ಕಾಯಕ ರತ್ನಗಳು..
ಶ್ವೇತ ವಸ್ತ್ರ, ಶುಭ್ರ ಮನಸು,
ಜಾತಿ-ಮತ-ಧರ್ಮಗಳ ಗೊಡವೆ ಬಿಟ್ಟು,
ಸೇವೆಯೇ ಪರಮ ಧರ್ಮವಾಗಿ
ರೋಗಿಗಳ ಸೇವೆಯಲೇ
ಜೀವನದಿ ತೃಪ್ತಿ ಕಾಣುವ
ಓ ದಾದಿ ಸಹೋದರಿಯರೇ
ನಿಮಗೆ ನಮೋ ನಮಃ…
ಅನುದಿನದ ಜಂಜಾಟವ ಮರೆತು,
ರೋಗಿಗಳ ಆರೋಗ್ಯ ಸೇವೆಯಲೆ
ಬಹುಪಾಲು ಜೀವನ ಕಳೆಯುವ
ನೀವು ರೋಗಿಗಳ ಬದುಕಿಸಲು
ಧರೆಗಿಳಿದು ಬಂದಿರುವ
ಅಶ್ವಿನಿ ದೇವತೆಗಳು….
ಹತಾಶ ರೋಗಿಗಳಿಗೆ
ಬದುಕುವ ಭರವಸೆ ನೀಡುವ
ನಿಮ್ಮ ಮೊಗದ ಮುಗುಳ್ನಗೆ,
ಹೆತ್ತ ತಾಯಿಯಂತೆ ಸಾಂತ್ವನ ನೀಡುವ ,
ಭರವಸೆಯ ಮೆಲ್ನುಡಿಗಳು..
ರೋಗಿಗಳನು ಕುಟುಂಬದವರಂತೆ ಕಾಣುವ
ನಿಮ್ಮ ಪರಿಶುದ್ದ ಮನಸು,
ರೋಗಿಗಳಿಗೆ ತರುವುದು
ಬದುಕಿನಲಿ ಭರವಸೆ…
ಸಾಂಕ್ರಾಮಿಕ ರೋಗಿಗಳ ನಿರಂತರ ಸೇವೆಗೈದ
ಮದರ್ ಥೆರೆಸಾರ ಅನುಪಮ ಸೇವೆ ,
ನಿಮ್ಮ ಕರ್ತವ್ಯಕೆ ಮಾದರಿ,
ವಿಶ್ವದ ಎಲ್ಲೆಡೆ ನಿಮ್ಮ ನಿಸ್ವಾರ್ಥ ಸೇವೆ
ಆರೋಗ್ಯಪೂರ್ಣ ವಿಶ್ವಕೆ ಮುನ್ನುಡಿ…
‘ರೋಗಿಗಳ ಸೇವೆಗೇ ನಾ ಜನಿಸಿದೆ ‘ ಎಂದು
ತಂದೆ-ತಾಯಿಯ ಮಹದಾಸೆಗಳ ನಿರಾಕರಿಸಿ,
ದಾದಿಯಾಗಿಯೇ ಸಹಸ್ರಾರು ರೋಗಿಗಳ ಉಪಚರಿಸಿದ
ಫ್ಲಾರೆನ್ಸ್ ನೈಟಿಂಗೇಲ್ ನಿಮಗೆ ಆದರ್ಶವಾಗಲಿ……..
ಯುದ್ಧ ಕೈದಿಗಳ ಸೇವೆ ಮಾಡುತಾ,
ಸಾವು-ನೋವುಗಳ ಕಂಡು ಕಂಬನಿ ಸುರಿಸಿ,
‘ಅಮೇರಿಕಾ ರೆಡ್ ಕ್ರಾಸ್ ಸೊಸೈಟಿ’ ರೂಪಿಸಿದ
ಕ್ಲಾರಾಬಾರ್ ಟನ್ ನಿಮಗೆ ದಾರಿದೀಪವಾಗಲಿ…
ಮಾನಸಿಕ ರೋಗಿಗಳ ಪೋಷಣೆಯಲಿ
ಇಡೀ ಜೀವನ ಕಳೆದ ‘ಮಾನಸಿಕ ರೋಗಿಗಳ ತಾಯಿ ‘
ಅಮೇರಿಕಾದ ಡೊರೆತಾ ಹಾಡಿಕ್ಸ್ ಜೀವನ
ನಿಮಗೆ ಮಾರ್ಗದರ್ಶಿಯಾಗಲಿ…
ರೋಗಿಗಳ ಸೇವೆ ಮಾಡುತ್ತಲೇ
ರೋಗ ತಟ್ಟಿ ಸಾವಿಗೀಡಾದವರಿದ್ದಾರೆ,
ಅನಾರೋಗ್ಯದ ಕಪಿಮುಷ್ಟಿಗೆ ಸಿಲುಕಿದವರಿದ್ದಾರೆ ,
ಆದರೂ ರೋಗದ ಅಂಜಿಕೆಯಿಲ್ಲದೆ
ನೀವು ಮಾಡುವ ನಿಸ್ವಾರ್ಥ ಸೇವೆ
ಸರ್ವ ಕಾಲಕೂ, ಸರ್ವ ರಾಷ್ಟದಲು ಮಾನ್ಯ,
ವಿಶ್ವದ ವೈದ್ಯ ಪದ್ದತಿಗೆ ನಿಮ್ಮ ಕೊಡುಗೆ ಅಪಾರ ,
ಮಾನವ ಸಮುದಾಯದ ಉಳಿವಿಗೆ ನಿಮ್ಮ ಕೊಡುಗೆ ಅನನ್ಯ…...
ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು