ಮೂಡಲಗಿ: ಪ್ರತಿಭೆ ಎನ್ನುವುದು ಕೇವಲ ಶ್ರೀಮಂತರ ಸೊತ್ತಲ್ಲ, ಅದು ಛಲಗಾರರ ಸ್ವತ್ತು ಎಂಬುದನ್ನು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಾಲಾ ಬಾಲಕಿಯೊಬ್ಬಳು ಸಾಬೀತು ಪಡಿಸಿದ್ದಾಳೆ. ಕಡು ಬಡತನ, ಸೌಲಭ್ಯಗಳ ಕೊರತೆಯ ನಡುವೆಯೂ ಹಾಕಿ ಸ್ಟಿಕ್ ಹಿಡಿದು ಮೈದಾನದಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ಲಕ್ಷ್ಮಿ ಸಂಜು ಢವಳೇಶ್ವರ, ಈಗ ೬೯ನೇ ರಾಷ್ಟ್ರೀಯ ಮಟ್ಟದ ೧೪ ವರ್ಷದೊಳಗಿನ (U-೧೪) ಹಾಕಿ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ರಾಜ್ಯ ತಂಡದ ಪ್ರತಿನಿಧಿಯಾಗಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾಳೆ.
ಬಡತನದ ಸವಾಲು, ಸಾಧನೆಯ ಛಲ
ಮೂಡಲಗಿಯ ಶಿವಾಪುರ ರಸ್ತೆಯ ನಿವಾಸಿಯಾಗಿರುವ ಲಕ್ಷ್ಮಿ ಅವರ ಕುಟುಂಬದ ಹಿನ್ನೆಲೆ ಅತ್ಯಂತ ಸಾಮಾನ್ಯವಾದುದು. ಇವಳು ತನ್ನ ಕುಟುಂಬದ ೫ ಜನ ಮಕ್ಕಳಲ್ಲಿ ೪ನೇ ಮಗಳಾಗಿದ್ದು, ತಂದೆ ಮತ್ತು ತಾಯಿ ಇಬ್ಬರೂ ಕೆಲಸ ಮಾಡಿ ಕುಟುಂಬವನ್ನು ಸಲಹುತ್ತಿದ್ದಾರೆ. ದಿನವಿಡೀ ಕಷ್ಟಪಟ್ಟು ದುಡಿಯುವ ಪೋಷಕರಿಗೆ ಮಗಳು ಕ್ರೀಡೆಯಲ್ಲಿ ಇಷ್ಟೊಂದು ಎತ್ತರಕ್ಕೆ ಬೆಳೆಯುತ್ತಾಳೆ ಎಂಬ ಕನಸಿತ್ತು. ಆ ಕನಸಿಗೆ ಈಗ ರೆಕ್ಕೆ ಬಂದಂತಾಗಿದೆ. ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರು, ಮಗಳ ಕ್ರೀಡಾ ಆಸಕ್ತಿಗೆ ಪೋಷಕರು ಎಂದೂ ಅಡ್ಡಿಯಾಗದೆ, ಅವಳ ಶ್ರಮಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಶಾಲೆಯ ಪ್ರೋತ್ಸಾಹ ಮತ್ತು ಗುರುವಿನ ಮಾರ್ಗದರ್ಶನ
ಲಕ್ಷ್ಮಿ ಅವರ ಈ ಯಶಸ್ಸಿನ ಹಿಂದೆ ಲಕ್ಷ್ಮಣ ವಾಯ್. ಅಡಿಹುಡಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಪಾತ್ರ ದೊಡ್ಡದಿದೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಚಿನ್ ಕಾಂಬಳೆ ಅವರು ಲಕ್ಷ್ಮಿಯಲ್ಲಿದ್ದ ಹಾಕಿ ಕೌಶಲ್ಯವನ್ನು ಗುರುತಿಸಿ, ಅವಳಿಗೆ ವಿಶೇಷ ತರಬೇತಿ ನೀಡಿದ್ದಾರೆ.
ಮೈದಾನದಲ್ಲಿ ಚೆಂಡನ್ನು ನಿಯಂತ್ರಿಸುವ ರೀತಿ, ವೇಗ ಮತ್ತು ಗುರಿ ತಲುಪುವ ಆಕೆಯ ಚಾಕಚಕ್ಯತೆ ರಾಜ್ಯ ಮಟ್ಟದ ಆಯ್ಕೆ ಸಮಿತಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕರ್ನಾಟಕದ ಕಹಳೆ
ಮಧ್ಯಪ್ರದೇಶದ ಐತಿಹಾಸಿಕ ನಗರ ಗ್ವಾಲಿಯರ್‌ನಲ್ಲಿ ಬರುವ ಜನವರಿ ೦೨ ರಿಂದ ಜನವರಿ ೦೭, ೨೦೨೬ರವರೆಗೆ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಗಳು ಜರುಗಲಿವೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಪ್ರತಿಭಾನ್ವಿತರ ತಂಡದಲ್ಲಿ ಲಕ್ಷ್ಮಿ ಸ್ಥಾನ ಪಡೆದಿದ್ದು, ರಾಜ್ಯಕ್ಕೆ ಪದಕ ತಂದುಕೊಡುವ ವಿಶ್ವಾಸದಲ್ಲಿದ್ದಾಳೆ.
ಗಣ್ಯರಿಂದ ಅಭಿನಂದನೆಗಳ ಮಹಾಪೂರ
ಈ ಅಭೂತಪೂರ್ವ ಸಾಧನೆ ಮಾಡಿದ ಲಕ್ಷ್ಮಿಗೆ ಕ್ಷೇತ್ರದ ಶಾಸಕರಾದ ಬಾಲಚಂದ್ರ ಲ. ಜಾರಕಿಹೊಳಿ, ಬೆಳಗಾವಿ ಉಸ್ತುವಾರಿ ಸಚಿವರಾದ ಸತೀಶ ಲ. ಜಾರಕಿಹೊಳಿ, ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಾಲೆಯ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ನಮ್ಮ ಶಾಲೆಯು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಗ್ರಾಮೀಣ ಭಾಗದ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸದಾ ಬದ್ಧವಾಗಿದೆ.ಲಕ್ಷ್ಮಿಯ ಈ ಸಾಧನೆಯ ಹಿಂದೆ ಶಾಲೆಯ ಸರ್ವ ಶಿಕ್ಷಕ ವೃಂದದ ಬೆಂಬಲವಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಲಕ್ಷ್ಮಿ ಶ್ರೇಷ್ಠ ಪ್ರದರ್ಶನ ನೀಡಿ, ರಾಜ್ಯಕ್ಕೆ ಕೀರ್ತಿ ತರಲಿ ಎಂದು ಹಾರೈಸುತ್ತೇನೆ. ಆಕೆಯ ಮುಂದಿನ ಎಲ್ಲಾ ಕ್ರೀಡಾ ಮತ್ತು ಶೈಕ್ಷಣಿಕ ಜೀವನಕ್ಕೆ ನಮ್ಮ ಸಂಸ್ಥೆಯ ಸಂಪೂರ್ಣ ಸಹಕಾರ ಸದಾ ಇರಲಿದೆ.
-ಲಕ್ಷ್ಮಣ ವಾಯ್. ಅಡಿಹುಡಿ (ಸಂಸ್ಥೆಯ ಸಂಸ್ಥಾಪಕರು)

