ಸಿಂದಗಿ; ತಾಲೂಕಿನ ಗೋಲಗೇರಿಯ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 4 ರಿಂದ 28 ರವರೆಗೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ ಹಾಗೂ ಗೋಲಗೇರಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಎಸ್.ಬಿರಾದಾರ ಅವರ ಮಹತ್ವಾಕಾಂಕ್ಷೆಯ ಕ್ರಿಯಾಯೋಜನೆ ಅಡಿಯಲ್ಲಿ ಕನ್ನಡ ಮಾಸಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಕನ್ನಡ ವಿಷಯ ಬೋಧಕರಾದ ಶಿಕ್ಷಕ, ಸಾಹಿತಿ, ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ದಿನದ ಕೊನೆಯ ಅವಧಿಯಲ್ಲಿ ಕರ್ನಾಟಕ ಏಕೀಕರಣ ಹೋರಾಟಗಾರರ ಪರಿಚಯದೊಂದಿಗೆ, ಕನ್ನಡ ವ್ಯಾಕರಣ ಮಾಹಿತಿ, ಕನ್ನಡ ಅಂಕಿಗಳ ಬಳಕೆ, ಕನ್ನಡ ಸಾಹಿತಿಗಳ ಪರಿಚಯ, ಕನ್ನಡ ಸಾಹಿತ್ಯ ಪರಿಷತ್ತಿನ ಪರಿಚಯ, ಕಥೆ ಕಟ್ಟುವಿಕೆ, ಪ್ರಬಂಧ ಬರಹ, ಭಿತ್ತಿಪತ್ರ ರಚನೆ, ರಸಪ್ರಶ್ನೆ, ಗಾಯನ ಸ್ಪರ್ಧೆ ಸೇರಿದಂತೆ ಹಲವು ನಿಗದಿತ ಚಟುವಟಿಕೆಗಳನ್ನು ಏರ್ಪಡಿಸಿ ಕನ್ನಡ ಮಾಸಾಚರಣೆಯನ್ನು ಯಶಸ್ವಿಗೊಳಿಸಲಾಯಿತು.
ಕನ್ನಡ ಮಾಸಾಚರಣೆ ಅಂಗವಾಗಿ ಆಯೋಜಿಸಿದ ರಸಪ್ರಶ್ನೆ ಸ್ಪರ್ಧೆ, ಕಥೆ ಕಟ್ಟುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರದೊಡನೆ ಬರಹ ಪುಸ್ತಕ ಹಾಗೂ ಲೇಖನಿ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ರತನಸಿಂಗ್ ಬನಸಿ, ಸಹ ಶಿಕ್ಷಕಿಯರಾದ ಮಹಾದೇವಿ ಚೌಧರಿ, ದಾನಮ್ಮ ಮುಂಡಾಸೆ, ಪೂರ್ಣಿಮಾ ಸಜ್ಜನ, ಸಂಗೀತಾ ಡಾಲೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಷ್ಮಿತಾ ಜಾಲವಾದಿ ಪ್ರಾರ್ಥಿಸಿದರು. ಶಿಕ್ಷಕ ಶರಣು ಚಟ್ಟಿ ನಿರೂಪಿಸಿದರು. ಅತಿಥಿ ಶಿಕ್ಷಕ ರಾಜಶೇಖರ್ ಕರ್ನಾಳ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ಅನಿತಾ ಕಾರನೂರ ವಂದಿಸಿದರು.