ನೆನಪಿಸಿಕೊಳ್ಳಿ
ವೇದಿಕೆಗಳ ಮೇಲೆ ವಿಶೇಷ ಅತಿಥಿಯಾಗಿ ಜ್ಯೋತಿ ಹಚ್ಚುವ ಮುಂಚೆ ನಿಮ್ಮಿಂದ ಅದೆಷ್ಟೋ ಮನೆಯ ದೀಪ ಆರಿರಬಹುದು ನೆನಪಿಸಿಕೊಳ್ಳಿ….
ಸ್ತ್ರೀ ಸಂರಕ್ಷಣೆಯ ಹೊಣೆ ಹೊತ್ತು ಭಾಷಣ ಮಾಡುವ ಮುಂಚೆ ನಿಮ್ಮಿಂದ ಅದೆಷ್ಟೋ ಹೆಣ್ಣುಮಕ್ಕಳು ನೆಲದಲ್ಲಿ ಹೂತು ಹೋಗಿರಬಹುದು ನೆನಪಿಸಿಕೊಳ್ಳಿ…
ಅಹಿಂಸೆ, ಆಚಾರ ಸಂಸ್ಕಾರಗಳ ಪ್ರವರ್ತಕರಾಗುವ ಮುಂಚೆ ನಿಮ್ಮಿಂದ ಅದೆಷ್ಟೋ ಜೀವಗಳು ಹಿಂಸೆಗೊಳಗಾಗಿರಬಹುದು ನೆನಪಿಸಿಕೊಳ್ಳಿ….
ಸಭಿಕರ ಮನ ಮೆಚ್ಚಿಸಲು ನೀತಿ ಬೋಧಿಸುವ ಮುಂಚೆ ನಿಮ್ಮಿಂದ ಅದೆಷ್ಟೋ ಮೂಕ ಹೃದಯಗಳು ರೋಧಿಸುತಿರಬಹುದು ನೆನಪಿಸಿಕೊಳ್ಳಿ….
ಸಮಾಜದ ಚಿತ್ತ ತನ್ನತ್ತ ಸೆಳೆಯುವ ಭರದಲ್ಲಿ ಹಸಿರು ಗಿಡನೆಡುವ ಮುಂಚೆ ನಿಮ್ಮಿಂದ ಅದೆಷ್ಟೋ ಚಿಗುರುವ ಮನಸ್ಸುಗಳು ಬಾಡಿರಬಹುದು ನೆನಪಿಸಿಕೊಳ್ಳಿ….
ವೇದಗಳ ಪರಿವೇ ಇಲ್ಲದ ತಾವು ವೇದಾಂತ ಸಾರುವ ಮುಂಚೆ ನಿಮ್ಮಿಂದ ಆಗಿರುವ ಅದೆಷ್ಟೋ ರಾದ್ಧಾಂತಗಳ ಒಮ್ಮೆ ನೆನಪಿಸಿಕೊಳ್ಳಿ….
ಅರಗಿನ ಜೀವನದ ಅರಿವಿಲ್ಲದೆಯೇ ಮೆರೆಯುತ್ತಿದ್ದವರೆಲ್ಲ ಮಣ್ಣಲ್ಲಿ ಸದ್ದಿಲ್ಲದೆ ಮಲಗಿಹರು ಇಂದಲ್ಲಾ ನಾಳೆ ನಿಮ್ಮದು ಪಾಳಿ ಬರಬಹುದು ನೆನಪಿಸಿಕೊಳ್ಳಿ….
ಅನುಪಮ. ಪಿ
ಶಿಕ್ಷಕಿ
ಮಂದಾರ ಪಬ್ಲಿಕ್ ಸ್ಕೂಲ್,ಸಿಂದಗಿ.

