೇ ಅರಮನೆಯೆಂದು ಭಾವಿಸಿ ಜೀವನ ಸಾಗಿಸುತ್ತಿದ್ದಾಳೆ.
ಇನ್ನು ವೃದ್ದಳಿಗೆ ಸರಿಯಾದ ಮನೆ ಇಲ್ಲದಿರುವುದರಿಂದ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದಾಳೆ. ಅಲ್ಲದೇ ದೇವರೇ ಕಾಪಾಡಬೇಕೆಂದು ನಿಟ್ಟುಸಿರು ಬಿಡುತ್ತಾ, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿಯಲ್ಲಿ ಅಕ್ಕಪಕ್ಕದ ಮನೆಯವರ ಹತ್ತಿರ ಹೊಟ್ಟೆಗಾಗಿ ಊಟ ಕೇಳದೇ ವಿಧಿಯಿಲ್ಲ. ನೆರೆಯವರು ಕೊಡದಿದ್ದರೆ ವೃದ್ಧಳಿಗೆ ಉಪವಾಸವೇ ಗತಿ.
ವೃದ್ದಳಿಗೆ 7ಜನ ಗಂಡು ಮಕ್ಕಳು 3 ಜನ ಹೆಣ್ಣು ಮಕ್ಕಳು ಇದ್ದರೂ ಸಹ ಕೆಲವು ವರ್ಷಗಳಿಂದ ನೋಡಿಕೊಳ್ಳದೆ ವೃದ್ದಳನ್ನು ಬಾಡಿಗೆ ಮನೆಯಲ್ಲಿ ಬಿಟ್ಟು ತಾವುಗಳು ಬೇರೆಡೆಗೆ ವಾಸಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಒಂದು ತುತ್ತಿನ ಊಟದ ವ್ಯವಸ್ಥೆಗಾಗಿ ಅಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಕಳೆದ 15 ದಿನಗಳ ಹಿಂದೆ ಕಾಲು ಜಾರಿ ಬಿದ್ದಿದ್ದರಿಂದ ನಡೆಯೋಕೆ ಆಗದೇ ಹಾಸಿಗೆ ಹಿಡಿದಿದ್ದು, ನೋವು ತಡೆದುಕೊಳ್ಳದೇ ಆ ಹಿರಿಯ ಜೀವ ತನ್ನಲೇ ತಾನೆ ಮರಗುವಂತಾಗಿದೆ.
ಇದನ್ನು ಅರಿತ ಸ್ಥಳೀಯರು ಮುಸ್ಲಿಂ ಸಮಾಜದ ಹಿರಿಯರ ಗಮನಕ್ಕೆ ತಂದರೂ ಸಹ ಆ ವೃದ್ದಳ ಮಕ್ಕಳು ಆಸ್ಪತ್ರೆಗೆ ಸೇರಿಸದೇ ಇರುವುದರಿಂದ ಆ ಹಿರಿಯ ಜೀವ ಹಾಸಿಗೆಯಲ್ಲೇ ಮಲಮೂತ್ರ ಮಾಡಿಕೊಂಡು ನರಕ ಯಾತನೆಯನ್ನು ಅನುಭವಿಸುತ್ತಿದ್ದಳು. ಈ ಬಗ್ಗೆ ಸ್ಥಳೀಯ ಪತ್ರಕರ್ತರು ಕೂಡಲೇ ಸ್ಥಳಕ್ಕೆ ಧಾವಿಸಿ ವೃದ್ದಳ ಆರೋಗ್ಯವನ್ನು ವಿಚಾರಿಸಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಕಾರದೊಂದಿಗೆ ಗೋಕಾಕದ ಸರ್ಕಾರಿ ಆಸ್ಪತ್ರೆಗೆ ವೃದ್ದಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಕಳುಹಿಸಿಕೊಟ್ಟಿದ್ದಾರೆ.
ಪತ್ರಕರ್ತರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ : ನೋವಿನಿಂದ ನರಳುತ್ತಿರುವ ವೃದ್ದಳನ್ನು ಆಸ್ಪತ್ರೆಗೆ ಸೇರಿಸಿದ್ದರಿಂದ ನಾಗಲಿಂಗ ನಗರದ ಸಾರ್ವಜನಿಕರು ಪತ್ರಕರ್ತರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.